ಪ್ರತಿಯೊಂದರ ಅಂತ್ಯ ಹೊಸತನಕ್ಕೆ ಮುನ್ನುಡಿ
Team Udayavani, Jun 26, 2020, 5:07 PM IST
ಖ್ಯಾತ ವಿಜ್ಞಾನಿ ಥೋಮಸ್ ಅಲ್ವ ಎಡಿಸನ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ಒಮ್ಮೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಫ್ಯಾಕ್ಟರಿಯಲ್ಲಿ ಕೆಮಿಕಲ್ ದಾಸ್ತಾನುಗಳೇ ಹೆಚ್ಚಿದ್ದ ಕಾರಣ ಬೆಂಕಿಯ ಜ್ವಾಲೆ ಫ್ಯಾಕ್ಟರಿಯ ಹತ್ತು ಕಟ್ಟಡಗಳಿಗೂ ಪಸರಿಸಿತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಹಲವು ಅಗ್ನಿಶಾಮಕ ವಾಹನಗಳು ಬಿಡುವಿಲ್ಲದೆ ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಿದ್ದವು. ಆದರೆ ಅವರೆಷ್ಟೆ ಪ್ರಯತ್ನಪಟ್ಟರೂ ಬೆಂಕಿ ಹತೋಟಿಗೆ ಮಾತ್ರ ಬರಲಿಲ್ಲ. ಇವೆಲ್ಲವನ್ನೂ ಹತ್ತಿರದಲ್ಲೇ ನಿಂತು ನೋಡುತ್ತಿದ್ದರು ಥೋಮಸ್ ಎಡಿಸನ್. ಇಷ್ಟೆಲ್ಲ ನಡೆದರೂ ಏನೂ ಆಗದಂತೆ ಶಾಂತ ಚಿತ್ತದಿಂದ ನಿಂತಿದ್ದ ಇವರನ್ನು ನೋಡಿದ ಅವರ ಮಗ , ಅಪ್ಪ ನಮ್ಮ ಫ್ಯಾಕ್ಟರಿ ಸುಟ್ಟು ಕರಕಲಾಗುತ್ತಿದೆ ಎಂದ. ಇದಕ್ಕೆ ಉತ್ತರಿಸಿದ ಥೋಮಸ್ ಎಡಿಸನ್ ಅವರು, ಹೌದು ಮಗನೆ. ಕೇವಲ ಫ್ಯಾಕ್ಟರಿ ಮಾತ್ರ ಇಲ್ಲಿ ಸುಟ್ಟು ಬೂದಿಯಾಗುತ್ತಿಲ್ಲ. ಅದರ ಜತೆಗೆ ನಾವು ಈವರೆಗೆ ಆ ಸ್ಥಳದಲ್ಲಿ ಮಾಡಿದ ತಪ್ಪುಗಳೂ ಬೂದಿಯಾಗುತ್ತಿವೆ. ನೀನು ಬೇಗ ಹೋಗಿ ನಿನ್ನಮ್ಮ ಮತ್ತು ಆಕೆಯ ಸ್ನೇಹಿತರನ್ನು ಕರೆದು ಬಾ. ಅವರಿಗೆ ಮತ್ತೆಂದೂ ಇಂತಹ ಬೆಂಕಿ ನೋಡಲು ಸಿಗಲಿಕ್ಕಿಲ್ಲ ಎಂದು ಬಿಟ್ಟರು.
ಮರುದಿನ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ನಡೆದ ಬೆಂಕಿ ಆಕಸ್ಮಿಕದ ಸಂದರ್ಭ ನಾನಲ್ಲೇ ಇದ್ದರೂ ನನ್ನಿಂದ ಓಡಾಡಿಕೊಂಡು ಬೆಂಕಿ ನಂದಿಸಲು ಸಾಧ್ಯವಿರಲಿಲ್ಲ. ನನಗೀಗ ವಯಸ್ಸಾಗಿದೆ. ಆದರೆ ಸುಟ್ಟು ಕರಕಲಾದ ಕಟ್ಟಡದ ಜಾಗದಲ್ಲೇ ಮತ್ತೆಲ್ಲವನ್ನೂ ಹೊಸದಾಗಿ ಆರಂಭಿಸುತ್ತೇನೆಂಬ ವಿಶ್ವಾಸ ನನಗಿದೆ ಎಂದರು. ಮಾತಿನಂತಯೇ ಕೆಲ ದಿನಗಳಲ್ಲೇ ಮತ್ತೆ ಕೆಲಸ ಆರಂಭಿಸಿದರು.
ಈ ಘಟನೆ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ. ಅದೆಷ್ಟೋ ಬಾರಿ ನಾವು ಸೋತಿದ್ದೇವೆ, ನಮ್ಮ ಆಸೆಗಳು ಈಡೇರದಿದ್ದಾಗ, ಪಟ್ಟ ಪ್ರಯತ್ನಗಳೆಲ್ಲ ವಿಫಲವಾದಾಗ ದುಃಖ ಪಟ್ಟಿದ್ದೇವೆ. ಆದರೆ ನೆನಪಿಡಿ ಸಾಧಕರಾರೂ ಸೋತಾಗ ಅಳುವುದಾಗಲಿ, ಹತಾಶೆಗೊಂಡು ಪ್ರಯತ್ನ ನಿಲ್ಲಿಸಿದವರಾಗಲೀ ಅಲ್ಲವೇ ಅಲ್ಲ. ಬದಲಾಗಿ ಮತ್ತಷ್ಟು ಪ್ರಯತ್ನದೊಂದಿಗೆ ಗುರಿ ಮುಟ್ಟಿದವರು. ಮಾಡಿಯೇ ತೀರುತ್ತೇನೆಂಬ ದೃಢ ವಿಶ್ವಾಸದೊಂದಿಗೆ ಸವಾಲುಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ. ನೆನಪಿರಲಿ ಪ್ರತಿಯೊಂದರ ಅಂತ್ಯ ಹೊಸತೊಂದರ ಆರಂಭಕ್ಕೆ ಮುನ್ನುಡಿ ಎಂಬ ಅರಿವು ನಮ್ಮಲ್ಲಿರಬೇಕು.
ಪಿ. ಹೆಗಡೆ ಉತ್ತರ ಕನ್ನಡ