ಕನಸು ಕಣ್ಣಿನ ಹುಡುಗ ಚಿರು; ಚಿರಂಜೀವಿ ಆಗಲೇ ಇಲ್ಲ
ಸಿನೆಮಾ ಮಾಡುತ್ತಲೇ ಬೆಳೆದ ಚಿರು ಸೋಲು-ಗೆಲುವಿಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ
Team Udayavani, Jun 12, 2020, 3:28 PM IST
ಓರ್ವ ಪ್ರತಿಭಾನಿತ್ವ ನಟನನ್ನು ಸ್ಯಾಂಡಲ್‌ವುಡ್ ಕಳೆದುಕೊಂಡಿದೆ. ಚಿರಂಜೀವಿ ಎಂದು ಹೆಸರಿಟ್ಟುಕೊಂಡು ಚಿಕ್ಕವಯಸ್ಸಿನಲ್ಲೇ ಜೀವನದ ಪಯಣ ಮುಗಿಸಿದ ನಟನ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಹನ್ನೆರೆಡು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ ಯಾವುದೇ ವಿವಾದಗಳಲ್ಲಿ ಭಾಗಿಯಾಗದೆ ಜನಮನ ಗೆದ್ದಿದ್ದರು ಚಿರಂಜೀವಿ ಸರ್ಜಾ. ತಮ್ಮ ಯಶಸ್ವಿ ಚಿತ್ರಗಳ ಮೂಲಕ ಸಿನಿ ರಸಿಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದರು. ಇನ್ನಷ್ಟು ಹೊಸ ಚಿತ್ರಗಳ ಮೂಲಕ ಎಲ್ಲರನ್ನೂ ರಂಜಿಸುವ ಉತ್ಸಾಹದಲ್ಲಿದ್ದ ಚಿರಂಜೀವಿ, ಈಗ ಇಲ್ಲವಾಗಿರುವುದನ್ನು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಯುಪುತ್ರ ಸಿನೆಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರಿಗೆ ಅದು ಯಶಸ್ವೀ ಚಿತ್ರ ಎಂಬ ಹಣೆಪಟ್ಟಿಯನ್ನು ನೀಡಲಿಲ್ಲ. ಆದರೆ ಈ ಚಿತ್ರದ ಮೂಲಕ ಯುವ ನಟನನ್ನು ಕನ್ನಡ ಚಿತ್ರರಂಗ ಪಡೆದದ್ದು ಮಾತ್ರ ಸುಳ್ಳಲ್ಲ. ಬಳಿಕ ಚಿರು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಪರದೆಯ ಮೇಲೆ ಬರುತ್ತಿದ್ದರು. ಚಿರು ಎಂಬ ಹೆಸರು ವರ್ಸಟೈಲ್ ಆ್ಯಕ್ಟರ್ ಎಂಬುದಕ್ಕೆ ಅನ್ವರ್ಥವಾಗಿತ್ತು. 2009ರಲ್ಲಿ ಸರ್ಜಾ ಕುಟುಂಬದ ಕುಡಿಯೊಂದು ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಲಿದೆ ಎಂಬ ಸುದ್ದಿ ಅನೇಕರಲ್ಲಿ ಕುತೂಹಲ ಮೂಡಿಸಿತ್ತು. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಬೆಂಬಲ ಮತ್ತು ತಮ್ಮ ಪ್ರತಿಭೆ ಹಾಗೂ ಶ್ರಮದಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಬಹುಮುಖ ಪ್ರತಿಭೆ
ಚಿಕ್ಕ ವಯಸ್ಸಿನಿಂದಲೇ ಸಿನೆಮಾದ ಬಗ್ಗೆ ಆಪಾರ ಆಸಕ್ತಿ ವಹಿಸಿದ್ದ ಚಿರು ಸಿನೆಮಾದ ಎಲ್ಲ ಮಾದರಿಯ ಕೆಲಸ ನಿರ್ವಹಣೆಯ ಬಗ್ಗೆ ಅರಿತಿದ್ದರು. ಅಷ್ಟೇ ಅಲ್ಲ, ಅವರು ನಾಯಕ ನಟನಾಗುವ ಮೊದಲು ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿ ಸಿನೆಮಾದ ಆಪಾರ ಅನುಭವ ಪಡೆದಿದ್ದರು.
