Heat Weather: ಹಬೆಯಾಡುತ್ತಿರುವ ವಸುಂಧರೆ
Team Udayavani, May 19, 2024, 3:45 PM IST
ಈ ಸಲದ ಬೇಸಗೆಯ ಕಾವು ಎಂದಿಗಿಂತ ಹೆಚ್ಚೇ. ಮರಗಳು ಚಿಗುರಿ ಫಲಯುಕ್ತವಾಗುವ, ನೆಲ ಕಾಯುವ ಬೇಸಗೆಯು ಹೊಸತಲ್ಲ. ಆದರೆ ಈ ಬಾರಿ ಕುದಿಯುವ ಬಿಸಿಲಗಾಳಿಯ ಅಬ್ಬರ ಅಧಿಕ. ದಿನವೊಂದರ ತಾಪಮಾನವು ಮೂವತ್ತೈದು, ಮೂವತ್ತೆಂಟು, ನಲ್ವತ್ತರ ಆಸುಪಾಸಿಗೆ ತಲುಪಿ ದಾಖಲೆಯನ್ನು ಬರೆಯುತ್ತಿದೆ. ಇದು ಸಮಾಧಾನವನ್ನು ತರುವ ದಾಖಲೆಯಲ್ಲ, ಸಂಕಟದ ಕುರುಹು. ಮನೆ-ಶಾಲೆ-ಕಚೇರಿಗಳ ಒಳಾವರಣಗಳಲ್ಲಿ ಹಬೆಯಾಡಿದ ಅನುಭವ. ಅರೆಬೆಂದ ಬವಣೆಯಲ್ಲಿ ತಾಕಲಾಡುತ್ತಾ ಬೇಸಗೆಯ ದಿನದೂಡುವ ಪರಿಸ್ಥಿತಿ ಸದ್ಯಕ್ಕೆ ಎಲ್ಲರದು.
ವಾಲಿಕೊಂಡಿರುವ ಭೂಮಿಯ ಉತ್ತರಾರ್ಧಕ್ಕೆ ಬೇಸಗೆಯಲ್ಲಿ ಸೂರ್ಯನ ಕಿರಣಗಳು ಹೆಚ್ಚು ಹಾಯುವುದು. ಬಿಸಿಲ ತೀಕ್ಷ್ಣ ಸಾಲದ್ದಕ್ಕೆ ತಾಪಮಾನವೂ ಅಧಿಕ. ಭೂಮಿಯ ಮೇಲಿರುವ ನೀರಿನಾಕಾರಗಳಿಂದ ಆವಿಯಾಗುವ ಪ್ರಮಾಣವೂ ಹೆಚ್ಚು. ಈ ಬಾಷ್ಪೀಭವನದಿಂದ ನೀರಾವಿಯು ಅದೃಶ್ಯರೂಪದಲ್ಲಿ ವಾತಾವರಣದಲ್ಲಿ ತುಂಬಿರುತ್ತದೆ. ತಾಪಮಾನ ಹೆಚ್ಚಿದ್ದರೆ, ಶೇಖರಣೆಆಗುವ ನೀರಾವಿಯ ಪ್ರಮಾಣವೂ ಜಾಸ್ತಿಯೇ. ಹೀಗಾಗಿ ಬೇಸಗೆಯ ಬರಡು ದಿನಗಳಲ್ಲಿ ಅಂಟುವ, ಮೈ ಪಸೆಯೂ ಕಾಣಬರುವುದು. ಇದನ್ನೇ ಆರ್ದ್ರತೆ ಎಂದದ್ದು. ಇದು ಅನಾವಶ್ಯಕ ಕಿರಿಕಿರಿಯನ್ನು, ದೇಹಾಯಾಸವನ್ನೂ ಉಂಟುಮಾಡುತ್ತದೆ. ಒಟ್ಟಿನಲ್ಲಿ ನಮ್ಮ ಅನುಭವಕ್ಕೆ ಬರುವ ಬೇಸಗೆಯು ಬಿಸಿ ಮತ್ತು ಆರ್ದ್ರವಾಗಿರುತ್ತದೆ.
ಈತನ್ಮಧ್ಯೆ, ಕರ್ನಾಟಕದ ಕೆಲವು ಭಾಗಗಳು ಎಪ್ರಿಲ್ ಅಂತ್ಯಕ್ಕೆ ದಾಖಲೆಯ ತಾಪಮಾನವನ್ನು ಕಂಡಿವೆ. ಕಲಬುರಗಿಯಲ್ಲಿ ನಲ್ವತ್ತೆರಡು ಡಿಗ್ರಿ ಸೆಲ್ಸಿಯಸ್, ಬೆಂಗಳೂರಿನಲ್ಲಿ ಮೂವತ್ತೂಂಬತ್ತು ಡಿಗ್ರಿ ಸೆಲ್ಸಿಯಸ್ ಒಲೆಯ ಮೇಲೆ ಕೂತ ಅನುಭವವನ್ನು ನೀಡಿದೆ. ಅಲ್ಲಲ್ಲಿ ಕಾಣಸಿಗುತ್ತಿದ್ದ ಬಿಸಿಗಾಳಿಯ ಹರವು ಸರ್ವವ್ಯಾಪಿಯಾಗಿದೆ. ಭಾರತದ ಬಹುತೇಕ ರಾಜ್ಯಗಳು ಎಪ್ರಿಲ್‌ನಲ್ಲಿ ಉಷ್ಣಹವೆಯ ತತ್ತರಕ್ಕೆ ತುತ್ತಾಗಿವೆ. ಮೇನಲ್ಲಿ ಮತ್ತೆ ಮುಂದುವರೆಯುವ ಸಾಧ್ಯತೆಯೂ ಇದೆಯಂತೆ.
