ಹರೆಯದ ಮನಸುಗಳ ಕನಸಿನ ಗೂಡು
Team Udayavani, Oct 14, 2020, 9:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಿಲಿಪಿಲಿಗುಡುವ ಹಕ್ಕಿಗಳಿಗೊಂದು ಗೂಡು. ಗೂಡಿನ ತುಂಬಾ ಮಾತು ಮಂಥನ, ಸಿಹಿ ಪ್ರೀತಿ ಹನಿಯ ಸಿಂಚನ.
ನವ ಕನಸುಗಳಿಗೊಂದು ವಿಭಿನ್ನ ಗೋಪುರ. ಹೌದು, ಹೀಗೊಂದು ವಿಶೇಷ ತಾಣಕ್ಕೆ “ಹಕ್ಕಿ ಗೂಡು’ ಎನ್ನುವ ನಾಮಕರಣವಾಗಿದೆ.
ಹಾಗಂತ ಇಲ್ಲಿ ಹಕ್ಕಿಗಳಿರಬಹುದೇ? ಅಂತ ಯೋಚಿಸಿದರೆ ತಪ್ಪಾಗಬಹುದು. ಯಾಕೆಂದರೆ, ಈ ಗೂಡಿನ ತುಂಬಾ ರಟ್ಟೆ ಬಲಿತಿರುವ ತರುಣರ ಮಾತು ಚಿಲಿಪಿಲಿ ಸದ್ದಿನಂತೆ ಕೇಳಿಸುತ್ತಿರುವುದು.
ಸಂಜೆಯಾದರೆ ಒಂದಷ್ಟು ಯುವಕರು ಇಲ್ಲಿ ಒಟ್ಟು ಸೇರುತ್ತಾರೆ, ಕ್ರೀಡೆಯ ಬಗ್ಗೆ ಚರ್ಚಿಸುತ್ತಾರೆ, ಒಂದಷ್ಟು ತರಲೆ ಮಾತು, ಹರಟೆ ನಡೆಸುತ್ತಾ ಜತೆಯಾಗುತ್ತಾರೆ. ನೋಡೋದಕ್ಕೆ ಸರಳವಾಗಿ, ಹೊರವಲಯದಿಂದ ಪುಟಾಣಿ ಹಕ್ಕಿಗೂಡು ಬೃಹತ್ ಆಕಾರ ಪಡೆದಂತಿದೆ. ಆದರೆ ಒಳಹೊಕ್ಕರೆ ತನ್ಮಯತೆಯ ಭಾವ ಸೂಸುವ ಆಲಯದಂತಿದೆ.
ಅಪ್ಪಟ ನೈಜತೆ, ಪ್ರಕೃತಿದತ್ತವಾಗಿರುವ ವಸ್ತುಗಳನ್ನೇ ಬಳಸಿಕೊಂಡು, ಕಡಿಮೆ ಖರ್ಚಿನಲ್ಲಿ ಈ ಕೆಲಸವನ್ನು ಮಾಡಿರುವುದು ಸಂಘ ಶಕ್ತಿಯನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಿಂದಲೂ ಈ ರೀತಿಯ ಉಪಾಯವೊಂದಿದ್ದರೂ, ಈ ಬಾರಿಯ ಲಾಕ್‌ಡೌನ್ ಅದೇನೋ ರೀತಿಯ ವಿಶಿಷ್ಟ ಸಮಯವನ್ನು ಈ ಕೆಲಸಕ್ಕಾಗಿ ಮೀಸಲು ನೀಡಿದಂತಿತ್ತು. ಹೇಗಿದ್ದರೂ ಸಾಯಂಕಾಲವಾಗುತ್ತಿದ್ದಂತೆ ಎಲ್ಲ ಯುವಕರು ಒಟ್ಟು ಸೇರುತ್ತೇವೆ, ಎಷ್ಟೋ ಯುವಕರು ತಿಳಿ ಸಂಜೆಯಾದಂತೆ ಹೊರಗಡೆಯೋ, ಹೊಟೇಲ್ ಜಾಗದಲ್ಲೋ ಭೇಟಿಯಾಗುತ್ತಾರೆ.
