ಕ್ಷೀರ ಕಾಂತ್ರಿಗೆ ಮುನ್ನುಡಿ ಬರೆದ: ವರ್ಗೀಸ್ ಕುರಿಯನ್
Team Udayavani, Aug 29, 2020, 8:30 AM IST
ಭಾರತದ ಕ್ಷೀರ ಕ್ರಾಂತಿಯ ಜನಕ ವರ್ಗೀಸ್ ಕುರಿಯನ್ 1921ರ ನವೆಂಬರ್ 26ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಜನಿಸಿದರು.
ಜಗತ್ತಿನಲ್ಲೇ ಭಾರತ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ದೇಶ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳಲು ಈ ಕೇರಳ ಮೂಲದ ಎಂಜಿನಿಯರ್ ಕೊಡುಗೆ ಗಣನೀಯ.
ಭಾರತೀಯ ಕ್ಷೀರ ಅಭಿವೃದ್ಧಿ ಸಮಿತಿಯ ಸ್ಥಾಪಕ ಮತ್ತು ಮೊದಲ ಚೇರ್ಮನ್ ಆಗಿದ್ದ ಕುರಿಯನ್ ಕ್ಷೀರ ಕ್ರಾಂತಿಯ ಮೂಲಕ ಭಾರತದಲ್ಲಿ ಹೊಸದೊಂದು ಯುಗವನ್ನೇ ಸೃಷ್ಟಿಸಿದ ಪರಿ ರೋಚಕ.
1970ರ ಜನವರಿ 13ರಂದು ʼಆಪರೇಷನ್ ಫ್ಲಡ್’ ಹೆಸರಿನಲ್ಲಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿ ಯೋಜನೆಗೆ ನಾಂದಿ ಹಾಡಲಾಯಿತು.
ಇದು ಭಾರತದ ನ್ಯಾಶನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್(ಎನ್‌ಡಿಡಿಬಿ)ನ ಮಹತ್ವಾಂಕಾಕ್ಷಿ ಕಾರ್ಯಕ್ರಮವಾಗಿತ್ತು. ಇದು ಭಾರತದ ಇತಿಹಾಸವನ್ನೇ ಹೇಗೆ ಬದಲಾಯಿಸಿ ಬಿಟ್ಟಿತು ಎಂದರೆ ಹಾಲಿನ ಕೊರತೆಯಿರುವ ದೇಶ ಎನ್ನುವ ಪಟ್ಟಿಯಿಂದ ಅತೀ ದೊಡ್ಡ ಹಾಲು ಉತ್ಪಾದಿಸುವ ದೇಶ ಎನ್ನುವ ಮಟ್ಟಕ್ಕೆ ಬಂದು ತಲುಪಿತು.
ಸುಮಾರು ಮೂವತ್ತು ವರ್ಷಗಳಲ್ಲಿ ದೇಶದಲ್ಲಿ ಪ್ರತಿ ವ್ಯಕ್ತಿಗೆ ದೊರೆಯುತ್ತಿದ್ದ ಹಾಲಿನ ಪ್ರಮಾಣ ದುಪ್ಪಟ್ಟಾಗಿ ವೃದ್ಧಿಸಲು ಇದು ಕಾರಣವಾಯಿತು. ಜತೆಗೆ ಹೈನುಗಾರಿಕೆ ಭಾರತದ ಅತೀ ದೊಡ್ಡ ಸುಸ್ಥಿರ ಗ್ರಾಮೀಣ ಉದ್ಯೋಗ ಸೃಜಿಸುವ ಕ್ಷೇತ್ರವನ್ನಾಗಿಸಿತು. ದೇಶೀಯವಾಗಿ ಕ್ಷೀರೋತ್ಪಾದನೆಯ ಶೃಂಖಲೆ ರಚಿಸುವ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಯಿತು. ಗ್ರಾಮೀಣ ಭಾಗದಲ್ಲಿ ಉತ್ಪಾದಿಸಲ್ಪಡುವ ಹಾಲನ್ನು ನಗರಗಳಿಗೆ ತಲುಪಿಸುವ ಮೂಲಕ ಹೈನುಗಾರರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡುವಲ್ಲಿ ಯೋಜನೆ ಯಶಸ್ಸು ಕಂಡಿತು. ಹೀಗೆ ನಡೆದ ಕ್ಷೀರ ಕ್ರಾಂತಿಗೆ ನೇತೃತ್ವ ನೀಡಿದವರೇ “ಭಾರತದ ಹಾಲು ವಿತರಕ’ ಎಂದೇ ಚಿರ ಪರಿಚಿತರಾದ ವರ್ಗೀಸ್ ಕುರಿಯನ್.
