Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ
Team Udayavani, Sep 25, 2024, 1:21 PM IST
ರಾತ್ರಿ ಹಗಲು ಬರೀ ಜವಾಬ್ದಾರಿ, ಮುಂದಿನ ಭವಿಷ್ಯ, ಸ್ಪರ್ಧೆ, ಓದು, ಜೀವನದಲ್ಲಿ ಸೆಟಲ್ ಆಗುವ ಚಿಂತೆಗಳನ್ನೇ ಹೊತ್ತು ಜೀವನ ಭಾರವಾಗಿರಿಸಿಕೊಂಡ ನಮಗೆಲ್ಲರಿಗೂ ತುಸು ನೆಮ್ಮದಿಯ ನಗು ಚೆಲ್ಲಲು ಗೆಳೆತನವೇ ಆಸರೆ. ಎಲ್ಲೋ ಹುಟ್ಟಿ ಇನ್ನೆಲ್ಲೋ ಬೆಳೆದು ಹೇಗೂ ಒಂದೆಡೆ ಸೇರಿ ಅಲ್ಲಿ ಸ್ನೇಹವೆಂಬ ಬಂಧ ಬೆಳೆಯುತ್ತದೆ. ಪ್ರತಿಯೊಂದು ಕಷ್ಟ ಸುಖದಲ್ಲಿ ಭಾಗಿಯಾಗುವ ಈ ಸಂಬಂಧವೇ ಗೆಳೆತನ.
ಓದಿಗಾಗಿ ಒಂದೆಡೆ ಬಂದ ಎಷ್ಟೋ ಜನರ ನಡುವೆ ಒಂದೇ ಮನಸ್ಥಿತಿವುಳ್ಳ ನಮ್ಮ ಮೂವರ (ರಾಗಿಣಿ, ಮೈಮುನ್, ಶಿಲ್ಪಾ) ಗೆಳೆತನ ಆರಂಭವಾಯಿತು. ಓದಿನ ವಿಷಯ, ವಿಭಾಗಗಳು ಬೇರೆ ಬೇರೆಯಾದರು ಮನಸ್ಸುಗಳು ಮಾತ್ರ ಒಂದೇ. ಇದೇ ಕಾರಣಕ್ಕೆ ನಾವು ಹಾಸ್ಟೆಲ್‌ನಲ್ಲಿ ತ್ರಿಮೂರ್ತಿಗಳೆಂದೇ ಪ್ರಸಿದ್ಧರು.
ಯಾವಾಗಲೂ ನಾವು ಮೂವರು ಸೇರಿ ಮಾತನಾಡುವಾಗ ಪ್ರವಾಸ ಹೋಗುವ ವಿಚಾರ ಪ್ರಸ್ತಾವವಾಗುತ್ತಿತ್ತು. ಪ್ರತೀ ಬಾರಿಯೂ ಈ ಕುರಿತು ಬರೀ ಯೋಚಿಸಿ ಯೋಜನೆ ಹಾಕುವುದು ಮಾತ್ರ ನಡೆಯುತ್ತಿತ್ತು. ಆದರೆ ಕೊನೆಗೂ ಮೊದಲನೆಯ ಸೇಮಿಸ್ಟರ್ ಪರೀಕ್ಷೆ ಮುಗಿದ ಬಳಿಕ ಸಿಗುವ ರಜೆಗೆ ಪ್ರವಾಸ ಹೋಗುವುದಾಗಿ ತೀರ್ಮಾನಿಸಿದೆವು. ಹಾಸ್ಟೆಲ್‌ನಲ್ಲಿ ಎಲ್ಲರೂ ಪರೀಕ್ಷೆ ಮುಗಿದ ಬಳಿಕ ಮನೆಗೆ ಹೋಗುವ ಖುಷಿಯಲ್ಲಿದ್ದರೆ ನಾವು ಮೂವರು ಮಾತ್ರ ಪ್ರವಾಸಕ್ಕೆ ಹೋಗಲು ಕಾತುರತೆಯಿಂದ ಕಾಯುತ್ತಿದ್ದೆವು.