ಕೂತಲ್ಲೇ ಹರಟೆ ಹೊಡೆಯುವವರೂ ಇದ್ದಾರೆ. ಹಾಗಂತ ನಾವು ವಿಶೇಷವಾಗಿ ಹರಟೆ ಹೊಡೆಯಲು ಜಾಗ ಕಲ್ಪಿಸೋಣ, ಎಲ್ಲರೂ ಜತೆಯಾಗೋಣ, ಆಟ ಅಭ್ಯಾಸದ ಬಳಿಕವೂ ವಿರಮಿಸಲು ಅವಕಾಶವಿದೆ. ಕ್ರೀಡಾಕೂಟ ನಡೆಸಿದರೆ ಆಗಮಿಸುವ ಕ್ರೀಡಾಳುಗಳಿಗೂ ತಯಾರಾಗಲು ಉತ್ತಮ ಜಾಗ ಸಿಕ್ಕಂತಾಗುತ್ತದೆ. ಹೀಗೆ ಹತ್ತಾರು ಕನಸು, ಆಲೋಚನೆಗಳ ಸುತ್ತ ಸುತ್ತಿದ ಯುವಕರ ತಂಡದ ಒಂದೊಳ್ಳೆ ಕಸರತ್ತು ಇದು. ಉಜಿರೆ ಪರಿಸರದ ಕುಂಜರ್ಪ ಫ್ರೆಂಡ್ಸ್ ಎನ್ನುವ ಕ್ರೀಡಾಸಕ್ತ ಯುವಕರ ತಂಡ, ಇಲ್ಲೊಂದಷ್ಟು ಸಮಾನ ಮನಸ್ಕರ ಒಗ್ಗೂಡುವಿಕೆಯ ಫಲಶ್ರುತಿಯಾಗಿ ಬೆಳಕು ಚೆಲ್ಲಿರುವ ಮನಮೋಹಕ ತಾಣವೇ “ಹಕ್ಕಿಗೂಡು’.
ಉಜಿರೆಯಲ್ಲಿರುವ ಕುಂಜರ್ಪ ಎನ್ನುವ ಪುಟ್ಟ ಜಾಗವನ್ನು ಹೊಕ್ಕಾಗ ಹಕ್ಕಿಗೂಡು ನಮ್ಮನ್ನು ಕೂಡ ಕೈ ಬೀಸಿ ಕರೆಯುವಂತಿದೆ. ಈಗಂತೂ ನವ ವಧುವಿನಂತೆ ಈ ಗೂಡಿಗೂ ಸಿಂಗರಿಸಲಾಗಿದೆ. ವರ್ಣಮಯ ವಿದ್ಯುತ್ ಬೆಳಕು ನೈಸರ್ಗಿಕ ಚಂದಕ್ಕೆ ಪುಷ್ಟಿ ಕೊಟ್ಟಂತಿದೆ. ಎಲ್ಲ ಯುವಕರು ಆಟ, ಹರಟೆಯ ಜತೆಗೆ ಸಂದೇಶ್ ಅವರ ಯೋಜನೆಯಂತೆ ಕೈ ಜೋಡಿಸಿ, ತಾವೇ ಕೆಲಸಗಾರರಂತೆ ಶ್ರಮಿಸಿ, ಒಟ್ಟಿನಲ್ಲಿ ಹಕ್ಕಿ ಗೂಡು ವಿಭಿನ್ನವಾಗಿ ರೂಪುಗೊಂಡಿದೆ. ಒಬ್ಬರ ಯೋಜನೆಗೆ ಮತ್ತೂಂದಷ್ಟು ಮನಸುಗಳೂ ಸೇರಿ, ಗೆಳೆಯರ ಈ ಲಾಕ್‌ಡೌನ್ ಕಾರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ಹರೆಯದ ಮನಸುಗಳ ಈ ಕಲರವದ ಕನಸಿನ ಗೋಪುರವನ್ನು ಕಣ್ತುಂಬಿಕೊಳ್ಳಲೇಬೇಕು.
ಪ್ರಜ್ಞಾ ಓಡಿಲ್ನಾಳ, ಎಸ್‌ಡಿಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.