Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !
Team Udayavani, Mar 22, 2024, 3:38 PM IST
ಫೆಬ್ರವರಿ -ಮಾರ್ಚ್ ತಿಂಗಳು ಬಂತೆಂದರೆ ಶಿರಸಿಗರಿಗೆ ಹಬ್ಬದ ವಾತಾವರಣ. ಎರಡು ವರ್ಷಗಳಿಗೊಮ್ಮೆ ಬರುವ ಅದ್ದೂರಿ ಜಾತ್ರೆಗೆ ಇಡೀ ಶಿರಸಿಯೇ ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತದೆ. ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧವಾದ ಶಿರಸಿಯ ಮಾರಿಕಾಂಬ ಜಾತ್ರೆಯು ಒಂಬತ್ತು ದಿನಗಳ ಕಾಲ ನಡೆದರೂ ಅದರ ಕಳೆ ತಿಂಗಳಿಡೀ ಇರುತ್ತದೆ.
300 ವರ್ಷಗಳ ಹಿಂದೆಯೇ ಶಿರಸಿಯಲ್ಲಿ ಪ್ರತಿಷ್ಠಾಪನೆಗೊಂಡ ಶಕ್ತಿ ಸ್ವರೂಪಿ ದೇವಿಯೇ ಶ್ರೀ ಮಾರಿಕಾಂಬ ದೇವಿ ಲಕ್ಷ ಲಕ್ಷ ಭಕ್ತರ ಆರಾಧ್ಯ ದೈವ. ಜಾತ್ರೆಯ ಸಮಯದಲ್ಲಿ ತಾಯಿಯ ದರ್ಶನ ಪಡೆಯಲು ಶಿರಸಿ ಮಾತ್ರವಲ್ಲ, ಹೊರ ಜಿಲ್ಲೆ, ರಾಜ್ಯಗಳಿಂದಲೂ ಜನ ಹರಿದು ಬರುತ್ತದೆ. ರಕ್ತ ಚಂದನದ ಬಣ್ಣದ ದೇವಿಯ ದರ್ಶನಕ್ಕೆ ಎರಡು ಕಂಗಳ ನೋಟ ಸಾಲದು. ಕೆಲವರಿಗೆ ಈ ಜಾತ್ರೆ ಸಂಭ್ರಮವಾದರೆ, ಇನ್ನೂ ಕೆಲವರಿಗೆ ಬದುಕು ರೂಪಿಸುವ ಜಾಗ.
ಜಾತ್ರೆಯ ಎರಡು ತಿಂಗಳುಗಳ ಹಿಂದಿನಿಂದಲೇ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗುತ್ತದೆ. ಊರಿನ ಗಣ್ಯರು, ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಪೂರ್ವದ ಮೂರು ಮಂಗಳವಾರ, ಎರಡು ಶುಕ್ರವಾರ ದಿನಗಳಲ್ಲಿ ಐದು ಹೊರಬೀಡುಗಳು ಆಗುತ್ತವೆ. ಹೊರಬೀಡು ಎಂದರೆ ರಾತ್ರಿ ಗದ್ದುಗೆಯಲ್ಲಿ ಜಗನ್ಮಾತೆಯ ಆಯುಧಗಳನ್ನು ದೇವಿಯ ಎದುರಿಗೆ ಇಟ್ಟು ಪೂಜೆ ಮಾಡುವುದು. ಇದರಲ್ಲಿ ಮಂಗಳವಾರದ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ಪೂರ್ವ ದಿಕ್ಕಿನಲ್ಲಿ ನಡೆದರೆ, ಶುಕ್ರವಾರದ ಪಡಲಿಗೆಯು ಉತ್ತರ ದಿಕ್ಕಿಗೆ ನಡೆಯುತ್ತವೆ. ಮರ್ಕಿ-ದುರ್ಗಿ ದೇವಸ್ಥಾನಕ್ಕೆ ಹೋಗಿ ಉಡಿ ತುಂಬಿ ಮತ್ತೆ ದೇವಸ್ಥಾನಕ್ಕೆ ಮರಳಿ ಪೂಜೆ ಮಾಡುವುದರ ಮೂಲಕ ಧಾರ್ಮಿಕ ಸಂಪ್ರದಾಯಗಳು ಒಂದೊಂದಾಗಿ ನೆರವೇರುತ್ತಾ ಹೋಗುತ್ತವೆ.
