Teacher: ಟೀ ಫಾರ್ ಟೀಚರ್
Team Udayavani, Nov 6, 2024, 5:52 PM IST
“ಟೀ’ ಹಲವರ ಪಾಲಿಗೆ ಇದೊಂದು ಪಾನೀಯವಷ್ಟೇ. ಆದರೆ ಕೆಲವರ ಪಾಲಿಗೆ ತಮ್ಮ ಒಡನಾಡಿ, ಸ್ನೇಹಿತ, ಭಾವನೆ, ಬೆಳಕು, ಚೇತನ ಹೀಗೆ ಎಲ್ಲವೂ ಅದೇ ಆಗಿರುತ್ತದೆ. ಇನ್ನು ಟೀಚರ್ ಬಗ್ಗೆ ಹೇಳಬೇಕೇ, ಜಗತ್ತಿಗೆ ನಮ್ಮನ್ನು ಪರಿಚಯಿಸಿದವರು ತಂದೆ ತಾಯಿಗಳಾದರೆ ನಮಗೆ ಜಗತ್ತನ್ನು ಪರಿಚಯಿಸುವವರೇ ಗುರುಗಳು. ಹಾಗಾದರೆ ನಾನಿಲ್ಲಿ ಟೀ ಬಗ್ಗೆ ಹೇಳ್ತಿದ್ದೀನಾ ಅಥವಾ ಟೀಚರ್ ಬಗ್ಗೆ ಹೇಳ್ತಿದ್ದೀನಾ ಅಂತ ಗೊಂದಲ ಬೇಡ. ನಾನು ಹೇಳುತ್ತಿರುವುದು ನಮ್ಮ “ಟೀ’ಚರ್ ಬಗ್ಗೆ.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರನ್ನು ನಾನು ಸೇರಿದ್ದು ಕಪ್ಪು ಸುಂದರಿಯ (ಕಾಲೇಜು ಗ್ರಂಥಾಲಯ) ಮೋಡಿಗೊಳಗಾಗಿ, ಆದರೆ ಅದಕ್ಕೂ ಹೆಚ್ಚು ಪ್ರಭಾವಿತನಾಗಿದ್ದು ನಮ್ಮ ನಿರ್ದೇಶಕರಾದ ಡಾ| ಬಿ. ಟಿ. ಮುದ್ದೇಶ್ ಸರ್ ಅವರಿಂದ. ನಾನು ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಸೆ ಇದ್ದರೂ, ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಸರಿಯಿರದ ಕಾರಣ ನಾನು ಸ್ಪರ್ಧಾತ್ಮಕ ಜಗತ್ತಿಗೆ ಧುಮುಕಿಬಿಟ್ಟೆ. ಆದರೆ ನನ್ನ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ| ಬಿ. ಆರ್. ಪಾಟೀಲ್ ಸರ್‌ಗೆ ನನ್ನ ಮೇಲಿದ್ದ ಅಪಾರ ಪ್ರೀತಿ ಮತ್ತು ನಂಬಿಕೆ ನನ್ನನ್ನು ಮುದ್ದೇಶ್ ಸರ್‌ಗೆ ಪರಿಚಯಿಸಿತು.
ಹಾಗೋ ಹಿಗೋ ಮಾಡಿ ಸ್ನಾತಕೋತ್ತರ ಪದವಿಗೆ ದಾಖಲಾದೆ. ಆದರೆ ಅಸಲಿಗೆ ನೋವು ಅಲ್ಲಿಂದ ಆರಂಭವಾದದ್ದು. ಆ ಕಡೆ ಕೆಎಎಸ್ ಪರೀಕ್ಷೆ ತರಬೇತಿಯನ್ನು ಬಿಟ್ಟು ಬರಲಾರದೆ, ಈ ಕಡೆ ಸ್ನಾತಕೋತ್ತರ ಪದವಿ ತರಗತಿಗಳಿಗೂ ಹಾಜರಾಗದೇ ತುಸು ಪೇಚಾಡಿದೆ.ಆಗ ಮತ್ತೇ ನನಗೆ ಧೈರ್ಯ ತುಂಬಿದ್ದು ಇದೇ ಮುದ್ದೇಶ್ ಸರ್.
