Ashadha Month: ಆಷಾಢ ಮಾಸದ ವಿಶೇಷತೆ
Team Udayavani, Sep 7, 2024, 12:15 PM IST
ಚಾಂದ್ರಮಾನದ 12 ಮಾಸಗಳಲ್ಲಿ ಆಷಾಢ ನಾಲ್ಕನೆಯದ್ದು. ಆಷಾಢ ಎಂಬ ಹೆಸರು ಪೂರ್ವಾಷಾಢ ಮತ್ತು ಉತ್ತರಾಷಾಢ ಎಂಬ ನಕ್ಷತ್ರಗಳಿಂದ ಬಂದಿದೆ ಎನ್ನಲಾಗುತ್ತದೆ.
ಪುರಾಣ ಕತೆಗಳ ಪ್ರಕಾರ ಆಷಾಢಳು ಇಂದ್ರ ಲೋಕದ ದೇವತೆಯಾಗಿದ್ದು, ಒಂದು ಬಾರಿ ನಾಗಕನ್ಯೆಯ ರೂಪವನ್ನು ಧರಿಸಿ ಶಿವನನ್ನು ನೋಡುವ ಸಲುವಾಗಿ ಕೈಲಾಸಕ್ಕೆ ಬರುತ್ತಾಲೆ. ಅಲ್ಲಿ ಧ್ಯಾನಮಗ್ನನಾಗಿದ್ದ ಶಿವನನ್ನು ಕಂಡು ಆಷಾಢಳು ಪಾರ್ವತಿಯ ರೂಪವನ್ನು ಧಾರಣೆ ಮಾಡಿ ಶಿವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ಇದನ್ನು ಅರಿತ ಶಿವ ಕ್ರೋಧಗೊಂಡು ತನ್ನ ತ್ರಿಶೂಲದಿಂದ ಆಕೆಯನ್ನು ದೂರಸರಿಸಿ ಭೂಲೋಕದಲ್ಲಿ ಕಹಿಯಾದ ಬೇವಿನ ಮರವಾಗಿ ಹುಟ್ಟು ಎಂದು ಶಾಪ ಕೊಡುತ್ತಾನೆ. ಬಳಿಕ ಆಷಾಢಳಿಗೆ ತನ್ನ ತಪ್ಪಿನ ಅರಿವಾಗಿದ್ದು, ಇದನ್ನು ಗಮನಿಸಿದ ಶಿವನು ಆಕೆಗೆ ಬೇವಿನ ಮರವಾದರೂ ಭೂಲೋಕದಲ್ಲಿ ಪೂಜೆಗೆ ಅರ್ಹಳಾಗು ಎಂದು ಆಶೀರ್ವಾದ ನೀಡುತ್ತಾನೆ. ಈ ರೀತಿಯಾಗಿ ಆಕೆ ಭೂಮಿಯಲ್ಲಿ ಪೂಜೆಗೆ ಅರ್ಹಳಾದಳು ಎಂಬ ಪ್ರತೀತಿಯಿದೆ.
ಇನ್ನೊಂದು ಕಥೆಯ ಪ್ರಕಾರ ಹಿಂದೊಮ್ಮೆ ಇಂದ್ರದೇವನು ಋಷಿ ಗೌತಮನಿಂದ ಶಾಪಕ್ಕೆ ಒಳಗಾದಗ ಆಷಾಢದ ನಾಲ್ಕು ಸೋಮವಾರ ಸೋಮೇಶ್ವರನ ವ್ರತವನ್ನು ಕೈಗೊಂಡು ಶಾಪ ಮುಕ್ತನಾದ ಎಂಬ ಪ್ರತಿತಿಯಿದೆ. ಇಷ್ಟು ಮಾತ್ರವಲ್ಲದೇ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಇದೇ ಮಾಸದಲ್ಲಿ ಹೇಳಿದ್ದ ಎಂದೂ, ಗಂಗೆಯು ಭೂಮಿಗೆ ಇದೇ ಮಾಸದಲ್ಲಿ ಹರಿದು ಬಂದಳು ಎಂಬ ಪ್ರತೀತಿ ಇದೆ. ಮಹಾ ಪತಿವ್ರತೆಯಾದ ಅನುಸೂಯ ದೇವಿಯು ಈ ಮಾಸದ ನಾಲ್ಕು ಸೋಮವಾರ ಶಿವನ ವ್ರತ ಕೈಗೊಂಡಿದ್ದಳು ಎನ್ನಲಾಗುತ್ತದೆ.
ಆಷಾಢ ಮಾಸದಲ್ಲಿ ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ತನ್ನ ಪಥವನ್ನು ಬದಲಾವಣೆ ಮಾಡಿ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಹೀಗಾಗಿ ಈ ಮಾಸವು ದಕ್ಷಿಣಾಯಣದ ಪ್ರಾರಂಭವನ್ನು ಸೂಚಿಸುತ್ತದೆ. ಇದನ್ನು ಶೂನ್ಯಮಾಸ ಎಂದೂ ಕರೆಯಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ದೇವಾನುದೇವತೆಗಳು ಉತ್ತರಾಯಣದಲ್ಲಿ ಎಚ್ಚರವಿದ್ದು, ದಕ್ಷಿಣಾಯಣದಲ್ಲಿ ನಿದ್ರೆಗೆ ಜಾರುತ್ತಾರೆ.