ನಾಲ್ಕನೇ ಹೊರ ಬೀಡಿನ ಮರುದಿನ ಮೆರವಣಿಗೆಯೊಂದಿಗೆ ಕಾಡಿಗೆ ಹೋಗಿ “ತಾರಿ’ಮರವನ್ನು ಕಡಿಯುವ ಸಂಪ್ರದಾಯವಿದೆ. ಐದನೇ ದಿನ ಬೆಳಗ್ಗೆ ಮೆರವಣಿಗೆಯೊಂದಿಗೆ ಮರವನ್ನು ತಂದು ದೇವಾಲಯದ ಎದುರು ಪೂಜೆ ಮಾಡಲಾಗುತ್ತದೆ. ಜಾತ್ರೆ ಪ್ರಾರಂಭಕ್ಕೂ ಒಂದು ವಾರ ಮೊದಲೇ ಬಾಬುದಾರರು, ಬಡಿಗೇರರು, ಆಚಾರಿ, ಉಪ್ಪಾರರು ರಥ ಕಟ್ಟುವ ಕಾರ್ಯ ಮಾಡುತ್ತಾರೆ. ಅನಂತರ ಮಾರಿ ಕೋಣವನ್ನು ಮೆರವಣಿಗೆ ಮಾಡಿ ಆಸಾದಿಯರು, ಮೇತ್ರಿಯರು ರಂಗ ವಿಧಾನ ನೆರವೇರಿಸಿ ಕೋಣಕ್ಕೆ ಕಂಕಣ ಧಾರಣೆ (ಅಂಕೆ) ಮಾಡುತ್ತಾರೆ. ಅದೇ ದಿನ ತಾಯಿ ವಿಗ್ರಹಕ್ಕೆ ಬಣ್ಣ ಬಳಿಯುವ ಸಂಪ್ರದಾಯವಿದೆ. ಗದ್ದುಗೆಯಲ್ಲಿ ನಾಡಿಗ ಬಾಬುದಾರರಿಂದ “ಮೇಟ ದೀಪ ‘ ಹಚ್ಚಿಸುತ್ತಾರೆ.
ಅನಂತರ ಬರುವ ಮೊದಲ ಮಂಗಳವಾರ ಕಲ್ಯಾಣ ಉತ್ಸವ ಮತ್ತು ಕಳಸಾರೋಹಣ ನಡೆಯುತ್ತದೆ. ಸಕಲ ಕಲ್ಯಾಣ ಸಂಪ್ರದಾಯದೊಂದಿಗೆ ಈ ಪೂಜೆ ನಡೆಯುತ್ತದೆ. ಮಾರನೇ ದಿನ ಭೂತರಾಜನಿಗೆ ಸಾತ್ವಿಕ ಬಲಿ ನಡೆದು ಗದ್ದುಗೆಯಲ್ಲಿ ದೇವಿಯನ್ನು ಬಿಡಕಿ ಬೈಲಿಗೆ ರಥೋತ್ಸವದಲ್ಲಿ ಕರೆ ತರುತ್ತಾರೆ. ಗುರುವಾರದಿಂದ ಉಳಿದ ಭಕ್ತಾದಿ ಸೇವೆಗಳು ಪ್ರಾರಂಭವಾಗುತ್ತದೆ. ಅನಂತರದಲ್ಲಿ ಮುತ್ತುವುದೇ ಮಿರಿ ಮಿರಿ ಬೆಳಕುಗಳ ಜಾತ್ರಾ ಸಂಭ್ರಮ.ಲಕ್ಷ ಲಕ್ಷ ಜನರನ್ನು ತನ್ನ ಕಡೆ ಸೆಳೆದು ಇಡೀ ಶಿರಸಿ ನಗರವನ್ನೇ ಜನಸ್ತೋಮದಲ್ಲಿ ಮುಳುಗಿಸಿ ಬಿಡುತ್ತದೆ. ಸುಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ನೀವು ಬರುವಿರಿ ತಾನೇ?
-ಶಿಲ್ಪಾ ಪೂಜಾರಿ
ಎಂ.ಎಂ. ಮಹಾವಿದ್ಯಾಲಯ ಶಿರಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.