RCB: ಈ ಸಲ ಕಪ್ ನಮ್ಮದು…
Team Udayavani, Apr 18, 2024, 4:05 PM IST
Who are we? RCB.
ಆರ್‌ಸಿಬಿ ಅಭಿಮಾನಿಗಳ ಹದಿನಾರು ವರ್ಷಗಳ ಕನಸು ಕೊನೆಗೂ ಈಡೇರಿದೆ. ಎರಡನೇ ಆವೃತ್ತಿಯ ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ನಮ್ಮ ಆರ್‌ಸಿಬಿ ವನಿತೆಯರು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕೆಡವಿ ಕಪ್ ನಮ್ಮದಾಗಿಸಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ಆರ್‌ಸಿಬಿ ಮೇಲೆ ಅಭಿಮಾನಿಗಳಿಗೂ ನಂಬಿಕೆಯಿರಲಿಲ್ಲ.
ಅದಕ್ಕೆ ಕಾರಣ ಡಬ್ಲ್ಯುಪಿಎಲ್‌ನ ಮೊದಲ ಆವೃತ್ತಿಯಲ್ಲಿ ಅವರ ಕಳಪೆ ಪ್ರದರ್ಶನ. ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಸೋತು ನಿರಾಸೆ ಮೂಡಿಸಿದ್ದರು. ಗೆದ್ದದ್ದು ಕೇವಲ ಎರಡು ಪಂದ್ಯ. ರನ್‌ರೇಟ್ ಕೊಂಚ ಉತ್ತಮವಿದ್ದ ಕಾರಣ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು, ಅಷ್ಟೇ.
ಈ ಬಾರಿ ಆರ್‌ಸಿಬಿ ವನಿತೆಯರದ್ದು ಸಂತುಲಿತ ತಂಡ. ಕೂಟದ ಉದ್ದಕ್ಕೂ ಎಲ್ಲಾ ವಿಭಾಗಗಳಲ್ಲೂ ಉತ್ತಮ ನಿರ್ವಹಣೆ ತೋರಿತ್ತು. ಆರಂಭದ ಎರಡು ಪಂದ್ಯದಲ್ಲಿ ಎದುರಾಗಿದ್ದ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಅನ್ನು ಸೋಲಿಸಿ ಉತ್ಸಾಹದಲ್ಲಿದ್ದ ತಂಡಕ್ಕೆ ಮುಂದೆ ಎದುರಾಗಿದ್ದು ಬಲಿಷ್ಠ ಡೆಲ್ಲಿ.
ಅದುವರೆಗೂ ಡೆಲ್ಲಿ ವಿರುದ್ಧ ಗೆಲ್ಲದ ಆರ್‌ಸಿಬಿ ಇಲ್ಲೂ ಮುಗ್ಗರಿಸಿತ್ತು. ಅನಂತರ ಎದುರಾಗಿದ್ದು ಮುಂಬಯಿ. ಇಲ್ಲೂ ನಮ್ಮದು ಅದೇ ಪರಿಸ್ಥಿತಿ. ಬಳಿಕ ಯುಪಿ ವಾರಿಯರ್ ವಿರುದ್ಧ ಗೆದ್ದು ಬೀಗುವಷ್ಟರಲ್ಲಿ ಗುಜರಾತ್ ಜೈಂಟ್ಸ್ ನಿಂದಾಗಿ ಆಘಾತ. ಇಲ್ಲಿಗೆ ಪ್ಲೇ ಆಫ್ ಲೆಕ್ಕಾಚಾರ ಶುರುವಾಗಿತ್ತು. ಗುಜರಾತ್ ಜೈಂಟ್ಸ್ ನ ಸೋಲಿಸುವ ಮೂಲಕ ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು.
ಮತ್ತೆ ಆರ್‌ಸಿಬಿಗೆ ಡೆಲ್ಲಿ ಚಾಲೆಂಜ್ ಎದುರಾಗಿತ್ತು. ಈ ಬಾರಿ ದಿಟ್ಟ ಹೋರಾಟ ಕೊಟ್ಟ ನಮ್ಮ ಹುಡುಗಿಯರು ಒಂದು ರನ್‌ನಿಂದ ಸೋತು ನಿರಾಸೆ ಅನುಭವಿಸಿದ್ದರು. ಡೆಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಮುಂದಿನ ಪಂದ್ಯದಲ್ಲಿ ಗುಜರಾತ್ ಯುಪಿಯನ್ನು ಸೋಲಿಸುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ಗೆ ಹತ್ತಿರ ಆಗುವಂತೆ ಮಾಡಿತ್ತು.
ಆದರೂ ನಮ್ಮ ಹುಡುಗಿಯರಿಗೆ ಯಾರ ಸಹಾಯವೂ ಬೇಡವಾಗಿತ್ತು. ತಮ್ಮ ಪ್ರಯತ್ನದ ಮೂಲಕ ಪ್ಲೇ ಆಫ್ ಪ್ರವೇಶಿಸುವುದು ಬೇಕಾಗಿತ್ತು. ಅದಕ್ಕೆ ಅವರು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಮೊದಲ ಬಾರಿಗೆ ಗೆದ್ದು ಅಧಿಕಾರಯುತವಾಗಿಯೇ ಪ್ಲೇ ಆಫ್ ಪ್ರವೇಶಿಸಿದರು. 113 ರನ್‌ಗಳ ಸಾಧಾರಾಣ ಮೊತ್ತಕ್ಕೆ ಮುಂಬೈಯನ್ನು ಆಲ್ ಔಟ್ ಮಾಡಿದ್ದು ಆರ್‌ಸಿಬಿಗೆ ಎಕ್‌ಸ್ಟ್ರಾ ಎನರ್ಜಿ ಕೊಟ್ಟಿತ್ತು.
ಮೂರನೇ ಸ್ಥಾನದೊಂದಿಗೆ ಪ್ಲೇ ಆಪ್ ಪ್ರವೇಶಿಸಿದ್ದ ಆರ್‌ಸಿಬಿಗೆ ಮತ್ತೆ ಎದುರಾಗಿದ್ದು ಮುಂಬಯಿ. ಇಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್‌ಸಿಬಿಗೆ ಗಳಿಸಲು ಸಾಧ್ಯವಾಗಿದ್ದು 135 ರನ್ ಅಷ್ಟೇ. ಆದರೆ ನಮ್ಮ ಬೌಲರ್‌ಗಳು ರನ್ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೇ ಬಿಗು ಬೌಲಿಂಗ್ ದಾಳಿ ನಡೆಸಿ ಮುಂಬೈಯನ್ನು 130 ರನ್‌ಗೆ ಕಟ್ಟಿಹಾಕಿ ಫೈನಲ್ ಪ್ರವೇಶಿಸಿದರು. ಅಷ್ಟೆ ಅಲ್ಲದೇ ಡಬ್ಲ್ಯುಪಿ ಎಲ್ ಇತಿಹಾಸದಲ್ಲಿಯೇ ಅತಿ ಕಡಿಮೆ ರನ್ ಬಾರಿಸಿಯೂ ಗೆದ್ದ ತಂಡವಾಗಿ ಆರ್‌ಸಿಬಿ ಹೊರ ಹೊಮ್ಮಿತ್ತು.
ಮುಂದಿನದು ಡೆಲ್ಲಿ ಎದುರಿನ ಫೈನಲ್ಸ್ ಡೆಲ್ಲಿ ವಿರುದ್ಧ ಆರ್‌ಸಿಬಿ ಅದುವರೆಗೂ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಡೆಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಏಳು ಓವರ್‌ಗೆ ಡೆಲ್ಲಿ 64 ನೋ ಲಾಸ್. ಪಂದ್ಯ ಆರ್‌ಸಿಬಿ ಕೈಯಿಂದ ಜಾರಿತೆಂದೇ ಅಭಿಮಾನಿಗಳು ಭಾವಿಸಿದ್ದರು. ಆಗ ದಾಳಿಗೆ ಇಳಿದರು ನೋಡಿ ಸೋಫಿ ಮೊಲಿನ್ಯೂ… ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದು ಮೊಮೆಂಟಮ್ ಅನ್ನು ಆರ್‌ಸಿಬಿ ಕಡೆಗೆ ತಿರುಗಿಸಿದರು. ಅದನ್ನು ಶ್ರೇಯಾಂಕಾ, ಆಶಾ ಕೂಡ ಮುಂದುವರಿಸಿ 18.3 ಓವರ್‌ಗಳಲ್ಲಿ ಡೆಲ್ಲಿಯನ್ನು 113 ರನ್‌ಗೆ ಕಟ್ಟಿಹಾಕಿದರು. ತಾಳ್ಮೆಯ ಆಟ ಆಡಿದ ನಮ್ಮ ಬ್ಯಾಟರ್ 115 ರನ್ ಬಾರಿಸಿ ಈ ಸಲದ ಕಪ್ ಅನ್ನು ನಮ್ಮದಾಗಿಸಿದರು. ಹದಿನಾರು ವರ್ಷಗಳ ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡಿದರು.
