ಉಗ್ರರ ಸಂಹಾರದಿಂದ ದೇಶಕ್ಕೆ ದೀಪವಾದ ಸಂದೀಪ್ ಉಣ್ಣಿಕೃಷ್ಣನ್
Team Udayavani, Aug 29, 2020, 10:00 AM IST
ಮುಂಬಯಿ ದಾಳಿಯಲ್ಲಿ ಹುತಾತ್ಮನಾದ ಸಾಹಸಿಯೋಧನ ವೀರಗಾಥೆ ಇದು.
ಅದು 2008, ನವೆಂಬರ್ 26. ಅಂದು ಮುಂಬಯಿ ಕಡಲು ತೀವ್ರ ಪ್ರಕ್ಷುಬ್ಧಗೊಂಡಿತ್ತು. ಇನ್ನೇನು ಸೂರ್ಯನನ್ನು ತಲುಪಿ ಬಿಡುವನೊ ಎಂಬ ತೀವ್ರತೆ, ವೇಗ ಅಲೆಗಳಲ್ಲಿತ್ತು.
ಮಹಾಘೋರ ಯುದ್ಧದಲ್ಲಿ ನಡೆಯುವ ರಕ್ತಪಾತದಂತೆ ಭಾಸವಾಗುವಷ್ಟು ಸೂರ್ಯನೂ ಕೆಂಪೇರಿದ್ದನು. ಇದು ಮುಂಬಯಿ ಕಡಲಿನ ಮೂಲಕ ದೇಶದೊಳಗೆ ನುಸುಳಿದ್ದ ಮೂಲಭೂತವಾದಿ ಭಯೋತ್ಪಾದಕರ ಅಪಾಯದ ಮುನ್ಸೂಚನೆಯನ್ನು ಪ್ರಕೃತಿ ತನ್ನ ಸಿಟ್ಟಿನ ಮೂಲಕ ತೋರಿಸಿದಂತಿತ್ತು.
ಅಂತೆಯೇ ಆ ದುರಂತ ನಡೆದೇಬಿಟ್ಟಿತ್ತು. ಅದುವೇ ಮುಂಬಯಿ ದಾಳಿ. ತಾಜ್ ಹೊಟೇಲ್ ದಾಳಿ ಅಥವಾ 26/11 ದಾಳಿ ಅಂತಲೂ ಇತಿಹಾಸದಲ್ಲಿ ಕರಾಳ ದಿನವಾಗಿ ದಾಖಲಾಗಿದೆ.
ದೇಶದಲ್ಲಿ ಅಶಾಂತಿ ಎಬ್ಬಿಸಿ, ಹಿಂಸಾತ್ಮಕ ಕೃತ್ಯಗಳನ್ನು ಎಸೆಯಲೆಂದು ಪಾಕಿಸ್ಥಾನ ಮೂಲದ ಲಷ್ಕರ್-ಎ-ತಯ್ಯಬಾದ 12 ಜನ ಉಗ್ರರು ಭಾರತಕ್ಕೆ ನುಸುಳಿದ್ದರು. ಅಪಾರ ಜನಸಮೂಹ ಸೇರುವ, ಹೆಚ್ಚು ಗಣ್ಯರು ಆತಿಥ್ಯ ವಹಿಸುವ ಹಾಗೂ ಹೆಚ್ಚು ವ್ಯವಹಾರ ನಡೆಸುವ ಕೇಂದ್ರಗಳ ಮೇಲೆ ದಾಳಿ ಮಾಡುವುದು ಇವರ ಯೋಜನೆಯಾಗಿತ್ತು. ಅಂತೆಯೇ 2008ರ ನವೆಂಬರ್ 26ರಂದು ಮುಂಬಯಿಯ ಪ್ರತಿಷ್ಠಿತ ತಾಜ್ ಹೊಟೇಲ್ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ ಉಗ್ರರು ಮೂರು ದಿನಗಳ ಕಾಲ ನರಕದರ್ಶನ ಮಾಡಿದ್ದರು.
