ನಮ್ಮೂರ ಹಿರಿ ಜೀವಗಳು ಸಾಲು-ಸಾಲು ಮರಗಳ ನೆಟ್ಟು ಉಸಿರೆಂಬ ಸಾಲ ಕೊಟ್ಟು ಹೋದರು
Team Udayavani, Jul 5, 2021, 10:00 AM IST
ನಮ್ಮೂರಿಗೆ ನೀವು ಪ್ರವೇಶಿಸುವಾಗ ಮೊದಲು ತಂಪನೆಯ ಗಾಳಿ ಸೂಸುವ ಹುಣಸೆ ಮರಗಳು ಸ್ವಾಗತಿಸುತ್ತವೆ.
ಸುಮಾರು ಹತ್ತೂಂಬತ್ತನೆಯ ಶತಮಾನದಿಂದ ನಮ್ಮೂರ ಬಾಹ್ಯ ಸೌಂದರ್ಯಕ್ಕೆ ಕಿರೀಟದಂತಿರುವ ಹುಣಸೆ ಮರಗಳನ್ನು ಇವತ್ತು ನೆನೆಯಲೇಬೇಕು. ಅಪ್ಪನೊಂದಿಗೆ ಆಗಾಗ ಚರ್ಚೆ ಮಾಡುವಾಗ ಈ ನಮ್ಮೂರ ದಾರಿಯುದ್ದಕ್ಕೂ ಸಿಗುವ ಹುಣಸೆ ಮರಗಳ ಬಗ್ಗೆ ಮಾತನಾಡದ ದಿನವೇ ಇಲ್ಲ. “ನೋಡಪ್ಪಾ ನಾವು ಸಲಾಂ ಹೊಡಿಬೇಕಾಗಿದ್ದು ನಮ್ಮೂರ ದಾರಿ ತುಂಬಾ ಗಿಡ ಹಚ್ಚಿ ತಮ್ಮ ಹೆಸರ ಹೇಳದೆ ಮಣ್ಣೊಳಗ ಮಣ್ಣಾದ ಆ ಹಿರಿಯ ಜೀವಗಳಿಗೆ…ಆ ಮರಗಳನ್ನು ನೋಡಿ ನಮ್ಮ ಹಿರಿಯರು ಬಾಳ ಪುಣ್ಯವಂತ್ರು ಅಂದು ಮನಸಿನೊಳಗ ಅವರ ಆತ್ಮಕ್ಕೆ ಸಲಾಂ ಹೊಡೆದು ಧನ್ಯವಾದ ತಿಳಸಬೇಕು’ ಅಂತ ಅಪ್ಪ ಹೇಳುತ್ತಿರುತ್ತಾರೆ.
ವಾಕ್ ಬಂದಿದ್ದ ಒಬ್ಬ ಅಜ್ಜನಲ್ಲಿ “ಯಜ್ಜಾ ಎಸ ವರಸದ್ದ ಹಿಂದಿನ ಗಿಡಾ ಇವು?’ ಎಂದು ಕೇಳಿದೆ. ಅದಕ್ಕೆ ಅವರು, “ನಂಗೂ ಗೊತ್ತಿಲ್ಲ ಮಾರಾಯಾ. ನಮ್ಮಪ್ಪನ ಕಾಲದಾಗನ ಇಷ್ಟ ಇದ್ವಂತ ನೋಡ’ ಎಂದರು. ಅವರ ಹೇಳಿಕೆಯ ಆಧಾರ ಮೇಲೆ ನೋಡಿದರೆ ಹತ್ತೂಂಬತ್ತನೆಯ ಶತಮಾನಕ್ಕೆ ಹೋಯ್ತು ಲೆಕ್ಕಾಚಾರ.
