ಏಳುಬೀಳುಗಳ ನಡುವೆ ಯಶಸ್ಸಿನ ಶಿಖರವೇರಿದ ರತನ್ ಟಾಟಾ
Team Udayavani, Jun 13, 2020, 1:01 PM IST
ಬದುಕಿನಲ್ಲಿ ಹಲವರು ಸ್ಫೂರ್ತಿಗಳಾಗಿರುತ್ತಾರೆ. ಅವರ ಸಾಧನೆ, ಬದುಕಿ ಬಾಳಿದ ರೀತಿ ಎಲ್ಲವೂ ನಮ್ಮನ್ನು ಮತ್ತೆ ಮತ್ತೆ ಅವರ ಹೆಸರೆತ್ತುವಂತೆ ಮಾಡುತ್ತದೆ. ಅಂತಹ ಕೆಲವು ವ್ಯಕ್ತಿತ್ವಗಳಲ್ಲಿ ರತನ್ ಟಾಟಾ ಅವರೂ ಒಬ್ಬರು. ಈ ಬಾರಿ ಸ್ಫೂರ್ತಿ ಅಂಕಣದಲ್ಲಿ ಇವರು ನಮ್ಮ ಐಕಾನ್.
ಯಶಸ್ಸು ಎಂಬುದು ಯಾರಿಂದಲೋ ಪಡೆದು ಬರುವಂಥದ್ದಲ್ಲ. ಸ್ವಂತ ಪರಿಶ್ರಮದಿಂದ ಗಳಿಸುವಂಥದ್ದು. ಇಂಥವರ ಸಾಲಿನಲ್ಲಿ ಅಗ್ರಗಣ್ಯರು ರತನ್ ಟಾಟಾ. 1961ರಲ್ಲಿ ಟಾಟಾ ಸ್ಟೀಲ್‌ನಲ್ಲಿ ಮೊದಲು ಕೆಲಸ ಆರಂಭಿಸಿದ್ದ ಇವರು ಕುಲುಮೆ ಮತ್ತು ಸುಣ್ಣದ ಕಲ್ಲಿನ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ಟಾಟಾ ಸನ್ಸ್ ಅಧ್ಯಕ್ಷರಾಗಿರುವ ಇವರು ಟಾಟಾ ಸಮೂಹದ ಮಾಜಿ ಅಧ್ಯಕ್ಷರು. 28 ಡಿಸೆಂಬರ್ 1937ರಂದು ನವಲ್ ಟಾಟಾ ಮತ್ತು ಸೋನೂ ಟಾಟಾ ದಂಪತಿ ಪುತ್ರನಾಗಿ ರತನ್ ಟಾಟಾ ಮುಂಬಯಿಯಲ್ಲಿ ಜನಿಸಿದರು.
ಏರಿಳಿತಗಳು ಸಾಮಾನ್ಯ
ಜೀವನದಲ್ಲಿ ಏರಿಳಿತಗಳು ಸಹಜವಾಗಿಯೇ ನಡೆಯುವಂಥವು. ಒಂದೊಮ್ಮೆ ನಮ್ಮ ಇಸಿಜಿಯಲ್ಲಿ ಏರಿಳಿತಗಳು ಕಂಡುಬರದಿದ್ದರೆ ನಾವು ಬದುಕಿಲ್ಲ ಎಂದೇ ಅರ್ಥ. ಹೀಗಾಗಿ ಅವುಗಳಿಗೆ ಹೊಂದಿಕೊಂಡು ಬದುಕಲು ಕಲಿಯಬೇಕೇ ವಿನಾ ಹಿಂಜರಿಯಬಾರದು. ಜನರು ನಮ್ಮತ್ತ ಎಸೆಯುವ ಕಲ್ಲುಗಳನ್ನು ಬಳಸಿಯೇ ಕಟ್ಟಡ ನಿರ್ಮಿಸಬೇಕೇ ಹೊರತು ಹೆದರಿ ಓಡಬಾರದು ಎಂಬುದು ರತನ್ ಟಾಟಾರ ನಿಲುವು.