ಅಪಾರ ಆಸ್ತಿ ಹಾನಿ ಮಾಡುವುದಲ್ಲದೆ ಸುಮಾರು 169 ಮಂದಿಯನ್ನು ಹತ್ಯೆ ಮಾಡಿ, ತಮ್ಮ ಹಿಂಸಾ ಪ್ರವೃತ್ತಿ ಮೆರೆದಿದ್ದರು. ಇನ್ನು ಕೆಲವರನ್ನು° ಒತ್ತೆಯಾಳನ್ನಾಗಿಸಿದ್ದರು. ಈ ಉಗ್ರಗಾಮಿಗಳ ಅಟ್ಟಹಾಸವನ್ನು ಎಡೆಮುರಿ ಕಟ್ಟಲು ಬಂದವರೇ ಭಾರತೀಯ ಸೇನೆ.
ಸೇನೆಯ ಕರೆ ಮೇರೆಗೆ ಮುಂಬಯಿ
ತಾಜ್ ಹೊಟೇಲ್‌ನಲ್ಲಿ ಅಡಗಿರುವ ಭಯೋತ್ಪಾದಕರನ್ನು ಸದೆಬಡಿಯುವ ನೇತೃತ್ವ ವಹಿಸಿದವರೇ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಮತ್ತು ಅವರ ತಂಡ. ಮೇಜರ್ ಸಂದೀಪ್ ಉಣ್ಣಿಕೃಷ್ಣನ್. ಈ ಹೆಸರೇ ಭಾರತೀಯರ ಹೃದಯದಲ್ಲಿ ಸದಾ ಅಮರ. ಮುಂಬಯಿಯಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿದು ಕೊನೆಗೆ ರಕ್ಕಸರ ಗುಂಡಿಗೆ ಆಹುತಿಯಾದ ಮಣ್ಣಿನ ಹೆಮ್ಮೆಯ ವೀರ. ಉಗ್ರರ ವಿರುದ್ಧ ಈತನ ಹೋರಾಟ ಸದಾ ಅಮರ. ಈ ಮೂಲಕ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಸ್ಥಾನಗಳಿಸಿರುವ ಈತ ದೇಶದ ಯುವ ಜನತೆಗೆ ಸ್ಫೂರ್ತಿಯ ಚಿಲುಮೆ.
ಸಂದೀಪ್ ಉಣ್ಣಿಕೃಷ್ಣನ್ ಮಾರ್ಚ್ 15, 1977ರಲ್ಲಿ ತಂದೆ ಇಸ್ರೋ ವಿಜ್ಞಾನಿ ಉಣ್ಣಿಕೃಷ್ಣನ್, ತಾಯಿ ಧನಲಕ್ಷ್ಮೀ ಅವರ ಮಗನಾಗಿ ಜನಿಸಿದರು. ಶಾಲಾ ದಿನಗಳಲ್ಲೇ ತುಂಬಾ ಚುರುಕಾಗಿ, ಮಾನವೀಯತೆ ಉಳ್ಳವರಾಗಿದ್ದರು. ಮುಂದೆ ಸೇನೆಗೆ ಸೇರಬೇಕು ಎನ್ನುವ ಹಂಬಲಕ್ಕೆ ತಂದೆ-ತಾಯಿ ಎರಕ ಹೊಯ್ದು ಪೋಷಿಸಿದರು. ಅಂತೆಯೇ ಸೇನೆಗೆ ಸೇರಿದರು.
ಸಂದೀಪ್ ಉಣ್ಣಿಕೃಷ್ಣನ್, 1995ರಲ್ಲಿ ನ್ಯಾಶನಲ್ ಡಿಫೆನ್ಸ್ ಆಕಾಡೆಮಿಗೆ ಸೇರಿದರು. ಬಳಿಕ 1999ರಲ್ಲಿ ಭಾರತೀಯ ಸೇನೆಯ 7ನೇ ಬಿಹಾರ ರೆಜಿಮೆಂಟ್‌ಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಸಂದೀಪ್‌ನದು ವೀರ ಹೋರಾಟ ಮನಃಸ್ಥಿತಿ. ಸೇನೆಯಲ್ಲಿ ಎಲ್ಲ ಗೆಳೆಯರೊಂದಿಗೆ ತುಂಬಾ ಅನ್ಯೋನ್ಯವಾಗಿರುವುದರ ಜತೆಗೆ ಸ್ಫೂರ್ತಿಯಾಗಿದ್ದರು.