ರಜೆ ಸಿಕ್ಕ ದಿನ ರಾತ್ರಿ ಬಟ್ಟೆಗಳನೆಲ್ಲಾ ಪ್ಯಾಕ್ ಮಾಡಿ ಪ್ರವಾಸಕ್ಕೆ ಎಲ್ಲ ರೀತಿಯ ಸಿದ್ಧತೆ ಪೂರ್ಣವಾಗಿತ್ತು. ನಾನು ನನ್ನ ಜಿಲ್ಲೆಯನ್ನು ಬಿಟ್ಟು ಈವರೆಗೆ ಬೇರೆಡೆ ಪ್ರಯಾಣಿಸದೇ ಇರುವುದರಿಂದ ನನಗಿದು ಒಂದು ರೀತಿಯ ಹೊಸ ಅನುಭವ. ಮರುದಿನ ಬೆಳಿಗ್ಗೆ 5 ಗಂಟೆ ನಮ್ಮ ಪ್ರಯಾಣ ಭಟ್ಕಳ ಕಡೆಗೆ ಆರಂಭವಾಯಿತು. ನಮ್ಮ ಗಮ್ಯಸ್ಥಾನ ತಲುಪಲು ಒಂದು ದಿನವೇ ಆಗಿತ್ತು. ಅದರಲ್ಲೂ ರಾಗಿಣಿ ಮತ್ತು ನನಗೆ ಬಸ್‌ನಲ್ಲಿ ಕೊನೆಯ ಸೀಟ್ ಸಿಕ್ಕಿದ್ದರಿಂದ ರಸ್ತೆಯಲ್ಲಿ ಬರುವ ಪ್ರತೀ ಸ್ಪೀಡ್ ಬ್ರೇಕರ್‌ಗಳ ಹೊಡೆತಕ್ಕೆ ಹಾರುತ್ತಾ, ಬೀಳುತ್ತಾ, ನಗುತ್ತಾ ಪ್ರಯಾಣ ಪ್ರಯಾಸವಾಗಿತ್ತು. ರಾತ್ರಿ 10 ಗಂಟೆಗೆ ಭಟ್ಕಳದಲ್ಲಿ ಬಸ್‌ನಿಂದ ಇಳಿದಾಗ ನಮಗಾಗಿ ಸ್ನೇಹಿತೆ ಮೈಮುನ್ ಆಟೋ ರಿಕ್ಷಾದೊಂದಿಗೆ ಸಿದ್ಧಳಿದ್ದಳು.
ಪ್ರಯಾಣಿಸಿ ಸುಸ್ತಾಗಿದ್ದ ನಾವು ಬಿಸಿ-ಬಿಸಿ ಮೊಟ್ಟೆ ಬುರ್ಜಿ ಪರೋಟ ಸವಿದು ದಿನದ ಅನುಭವ ಹಂಚಿಕೊಳ್ಳುತ್ತಾ ನಿದ್ರೆಗೆ ಜಾರಿದೆವು.
ಮರುದಿನದಿಂದ ನಮ್ಮ ಕನಸಿನ ಸುತ್ತಾಟ ಆರಂಭ. ನಮ್ಮ ಮೊದಲ ಭೇಟಿ ಭಟ್ಕಳದ ಸಮೀಪದ ಮುರಡೇಶ್ವರಕ್ಕೆ. ಆ ದಿನ ಮುರಡೇಶ್ವರ, ಭಟ್ಕಳ, ಉಡುಪಿ, ಕುಂದಾಪುರದಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಮುರಡೇಶ್ವರದ ಉದ್ಯಾನವನ ಹಾಗೂ ಕಡಲ ನೀರಿನ ಅಲೆಗಳ ಅಭರ್ಟ ನೋಡುಗರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ರಭಸದಿಂದ ಬರುತ್ತಿದ ಪ್ರತೀ ಅಲೆಗಳು ಆ ಶಿವನ ಮೂರ್ತಿಯನ್ನು ಚುಂಬಿಸಿ ಶಾಂತವಾಗಿ ಹೋಗುವಂತೆ ಭಾಸವಾಗುತ್ತಿತು. ಹೀಗೆ ಅಲಿದ್ದ ಭೂ ಕೈಲಾಸ ಗವಿ, ಉದ್ಯಾನವನ ನೋಡಿ ದಿನ ಮುಗಿಸಿದೆವು.
