ಭೈರಪ್ಪನವರ ಭಾರತವನ್ನೊಮ್ಮೆ ಸುತ್ತಿ ಬಂದಾಗ
Team Udayavani, Jun 27, 2021, 2:35 PM IST
ವ್ಯಾಸಭಾರತವನ್ನು ಆಧರಿಸಿದ ಯಾವುದೇ ಮಹಾಭಾರತದ ಕೃತಿಯನ್ನು ಓದಿಕೊಂಡವರಿಗೆ, ಮಹಾಭಾರತವನ್ನು ಆಧರಿಸಿ ನಿರ್ಮಿಸಿರುವ ಯಾವುದೇ ಸಿನೆಮಾ, ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಂಡವರಿಗೆ ಮೊದಲ ಬಾರಿ ಭೈರಪ್ಪನವರ ಪರ್ವ ಕಾದಂಬರಿಯನ್ನು ಕೈಗೆತ್ತಿ ಓದಲು ತೊಡಗಿದಾಗ ದಿಗ್ಭ್ರಮೆಯಾಗುತ್ತದೆ. ಮಹಾಭಾರತವನ್ನು ಆಧಾರವಾಗಿರಿಸಿಕೊಂಡೆ ರಚಿಸಲ್ಪಟ್ಟಿದ್ದರೂ ಪರ್ವದ ಪ್ರತೀ ಪದವೂ ಬೆರಗು ಮೂಡಿಸುತ್ತದೆ.
1979ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡ ಈ ಮಹೋನ್ನತ ಕೃತಿ ಇಂದಿಗೂ, ಹಲವಾರು ಮುದ್ರಣ ಕಾಣುತ್ತಲೇ ಇದೆ. ಇಷ್ಟು ವರ್ಷಗಳ ಅನಂತರವೂ ಅದೇ ಆಸಕ್ತಿ, ಅಚ್ಚರಿಗಳನ್ನು ತನ್ನೊಳಗೆ ತುಂಬಿಕೊಂಡು ಇಂದಿಗೂ ಓದುಗರಿಗೆ ಅಚ್ಚರಿ ಮೂಡಿಸುತ್ತದೆ.
ಮೂಲ ಗ್ರಂಥದ ಎಲ್ಲ ಅಲೌಕಿಕ ವಿಚಾರಗಳನ್ನು ಲೌಕಿಕವಾಗಿಸಿ ಪ್ರತೀ ಪಾತ್ರಗಳಿಗೂ ಭಿನ್ನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕಾದಂಬರಿ ನಮ್ಮ ಇದುವರೆಗಿನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿಬಿಡುತ್ತದೆ. ನಮ್ಮ ಕಲ್ಪನೆಗಳಿಗೆ ತಣ್ಣೀರೆರಚಿ ಬಿಡುತ್ತದೆ, ಹೌದಲ್ಲವೆ? ನಿಜದ ಭಾರತ ಹೀಗಿದ್ದಿರಬಹುದು ಎಂದು ಯೋಚಿಸುವ ಚಿಂತನೆಯನ್ನು ನಮಗೆ ದಯ ಪಾಲಿಸುತ್ತದೆ.
ಮೊದಲೇ ಹೇಳಿದಂತೆ ಕಾದಂಬರಿಕಾರರು ಇಲ್ಲಿ ಎಲ್ಲ ಅಲೌಕಿಕ ಅಂಶಗಳನ್ನು ಗೌಣವಾಗಿಸಿ, ಲೌಕಿಕ ಸಂಗತಿಗಳ ಸುತ್ತಲೇ ಕಥೆಯನ್ನು ಹೆಣೆದಿದ್ದು; ಮಹಾಭಾರತ ನಮ್ಮ ನಡುವೆಯೇ ನಡೆದಿದೆ; ಇದೇ ನಿಜವಾದ ಭಾರತ ಇದ್ದಿರಬಹುದು ಎನ್ನುವ ಆಲೋಚನೆಯನ್ನು ನೀಡುತ್ತದೆ.
ಕಾದಂಬರಿಯ ಬಹುಪಾಲು ಸ್ವಗತದ ತಂತ್ರದಲ್ಲೇ ವಿಜೃಂಭಿಸಿದೆ. ಕುರುಕ್ಷೇತ್ರ ಶುರುವಾಗುವುದಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಇದೆ ಎನ್ನುವ ಸಮಯದಲ್ಲಿ “ಪರ್ವ’ ಅನಾವರಣಗೊಳ್ಳುತ್ತದೆ. ಯುದ್ದದಲ್ಲಿ ತನ್ನ ಅಳಿಯಂದಿರಾದ ಪಾಂಡವರ ಪರವಾಗಿ ಹೋರಾಡಲು ಕುರುಕ್ಷೇತ್ರಕ್ಕೆ ತೆರಳಲು ಸಿದ್ಧವಾಗುತ್ತಿರುವ ಶಲ್ಯನಿಂದ ಕಥೆ ತೆರೆದುಕೊಳ್ಳುತ್ತದೆ.