ನಿರ್ಧಾರದಲ್ಲಿ ಸರಿ, ತಪ್ಪು ಎಂಬುದಿಲ್ಲ
ನಿರ್ಧಾರಗಳಲ್ಲಿ ಸರಿ, ತಪ್ಪು ಎಂಬ ವಿಧಗಳಿವೆ ಎಂಬುದನ್ನು ನಾನು ನಂಬಲಾರೆ. ತೆಗೆದುಕೊಂಡ ನಿರ್ಧಾರವನ್ನು ಸರಿದಾರಿಯಲ್ಲಿ ಕೊಂಡೊಯ್ಯುವುದಷ್ಟೇ ನನಗೆ ಗೊತ್ತಿರುವುದು. ಸೋಲು-ಗೆಲುವು ಎಲ್ಲದಕ್ಕೂ ನಮ್ಮ ಮನಃಸ್ಥಿತಿ ಕಾರಣವೇ ವಿನಾ ತೆಗೆದುಕೊಂಡ ನಿರ್ಧಾರವಲ್ಲ. ಕಬ್ಬಿಣದ ವಸ್ತುಗಳನ್ನು ಸುಲಭದಲ್ಲಿ ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಅದರದ್ದೇ ತುಕ್ಕು ಕಬ್ಬಿಣವನ್ನು ಇಲ್ಲವಾಗಿಸುತ್ತದೆ. ನಮ್ಮ ಜೀವನವೂ ಇದರಂತೆಯೇ. ಗೆಲ್ಲುವ ಅಚಲ ವಿಶ್ವಾಸ ಇದ್ದವ ಗೆಲ್ಲುತ್ತಾನೆ. ತನ್ನಮೇಲೆ ತನಗೆ ನಂಬಿಕೆ ಇಲ್ಲದವ ಸೋಲುತ್ತಾನೆ ಎಂಬುದು ರತನ್ ಟಾಟಾರ ನಿಲುವು.
ಆಗು ಹೋಗುಗಳ ಚಿಂತೆ ಬಿಡಿ
ಟಾಟಾ ಅವರ ಪ್ರಕಾರ ಹಿಂದೆ ಹೀಗಾಗಿತ್ತು, ಮುಂದೆ ಇನ್ನೇನು ಕಾದಿದೆಯೋ ಎಂಬಿತ್ಯಾದಿ ಚಿಂತೆಗಳನ್ನು ಮಾಡಲೇಬಾರದು. ಇದರಿಂದ ನಮ್ಮ ಮನಃಸ್ಥಿತಿ ಹದಗೆಡುವ ಜತೆಗೆ ಸಮಯವೂ ವ್ಯರ್ಥವಾಗುತ್ತದೆ. ಹೀಗಾಗಿ ಜೀವನದ ಪ್ರತೀ ಕ್ಷಣವನ್ನು ಅನುಭವಿಸಬೇಕೇ ವಿನಾ ಆಗು ಹೋಗುಗಳ ಬಗ್ಗೆ ತುಂಬ ವಿಚಲಿತರಾಗಬಾರದು.
ಸೋಲಿನ ರುಚಿಯನ್ನೂ ಕಂಡಿದ್ದರು
ರತನ್ ಟಾಟಾ ಅವರು ತಮಗೆ ದೊರೆತ ಮೊದಲ ಜವಾಬ್ದಾರಿಯಲ್ಲಿಯೇ ಎಡವಿದ್ದರು. ನ್ಯಾಶನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ (ನೆಲ್ಕೋ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಇವರು ಸಂಸ್ಥೆಯ ಆರ್ಥಿಕ ಕುಸಿತ ತಡೆಯುವಲ್ಲಿ ವಿಫಲರಾಗಿದ್ದರು. ಅವರ ಎರಡನೇ ಪ್ರಯತ್ನವಾದ ಸಾಮ್ರಾಜಿn ಮಿಲ್ಸ್‌ನ ಕತೆಯೂ ಇದೇ ಆಗಿತ್ತು.`
ಕೊಡುಗೈ ದಾನಿ
ಕೇವಲ ಉದ್ಯಮಿಯಾಗಿ ಮಾತ್ರವಲ್ಲದೆ, ದಾನಿಯಾಗಿಯೂ ರತನ್ ಟಾಟಾ ಚಿರಪರಿಚಿತರು. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಗಳಿಸಿದ ಹಣದ ಒಂದಂಶವನ್ನು ಹಲವು ಮಹತ್ಕಾರ್ಯಗಳಿಗಾಗಿ ದಾನ ನೀಡಿದ ಕೀರ್ತಿ ಇವರದ್ದು. ಇತ್ತೀಚೆಗೆ ಕೊರೊನಾ ವೈರಸ್ ನಿರ್ವಹಣೆಯ ಸಲುವಾಗಿ 500 ಕೋಟಿ ರೂ. ದಾನ ನೀಡುವ ಮೂಲಕ ಇವರು ಉದಾರತೆ ಮೆರೆದಿದ್ದಾರೆ.
ಪ್ರಸನ್ನ ಎಂ. ಉತ್ತರಕನ್ನಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.