ಈ ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿಯದು ಸಂತುಲಿತ ಪ್ರದರ್ಶನ. ಬ್ಯಾಟಿಂಗ್ ನಲ್ಲಿ ನಾಯಕಿ ಸ್ಮತಿ ಮಂದನಾ, ರಿಚಾ ಗೋಷ್, ಮೇಘನಾ, ಸೋಫಿ ಡಿವೈನ್ ಮಿಂಚಿದರೇ, ಬೌಲಿಂಗ್‌ನಲ್ಲಿ ನಮ್ಮ ಕನ್ನಡತಿ ಶ್ರೇಯಾಂಕಾ, ಆಶಾ, ಮೊಲಿನ್ಯೂ ಉತ್ತಮ ಪ್ರದರ್ಶನ ನೀಡಿದ್ದರು. ಆಲ್ ರೌಂಡ್ ಎಲ್ಲಿಸ್ ಪೆರ್ರಿ ನಿಜಕ್ಕೂ ಆರ್‌ಸಿಬಿ ಪಾಲಿನ ಸೂಪರ್ ಸ್ಟಾರ್. ಈ ಅದ್ಭುತ ಪ್ರದರ್ಶನ ಅವರಿಗೆ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಈ ಆವೃತ್ತಿಯಲ್ಲಿ ಒಟ್ಟು 9 ಪಂದ್ಯಗಳನ್ನಾಡಿರುವ ಎಲ್ಲಿಸ್ ಪೆರ್ರಿ 347 ರನ್ ಸಿಡಿಸಿದ್ದಲ್ಲದೇ 7 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 6 ವಿಕೆಟ್ ಬಂದಿದ್ದು ಮುಂಬಯಿ ವಿರುದ್ಧ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಯಾರಿಗೂ ಕಡಿಮೆಯಿಲ್ಲ. ಟೂರ್ನಿಯಲ್ಲೇ ಅತ್ಯಧಿಕ 13 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಪಡೆದ ಸಾಹಸಿ ಈಕೆ.
ಒಟ್ಟಿನಲ್ಲಿ ನಮ್ಮ ವನಿತೆಯರು ನಾವು ಯಾರಿಗೂ ಕಮ್ಮಿಯಿಲ್ಲ ಅನ್ನುವಂತೆ ಆರ್ ಸಿ ಬಿ ಫ್ರಾಂಚೈಸಿಯ, ಅದಕ್ಕಿಂತಲೂ ಮಿಗಿಲಾಗಿ ಅಭಿಮಾನಿಗಳ ಪಾಲಿನ ಕಪ್ ಬರವನ್ನು ನೀಗಿಸಿದ್ದಾರೆ. ಮುಂದೆ ನಡೆಯಲಿರುವ ಐಪಿಎಲ್‌ನಲ್ಲಿ ನಮ್ಮ ಪುರುಷರ ತಂಡವೂ ಕಪ್ ಗೆಲ್ಲಲ್ಲಿ ಎಂದು ಹಾರೈಸುತ್ತ, ಕಪ್ ನಮ್ಮದಾಗಿರುವ ಖುಷಿಯನ್ನು ಸಂಭ್ರಮಿಸೋಣ. ಈ ಸಲ ಕಪ್……. ನಮ್ಮದು.
-ಸುಶ್ಮಿತಾ ನೇರಳಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.