“ಮೊದಲೇ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಅಂತಿದ್ದೀಯಾ ಕೆಎಎಸ್ ಪರೀಕ್ಷೆ ತರಬೇತಿ ಅರ್ಧಕ್ಕೆ ಬಿಟ್ಟು ಬಂದರೆ ಸುಮ್ಮನೆ ಹಣ ಹಾಳಾಗುವುದು. ಪರವಾಗಿಲ್ಲ, ತರಬೇತಿ ಪೂರ್ತಿ ಮುಗಿಸಿಕೊಂಡು ಬಾ’ ಎಂದರು. ಅಷ್ಟೇ ಅಲ್ಲದೆ ದಾಖಲಾತಿಗೆ ನಾನು ತುಮಕೂರಿಗೆ ಬಂದುಹೋಗಲು ಸುಖಾಸುಮ್ಮನೆ ಸಾವಿರಾರು ರೂಪಾಯಿ ಖರ್ಚಾಗುವುದು. ಅಂಕಪಟ್ಟಿ ಸಮೇತ ಇನ್ನುಳಿದ ದಾಖಲೆ ಪತ್ರ ಕಳುಹಿಸಿಕೊಡು ಸಾಕು, ಎಲ್ಲವನ್ನು ನಾನು ನೋಡಿಕೊಳ್ಳುತ್ತೇನೆ ಎಂಬ ಮಾತು ಇನ್ನೂ ನನ್ನ ಕಿವಿಗೆ ಚಿರಪರಿಚಿತ.
ತುಮಕೂರಿಗೆ ಬರುವ ಮೊದಲು ನಾನು ಅಷ್ಟೊಂದು ಟೀ ಕುಡಿಯುತ್ತಿರಲಿಲ್ಲ. ಆದರೆ ಇಲ್ಲಿ ನಮ್ಮ ನಿರ್ದೇಶಕರ ಜತೆಗೂಡಿ ಬೆಳಗ್ಗೆಯೂ ಟೀ, ಸಂಜೆಯೂ ಟೀ, ತರಗತಿ ಆರಂಭಕ್ಕೆ, ತರಗತಿ ಮುಕ್ತಾಯಕ್ಕೆ, ಖುಷಿಯಾದಾಗ, ತುಸು ಬೇಸರವಾದಾಗ, ಸಿದ್ಧಾರ್ಥ ಸಂಪದ ಬಿಡುಗಡೆಗೆ ಹೀಗೆ ಎಲ್ಲದಕ್ಕೂ ಟೀ..ಟೀ..ಟೀ…
ಸಂಭ್ರಮ ಕಾರ್ಯಕ್ರಮದ ತಯಾರಿಯಲ್ಲಿದ್ದ ನಮಗೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳೊಬ್ಬರು ಹೇಳಿದಾಗಲೇ ಗೊತ್ತಾಗಿದ್ದು ಈ ಪದ್ಧತಿಯೂ ತೀರಾ ಹಳೆಯದೆಂದು. ನಾನು ಇಲ್ಲಿ ಹೇಳ ಹೊರಟಿರುವುದು ಟೀ ಮೇಲಿನ ನನ್ನ ಪ್ರೀತಿ, ತಾತ್ಸಾರಗಳೆರಡನ್ನೂ ಅಲ್ಲ. ಬದಲಿಗೆ ನಮ್ಮ ಗುರುಗಳಾದ ಡಾ| ಬಿ. ಟಿ. ಮುದ್ದೇಶ್ ಅವರಿಗೆ ನಮ್ಮೆಲ್ಲರ ಮೇಲಿರುವ ಪ್ರೀತಿ, ಕಾಳಜಿ, ಒಲವಿನ ಬಗ್ಗೆ. ನಿಜಕ್ಕೂ ಅದು ಬರೀ ಟೀ ಅಲ್ಲ, ಕೆಲಸದಲ್ಲಿ ಸದಾ ಮುಳುಗಿರುವ, ಬೇರೆ ಬೇರೆ ಗೊಂದಲಗಳಿಂದ ಕೂಡಿದ್ದ ನಮ್ಮ ಮನಗಳಿಗೆ ಔಷಧ.
ಬರೀ ಟೀ ಅಂತಲ್ಲ ಆಗಾಗ ಅವರ ಮನೆಯೂಟ, ಬೇರೆ ಬೇರೆ ತಿಂಡಿ ತಿನಿಸು ಹೀಗೆ ಅಕ್ಷರ ಮತ್ತು ಅರಿವಿನ ಜತೆಗೆ ಅನ್ನ ನೀಡಿ ಸಲಹುತಿಹ ಗುರುವಿಗೆ ನನ್ನ ಹೃನ್ಮನ ನಮನ.
-ಹಣಮಂತ ಕಾಂಬಳೆ
ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ
Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು
IT Raid: ಬೆಳಗಾವಿಯ ಉದ್ಯಮಿ ದೊಡ್ಡಣ್ಣವರ ಸೇರಿ ನಾಲ್ವರು ಉದ್ಯಮಿಗಳಿಗೆ ಐಟಿ ಶಾಕ್
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು