UV Fusion: ಇಳೆಗೆ ಮಳೆಯ ಸುಮಪಾತದ ಸೊಗಸು
Team Udayavani, Sep 17, 2024, 3:26 PM IST
ಮಳೆಯ ಮಾರುತಗಳು ಬೀಸಿ ತೀವ್ರಗೊಂಡು ಎಡೆಬಿಡದೆ ಸುರಿದಿವೆ. ಆಷಾಢ ಶ್ರಾವಣಗಳಲ್ಲಿ ಬಹುವಾಗಿ ಸುರಿದು ಮಳೆಯು ಭಾದ್ರಪದಕ್ಕೆ ಬಿಸಿಲಿನ ಭಾಗ್ಯವನ್ನು ತೋರಿಸಿದೆ. ಸದಾ ಚಲಿಸಿ, ಕರಗಿ ಮಳೆಸುರಿಸುವ ಮೋಡಗಳು ಕುಂಟುತ್ತಾ ನಿಲ್ಲುತ್ತಾ ಬಿಸಿಲಿನ ಹೊಳಪನ್ನು ಪ್ರತಿಫಲಿಸುವ ಸೊಗಸು ಒಂದೆಡೆ. ಸರ್ವಸ್ವವೂ ಹಸುರಾಗಿ ನಲಿಯುವ ಜತೆಗೆ ಹೂವನ್ನೂ ಬಿರಿಯುವ ದ್ರುಮಗಳು. ಹೂ ಮಳೆಗೆ, ಬಿರುಮಳೆಗೆ ವೈವಿಧ್ಯಮಯ ಪುಷ್ಪಗಳು ತೊನೆದು, ಅಲ್ಲಾಡಿ, ಸುಮಪಾತವಾಗುವ ಪರಿ ಮಳೆಗಾಲದ ಮೆರುಗನ್ನು ಹೆಚ್ಚಿಸುತ್ತದೆ. ವರ್ಷೆಯ ಜತೆಗೆ ಸುಮವೃಷ್ಟಿಯು ಸೋಜಿಗದ ವಸ್ತು.
ಉಪವನಗಳಲ್ಲಿ ಮತ್ತು ರಸ್ತೆಯ ಪಕ್ಕಗಳಲ್ಲಿ ಹಳದಿಯ ಹೊದ್ದಲಿನಂತಹ ಕುಸುಮ ದಳಗಳು ಚೆಲ್ಲಿರುವುದನ್ನು ಗಮನಿಸಿರಬಹುದು ನೀವು. ಇದು ಪೀತಾಂಬರ ಹೂವು, ಹಳದಿ-ಪೀಲಾ ಗುಲ್ಮೊಹರು. ದಕ್ಷಿಣ ಕರ್ನಾಟಕದೆಡೆ ಬೆಟ್ಟದ ಹುಳಿ ಎಂದರೆ, ಸಂಕೇಶ್ವರ ಹೂವಿನ ಅನುಸರಣೆಯಲ್ಲಿ ಹಳದಿ ಸಂಕೇಶ್ವರವೆಂದೂ ಉತ್ತರ ಕರ್ನಾಟಕದೆಡೆ ಗುರುತಿಸುವರು. ತನ್ನ ಕಾಯಿಯ ಕಡು ಕೆಂಪು ತಾಮ್ರ ವರ್ಣ-ವಿಶೇಷತೆಗೆ ಕಾರ್ಪಪಾಡ್ ಮರವೆಂದೂ ಕರೆದಿದ್ದಾರೆ. ಹೂವು ಬಿರಿದರೆ ಚೆಲುವು ಬೀರುವ, ಕಾಯಿ ಕಟ್ಟಿದರೆ ಕೊಸರಿ ನಿಲ್ಲುವ ಮರಕ್ಕೆ ಮಳೆ ಸೇಚನವಾದರೆ ಅರಳಿನಂತೆ ಹೂ ಉದುರಿಸುವುದೇ ಕೆಲಸ. ಕಂದು ಬಣ್ಣದ ಕಡ್ಡಿಗೆ ದಟ್ಟವಾದ ಹೂವುಗಳು ಹೂಗೊಂಚಲಿನ ವಿಶೇಷತೆ.