ಅಮುಲ್ ಜತೆಗಿನ ನಂಟು
ಹಾಲು ಉತ್ಪಾದಕ ಸಹಕಾರ ಸಂಘ ಅಮುಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್)ನ ಸ್ಥಾಪನೆ ದೇಶೀಯ ಚರಿತ್ರೆಯಲ್ಲಿ ಒಂದು ಮೈಲುಗಲ್ಲಾಗಿ ಗುರುತಿಸಲ್ಪಡುತ್ತದೆ. 1946ರಂದು ಗುಜರಾತ್‌ನ ಆನಂದ್‌ನಲ್ಲಿ ಅಮುಲ್ ಅನ್ನು ಆರಂಭಿಸಲಾಯಿತು. ಮುಂದೆ ಇದು ಕ್ಷೀರ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿತು. 1949ರಲ್ಲಿ ಕುರಿಯನ್ ಅಮುಲ್ ಸಂಸ್ಥೆಗೆ ಕಾಲಿಟ್ಟರು. ಮುಂದೆ 1994ರಲ್ಲಿ ಅಮುಲ್‌ನ ಚೇರ್ಮನ್ ಆದರು. 2010-11ರ ಸಾಲಿನಲ್ಲಿ ಭಾರತ ಜಗತ್ತಿನ ಒಟ್ಟು ಹಾಲು ಉತ್ಪಾದನೆಯ ಶೇ. 17 ಪಾಲು ಹೊಂದಿತ್ತು.
ನಿಲುವು
ಸಾಮಾನ್ಯವಾಗಿ ರೈತರು ಬಡವರಾಗಿರುತ್ತಾರೆ. ಅವರ ಉತ್ಪನ್ನಗಳಿಗೆ ಸೂಕ್ತ ಪ್ರತಿಫಲ ನೀಡಲು ನಾವು ಮುಂದಾಗಬೇಕು. ಆದ್ದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೆ ಆದಾಯ ನೇರವಾಗಿ ರೈತರಿಗೆ ತಲುಪುವ ವ್ಯವಸ್ಥೆಯನ್ನು ನಾವು ರೂಪಿಸಬೇಕದ ಅಗತ್ಯವಿದೆ ಎನ್ನುವುದು ಕುರಿಯನ್ ಅವರ ನಿಲುವಾಗಿತ್ತು. ಅದರಂತೆ “ಆಪರೇಷನ್ ಫ್ಲಡ್’ ಹೆಸರಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳು ಹುಟ್ಟಿಕೊಂಡವು.
ಗುಜರಾತ್‌ನ ಅಮುಲ್ ಮಾದರಿಯಲ್ಲೇ ದೇಶದ ಇತರ ರಾಜ್ಯಗಳಲ್ಲಿಯೂ ವಿವಿಧ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು. ದೇಶದಲ್ಲೇ ರೈತರ ಮತ್ತು ಗ್ರಾಹಕರ ನಡುವಿನ ನೇರ ವಹಿವಾಟನ್ನು ಇಷ್ಟೊಂದು ಸಮರ್ಪಕವಾಗಿ ನಿಭಾಯಿಸಿ ಮತ್ತೂಂದು ಸಂಘಟನೆಯ ಉದಾಹರಣೆ ಸಿಗುವುದು ಕಷ್ಟ. ಈ ಕಾರಣಕ್ಕೆ ಭಾರತದ ಲಕ್ಷಾಂತರ ಹೈನುಗಾರರ ಬದುಕು ಹಸನಾಗಿದೆ. ಇನ್ನೊಂದು ವಿಶೇಷತೆ ಎಂದರೆ ಗ್ರಾಮೀಣ ಭಾಗದ ಕೆಲವು ಹೈನುಗಾರರ ಮನೆಗಳಲ್ಲಿ ಇಂದಿಗೂ ಕುರಿಯನ್ ಅವರ ಭಾವಚಿತ್ರ ಕಾಣಬಹುದು. ಬರದ ಕರಿಛಾಯೆ ಆವರಿಸಿದ್ದ ಕೋಲಾರ, ತುಮಕೂರಿನಲ್ಲಿ ರೈತರ ಕೈ ಹಿಡಿದಿದ್ದು ಇದೇ ಹೈನುಗಾರಿಕೆ.
