Rainy Weather: ಮಳೆಯಲಿ… ಮಲೆನಾಡಿನಲಿ…
Team Udayavani, Jul 15, 2024, 1:55 PM IST
ಈ ಬೇಸಗೆಯ ಸೆಕೆಯ ಬೇಗೆಗೆ ಹೈರಾಣದ ನಾವುಗಳು ಅಂತು ಇಂತು ಮಾರ್ಚ್ ಏಪ್ರಿಲ್ ತಿಂಗಳ ತಾಪಮಾನ ಮುಗಿಸಿ, ಬಿಸಿಲು ನೆತ್ತಿಯ ಸುಡುವ ಕಾಲದಿಂದ ಹೊರ ಬಂದಿದ್ದಾಯ್ತು. ಇನ್ನೂ ಯತ್ತೆಚ್ಚವಾದ ನಿರೀಕ್ಷೆ ಹಾಗೂ ಸಂಭ್ರಮ ದೊಂದಿಗೆ ಮಳೆಗಾಲಕ್ಕೆ ಕಾಲಿಟ್ಟಿದ್ದು ಆಯ್ತು..
ಮಳೆಯೆಂದರೆ ತುಂತುರು, ಹನಿ, ಜಡಿಮಳೆ ಯೆಂದರೆ ಗುಡುಗು, ಸಿಡಿಲು, ಮಿಂಚು. ಮಳೆಯೆಂದರೆ ಗಾಳಿ ಬಿರುಗಾಳಿಗಳ ಮಿಲನ. ಮಳೆಗಾಲ ಬಂತೆಂದರೆ ನಮ್ಮೂರ ಹೊಳೆ, ಬಾವಿ, ಕೆರೆ, ಕಾಲುವೆ, ಸರೋವರಗಳು ತುಂಬಿ ಹರಿಯುವ ಮನೋಹರ ದೃಶ್ಯ ಹಾಗೂ ನಿರ್ಮಲ ವಾತಾವರಣ ಕಾಣುವುದು ಕಣ್ಣಿಗೆ ಹಬ್ಬವೇ ಸರಿ.
ಕೆಲವೊಮ್ಮೆ ನಿಜವಾದ ಮಳೆ ನೋಡಬೇಕೆಂದರೆ ಮಲೆನಾಡಿಗೇ ಹೋಗಬೇಕು. ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ವರ್ಣಿಸಲಸದಳ. ನಿರ್ಮಲ ವಾತಾವರಣ, ಬೆರಳೆಣಿಕೆ ವಾಹನ, ಖಾಲಿ ರೋಡು, ಹಕ್ಕಿಗಳ ಕಲರವ, ಸ್ಕೂಲ್ ಬ್ಯಾಗ್ ಹಿಡಿದು ಸಾಗುವ ಪುಟ್ಟ ಮಕ್ಕಳು, ಜಡಿ ಮಳೆ, ಅಲ್ಲೊಂದೊಂದು ಟೀ ಅಂಗಡಿ, ಅತ್ತ ಇತ್ತ ಗಿಡ ಮರ ಬೆಟ್ಟ, ಗುಡ್ಡಗಳ ಸಾಲು. ಅಬ್ಟಾಬ ಈ ವಿಷ ಯದಲ್ಲಿ ಮಲೆನಾಡಿಗರು ಪುಣ್ಯವಂತರೆ ಹೌದು.
ಮಳೆ ಬೀಳುವ ಕಾಡನ್ನು ವರ್ಣಿಸೋಕೆ ಸಾಧ್ಯವಿಲ್ಲ. ಕಾಡಿನ ಸೊಗಸನ್ನು ನಾವೇ ಸ್ವತಃ ಅನುಭವಿಸಬೇಕು. ಪ್ರಕೃತಿಯ ರಮಣೀಯ ದೃಶ್ಯವು ಎಂತವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.
ಮಲೆನಾಡಿನಲ್ಲಿ ಕೆಲಸಗಳು ಶುರುವಾಗುವುದೇ ಮಳೆಗಾಲದಲ್ಲಿ, ಎಷ್ಟೇ ಮಳೆ ಸುರಿಯುತ್ತಿದ್ದರೂ ಇಲ್ಲಿನ ರೈತರು ಕೆಲಸಕ್ಕೆ ರಜೆ ಹಾಕುವುದಿಲ್ಲ. ಮಳೆಗಾಲದಲ್ಲಿ ರೈತ ಹೊರ ಹೊರಟರೆ ಅದರ ಸಂಭ್ರಮವೇ ಬೇರೆ ಬಿಡಿ.