ಪ್ರತೀ ಪಾತ್ರಗಳಿಗೂ ಇಲ್ಲಿ ವಿಶಿಷ್ಟ ಆಯಾಮ ನೀಡಲಾಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ಎಷ್ಟು ದಿನಗಳು ಬೇಕಾಗುತ್ತದೆ? ಎಷ್ಟು ಯೋಜನಾ ದೂರವಿದೆ? ಯಾವ ಮಾರ್ಗ ಸೂಕ್ತವಾದುದು? ಇಂತಹ ಸಂಗತಿಗಳನ್ನು ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ಬಹಳ ಅದ್ಭುತವಾಗಿ ಲೆಕ್ಕ ನೀಡಿದ್ದು, ಕಾದಂಬರಿಯ ಬಗ್ಗೆ ಮಾತನಾಡುವಾಗ ಕೈ ಬಿಡದೆ ಹೇಳಲೇಬೇಕಾದ ವಿಚಾರ ಎನ್ನಬಹುದು.
“ಶ್ರೀಕೃಷ್ಣ’ ವಿಷ್ಣುವಿನ ಅವತಾರ ಆತ “ಸರ್ವಶಕ್ತ’ ಎನ್ನುವುದರಿಂದಿಡಿದು, ಆತನ ಮಾಯೆಗಳು, ದೇವರು ಈ ಯಾವ ಕಲ್ಪನೆಯೂ ಪರ್ವದಲ್ಲಿ ಇಲ್ಲ. ಇಲ್ಲಿ ಎಲ್ಲರೂ ಸಾಮಾನ್ಯ ಮನುಷ್ಯರು. ಕೃಷ್ಣ “ದ್ವಾರಕಾದೀಶ’ ಹೌದು; ಆದರೆ ಭಗವಂತನಲ್ಲ.
ಕುಂತಿ ತನಗಿದ್ದ ವರದ ಕಾರಣದಿಂದ, ದೇವತೆಗಳನ್ನು ಒಲಿಸಿಕೊಂಡು ಅವರಿಂದ ಪ್ರಸಾದದ ರೂಪದಲ್ಲಿ ಪುತ್ರರನ್ನು ಪಡೆದುಕೊಂಡಳು ಎಂದು ವ್ಯಾಸಭಾರತದಲ್ಲಿ ಹೇಳಲಾಗಿದೆ ಆದರೆ ಇಲ್ಲಿ ಇಂದ್ರ, ಯಮ, ಯಾರು ದೇವತೆಗಳಲ್ಲ ಅವರು ಸಾಮಾನ್ಯ ಮನುಷ್ಯರು – ಆರ್ಯಾವರ್ತದ ಆರ್ಯರು. ಪ್ರತೀ ಒಬ್ಬ ಆರ್ಯರ ಜತೆ ಕುಂತಿ ಒಂದು ವರ್ಷದವರೆಗೆ ಸಂಬಂಧವಿರಿಸಿಕೊಂಡು, ಪುತ್ರರನ್ನು ಪಡೆದುಕೊಂಡಳು ಎನ್ನುವುದು ಪರ್ವದ ಅಂಶ.
600ಕ್ಕೂ ಹೆಚ್ಚು ಪುಟಗಳ ಸುದೀರ್ಘ ಕಾದಂಬರಿ ಇದಾಗಿದ್ದು, ಪ್ರತೀ ಪಾತ್ರಗಳು ನಮಗೆ ಹೊಸ ಅನ್ವೇಷಣೆಗಳೆನಿಸುತ್ತವೆ. ಮಹಾಭಾರತದ ಬೇರೆ ಬೇರೆ ಕೃತಿಗಳನ್ನು ಓದಿಕೊಂಡವರಿಗೆ ಪರ್ವ ಕಣ್ಣು ಮಿಟುಕಿಸದೆ; ಕಣ್ಣರಳಿಸಿ ಓದುವಂತೆ ಮಾಡಿಬಿಡುತ್ತದೆ. ಮಹಾಭಾರತವನ್ನು ಮತ್ತೂಮ್ಮೆ ನಮ್ಮ ಹೆಸರಿನಲ್ಲಿ ಬರೆಯುವುದರಲ್ಲಿ ಹೆಚ್ಚುಗಾರಿಕೆ ಏನಿದೆ? ಎಂದು ಕೇಳುವವರಿಗೆ ಪರ್ವದ ಓದಿನ ಅನಂತರ ತಮ್ಮ ಅಜ್ಞಾನದ ಅರಿವಾಗುತ್ತದೆ. ಪರ್ವ ಅದೊಂದು ಅಸಾಧಾರಣ ಅಚ್ಚರಿ, ಕಲ್ಪನೆಗಳ ತಾಣ.
ಶಿವರಾಮು ವಿ. ಗೌಡ
ಮಾನಸ ಗಂಗೋತ್ರಿ(ಮೈಸೂರು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.