ಬಿಹಾರ ರೆಜಿಮೆಂಟ್‌ನ ಹೆಮ್ಮೆಯ ಯೋಧ
ಸಂದೀಪ್ ಉಣ್ಣಿಕೃಷ್ಣನ್, ಬಿಹಾರ ರೆಜಿಮೆಂಟ್‌ನ ಪ್ರಮುಖ ಯೋಧರಾಗಿದ್ದು, ಹಲವಾರು ಯುದ್ಧ, ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು. ಇವರು ಪಾಕಿಸ್ಥಾನ ವಿರುದ್ಧ 1999ರಲ್ಲಿ ನಡೆದ “ಆಪರೇಷನ್ ವಿಜಯ’ದಲ್ಲಿ ಭಾಗಿಯಾಗಿ, ಪಾಕಿಸ್ಥಾನ ಶತ್ರು ಸೈನಿಕರಿಗೆ ಸಿಂಹಸ್ವಪ್ನವಾಗಿದ್ದರು. ಕೌಂಟರ್ ಇನ್‌ಸರ್ಜೆನ್ಸಿಯಲ್ಲಿ ಕೂಡ ಭಾಗಿಯಾಗಿದ್ದರು. ಬಳಿಕ ಇವರು 2006ರಲ್ಲಿ ಎನ್‌ಎಸ್‌ಜಿ ಕಮಾಂಡೋಗೆ ಸೇರ್ಪಡೆಗೊಂಡಿದ್ದರು.
ʼನೀವು ಇಲ್ಲೇ ಇರಿ, ನಾನು ನೋಡಿಕೊಳ್ಳುತ್ತೇನೆ ಎಂದಿದ್ದ ಸಂದೀಪ್’
ಯುದ್ಧೋತ್ಸಾಹಿಯಾಗಿದ್ದ ಸಂದೀಪ್ ಉಣ್ಣಿಕೃಷ್ಣನ್, ಕಾರ್ಯಾಚರಣೆ ಆರಂಭದಿಂದಲೂ ವ್ಯವಸ್ಥಿತ ಮತ್ತು ಚತುರರಾಗಿ ಲಷ್ಕರ್-ಎ-ತಯ್ಯಬಾ ಉಗ್ರರನ್ನು ಸದೆಬಡಿಯುತ್ತಿದ್ದರು. ಯಾವುದೋ ಕೆಟ್ಟ ಘಳಿಗೆ ಎಂಬಂತೆ ಉಗ್ರರ ಗುಂಡು ಸಂದೀಪನ ಎದೆಗೆ ಹೊಕ್ಕಿತು. ಇದಕ್ಕೆ ಅಂಜದ ಆತ ಹಿರಿಯ ಅಧಿಕಾರಿಗಳಿಗೆ ನೀವು ಮುಂದೆ ಬರಬೇಡಿ, ನಾನು ಇವರನ್ನು ನೋಡಿಕೊಳ್ಳುತ್ತೇನೆ ಎಂದು ಮುಂದೆ ಹೋಗಿ 11 ಉಗ್ರರನ್ನು ಹತ್ಯೆ ಮಾಡಿದರು. ಇವರ ಅಪ್ರತಿಮ ಶೌರ್ಯ ಕಂಡು ಹಿರಿಯ ಅಧಿಕಾರಿಗಳೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಅಜ್ಮಲ್ ಕಸಬ್ ಎಂಬ ಉಗ್ರನನ್ನು ಬಂಧಿಸಲಾಗಿತ್ತು.