ಧರೆಯ ಹೊರಮೈಯೆಲ್ಲವೂ ನಿಧಾನವಾಗಿ ಕಾಂಕ್ರೀಟ್ ಲೇಪಕ್ಕೆ ತಿರುಗುತ್ತಿರುವಾಗ, ಸೂರ್ಯ ರಶ್ಮಿಗಳನ್ನು ಭೂಮಿ ನುಂಗಿಕೊಳ್ಳದೇ, ಪ್ರತಿಫಲಿಸಿ ಹೆಚ್ಚು ಶಾಖದ ಮಂಡಲವನ್ನೇ ಏರ್ಪಡಿಸುತ್ತದೆ. ಉಪವನಗಳು, ಹಸುರ ಹೊದಿಕೆಗಳು ಕಡಿಮೆಯಾದ ಕಾರಣದಿಂದಲೂ ನಗರಗಳೆಲ್ಲವೂ ತಾಪಮಾನವನ್ನು ಹೆಚ್ಚಿಸುವ, ಉಷ್ಣ ಉತ್ಪತ್ತಿಯ ಕೇಂದ್ರಗಳಾಗುತ್ತಿವೆ. ಹಗಲೆಲ್ಲಾ ಕುದಿದು, ನಿಧಾನವಾಗಿ ನಗರಗಳು ತಣಿಯಲಾರಂಭಿಸುತ್ತವೆ. ಸಂಶೋಧನೆಗಳು ನಗರ ಮತ್ತು ಹಳ್ಳಿಗಾಡಿನ ನಡುವಿನ ಈ ತಾಪಮಾನದ ವ್ಯತ್ಯಾಸವನ್ನು ಗಮನಿಸಿವೆ.
ಬಿಸಿಯಾದ ನೆಲವು ಗಾಳಿಯನ್ನು ಸೋಕಿ, ಹೆಚ್ಚು ಆರ್ದ್ರವಾಗುತ್ತಿದೆ ಎಂಬುದು ಕಳವಳದ ಅಂಶ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಹೆಚ್ಚು ತೀವ್ರವಾದ ಮಳೆಯ ಮತ್ತು ಬಿಸಿಯಾದ ದಿನಗಳು ಸಾಮಾನ್ಯವಾಗುತ್ತಿವೆ. ಒಂದೆರಡು ಬಿಸಿಯಾಡುವ ದಿನಗಳು ಇದ್ದ ವರುಷಗಳೆಲ್ಲಿ, ಈಗಿನ ತಿಂಗಳಿಡೀ ಬಿಸಿಯಾರದ ದಿನಗಳೂ ನೋಡಿಬಿಟ್ಟಿದ್ದೇವೆ. ಭಾರತೀಯ ಹವಾಮಾನ ಇಲಾಖೆಯ ಬಿಸಿಗಾಳಿಯ ಮುನ್ಸೂಚನೆಯ ಬುಲೆಟಿನ್ ಸಮಗ್ರ ದೇಶವನ್ನೇ ಒಳಗೊಂಡಿದ್ದು ತೀವ್ರತೆಗೆ ಸಾಕ್ಷಿ.
ಬೇಸಗೆಯ ಬಿಸಿಗಾಳಿಯ ಪರಿಸ್ಥಿತಿಗಳು ಶಾರೀರಿಕ ಒತ್ತಡಕ್ಕೆ ಕಾರಣವಾಗಬಹುದು. ನೀರಡಿಕೆಯನ್ನು ನಿವಾರಿಸಲು ಅಗತ್ಯ ನೀರನ್ನು ಕುಡಿಯುವುದು, ದೇಹವನ್ನು ನಿರ್ಜಲೀಕರಣಗೊಳಿಸುವ ಕಾಬೊìನೇಟೆಡ್ ತಂಪು ಪಾನೀಯಗಳ ಬದಲು ತಾಜಾ ಹಣ್ಣಿನ ರಸ ಸವಿಯುವುದು ಒಳ್ಳೆಯದು. ಒದ್ದೆಬಟ್ಟೆಯಿಂದ ಮುಖವನ್ನೊರೆಸುವುದು ಮತ್ತು ಹಗುರವಾದ ಹಾಗೂ ಸಡಿಲವಾದ-ನಸುಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮವಂತೆ. ಕಾಲಕ್ಕೆ ಸರಿಯಾಗಿ ಮಳೆ ಬಂದು ತಂಪ ನೀಡಲಿ. ಬರುವ ಮಳೆಗಾಲವಾದರೂ ಹಿತವಾಗಿರಲಿ.
-ವಿಶ್ವನಾಥ ಭಟ್,
ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.