UV Fusion: ಯಾವ ಕಾಲದ ಶಾಸ್ತ್ರ..?
Team Udayavani, Mar 14, 2024, 7:45 AM IST
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?, ಕುವೆಂಪು ಅವರ “ಕೋಗಿಲೆ ಮತ್ತು ಸೋವಿಯತ್ ರಷ್ಯಾ’ ಎಂಬ ಕವನಸಂಕಲನದಲ್ಲಿಯ ಒಂದು ಕವನವಿದು. ಬದುಕಿನ ನಾನಾ ಸತ್ಯ, ಆಚರಣೆಗಳು, ವಿಚಾರಗಳನ್ನು ನೈತಿಕ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವಂತೆ ಮಾಡುತ್ತದೆ.
ಪ್ರಸ್ತುತ ಯಾವುದೇ ವಿಚಾರಗಳನ್ನು ತಿಳಿದಾಗ, ಅವುಗಳನ್ನು ಓರೆಗೆ ಹಚ್ಚಿ ನೋಡದೆ, ತಮಗೆ ತಿಳಿದಂತೆ, ತಾವು ತಿಳಿದದ್ದೇ ಸತ್ಯ ಎಂಬಂತೆ ಅರ್ಥೈಸಿಕೊಂಡು ವಿಷಯದಾಳಕ್ಕೆ ಹೋಗದೆ ಹೀಗಳೆಯುವವರೇ ಹೆಚ್ಚಾಗಿದ್ದಾರೆ. ಅದಕ್ಕೊಂದು ಉದಾಹರಣೆ, ನಮ್ಮ ಸಂಸ್ಕೃತಿ ಆಚರಣೆಗಳು ಹೆಚ್ಚು ಆಡಂಬರಗೊಳ್ಳುತ್ತಿರುವುದರ ಜತೆಗೆ ಆಧುನಿಕತೆಯ ಸೋಗಿನಲ್ಲಿ ವಾಸ್ತವಿಕ ಸತ್ಯದೆಡೆಗೆ ಒತ್ತು ಕೊಡದೆ ಅಧಃಪತನದೆಡೆಗೆ ಸಾಗುತ್ತಿರುವುದೂ ಒಂದು ವಿಚಿತ್ರ ಸತ್ಯ..!
ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಸಂಪ್ರದಾಯಗಳು ವೈಜ್ಞಾನಿಕ ನೆಲೆಗಟ್ಟು ಮಿಳಿತವಾಗಿರುವುದೊಂದು ವಿಸ್ಮಯದ ವಿಚಾರ. ಪ್ರತಿಯೊಂದನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಈಗಿನ ಬುದ್ಧಿ ಜೀವಿಗಳು ನಮ್ಮ ಆಚರಣೆಗಳ ಹಿಂದಿನ ಸತ್ಯಗಳನ್ನು ಅರಿತು ಪಾಲಿಸುವುದರಲ್ಲಿ ಯಾಕೆ ವಿಫಲವಾಗುತ್ತಿದ್ದಾರೆ ?. ಸ್ತ್ರೀಯರ ಕೈಬಳೆ ಕಾಲ್ಗೆಜ್ಜೆಗಳ ಸಪ್ಪಳಕ್ಕೆ ವೇದ ಮಂತ್ರಗಳಷ್ಟು ಶಕ್ತಿಯಿದೆ ಎಂದು ನಂಬಲಾಗಿದೆ. ಗಾಜಿನ ಕೈಬಳೆಗಳು, ಕಾಲ್ಗೆಜ್ಜೆಗಳ ಸದ್ದು ಸದಾ ಒಂದಿಲ್ಲೊಂದು ಮನೆಯ ಜವಾಬ್ದಾರಿ/ ಕರ್ತವ್ಯದೊಳಗೆ ಮುಳುಗಿ ಹೈರಾಣಾಗುವ ಸ್ತ್ರೀಯೊಳಗೆ, ಸಕಾರಾತ್ಮಕತೆಯನ್ನು ತುಂಬಿ ಚೈತನ್ಯಗೊಳ್ಳುವಂತೆ ಮಾಡುತ್ತವೆ.
