Relationships: ಆನ್‌ಲೈನ್ ಪ್ರಪಂಚದಲ್ಲಿ ಸಂಬಂಧಗಳ ಸ್ತಂಭನ
Team Udayavani, Jan 12, 2025, 3:33 PM IST
ಬದಲಾಗುತ್ತಿರುವ ಈ ಜಗತ್ತಿನಲ್ಲಿ ಆಧುನಿಕತೆಯ ವಿಸ್ತಾರ ಎಲ್ಲೆಡೆ ಹಬ್ಬುತ್ತಿದೆ. ಇಂದು ನಮ್ಮದು ಡಿಜಿಟಲ್ ಯುಗ ಎಂದೇ ಹೇಳಬಹುದು. ಪ್ರತಿದಿನ ಜೀವನ ಸಾಗಿಸಲು ತಂತ್ರಜ್ಞಾನ ಬೇಕೇ ಬೇಕು ಎನ್ನುವ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ನಿಜ ಹೇಳಬೇಕೆಂದರೆ ನಮ್ಮ ದಿನ ಆರಂಭವಾಗುವುದೇ ಈ ಮೊಬೈಲ್ ದರ್ಶನದಿಂದ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣವನ್ನು ಬಿಟ್ಟು ಇರುವವರು ಯಾರು ಇಲ್ಲ ಎಂದೇ ಹೇಳಬಹುದು.
ಇಂದು ಯಾವುದೇ ಕಾರ್ಯಕ್ರಮ, ಹಬ್ಬ ಹರಿದಿನಗಳೆಂದು ಜನ ಸೇರುತ್ತಾರಾದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ ಹಿಡಿದು ಕುಳಿತರೆ ಮತ್ತೆ ಯಾರಾದರೂ ಬಂದು ಊಟಕ್ಕಾಯ್ತು ಎನ್ನುವಾಗಲೇ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಕಾಯಿಲೆಯಿಂದ ಮಲಗಿದ್ದವರನ್ನು ನೋಡಲು ಹೋದಾಗಲೂ ಅವರ ಪಕ್ಕದಲ್ಲಿ ಕುಳಿತು ಮೊಬೈಲ್ ನೋಡುತ್ತಾ ಕಾಲ ಕಳೆಯುವವರಿದ್ದಾರೆ. ಅಜ್ಜಿ ಮನೆಗೆ ರಜೆಗೆಂದು ಹೋಗಿ ಬರಿ ಮೊಬೈಲ್ ನೋಡುತ್ತಲೇ ಕಾಲಹರಣ ಮಾಡುತ್ತಾ ಕುಳಿತರೆ ಇವರು ಬರದಿದ್ದರೆ ಚೆನ್ನಾಗಿತ್ತು ಎಂದು ಅವರಿಗೆ ಅನಿಸಬಹುದು ಅಲ್ಲವೇ…?
ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಆವಿಷ್ಕರಿಸಲಾದ ಈ ಮೊಬೈಲ್ ಫೋನ್ ತನ್ನ ಮೂಲ ಉದ್ದೇಶದಿಂದ ದೂರ ಸರಿದು ಎಲ್ಲರನ್ನೂ ಪ್ರತ್ಯೇಕಗೊಳಿಸುತ್ತಿದೆ. ಇದರ ಮೇಲೆ ಸಂಪೂರ್ಣ ಅವಲಂಬನೆಯಾಗಿರುವ ನಮ್ಮ ಯುವ ಜನತೆ ವ್ಯಕ್ತಿಯನ್ನು ಮುಖತಃ ಭೇಟಿಯಾದಾಗ ಯಾವ ರೀತಿಯಲ್ಲಿ ಸಂವಹನ ನಡೆಸಬೇಕು ಎಂಬುದನ್ನೇ ಮರೆತಿದ್ದಾರೆ.
ಮೊದಲೆಲ್ಲ ಮಕ್ಕಳು ಊಟ ಮಾಡುವುದಿಲ್ಲ ಎಂದು ಹಠ ಮಾಡಿದರೆ ಚಂದಮಾಮನನ್ನು ತೋರಿಸುತ್ತಾ ಕಥೆ ಹೇಳುತ್ತಾ ಊಟ ಮಾಡಿಸುವಳು ತಾಯಿ. ಆದರೆ ಇಂದು ಪೋಷಕರು ಮಕ್ಕಳನ್ನು ಸಮಾಧಾನ ಪಡಿಸಲು ಮೊಬೈಲ್ ನೀಡುತ್ತಿರುವುದು ವಿಪರ್ಯಾಸವೇ ಸರಿ. ಇನ್ನು ಚಿಕ್ಕ ಚಿಕ್ಕ ಮಕ್ಕಳು ಸಹ ಮೊಬೈಲ್ ಗೇಮ್ಸ್‌ಗಳಲ್ಲಿ ಮುಳುಗಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚಕರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಈ ಮೋಸದ ಜಾಲಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ವಿದ್ಯಾವಂತರೇ ಎಂಬುದು ವಿಪರ್ಯಾಸದ ಸಂಗತಿ.