ಆಪರೇಷನ್ ಬ್ಲಾಕ್ ಟೊರ್ನಾಡೋ
ತಾಜ್ ಹೊಟೇಲ್‌ನಲ್ಲಿ ಅಡಗಿರುವ 12 ಉಗ್ರರನ್ನು ಸದೆಬಡಿಯಲು ಆಪರೇಷನ್ ಬ್ಲಾಕ್ ಟೊರ್ನಾಡೋ ಹೆಸರಿನಿಂದ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ನೇತೃತ್ವದ ತಂಡ ಮುಂದಾಯಿತು. ಮೇಜರ್ ಸಂದೀಪ್ ಉಗ್ರರನ್ನು ಸದೆಬಡಿಯಲು ಅತ್ಯುತ್ಸಾಹಿಯಾಗಿ, ತನ್ನ ಪ್ರಾಣವನ್ನು ಲೆಕ್ಕಿಸದೆ ಮುಂದೆ ಹೋದರು. ಹೊಟೇಲ್‌ನ 6ನೇ ಮಹಡಿಯಲ್ಲಿರುವ ಉಗ್ರರನ್ನು ತಮ್ಮ ಬಂದೂಕಿನಿಂದ ಹತ್ಯೆಗೈದರು. ಅಲ್ಲದೆ ಒತ್ತೆಯಾಳಾಗಿದ್ದ ಹಲವಾರು ಮಹಿಳೆಯರು, ಮಕ್ಕಳನ್ನು ಬಂಧನದಿಂದ ಬಿಡುಗಡೆಗೊಳಿಸಿದರು. ಅಂತೆಯೇ ದಾಳಿ ಮುಂದುವರಿಯುತ್ತದೆ. ಮುಂದೆ ಹೋದಂತೆ ಉಗ್ರರ ಗನ್‌ಗಳೂ ಸದ್ದು ಮಾಡುತ್ತವೆ. ಆದರೆ ದಾಳಿ ಚುರುಕುಗೊಂಡಾಗ ಹಿರಿಯ ಕಮಾಂಡೋ ಅಧಿಕಾರಿಯನ್ನು ರಕ್ಷಿಸಲು ಮುಂದಾದ ಸಂದೀಪ್ ಸ್ಥಳದಲ್ಲೇ ಹುತಾತ್ಮರಾದರು. ಸಂದೀಪ್ ಎಂಬ ದೇಶಭಕ್ತಿಯ ದೀಪ ಆರಿದ ಬಳಿಕ ಮುಂಬಯಿ ಸಹಿತ ಇಡೀ ದೇಶಕ್ಕೆ ಕತ್ತಲಾವರಿಸಿದಂತಾಯಿತು.
ಮಾನವೀಯ ಹೃದಯಿ ಅಂತೆಯೇ ಅಪ್ಪಟ ರಾಷ್ಟ್ರೀಯವಾದಿ
ಹುಟ್ಟಿದ ಮೇಲೆ ದೇಶಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂಬುದು ಸಂದೀಪ್ ಉಣ್ಣಿಕೃಷ್ಣನ್ ಅವರ ಅಚಲ ನಿರ್ಧಾರವಾಗಿತ್ತು. ಅದಕ್ಕೆ ಅವರು ಭಾರತೀಯ ಸೇನೆಯನ್ನು ಸೇರಿದ್ದರು. ಅಲ್ಲದೆ ತಮ್ಮ ಅರ್ಧ ಸಂಬಳವನ್ನು ಬಡವರಿಗಾಗಿಯೇ ಮೀಸಲಿಟ್ಟಿದ್ದರು. ಅವರ ತಂದೆ ಉಣ್ಣಿಕೃಷ್ಣನ್, “ನನ್ನ ಮಗ ಅಪ್ರತಿಮ ರಾಷ್ಟ್ರೀಯವಾದಿ. ದೇಶಸೇವೆಯೇ ಆತನ ಜೀವನದ ಪರಮೋಚ್ಚ ಗುರಿಯಾಗಿತ್ತು. ಅಲ್ಲದೆ ಬಡವರ ಸೇವೆ ಮಾಡುವುದು ಕೂಡ ಜೀವನದ ಭಾಗವಾಗಬೇಕು’ ಎಂಬ ನಂಬಿಕೆ ಆತನದು ಎಂದು ಹೇಳುತ್ತಾರೆ.
ಅಶೋಕ ಚಕ್ರ ಪ್ರಶಸ್ತಿ
ಮುಂಬಯಿ ದಾಳಿಯಲ್ಲಿ ಹುತಾತ್ಮನಾದ ಸಂದೀಪ್ ಉಣ್ಣಿಕೃಷ್ಣನ್ ಅವರ ಪ್ರತಿಮ ಸಾಹಸ, ಧೈರ್ಯವನ್ನು ಕಂಡು ಭಾರತ ಸರಕಾರವು ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶಿವ, ಸಿಂಧನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.