ಮೊನ್ನೆ ಕುರಿಗಾಹಿ ಒಬ್ಬರು ಮಾತನಾಡುತ್ತಾ, “ಅಜ್ಜಾರ ಎನ ಗಿಡಾ ರೀ ಪಾ ಇವು. ನನ್ನ ಕುರಿಗಾಹಿ ಜೀವನದಾಗ ಇಷ್ಟ ಗಿಡಾ ಇರೋ ಊರು ಇನ್ನೂ ನೋಡೆ ಇಲ್ಲ ಬಿಡ್ರಿ, ಪುಣ್ವಂತ್ರು ನಿಮ್ಮ ಊರೋರು’ ಎಂದಿದ್ದರು. ಈ ಮಾತು ನಾನು ಗಿಡ ನೆಡದಿದ್ದರೂ ನನ್ನೂರ ಮರಗಳು ಎಂಬ ಹೆಮ್ಮೆ ಹುಟ್ಟಿಸಿತು. ಈ ಗಿಡಗಳ ನೆಟ್ಟ ಆ ಹಿರಿಯ ಜೀವಗಳಿಗೆ ನಮನಗಳನ್ನು ತಿಳಸಬೇಕಾಗಿದ್ದು ನಮ್ಮ ಕರ್ತವ್ಯ.ಆದರೆ ಯಾರಿಗಂತ ಕೃತಜ್ಞತೆ ಸಲ್ಲಿಸೋದು?ಸುಮಾರು ನೂರಕ್ಕೂ ಹೆಚ್ಚು ಮರಗಳನ್ನು ನೆಟ್ಟು, ಯಾವುದೇ ಕುರುಹು ಉಳಿಸದೆ ನಿಸ್ವಾರ್ಥ ಮನೋಭಾವದಿಂದ ಈ ಪೀಳಿಗೆಗೆ ಸ್ವತ್ಛ ಗಾಳಿಯ ಭಿಕ್ಷೆ ನೀಡಿದವರು ಆ ಅಜ್ಞಾತ ಹಿರಿ ಜೀವಿಗಳು ಎಂದರೆ ತಪ್ಪಲ್ಲ.
ಕಾಲೇಜಿಗೆ ಹೋಗಲು ಕೆಲವೊಮ್ಮೆ ಬಸ್ ಸಿಗದೇ ಇದ್ದಾಗ ಮೂರು ಕಿ.ಮೀ. ದೂರದ ರಾಮಗೇರಿಗೆ ಆಯಾಸವಿಲ್ಲದೆ ಕೈ ಹಿಡಿದು ಕರೆದುಕೊಂಡು ಹೋಗುವ ಮೂಕ ಜೀವಗಳಿವು. ಇದೇನು ದೊಡ್ಡ ಸಾಧನೆನಾ? ಅಂತ ಅನಿಸಬಹುದು. ಆದರೆ ಆಧುನಿಕತೆಯ ಹೆಸರಿನಲ್ಲಿ ಮರಗಳನ್ನು ನಮ್ಮೂರ ಜನರು ಏನೂ ಆಗದಂತೆ ಉಳಿಸಿಕೊಂಡು ಬಂದಿರೋದು ದೊಡ್ಡ ಸಾಧನೆಯೇ ಸೈ.
ಈ ಹುಂಚಿ ಮರಗಳು ಸೌಂದರ್ಯಕ್ಕೆ ಮಾತ್ರನಾ? ಖಂಡಿತಾ ಅಲ್ಲ. ಶುದ್ಧ ಗಾಳಿಯ ಸರಬರಾಜು ಮಾಡುವ ಹವಾ ನಿಯಂತ್ರಕಗಳಿವು, ರಸ್ತೆಯ ಮೇಲೆ ಹಳದಿ ಎಲೆಗಳ ಚೆಲ್ಲುವ ಸ್ವಾಮಗೊಳ ಇವು, ಸದಾ ದಾರಿಹೋಕರ ಮೈಮನಗಳ ತಂಪು ಗೊಳಿಸುವ ಮಾಯಾಂಗನೆ ಇವು, ಹೊಲದಿಂದ ಬರುವ ರೈತನಿಗೆ ನೆರಳು ಕೊಡುತ್ತಾ ಸುಸ್ತು ಮಾಡದೇ ಮನೆ ತಲುಪಿಸುವ ಮೆಟ್ರೋಗಳಿವು, ಬಂದೋರಿಗೆಲ್ಲ ಬಾ ಎನ್ನುತ ಸ್ವಾಗತಗೈಯುವ ನಮ್ಮೂರ ಸ್ವಾಗತ ಸಮಿತಿಯ ಅಧ್ಯಕ್ಷರು ಇವು, ಒಕ್ಕಲುತನಕ್ಕೆ ಬಾಡಿಗೆಯ ನೆರಳು ಕೊಟ್ಟು ಬಾಡಿಗೆ ಪಡೆಯದ ಮಾಲಕರು ಇವು. ಮುಖ್ಯವಾಗಿ ಇವು ನಮ್ಮೂರಿಗೆ ಆದಾಯವನ್ನೂ ತಂದು ಕೊಡ್ತವೆ. ನಿಪ್ಪಾಣಿ, ಗೋಕಾಕ್‌ನಿಂದ ಇಲ್ಲಿನ ಹುಣಸೆ ಮರಗಳನ್ನು ಗುತ್ತಿಗೆ ಹಿಡಿಯಲು ಜನ ಬರ್ತಾರೆ. ಲಕ್ಷ ಲಕ್ಷ ರೂಪಾಯಿಗೆ ಗುತ್ತಿಗೆದಾರರ ಪಾಲಾಗುತ್ತವೆ. ಆದ್ದರಿಂದ ಊರಿನ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಆರ್ಥಿಕ ಶಕ್ತಿಗಳೇ ಇವು.