ಸ್ಮಾರ್ಟ್ ಫೋನ್ ಎಂಬ ಗಾಳಕ್ಕೆ ಬಾಲ್ಯವು ಸಿಲುಕಿ ಬಿಟ್ಟಿದೆ. ಮೊದಲೆಲ್ಲ ಮಕ್ಕಳು ಗುಂಪು ಮಾಡಿಕೊಂಡು ಎಷ್ಟೆಲ್ಲಾ ಆಟ ಆಡುತ್ತಿದ್ದರು; ಮರಕೋತಿ, ಕುಂಟೆಬಿಲ್ಲೆ, ಲಗೋರಿ, ಗೋಲಿ, ಬುಗುರಿ ಹೀಗೆ ಸಂಭ್ರಮವೋ ಸಂಭ್ರಮ. ಮಕ್ಕಳೆಲ್ಲ ನಾ ಮುಂದು ತಾ ಮುಂದು ಎಂದು ಕಿತ್ತಾಡಿ ಊರ ಮೂಲೆ ಮೂಲೆಗೂ ಕೇಳುವಂತೆ ಗದ್ದಲವನ್ನು ಮಾಡುತ್ತಿದ್ದರು. ಆದರೀಗ ಸ್ಮಾರ್ಟ್ ಫೋನ್ ಬಂದ ಮೇಲೆ ಈ ಮಕ್ಕಳೆಲ್ಲ ಯಾವುದೋ ಮೂಲೆಯನ್ನು ಸೇರಿ ತಮ್ಮ ಬಾಲ್ಯವನ್ನು ನಾಲ್ಕು ಗೋಡೆಯ ಒಳಗೆ ಬಂಧಿತರಾಗಿ ಕಳೆಯುತ್ತಿದ್ದಾರೆ. ಮನೆ ತುಂಬಾ ಮಕ್ಕಳು ಇದ್ದರೂ ಯಾರ ಸುಳಿವು ಇಲ್ಲದೆ ಮೊಬೈಲ್ ಬಳಕೆಯಲ್ಲಿ ಮಗ್ನರಾಗಿರುತ್ತಾರೆ. ಈಗ ಮಕ್ಕಳು ಮನೆಯಿಂದ ಹೊರಬರುವುದೇ ಹೂದೋಟದಲ್ಲಿ ದುಂಬಿಗಳು ಅಪರೂಪಕ್ಕೆ ಬಂದು ಹೋಗುವಂತೆ ಕಾಣುತ್ತಿದೆ. ಎಲ್ಲಿ ಹೋಯಿತು ನಾವು ಕಳೆದ ಆ ಬಾಲ್ಯ?
ನಮಗಿಂದು ಸಾಧನೆಯೊಂದಿಗೆ ಭಾವನೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದೆ ಹೋದರೆ ಮುಂದಿನ ತಲೆಮಾರಿಗೆ ತಮ್ಮ ಅಪ್ಪ – ಅಮ್ಮನನ್ನು ಹೊರತುಪಡಿಸಿ ಬೇರೆ ಯಾರ ಪರಿಚಯವೂ ಇರುವುದಿಲ್ಲ. ಅಂತಹ ಸಂದರ್ಭ ಬರುವ ಸಾಧ್ಯತೆ ಇದೆ. ಆದ್ದರಿಂದ ದಿನದಲ್ಲಿ ಒಂದಿಷ್ಟು ಸಮಯ ಮನುಷ್ಯರೊಂದಿಗೆ ನಗುವ, ಮಾತನಾಡುವ, ವ್ಯವಹರಿಸುವ ಸಂದರ್ಭವನ್ನು ಅಗತ್ಯವಾಗಿ ಸೃಷ್ಟಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಾಳಿನ ಸಮಾಜಕ್ಕೆ ನಾವು ಮನುಷ್ಯರ ಬದಲು ರೋಬೋಟ್‌ಗಳನ್ನು ಸೃಷ್ಟಿಸಿದಂತಾಗುತ್ತದೆ ಅಲ್ಲವೇ.
-ರಶ್ಮಿ
ಕೊಟೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.