ಹೂಗೊಂಚಲಿನ ಬುಡದಲ್ಲಿ ಹೂವುಗಳಿದ್ದರೆ, ತುದಿಯಲ್ಲಿ ಮೃದುವಾದ ಮಖಮಲ್ಲಿನ ತೆರನಾದ ಮೊಗ್ಗುಗಳು. ಹೂವಿನ ಬಣ್ಣ ಕೋರೈಸುವ ಹಳದಿ, ದಳದ ಬುಡಕ್ಕೆ ಹೋದಂತೆ ತೆಳು ಕೇಸರಿ. ಐದು-ದಳದ, ಸ್ವಲ್ಪ ಪರಿಮಳಯುಕ್ತ ಈ ಹೂಗಳು ತೆರೆ-ತೆರೆಯಾಗಿ ಕೇಸರಿ-ಕೇಸರಗಳಿಂದ ಕೂಡಿರುತ್ತವೆ. ಹೂಗೊಂಚಲಿಗೆ ಹೂವುಗಳಷ್ಟೇ ಗುಂಡನೆಯ ಮೊಗ್ಗುಗಳ ಶೃಂಗಾರ. ಹೂವಿಗೆ ಕಾಂಟ್ರಾಸ್ಟ್-ವ್ಯತಿರಿಕ್ತವಾದ ವರ್ಣ ಅದರ ಗುಂಡನೆಯ ಮೊಗ್ಗುಗಳದ್ದು.
ಮರವನ್ನು ದಿಟ್ಟಿಸಿದಾಗ ಹಸುರು, ಹಸುರಿನ ಮೇಲೆ ಹಳದಿ, ಹಳದಿಯ ಮೇಲೆ ದುಂಡನೆಯ ಕೆಂಪು ಮಣಿಗಳಂತಿರುವ ಮೊಗ್ಗುಗಳು ಪದರ-ಪದರವಾಗಿ ಪ್ರಭಾವಳಿಯನ್ನು ಉಂಟುಮಾಡುತ್ತವೆ. ಸುಮಪಾತಕ್ಕೆ ಕಪ್ಪನೆಯ ರಾಜಮಾರ್ಗಗಳೆಲ್ಲವೂ ಹಳದಿ ಮಣಿಯಂತಿರುವ ಮೊಗ್ಗಿನಿಂದ ಚೆಲುವನ್ನು ಅಪ್ಪಿಕೊಳ್ಳುತ್ತವೆ. ಒಂದರ ಮೇಲೊಂದರಂತೆ ಶೇಖರವಾಗುವ ಪಿತಾಂಬರಿಯ ಹೂವುಗಳನ್ನು ತುಳಿದು ಸಾಗುವಾಗ ಮೇಲೊಮ್ಮೆ ಮರುಕ ಉದಿಸದೇ ಇರದು. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಪಾರಿಜಾತದ ಬೆಡಗು ಇದೇ ತೆರನಾದದ್ದಲ್ಲವೇ?
ಪಾರಿಜಾತವು ಅಚ್ಚ ಕೆಂಪು ಬಣ್ಣದ ಕಾವು ಇರುವಂತಹ ಬಿಳಿ ಹೂವು. ಇವು ಪರಿಸರದಲ್ಲಿ ಸುಗಂಧವನ್ನು ಪಸರಿಸುತ್ತಾ ರಾತ್ರಿ ಅರಳುತ್ತವೆ. ಮಳೆಗಾಲದ ಸಂಜೆಯ ಪರಿಮಳವನ್ನು ನೂರ್ಮಡಿಗೊಳಿಸುವ ಈ ಹೂವುಗಳು ದಂಡಿಯಾಗಿ ಅರಳಿ ಉದಾರತೆಯಿಂದಲೇ ಇಳೆಯನ್ನು ಸಿಂಗರಿಸುತ್ತವೆ. ಬೈಗಿಗೆ ಬಿರಿದ ಪಾರಿಜಾತ ಹೂವುಗಳು ಬೆಳಗಿನ ಪೂಜೆಯವರೆಗೂ ತನ್ನನ್ನು ಅರ್ಪಿಸಲು ಕಾಯ್ದುಕೊಂಡಿರುತ್ತವೆ.
ಬಿಸಿಲೇರಿದಂತೆ ಮುದುಡಿ, ದಳಗಳು ಒಡೆದು ಅಂದಗೆಡುತ್ತವಾದರೂ ಅದು ಪಸರಿಸುವ ಕಂಪು ಅಗಾಧ. ಪುರಾಣದ ಪ್ರಕಾರ ಸಮುದ್ರದಿಂದ ಉದಿಸಿದ ಪಾರಿಜಾತ ಮಳೆಗಾಲದಲ್ಲಿ ಪರಿಸರವನ್ನು ಸುಮನೋಹರಗೊಳಿಸುತ್ತವೆ. ಹಳದಿ ಪೀತಾಂಬರಿ, ಬಿಳಿ ದಳಗಳ ಕೆಂಪು ತೊಟ್ಟಿನ ಪಾರಿಜಾತದ ಜತೆಗೆ ನಿರೀಕ್ಷಿಸಬಹುದಾದ ಇನ್ನೊಂದು ಹೂವು ನೀರುಕಾಯಿ ಹೂವು ಅಥವಾ ಆಫ್ರಿಕನ್ ಟ್ಯೂಲಿಪ್.