ವಾಯುಪುತ್ರ
2009ರಲ್ಲಿ ಚಿರು ವಾಯುಪುತ್ರ ಸಿನೆಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದರು. ಬಳಿಕ ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಷಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮ್‌ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಸೀಜರ್, ಅಮ್ಮಾ ಐ ಲವ್‌ಯು, ಸಿಂಗ, ಖಾಕಿ, ಆದ್ಯ, ಶಿವಾರ್ಜುನ ಚಿತ್ರಗಳಲ್ಲಿ ನಟಿಸಿದ್ದರು. ಪ್ರತಿ ಸಿನೆಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಸಿನೆಮಾ ಸೋತಾಗ, ಗೆದ್ದಾಗ ಅವರು ತಲೆ ಕೆಡಿಸಿಕೊಂಡಿದ್ದೇ ಇಲ್ಲ.
ಲಾಕ್‌ಡೌನ್ ಸಮಸ್ಯೆಯಾಯಿತು
ಚಿರಂಜೀವಿ ಅವರ ಕೊನೆಯ ಚಿತ್ರ “ಶಿವಾರ್ಜುನ’ ಲಾಕ್‌ಡೌನ್ ಘೋಷಣೆಯಾಗುವ ಕೆಲವೇ ದಿನಗಳ ಮುನ್ನ ಬಿಡುಗಡೆಯಾಗಿತ್ತು. ಲಾಕ್‌ಡೌನ್ ಘೋಷಣೆಯಾದ ಕಾರಣ ಚಿತ್ರದ ಪ್ರದರ್ಶನ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ತೆರವಾದ ಬಳಿಕ “ಶಿವಾರ್ಜುನ’ ಪ್ರದರ್ಶನಕ್ಕೆ ಚಿತ್ರ ತಂಡ ಸಜ್ಜಾಗಿತ್ತು. ಚಿತ್ರಮಂದಿರಗಳಲ್ಲಿ ಚಿತ್ರದ ಪೋಸ್ಟರ್, ಕಟೌಟ್ ಹಾಗೆಯೇ ಇದೆ. ಅವರ ಕೈಯಲ್ಲಿನ್ನೂ ಸಾಕಷ್ಟು ಚಿತ್ರಗಳಿದ್ದವು. ರಾಜ ಮಾರ್ತಾಂಡ ಬಿಡು ಗಡೆಯ ಹಾದಿಯಲ್ಲಿತ್ತು. ಜತೆಯಲ್ಲಿ ಎಪ್ರಿಲ್ ಸಿನೆಮಾದ ಮುಹೂರ್ತವೂ ನೆರವೇರಿತ್ತು.
ಚಿರು ನೆನಪಿನಾರ್ಥ ರೆಫರಲ್ ಟ್ರೇಲರ್ ಬಿಡುಗಡೆ
ಚಿರು ಸರ್ಜಾ ದೊಡ್ಡ ಕನಸುಗಳನ್ನೇ ಕಂಡಿದ್ದರು. ಅವುಗಳಲ್ಲಿ “ದೊಡ್ಡೋರು’ ಸಿನೆಮಾವೂ ಒಂದಾಗಿತ್ತು. ಈ ಬಿಗ್ ಬಜೆಟ್‌ನ ಈ ಸಿನೆಮಾ ಮಾಡಲು ಐದು ವರ್ಷಗಳಿಂದ ಪ್ಲಾನ್ ನಡೆದಿತ್ತು. “ದೊಡ್ಡೋರು’ ಸಿನೆಮಾದ ಕತೆ ಸಿದ್ಧವಾಗಿತ್ತು. ಚಿತ್ರಕ್ಕೆ ಹಣ ಹೂಡುವ ನಿರ್ಮಾಪಕರಿಗಾಗಿ ಹುಡುಕಾಟ ಮುಂದುವರಿದಿತ್ತು. ಚಿರಂಜೀವಿ ಸರ್ಜಾ ಅವರಿಗೆ “ದೊಡ್ಡೋರು’ ಚಿತ್ರದ ವಿಷಯ ಹಾಗೂ ಕತೆ ತುಂಬಾ ಇಷ್ಟವಾಗಿತ್ತು. ಈ ಸಿನೆಮಾ ಮಾಡಿದರೆ ಅವರ ವೃತ್ತಿ ಜೀವನಕ್ಕೆ ಒಂದು ತಿರುವು ಸಿಗುತ್ತದೆ ಎಂದು ಹೇಳುತ್ತಿದ್ದರು. ನಿರ್ದೇಶಕ ಹರಿ ಸಂತು ಹಾಗೂ ತಂಡ ಈ ಸಿನೆಮಾದ ರೆಫರಲ್ ಟ್ರೇಲರ್ ಬಿಡುಗಡೆ ಮಾಡಿದ್ದು, ಅದನ್ನು ಚಿರು ಸರ್ಜಾ ಅವರಿಗೆ ಸಮರ್ಪಿಸಿದ್ದಾರೆ. ತಂಡ ಮಾಡಲು ಹೊರಟ್ಟಿದ್ದ ಸಿನೆಮಾ ಇದಾಗಿದೆ. ಚಿರು ಅಗಲಿಕೆ ನೋವಿನಲ್ಲಿರುವ ಚಿತ್ರ ತಂಡ ಕನ್ನಡ ಪಿಚ್ಚರ್ ಯೂ ಟ್ಯೂಬ್ ಚಾನೆಲ್ ಮೂಲಕ ಟ್ರೇಲರ್ ಬಿಡುಗಡೆ ಮಾಡಿದೆ.
ಜೀವನದ ಮೈಲುಗಲ್ಲಾಗುತ್ತದೆ ಎಂದಿದ್ದ ಚಿರು
ಚಿರು ಕಡಿಮೆ ಅವಧಿಯಲ್ಲಿಯೇ ಸಾಲು ಸಾಲು ಸಿನೆಮಾಗಳನ್ನು ಮಾಡಿದ್ದರು. ಅವರ ನಟನೆಯ ಇನ್ನೂ ಕೆಲವು ಸಿನೆಮಾಗಳು ಸಿದ್ಧವಾಗುತ್ತಿದ್ದವು. ಹಾಗೆಯೇ ಹೊಸ ಸಿನೆಮಾಗಳ ಮಾತುಕತೆಗಳೂ ನಡೆದಿದ್ದವು. ಐದಾರು ವರ್ಷಗಳ ಹಿಂದೆಯೇ ಅವರಿಗೆ ಸಿಕ್ಕಿದ್ದ ಕಥೆಯೊಂದನ್ನು ಬಹಳ ಮೆಚ್ಚಿಕೊಂಡಿದ್ದರು. ಆ ಚಿತ್ರವನ್ನು ಮಾಡಲೇಬೇಕು ಎಂದು ಉತ್ಸುಕರಾಗಿದ್ದರು. ಈ ಚಿತ್ರ ತಮ್ಮ ವೃತ್ತಿ ಬದುಕನ್ನು ಬದಲಿಸಲಿದೆ ಎಂದು ನಿರೀಕ್ಷಿಸಿದ್ದರು. “ಅಲೆಮಾರಿ’ ಖ್ಯಾತಿಯ ಹರಿ ಸಂತೋಷ್ ಈ ಸಿನೆಮಾ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸೆಟ್ಟೇರಲೇ ಇಲ್ಲ. ಆಗಲೇ ಆ ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದ ಸಂತೋಷ್, ಅದನ್ನು ಟ್ರೇಲರ್ ರೂಪದಲ್ಲಿ ಸಿದ್ಧಪಡಿಸಿದ್ದರು. ಈಗ ಚಿರಂಜೀವಿ ಅಗಲಿಕೆಯ ನೋವಲ್ಲಿ ಆ ಹಾಡನ್ನು ಅವರು ಹಂಚಿಕೊಂಡಿದ್ದಾರೆ. ಕತೆ ಎಲ್ಲವೂ ಚಿರಂಜೀವಿಗೆ ಇಷ್ಟವಾಗಿತ್ತು. ನಿರ್ಮಾಪಕರಿಗೆ ತೋರಿಸಲೆಂದೇ ಈ ಚಿತ್ರಕ್ಕಾಗಿ ಹಾಡೊಂದನ್ನು ನನ್ನ ಸಾಹಿತ್ಯದಲ್ಲಿ ಸಿದ್ಧಪಡಿಸಿದ್ದೆವು. ವಿಜು ಎಂಬುವವರು ಕಂಪೋಸ್ ಮಾಡಿ, ಚಂದನ್ ಶೆಟ್ಟಿ ಹಾಡಿದ್ದರು. ಚಿರಂಜೀವಿ ಸರ್ಜಾ ಅವರ ಚಿತ್ರಗಳದ್ದೇ ದೃಶ್ಯಗಳನ್ನು ಬಳಸಿ ಟ್ರೇಲರ್ ಸಾಂಗ್ ಮಾಡಿದ್ದೆವು. ಅದು ಚಿರಂಜೀವಿ ಅವರಿಗೆ ಬಹಳ ಇಷ್ಟವಾಗಿತ್ತು. ಎಲ್ಲರಿಗೂ ಅದನ್ನು ತೋರಿಸುತ್ತಿದ್ದರು ಎಂದಿದ್ದಾರೆ ಸಂತು.