ಇಷ್ಟಕ್ಕೇ ಮುಗಿದಿಲ್ಲ. ನಿಂತಲ್ಲೇ ನಿಂತು ಇಷ್ಟೆಲ್ಲ ಕೊಡುವ ಹುಣಸೆ ಮರಗಳ ಮುಂದೆ ನಿನ್ನೆ ಮೊನ್ನೆ ಹುಟ್ಟಿದ ರೊಬೋಟ್‌ಗಳು ಕೂಡ ತಲೆ ಭಾಗಿಸಲೇಬೇಕು. ರಾತ್ರಿಯೆಲ್ಲ ಅಂತರ್ಜಾಲದಲ್ಲಿ ಕಾಲ ಕಳೆದು, ಮರುದಿನ ಸೂರ್ಯ ನೆತ್ತಿಗೆ ಬರೋವರೆಗೂ ಮಲಗಿರುವ ನಮ್ಮೂರ ತರುಣರನ್ನು ನಸುಕಿನಲ್ಲಿ ತನ್ನ ತಂಪಿನ ವಾತಾವರಣದಲ್ಲಿ ವ್ಯಾಯಾಮ ಮಾಡಿ ಬೆವರು ಹರಿಸಲು ಕರೆಯುತ್ತವೆ. ವೃದ್ಧರು ಗಿಡದ ಬದಿಗೆ ಕುಳಿತು ಪ್ರಾಣಾಯಾಮ ಮಾಡಲು ಕೂಡ. ಚಿಕ್ಕ ಮಕ್ಕಳನ್ನು ಜಿಂಕೆಯಂತೆ ಓಡಾಡಲೂ, ಗೃಹಿಣಿಯರನ್ನು ಧ್ಯಾನ ಮಾಡಲು ಪ್ರೇರೇಪಿಸುತ್ತವೆ. ನಮ್ಮ ಊರಿಗೆ ಯಾರಾದರೂ ಹೊಸಬರು ಬಂದರೆ ಈ ಮರಗಳಿಗೆ ಅಭಿಮಾನಿಯಾಗದೆ ಹೋಗಲು ಸಾಧ್ಯವೇ ಇಲ್ಲ. ಸಂಬಂಧಿಕರಂತೆ ನಮ್ಮೂರಿನ ನಾಗರಿಕರು ಈ ಮರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸಾಲು ಸಾಲು ಮರಗಳ ನೆಟ್ಟು, ನಮ್ಮೆಲ್ಲರಿಗೆ ಹಸಿರ ಸಾಲ ಕೊಟ್ಟ ಹಿರಿಯರ ಅಸಲನ್ನು ತೀರಿಸಲಾಗದಿದ್ದರೂ, ರಕ್ಷಿಸುವ ಮೂಲಕ ಬಡ್ಡಿಯನ್ನಾದರೂ ತೀರಿಸುವ ಪ್ರಯತ್ನ ಮಾಡೋಣ.
ಅಮೋಘ ಸಾಂಬಯ್ಯ ಹಿರೇಮಠ
ಕೆಎಲ್‌ಇ ಮಹಾವಿದ್ಯಾಲಯ ಸಂಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.