ಬಾಲ್ಯದ ಸವಿ ನೆನಪುಗಳಂಚಿನಲಿ…
Team Udayavani, Jun 27, 2021, 9:24 AM IST
ಸ್ನೇಹ ಎಂಬುದು ಜೀವಿಗಳ ನಡುವಿನ ಭಾವನಾತ್ಮಕ ಒಡಂಬಡಿಕೆ, ನಂಬಿಕೆ, ವಿಶ್ವಾಸ ಹಾಗೂ ಕ್ಷಮೆ ಇವು ಸ್ನೇಹದ ಮುಖ್ಯವಾದ ಮೂಲದಂಡ. ಸ್ನೇಹವೆಂಬ ಬಂಧದಲ್ಲಿ ವ್ಯಕ್ತಿ ದೂರವಾದರೂ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ದೂರ ಮಾಡಿಕೊಳ್ಳದಿರುವುದೇ ಸ್ನೇಹದ ಅತ್ಯಮೂಲ್ಯ ಅರ್ಹತೆ. ಅದು ಎಲ್ಲ ಸಂಬಂಧಗಳಿಗಿಂತ ವಿಭಿನ್ನವಾದದ್ದು ಮತ್ತು ವೈಶಿಷ್ಟ್ಯತೆಯನ್ನು ಹೊಂದಿದೆ.
ಸ್ನೇಹಕ್ಕೆ ಯಾವುದೇ ಜಾತಿ-ಮತ- ಪಂಥ-ಧರ್ಮಗಳ ಭೇದವಿಲ್ಲ. ನಮ್ಮ ಜತೆಗಿರುವವರೆಲ್ಲರೂ ಸ್ನೇಹಿತರಾಗುವುದಿಲ್ಲ. ನಾವು ಜತೆಗೂಡಿ ಒಂದೇ ಶಾಲೆಯಲ್ಲಿ ಕಲಿತ-ನಲಿದ-ಕುಣಿದು-ಕುಪ್ಪಳಿಸಿದ ಮಧುರ ಕ್ಷಣಗಳು ನಮ್ಮ ಮನದಾಳದಲ್ಲಿ ಶಾಶ್ವತವಾಗಿ ನೆನಪಿನ ಬುತ್ತಿಯಾಗಿರುತ್ತವೆ. ನಾವು ಕೆಲವು ಸಂದರ್ಭಗಳಲ್ಲಿ ಆಡಿದ ಆಟ-ಮಾಡಿದ ಕೀಟಲೆ ಬಾಲ್ಯದಲ್ಲಿ ಕಂಡ ಅನುಭವದ ಸಂದರ್ಭಗಳನ್ನು ಮತ್ತು ಸಂತೋಷದ ಕ್ಷಣಗಳನ್ನು ಮರೆಯಲಾರೆವು.
ನಮ್ಮ ಜೀವನದಲ್ಲಿ ಯಾವುದೇ ಕಷ್ಟ-ನಷ್ಟ-ಸಮಸ್ಯೆಯಂತಹ ಸಂದರ್ಭಗಳು ಎದುರಾದಾಗ ಸ್ನೇಹಿತರು ಸಮಾಧಾನ-ಸಾಂತ್ವನ ಮತ್ತು ಆಪತ್ಕಾಲದಲ್ಲಿ ಆಪದ್ಭಾಂಧವನಂತೆ ಬಂದು ಆತ್ಮಸ್ಥೈರ್ಯ ತುಂಬಿ, ಹುರಿದುಂಬಿಸಿ, ಮೈ ಸವರಿ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರುವಂತೆ ಸಹಾಯ ಮಾಡಿದ ಪ್ರತಿಯೊಂದು ಸನ್ನಿವೇಶಗಳು ಇಂದಿಗೂ ನಮ್ಮ ನೆನಪಿನ ಪಟಲದಲ್ಲಿ ಶಾಶ್ವತವಾಗಿ ನೆಲೆಯೂರಿವೆ. ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಘಟಿಸಿದ ಘಟನೆಗಳ ಹಾಗೂ ಸ್ನೇಹಿತರೊಂದಿಗೆ ಬೆರೆತು ಆಟವಾಡಿದ, ಶಾಲೆ ಮತ್ತು ಹೊರಗಡೆ ಮಾಡಿದ ಕೀಟಲೆ, ಶಿಕ್ಷಕರಿಂದ ತಿಂದ ಬೆತ್ತದ ಏಟು ಮತ್ತು ಮಾಡಿದ ಹುಡುಗಾಟದ ದಿನಗಳ ಅಮೂಲ್ಯವಾದ ಕ್ಷಣವೇ ಆಗಿದೆ.