ʼಆಪರೇಷನ್ ಫ್ಲಡ್’ನ ಮುಖ್ಯ ಉದ್ದೇಶ
ಹಾಲಿನ ಉತ್ಪನ್ನಗಳ ಪ್ರಮಾಣ ಹೆಚ್ಚಳ
ಗ್ರಾಮೀಣ ಆದಾಯ ಹೆಚ್ಚಳ
ಗ್ರಾಹಕರಿಗೆ ನ್ಯಾಯಯುತ ಬೆಲೆ
ಹಾಲಿನ ಸ್ಥಿರ ಪೂರೈಕೆಯ ಖಾತ್ರಿ
ಪ್ರಧಾನಿಯಿಂದ ಮೆಚ್ಚುಗೆ
ಕುರಿಯನ್ 1948ರಲ್ಲಿ ಆನಂದ್ ನಗರದಲ್ಲಿ ಹಾಲಿನ ಉತ್ಪನ್ನ ತಯಾರಿಸುವ ಸಣ್ಣ ಕಾರ್ಖಾನೆಯ ಕೆಲಸಕ್ಕೆ ಸೇರಿದ್ದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ಗಮನಿಸಿದ ಕುರಿಯನ್ ಅದಕ್ಕಾಗಿ ಏನಾದರೂ ಮಾಡಲೇಬೇಕೆಂಬ ಉದ್ದೇಶದಿಂದ ಕಾರ್ಯ ಪ್ರವೃತ್ತರಾದರು. ಹೀಗೆ ಅವರು ಡೇರಿ ಅಭಿವೃದ್ಧಿಯ ಸಹಕಾರಿ ಮಾದರಿಯನ್ನು ಭಾರತದ ಅತೀ ದೊಡ್ಡ ಮತ್ತು ಯಶಸ್ವಿ ಉದ್ಯಮವನ್ನಾಗಿ ಪರಿವರ್ತಿಸಿದರು. ಅಮುಲ್ ಕಾರ್ಖಾನೆಯನ್ನು ಉದ್ಘಾಟಿಸಲು ಬಂದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಕುರಿಯನ್ ಅವರ ಕಾರ್ಯವನ್ನು ಮೆಚ್ಚಿ ಆಲಂಗಿಸಿಕೊಂಡಿದ್ದರು.
ಎಮ್ಮೆ ಹಾಲು, ಹಾಲಿನ ಹುಡಿಯ ಪರಿಚಯ
ಮೊದಲ ಬಾರಿಗೆ ದೇಶದಲ್ಲಿ ಎಮ್ಮೆ ಹಾಲು ಮತ್ತು ಹಾಲಿನ ಹುಡಿಯನ್ನು ಪರಿಚಯಿಸಿದ ಕೀರ್ತಿ ಕುರಿಯನ್ ಅವರಿಗೆ ಸಲ್ಲುತ್ತದೆ. ಕುರಿಯನ್ ಅವರಿಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಉತ್ತಮ ಬೆಂಬಲ ನೀಡಿದ್ದರು.
ಕುರಿಯನ್ ಸಾಧನೆ ಪರಿಗಣಿಸಿ ಹಲವು ವಿವಿಗಳು ಗೌರವ ಡಾಕ್ಟರೇಟ್ ನೀಡಿವೆ. ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ರಾಮನ್ ಮ್ಯಾಗಸ್ಸೆ ಪುರಸ್ಕಾರ (1963)
ಪದ್ಮಶ್ರೀ (1965)
ಪದ್ಮ ಭೂಷಣ (1966)
ವಿಶ್ವ ಆಹಾರ ಪ್ರಶಸ್ತಿ (1989)
ಕೃಷಿ ರತ್ನ (1986)
ಪದ್ಮ ವಿಭೂಷಣ (1999)
ರಮೇಶ್ ಬಿ. ಕಾಸರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.