ಮರುದಿನ ಮಂಗಳೂರಿನಲ್ಲಿರುವ ಸ್ನೋ ಫ್ಯಾಂಟಸಿಗೆ ನಮ್ಮ ಭೇಟಿ. ಈ ಹೆಸರೇ ಹೇಳುವಂತೆ ಸ್ನೋ ಫ್ಯಾಂಟಸಿ ಒಳಗೆ ಎಲ್ಲೇ ನೋಡಿದರು ಹಿಮ. ಜಾಕೆಟ್ ಇಲ್ಲದೇ ಇದರೊಳಗೆ ಹೋಗಲು ಸಾಧ್ಯವೇ ಇಲ್ಲ. ಇರುವುದು ಮಂಗಳೂರಿನ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ. ಇಲ್ಲಿ ಮೇಲಿನಿಂದ ಬೀಳುವ ಮಂಜು, ಸಂಗೀತ, ಹಿಮ ಪ್ರಾಣಿಗಳ ಚಿತ್ರ, ಆಕೃತಿ ಹೀಗೆ ಹಿಮ ಕಣಿವೆಯೊಳಗೆ ಓಡಾಡುವ ಅದ್ಭುತ ಅನುಭವನ್ನು ಅಲ್ಲಿ ಪಡೆದುಕೊಂಡೆವು. ಒಟ್ಟಿನಲ್ಲಿ ಇಲ್ಲಿ ಕೇವಲ 530 ರೂ. ಗೆ ಸ್ವಿಝರ್‌ಲ್ಯಾಂಡ್‌ನ ಅನುಭವ ಪಡೆದೆವು ಎಂದರೆ ತಪ್ಪಾಗಲಾರದು. ಇದನ್ನೆಲ್ಲಾ ಮುಗಿಸಿ ಮನೆ ಸೇರುವಾಗ ರಾತ್ರಿಯಾಗಿತ್ತು.
ಮೂರನೇ ದಿನ ಗೆಳತಿಯ ಊರನ್ನು ಸುತ್ತಬೇಕು ಎಂದು ಗೆಳತಿಯ ಸ್ಕೂಟಿಯಲ್ಲಿ ಮೂವರು ಹೊರಟೆವು. ಜಿಟಿ ಜಿಟಿ ಮಳೆಯಲ್ಲಿ ಎರಡು ಬದಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳ ನಡುವೆ ಹಾದು ಹೋಗುವ ರಸ್ತೆಯಲ್ಲಿ ಪ್ರಯಾಣಿಸುವ ಸೌಂದರ್ಯವನ್ನು ವರ್ಣಿಸಲಸಾಧ್ಯ. ಬಗೆ ಬಗೆಯ ಮರಗಳು, ಎತ್ತ ನೋಡಿದರೂ ಹಚ್ಚ ಹಸುರಿನ ವಾತಾವರಣ. ಇಂತಹ ಸ್ಥಳದಲ್ಲಿ ಆತ್ಮೀಯ ಸ್ನೇಹಿತರೊಂದಿಗೆ ಸುತ್ತುವುದೇ ಒಂದು ಅದ್ಭುತ ಅನುಭವ. ಸಂಜೆ ಸಮಯಕ್ಕೆ ಊರಿನ ಸಮೀಪವಿರುವ ಬೀಚ್‌ಗೆ ಭೇಟಿ ನೀಡಿ ಅಲೆಗಳ ಸೌದರ್ಯವನ್ನು ನೋಡಿ ಈ ಸುಮಧುರ ಕ್ಷಣಗಳನ್ನು ಫೋನ್ ಕೆಮರಾದಲ್ಲಿ ಸೆರೆ ಹಿಡಿದಿಟ್ಟುಕೊಂಡೆವು. ಕೊನೆಯ ದಿನ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದು, ಕನಕ ಕಿಂಡಿಯನ್ನು ನೋಡಿ ಮನೆ ಸೇರುವಾಗ ಕತ್ತಲೆ ಆವರಿಸಿತು. ಮರುದಿನ ಮತ್ತೆ ನಮ್ಮ ಹಾಸ್ಟೆಲ್‌ನತ್ತ ಪ್ರಯಾಣ ಆರಂಭ.
ಜೀವನ ಎಂಬುದು ಎಷ್ಟೊಂದು ಅನಿಚ್ಛಿತವಾದದ್ದು, ನಮ್ಮ ಪ್ರಾಣ ಪಕ್ಷಿ ಯಾವಾಗ ಬೇಕಾದರೂ ಹಾರಿ ಹೋಗಬಹುದು. ಇರುವಷ್ಟು ದಿನ ನಮ್ಮ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅದರಲ್ಲೂ ನಮಗಾಗೇ ಒಂದಷ್ಟು ಸಮಯವನ್ನು ಮೀಸಲಿಟ್ಟು ನಮಗಾಗಿ ನಾವು ಜೀವಿಸಿ, ಪ್ರಕೃತಿಯ ಆನಂದವನ್ನು ಅನುಭವಿಸುವುದನ್ನು ಮರೆಯಬಾರದು. ಈ ಪ್ರವಾಸ ನಮ್ಮ ಸ್ನೇಹದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಪ್ರವಾಸ ನಮ್ಮ ಜೀವನದ ಸಿಹಿ ನೆನಪಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
- ಶಿಲ್ಪಾ ಪವಾರ
ವಿಜಯಪುರ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.