ಪ್ರವಾಸಿಗರಿಗೆ ಖುಷಿಯಾಗುವ ಮಂಜು ಮಿಶ್ರಿತ, ಚಳಿ ಮಿಶ್ರಿತ, ಪರಿಶುದ್ಧ ವಾತಾವರಣ ಈ ಮಳೆಗಾಲ. ಮಳೆಯಿಂದಾಗಿ ನಮ್ಮ ದೈನಂದಿನ ಚಟುವಟಿಕೆಗಳಂತು ನಿಲ್ಲುವುದಿಲ್ಲ, ಎಂದಿನಂತೆ ಅದು ಮುಂದುವರೆಯಲೇಬೇಕು. ಮಳೆಗಾಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಅಚ್ಚು ಮೆಚ್ಚು. ಶಾಲಾ ಬಾಲಕರಂತೂ ಕೆಸರಿನಲ್ಲಿ ಆಡುತ್ತಾ ಒಳ್ಳೆ ಮಜ ಪಡೆದುಕೊಳ್ಳುತ್ತಾರೆ. ಬಟ್ಟೆ ಕೊಳಕುಮಾಡಿಕೊಳ್ಳುವ, ಬಿದ್ದು ಗಾಯ ಮಾಡಿಕೊಳ್ಳುವ ಪರಿವಿಲ್ಲದೆ ಆಡುವುದೇ ಇವರ ಕೆಲಸ. ಇತ್ತ ಹಿರಿಯರು ಅಥವಾ ಮಧ್ಯ ವಯಸ್ಸಿನ ಜನರು ತಮ್ಮ ಕೆಲಸ ಕಾರ್ಯವನ್ನು ಟಿವಿ ನೋಡಿಕೊಂಡೋ ಒಂದು ಮನಸ್ಸಿಗೆ ಮುದ ನೀಡುವ ಕಾಫಿಯೊಟ್ಟಿಗೆ, ಬೋಂಡ ಬಜ್ಜಿ ಇವೆÇÉಾವ ಸವಿಯುತ್ತ ಮಳೆಯನ್ನು ಸಂತಸದಿಂದ ಅನುಭವಿಸುತ್ತಾರೆ.
ಕಾಲ ಕಾಲಕ್ಕೆ ಎಲೆ ಉದುರಿಸುವ ಮರಗಳು ಮಳೆಗಾಲದಲ್ಲಿ ಹಸರು ಸೀರೆಯನ್ನು ಹೊದ್ದು ನಿಂತಂತೆ ಕಾಣುವುದು ಪ್ರಕೃತಿಯ ಒಂದು ವಿಸ್ಮಯವೇ ಸರಿ. ಒಂದು ಕ್ಷಣ ಮಲೆನಾಡಿನ ಗಿರಿ ಶಿಖರಗಳಲ್ಲಿ ನೀರಿನಂತೆ ಸುರಿಯುತ್ತಿರುವುದು, ಮಂಜೋ ಮಳೆಯೋ ತಿಳಿಯುವುದೇ ಇಲ್ಲ. ತೋಟದ ಹಾದಿ ಹಿಡಿದು ಹೊರಟರೆ ಸುತ್ತಲಿನ ಗಿಡ ಮರಗಳನ್ನು ನೋಡಿ ನಾವು ನಿಂತಿರುವ ತಾಣ ಕಾಡೋ ತೋಟವೋ ಅದು ಸಹ ತಿಳಿಯುವುದಿಲ್ಲ.
ಅಂತು ಇಂತು ಒಂದು ವರ್ಷದ ಹಿಂದೆ ಮೂಲೆ ಸೇರಿದ್ದ ರೈನ್ ಕೋಟ್ ಹಾಗು ಒಂಟಿ ಕಾಲಿನ ಸುಂದರಿ (ಛತ್ರಿ) ಹೊರ ಬರುವ ಸಮಯವಾಗಿದೆ. ಮಲೆನಾಡು ಅದ್ಭುತ ಮಳೆಗಾಲವಂತು ಅತ್ಯದ್ಭುತ. ಕಾಫಿಯನ್ನು ಕುಡಿಯುವುದಲ್ಲ, ಅದನ್ನ ಸವಿಯಬೇಕು. ಹಾಗೆಯೆ ಮಳೆಗಾಲವನ್ನು ನಿಂತು ನೋಡುವುದಲ್ಲ, ಅದನ್ನ ಅನುಭವಿಸಬೇಕು.
-ಸಹನ ಎಚ್. ವೈ.
ಶಿವಮೊಗ್ಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.