ಇದನ್ನೂ ಓದಿ: ಬಾಲ್ಯವೆಂದರೆ ಹಾಗೇ ಮಂದಹಾಸಗಳ ಸರಮಾಲೆ
ನಾವು ಬಾಲ್ಯದ ನೆನಪುಗಳ ಬೆನ್ನತ್ತಿ ಹೊರಟಾಗ, ನಾವು ಮಾಡಿದ ಅಧ್ವಾನಗಳ ಜತೆಗೆ ಆರಂಭದ ಬದುಕಿನಲ್ಲಿ ಕಂಡ ಸಂತಸದ ದಿನಗಳು ಕಾಣಸಿಗುತ್ತವೆ. ಎಳೆಯ ವಯಸ್ಸಿನಲ್ಲಿ ನಾವೆಲ್ಲ ಶಾಲೆಯಲ್ಲಿ ಆಸ್ಪತ್ರೆಯವರು ಚುಚ್ಚುಮದ್ದು ನೀಡಲು ಬಂದಾಗ ಇಂಜಕ್ಷನ್‌ಗೆ ಅಂಜಿ ಕಿಟಕಿಯಿಂದ ಹಾರಿ ಪರಾರಿಯಾದ ಸಂದರ್ಭ, ಶಿಕ್ಷಕರು ತರಗತಿಯಲ್ಲಿ ಹೇಳಿದ ನೀತಿ ಕಥೆ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ಧಾರಣೆ ಮಾಡಿಸಲು ಕಲಿಸಿದ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರ, ನಡೆ-ನುಡಿ ಒಂದಾಗುವಂತೆ ಪಠಿಸಿದ ಮಂತ್ರಗಳೆಲ್ಲವೂ ಮತ್ತು ಸ್ನೇಹಿತರು-ಶಿಕ್ಷಕರೊಂದಿಗಿನ ಭಾವನಾತ್ಮಕ ಸಂಬಂಧಗಳು ನಮ್ಮ ಮನಸ್ಸಿನ ಪಟಲದಲ್ಲಿ ಇಂದಿಗೂ ಬಂದು ಹೋಗುತ್ತವೆ. ಗೆಳೆಯರ ಕೂಡಿ-ಆಡಿದ್ದು, ಜಗಳವಾಡಿ ಮಾತಾಡದೇ ಇದ್ದು, ಕೊನೆಗೆ ಮತ್ತೆ ಕೈ ಕುಲುಕಿ ಒಂದಾಗಿದ್ದ ಪ್ರಸಂಗದಂತಹ ಸವಿ ನೆನಪುಗಳು ನಮ್ಮ ಜೀವನದಲ್ಲಿ ಮತ್ತೆಂದೂ ಮರುಕಳಿಸಲಾರವು.
ಪರೀಕ್ಷೆ ಮುಗಿಸಿ ಬೇಸಗೆ ರಜೆ ದೊರೆತರಂತೂ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಈಗಷ್ಟೇ ಶಾಲೆಗಳಿಗೆ ರಜೆ ನೀಡಿದ ಅನಂತರ ಬರುವ ಹಬ್ಬವೇ ಹೋಳಿ ಹಬ್ಬ. ಈ ಹಬ್ಬದಲ್ಲಿ ನಾವೆಲ್ಲರೂ ಗೆಳೆಯರು ಕೂಡಿ ಮಂದಿ ಮನೆಯಿಂದ ಸೌದೆ, ಕಟ್ಟಿಗೆ-ಕುಳ್ಳ ಕದ್ದು ತಂದು, ಒಂದು ಹಾಳು ಮನೆಯಲ್ಲಿ ಕೂಡಿ ಹಾಕುತ್ತಿದ್ದೆವು. ಮನೆ-ಮನೆಯಿಂದ ಕಾಮಣ್ಣನ ಪೂಜೆಗಾಗಿ ವಂತಿಗೆ ಪಡೆದ, ಇಡೀ ರಾತ್ರಿ ಎಚ್ಚರವಾಗಿದ್ದು, ಕಾಮದಹನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆವು. ಅದು ಬೇಸಿಗೆ ಕಾಲವಾಗಿರುವುದರಿಂದ ವಿಶೇಷವಾಗಿ ಊರ ಮುಂದಿನ ಬಾವಿಯಲ್ಲಿ ಈಜಲು ಹೋಗುವುದೆಂದರೆ ನಮಗೆಲ್ಲ ಖುಷಿಯೋ ಖುಷಿ. ಬಾಲ್ಯವೆಂಬುದು ಮರುಕಳಿಸದ ಬದುಕಿನ ಒಂದು ಘಟ್ಟ. ಈ ಬೆಲೆಕಟ್ಟಲಾಗದ ಬಂಗಾರದಂತಹ ಬಾಲ್ಯವನ್ನು ಎಂದೂ ಮರೆಯದೇ ಇಡೀ ಜೀವನದಲ್ಲಿ ಆ ಎಲ್ಲ ಕ್ಷಣಗಳನ್ನು ಮೆಲುಕು ಹಾಕುತ್ತಾ, ಮುಂದಿನ ಭಾವೀ ಬದುಕು ಬಂಗಾರವನ್ನಾಗಿಸಲು ಕಂಡ ಕನಸುಗಳ ನನಸು ಮಾಡಲು ಪ್ರಯತ್ನಿಸಬೇಕು.
ಮಲ್ಲಪ್ಪ ಸಿ.
ಖೊದ್ನಾಪೂರ (ತಿಕೋಟಾ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.