ಆಫ್ರಿಕನ್ ಟ್ಯೂಲಿಪ್ ನೆರಳ ಅರಸಿ ನೆಡುವ ಮರಗಳ ಪೈಕಿಯದು. ಕೇಸರಿ ಕಡುಕೆಂಪು ಗೊಂಚಲ ಹೂವುಗಳು ಮರದಲ್ಲಿದ್ದರೆ ಇರುವ ಸೊಗಸು ನೆಲಕ್ಕೆ ಬಿದ್ದರೂ ಅಷ್ಟೇ ತೂಕದವು. ಅಡಿಕೆಯ ಗಾತ್ರದ ದುಂಡನೆಯ ತುತ್ತೂರಿಯ ರೀತಿಯ ಹೂವುಗಳ ಒಳಗಿಂದ ಇಣುಕುವ ಶಲಾಕಾಗ್ರಗಳು ದಳದೊಂದಿಗೆ ಮಿಳಿತವಾಗಿ ಗಿಳಿಯ ಕೊಕ್ಕಿನಂತಿರುವ ತೊಟ್ಟಿಗೆ ಅಂಟಿಕೊಂಡಿರುತ್ತವೆ. ಹೂ ಉದುರಿದರೆ, ಕಪ್ಪನೆಯ ಹೆದ್ದಾರಿಗೆ ರಂಗೋಲಿಯಿಟ್ಟಂತೆ ಭಾಸವಾಗುವ ಸುಮಪಾತಳಿಗಳು. ವಿದೇಶದಿಂದ ಭಾರತವನ್ನು ತಲುಪಿದ ಈ ಮರ ಮತ್ತು ಅದರ ಹೂವುಗಳು ಪ್ರತೀ ಓಣಿಯ ಹಂದರವನ್ನು ಚಂದಗಾಣಿಸುತ್ತವೆ. ಕಾಲಿಟ್ಟರೆ ಜಾರುವ ಲೋಳೆಯನ್ನು ಉತ್ಪತ್ತಿಮಾಡುವ ಹೂಗೊಂಚಲುಗಳನ್ನು ಆಗಾಗ್ಗೆ ಸರಿಸುವ ಆವಶ್ಯಕತೆಯೂ ಇದೆ.
ಮಳೆಗಾಲದ ಚಂಚಲತೆಯನ್ನು ಕೋಲ್ಮಿಂಚಿನ ಕೋರೈಸುವ ಬೆಳಕಿನಿಂದ ಅಳೆಯುವ ಸಮಯದಲ್ಲಿ ಸುಕೋಮಲ ಹೂವುಗಳು ಸದ್ದಿಲ್ಲದೇ ಉದುರುವವು. ಮಳೆಯ ಹರಿವಿಗೆ ತೇಲುತ್ತಾ ಸಾಲುಗೂಡುವವು. ಹರಿವಿನ ವೇಗಕ್ಕೆ ಸಿಕ್ಕಿ, ಹರಡಿ, ನೆಲದಮೇಲೆಲ್ಲಾ ಹೂಗಳ ಸಾಲುಗೆರೆಗಳನ್ನು ನೋಡಲು ಕಣ್ಣಿಗೆ ಸೊಗಸು. ಗುರುತ್ವದ ಕಾರಣಕ್ಕಾದರೂ ಆಗಲಿ ಇಳೆಯನ್ನು ಅಲಂಕರಿಸಲು ತಾಮುಂದೆ ಎಂದು ಸುಮವೃಷ್ಟಿ ಹೊರಟಿದೆ. ಅವುಗಳ ಅಂದದೊಂದಿಗೆ ಆಘ್ರಾಣಿಸೋಣ, ಈ ಮಳೆಗಾಲವೆಂಬ ಮೋಡಿಯ ಕಾಲ ಮುಗಿಯುವ ಮೊದಲು!
-ವಿಶ್ವನಾಥ ಭಟ್
ಧಾರವಾಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.