ಅಬ್ಬರವಿಲ್ಲದ ಸಾದಾ ಸೀದಾ ನಟ
ಚಿರಂಜೀವಿ ಸರ್ಜಾ ಅವರು ಕನ್ನಡ ಸಿನೆಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದರು. ತಮ್ಮ ಪಾಡಿಗೆ ತಾವು ಹೆಚ್ಚು ಅಬ್ಬರವಿಲ್ಲದೆ ಸಿನೆಮಾಗಳನ್ನು ಮಾಡುತ್ತಾ ಸಾಗುತ್ತಿದ್ದರು. ಈ ವರೆಗೆ 22 ಸಿನೆಮಾಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಅವರು, ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು. ಚಿರಂಜೀವಿ ಸರ್ಜಾ ಅವರ ಸಿನೆಮಾಗಳು ಪೈಸಾ ವಸೂಲ್ ಮಾಡಿಕೊಡುತ್ತವೆ ಎಂಬ ನಂಬಿಕೆ ಎಲ್ಲಾ ನಿರ್ಮಾಪಕರು ಮತ್ತು ಚಿತ್ರರಂಗದಲ್ಲಿತ್ತು. ಸರ್ಜಾ ಅವರು ವಿಧಿಯಾಟಕ್ಕೆ ಬಲಿಯಾಗುವ ಮೊದಲು ನಾಲ್ಕು ಸಿನೆಮಾಗಳಿಗೆ ಸಹಿ ಹಾಕಿದ್ದರು. ಅವರು ನಾಲ್ಕು ಸಿನೆಮಾಗಳಲ್ಲಿ ನಟಿಸಬೇಕಿತ್ತು ರಣಂ, ಎಪ್ರಿಲ್, ಜುಗಾರಿ ಕ್ರಾಸ್ ಮತ್ತು ಕ್ಷತ್ರೀಯ ಸಿನೆಮಾಗಳಲ್ಲಿ ಚಿರು ನಟಿಸಬೇಕಿತ್ತು. ಕೆಲವು ಸಿನೆಮಾಗಳ ಚಿತ್ರೀಕರಣವನ್ನೂ ಚಿರು ಪ್ರಾರಂಭಿಸಿದ್ದರು.
ಅಚ್ಚುಮೆಚ್ಚಿನ ನಟ
ನಟ ಚಿರಂಜೀವಿ ಸರ್ಜಾ ಅವರು ನಿರ್ದೇಶಕ ಕೆ.ಎಂ. ಚೈತನ್ಯರ ಅಚ್ಚುಮೆಚ್ಚಿನ ನಟರಾಗಿದ್ದರು. ಅಲ್ಲದೇ ಚಿರು ಅಭಿನಯದ ಚಿತ್ರಗಳಲ್ಲಿ ಗರಿಷ್ಠ ಚಿತ್ರಗಳನ್ನು ನಿರ್ದೇಶಕ ಕೆ.ಎಂ. ಚೈತನ್ಯ ಅವರೇ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಆಟಗಾರ, ಆಕೆ ಮತ್ತು ಆದ್ಯ ಸಿನೆಮಾಗಳನ್ನು ಚೈತನ್ಯ ಅವರೇ ನಿರ್ದೇಶಿಸಿದ್ದರು.