ಅವುಗಳನ್ನು ಧರಿಸಿದವರಿಗೆ ಬಳೆಗಳ ಮತ್ತು ಗೆಜ್ಜೆಯ ಒತ್ತುವಿಕೆಯಿಂದ ಕೈಕಾಲಿನ ನರಗಳು ಸದಾ ಚಲನಶೀಲವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತವೆ. ಆದರೆ ಇವೆಲ್ಲಾ ಆಧುನೀಕರಣದ ಹೆಸರಿನಲ್ಲಿ ಮೆಟಲ್ ಪ್ಲಾಸ್ಟಿಕ್ ಗಳಾಗಿ ಬದಲಾಗಿ, ಕೇವಲ ಅಂದ ಚೆಂದಕ್ಕಾಗಿಯಷ್ಟೆ ಬಳಸುವ ವಸ್ತುಗಳಾಗಿ ಬದಲಾಗಿವೆ. ಇವುಗಳಿಂದ ಯಾವ ಉಪಯೋಗವಿದೆ ಎಂದು ಕೆದಕುವ ಗೋಜಿಗೆ ಯಾರು ಹೋಗುತ್ತಾರೆ.
ಇನ್ನೂ ಕುಂಕುಮದ ವಿಷಯಕ್ಕೆ ಬಂದರೆ ಅದೂ ಈಗಿನ ಕಾಲದಲ್ಲಿ ರಾಸಾಯನಿಕವಾಗಿ ಬದಲಾಗಿದೆ. ಪಚ್ಚೆ ಕರ್ಪೂರ, ನಿಂಬೆರಸ, ಅರಿಶಿನ, ಸುಣ್ಣ ಮುಂತಾದ ವಸ್ತುಗಳಿಂದ ತಯಾರಿಸಿದ ಪುಡಿ ನಿಜವಾದ ಕುಂಕುಮ. ಇದನ್ನು ಹಣೆಯಲ್ಲಿ ಧರಿಸುವುದರಿಂದ ನಮ್ಮೊಳಗೆ ಧನಾತ್ಮಕತೆ ಚೈತನ್ಯವಿರಲಿದೆ. ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.
ಇನ್ನು ಕಾಲುಂಗುರ ಮತ್ತು ತಾಳಿಯ ವಿಚಾರದಲ್ಲಿ ವಿವಾಹಿತ ಸ್ತ್ರೀಯರಿಗೆ ಕೊಂಚ ಒತ್ತಡಗಳು, ಗೊಂದಲಗಳು ಹೆಚ್ಚು. ಕಾಲಿಗೆ ಧರಿಸುವ ಬೆಳ್ಳಿ ಉಂಗುರಕ್ಕೂ ಅದನ್ನು ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಬಹಳ ಸಂಬಂಧವಿದೆ. ಬೆಳ್ಳಿ ಧನಾತ್ಮಕ ಶಕ್ತಿವಾಹಕ.
ಕಾಲಿನ ಎರಡನೇ ಬೆರಳಿಗೆ ಅದನ್ನು ಧರಿಸುವುದರಿಂದ ಆ ಬೆರಳಿಗೆ ಕೂಡಿಕೊಂಡ ನರವೊಂದು ಗರ್ಭಾಶಯದ ಮೂಲಕ ಹೃದಯಕ್ಕೆ ಸೇರಿಕೊಂಡಿರುತ್ತದೆ. ನಡೆಯುವಾಗ ಕಾಲುಂಗುರದ ಒತ್ತುವಿಕೆಯಿಂದ ಆ ನರವು ಚೈತನ್ಯಗೊಂಡು ರಕ್ತ ಸಂಚಾರ ಸುಗಮವಾಗುವುದರಿಂದ ಗರ್ಭಾಶಯ ಆರೋಗ್ಯವಾಗಿರುತ್ತದೆ ಮತ್ತು ಋತುಚಕ್ರ ಸರಿಯಾಗಿ ಆಗುತ್ತದೆ. ಇದರಿಂದ ಸಂತಾನ ಭಾಗ್ಯ ಹೆಚ್ಚುತ್ತದೆ.