ಸನಾತನ ಧರ್ಮದಲ್ಲಿ ಎಲ್ಲ ಶುಭ ಕೈಂಕರ್ಯಗಳು ದೇವರ ಉಪಸ್ಥಿತಿಯಲ್ಲಿ ನಡೆಯುತ್ತವೆ, ಆದರೆ ಈ ಮಾಸದಲ್ಲಿ ದೇವರು ನಿದ್ರೆಗೆ ಜಾರುವುದರಿಂದ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವನ್ನು ನೋಡುವುದಾದರೆ ಈ ಮಾಸದಲ್ಲಿ ಭಾರೀ ಮಳೆಯಾಗುವುದರಿಂದ ಮತ್ತು ಜನರು ಹೆಚ್ಚಾಗಿ ಕೃಷಿ ಕೆಲಸಗಳಲ್ಲಿ ತೊಡಗುವುದರಿಂದ ಬೇರೆ ಕೆಲಸಗಳಿಗೆ ಅಷ್ಟೊಂದು ಗಮನಹರಿಸುವುದಿಲ್ಲ ಎನ್ನುಲಾಗುತ್ತದೆ.
ಈ ಆಷಾಢ ಮಾಸದಲ್ಲಿ ಗುಪ್ತ ನವರಾತ್ರಿ, ಭೀಮನ ಅಮವಾಸ್ಯೆ ಹಬ್ಬಗಳು ಪ್ರಮುಖವಾದವು. ಪುರಿ ಜಗನ್ನಾಥ ಯಾತ್ರೆಯು ಈ ಮಾಸದ ವಿಶೇಷವಾಗಿದೆ. ಯತಿಗಳು ಈ ಮಾಸದಲ್ಲಿ ಚಾತುರ್ಮಾಸಕ್ಕೆ ಕೂರುತ್ತಾರೆ, ಇದೇ ಮಾಸದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಅಲ್ಲದೆ ಪ್ರಥಮ ಏಕಾದಶಿ ವ್ರತ, ಅಮರನಾಥ ಶಿವಲಿಂಗ ದರ್ಶನವೂ ಪ್ರತಿವರ್ಷ ಈ ಸಮಯದಲ್ಲೇ ನಡೆಯುತ್ತದೆ.
ಕರ್ನಾಟಕದ ಕರಾವಳಿ ಭಾಗ ಅಥವಾ ತುಳುನಾಡಿನಲ್ಲೂ ಈ ಮಾಸ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತುಳುವಿನಲ್ಲಿ ಈ ಮಾಸವನ್ನು “ಆಟಿ ತಿಂಗೊಲ್’ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಆಟಿದ ಅಮಾವಾಸ್ಯೆ ಒಂದು ವಿಶೇಷ ಆಚರಣೆಯಾಗಿದೆ. ಈ ದಿನ ಹಾಳೆ ಅಥವಾ ಸಪ್ತಪರ್ಣೀಯ ಮರದ ಕೆತ್ತೆಯನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ಕಲ್ಲಲ್ಲಿ ಕೆತ್ತಿ ತಂದು ಕಷಾಯ ಮಾಡಿ ದೇವರಿಗೆ ಸಮರ್ಪಣೆ ಮಾಡಿ ಸೇವಿಸಲಾಗುತ್ತದೆ.
ಇದರೊಂದಿಗೆ ಮೆತ್ತೆದ ಗಂಜಿ, ಪತ್ರೋಡೆ ಇತ್ಯಾದಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದೇ ರೀತಿ “ಕೆಸರ್ ಕಂಡೊದ ಗೊಬ್ಬು’, “ಆಟಿಡೊಂಜಿ ದಿನ’ ಮುಂತಾದ ಕಾರ್ಯಕ್ರಮಗಳನ್ನು ಈ ತಿಂಗಳಿನಲ್ಲೇ ಹಮ್ಮಿಕೊಳ್ಳಲಾಗುತ್ತದೆ. ಈ ಮಾಸದಲ್ಲಿ ಮಾಡುವಂತಹ ಅಡುಗೆಗಳು ಕೂಡ ವಿಶೇಷವೇ ಹೌದು. ಹಾಗೆಯೇ ಊರಿಗೆ ಬಂದ ಮಾರಿಯನ್ನು ದೂರ ಮಾಡಲು ಆಟಿ ಕಳೆಂಜೆ ಮನೆ ಮನೆಗೆ ಬರುವುದು ಕೂಡ ಇದೇ ತಿಂಗಳಿನಲ್ಲಿ.
ಹೀಗೆ ಆಷಾಢ ಮಾಸವು ಶ್ರೇಷ್ಠವಾದ ಮಹತ್ವವನ್ನು ಹೊಂದಿರುವ ಮಾಸ ಎನ್ನಬಹುದಾಗಿದೆ.
-ಶ್ರಾವ್ಯಾ ಆಚಾರ್ಯ
-ಎಂ.ಎಸ್.ಆರ್.ಎಸ್. ಕಾಲೇಜು
ಶಿರ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.