ಸಿನೆಮಾ ಮೇಲೆ ಆಸಕ್ತಿ
ಬೆಂಗಳೂರಿನ ವಿಜಯಾ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಚಿರುಗೆ ಬಾಲ್ಯದಿಂದಲೂ ಸಿನೆಮಾ ಕ್ಷೇತ್ರದ ಮೇಲೆ ಎಲ್ಲಿಲ್ಲದ ಆಸಕ್ತಿ. ಇದಕ್ಕೆ ಕಾರಣವೂ ಇತ್ತು. ತಾತ ಶಕ್ತಿ ಪ್ರಸಾದ್ ಅವರು ಖ್ಯಾತ ಖಳನಟರಾಗಿ ಮಿಂಚಿದವರು. ಅವರ ಪುತ್ರ ಅರ್ಜುನ್ ಸರ್ಜಾ ಈಗ ದಕ್ಷಿಣ ಭಾರತದ ಖ್ಯಾತ ನಟ. ನಿರ್ದೇಶಕರಾಗಿದ್ದ ಕಿಶೋರ್ ಸರ್ಜಾ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮನೆತನವೇ ಸಿನೆಮಾ ಹಿನ್ನೆಲೆ ಹೊಂದಿದ್ದ ಕಾರಣ ಚಿರು ಬೇರೆ ಆಯ್ಕೆ ಬಗ್ಗೆ ಯೋಚಿಸಲಿಲ್ಲ.
ಕನಸಿನ ಕಣ್ಣಿನ ಹುಡುಗ ಚಿರು
ಚಿರು ಸರ್ಜಾ ಅವರಿಗೆ ಹಲವು ಕನಸುಗಳಿದ್ದವು. ತಮ್ಮ ಧ್ರುವ ಸರ್ಜಾ ಜತೆ ಸಿನೆಮಾ ಮಾಡಬೇಕೆಂಬ ಹಂಬಲ ಅವರಿಗಿತ್ತು. ಅದಕ್ಕಿಂತಲೂ
ಹೆಚ್ಚಾಗಿ ತನ್ನನ್ನು ಬೆಂಬಲಿಸಿ ಸಿನೆಮಾ ಕ್ಷೇತ್ರಕ್ಕೆ ಪರಿಚಯಿಸಿದ ಮಾವ ಅರ್ಜುನ್ ಸರ್ಜಾ ಅವರ ಜತೆಗೆ ಸಿನೆಮಾ ಕನಸು ಕಂಡಿದ್ದರು. ಮಾವ ಅರ್ಜುನ್ ಸರ್ಜಾ ಅವರ ಸಿನೆಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರ ಆಸಕ್ತಿ ನೋಡಿ ಅರ್ಜುನ್ ಸರ್ಜಾ ಅವರು, ಎಲ್ಲ ರೀತಿಯ ಸಹಕಾರ ನೀಡಿ, ವಾಯುಪುತ್ರ ಸಿನೆಮಾ ಮೂಲಕ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅನಂತರ ಚಿರು ಹಿಂದಿರುಗಿ ನೋಡಲಿಲ್ಲ. ಅಂದಿನಿಂದ ಅರ್ಜುನ್ ಸರ್ಜಾ ಅವರನ್ನು ಗಾಡ್‌ಫಾದರ್ ಎಂದೇ ಚಿರು ನಂಬಿದ್ದರು.ಈಗ ಚಿರು ಚಿರಂಜೀವಿಯಾಗಿ ನಮ್ಮೊಂದಿಗಿಲ್ಲ. ಅವರ ಹೆಸರು ಮಾತ್ರ ಚಿರಂಜೀವಿಯಾಗಿರಲಿದೆ.
-ಕೆ.ಎಂ. ಚೈತನ್ಯ, ನಿರ್ದೇಶಕ
ಕಾರ್ತಿ ವಿಟ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.