ಕರಿಮಣಿಗಳು ದೇಹದ ಉಷ್ಣತೆಯನ್ನು ಹೀರಿಕೊಳ್ಳುತ್ತವೆ. ಇದರಿಂದ ದೇಹಾರೋಗ್ಯದ ಸಮತೋಲನಕ್ಕೆ ಕಾರಣವಾಗುತ್ತದೆ. ಕರಿಮಣಿಗಳು ದೃಷ್ಟಿ ದೋಷವನ್ನು ನಿವಾರಿಸುತ್ತವೆ ಎಂದು ಹೇಳುತ್ತಾರೆ. ತಾಳಿಯಲ್ಲಿನ ಬಂಗಾರದ ಬೊಟ್ಟು ಹೃದಯಕ್ಕೆ ತಾಕುತ್ತಿರುವುದರಿಂದ ಅವಳಲ್ಲಿ ಧನಾತ್ಮಕತೆ ಮತ್ತು ಆಧ್ಯಾತ್ಮಿಕ, ಸಾತ್ವಿಕತೆ ಜಾಗೃತವಾಗುತ್ತದೆ. ಇದರಿಂದ ದಾಂಪತ್ಯವು ಸಮಚಿತ್ತತೆಯಿಂದ ಸಾಂಗವಾಗಿ ಸಾಮರಸ್ಯವು ಮನೆಮಾಡಿರುತ್ತದೆ.
ಹೀಗೆ ನಮ್ಮ ಪ್ರತಿಯೊಂದು ಸಣ್ಣ ಸಣ್ಣ ಆಚರಣೆಗಳಲ್ಲಿ ಅಪಾರವಾದ ಅರ್ಥಗಳು ಅಡಗಿವೆ. ಅವುಗಳನ್ನು ಅರಿಯಲು ಹೋಗುತ್ತಿಲ್ಲ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬುದು ಈ ವಿಚಾರದಲ್ಲಿ ಸತ್ಯವೇ. ಈಗಿನವರು, ಹಿಂದಿನವರು ಅವಿದ್ಯಾವಂತರು. ಅರ್ಥವಿಲ್ಲದ ಗೊಡ್ಡು ಆಚರಣೆಗಳನ್ನು ಪಾಲಿಸುತ್ತಿದ್ದರು ಎಂಬ ವಿಚಿತ್ರ ಅಸಡ್ಡೆ ಬೆಳೆಸಿಕೊಂಡು ತಮ್ಮನ್ನು ತಾವು ಬಹಳ ಬುದ್ಧಿವಂತರೆಂದುಕೊಂಡಿರುವುದೆ ಇದಕ್ಕೆಲ್ಲ ಕಾರಣವಿರಬಹುದು.
ಕೊಚ್ಚೆ ಕೆದಕುವ ಹಂದಿಯನ್ನೂ ವರಹಾ ದೇವರ ರೂಪವೆಂದು ಪೂಜಿಸುವುದು ನಮ್ಮ ಸಂಸ್ಕೃತಿ. ಜಗತ್ತೇ ಮೆಚ್ಚಿ ನಮ್ಮ ಆಚರಣೆಗಳನ್ನು ಕೊಂಡಾಡುವಾಗ, ನಾವು ಪಾಶ್ಚಾತ್ಯೀಕರಣಕ್ಕೆ ಮರುಳಾಗಿ ನಮ್ಮೆಲ್ಲಾ ಸಂಪ್ರದಾಯಗಳನ್ನು ಗಾಳಿಗೆ ತೂರುತ್ತಿರುವುದು ಒಳ್ಳೆಯ ಬದಲಾವಣೆಯಂತೂ ಅಲ್ಲ. ಬದಲಾವಣೆ ಬೇಕು ನಿಜ…ಅದು ಅಗತ್ಯಕ್ಕೆ ತಕ್ಕಷ್ಟಿದ್ದರೆ ಮಾತ್ರ ಚೆನ್ನ. ಏನಂತೀರಿ..?
ಪಲ್ಲವಿ ಚೆನ್ನಬಸಪ್ಪ
ಗಡಿಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.