Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ
Team Udayavani, Apr 24, 2024, 3:50 PM IST
“ಜೀವನವೇ ಒಂದು ನಾಟಕ ರಂಗ ಮೇಲಿರುವ ದೇವರೇ ಅದರ ಸೂತ್ರಧಾರಿ’ ಎಂಬ ಗಾದೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಭೂಮಿಯ ಮೇಲಿರುವ ಪ್ರತೀ ಜೀವಿಯ ಪಾತ್ರವನ್ನು ಸೃಷ್ಟಿಕರ್ತ ಈಗಾಗಲೇ ಚಿತ್ರಿಸಿ ಆಗಿದೆ.
ಅದರಂತೆ ನಮ್ಮ ನಿಮ್ಮೆಲ್ಲರ ಬದುಕು ಸಾಗುತ್ತಿದೆ. ಈ ಜೀವನದ ನಾಟಕ ಸಮಯ, ಸಂದರ್ಭಗಳಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಬದುಕಿನ ಇಂತಹ ಬೃಹತ್ ರಂಗ ವೇದಿಕೆಯಲ್ಲಿ ಜೀವನ ನಡೆಸಲೆಂದೇ ಮತ್ತೂಂದು ರಂಗಭೂಮಿ ಹಗಲಿರುಳು ಪಾತ್ರವ ಧರಿಸುತ್ತಿದೆ. ನಟನೆಯ ಮೂಲವೇ ಇದಾಗಿದ್ದು, ಇಲ್ಲಿಯ ವೇಷಧಾರಿಗಳನ್ನು ಕಲಾವಿದರು ಎಂದು ಜಗತ್ತು ಗುರುತಿಸುತ್ತದೆ.
ಒಂದು ಕಾಲದಲ್ಲಿ ರಂಗಭೂಮಿಗೆ ಇದ್ದಂತಹ ಪ್ರಾಮುಖ್ಯತೆಯು ಅದೆಷ್ಟೋ ಕಲಾಪ್ರೀಯರನ್ನು ನಟರನ್ನಾಗಿಸುವ ಜತೆ ಜೀವನವನ್ನು ಕಟ್ಟಿಕೊಳ್ಳಲು ಆಧಾರವಾಯಿತು. ರಂಗಭೂಮಿ, ನಟನೆ, ನಾಟಕ ಎನ್ನುವಂತದ್ದು ಜಾನಪದ ಸಂಸ್ಕೃತಿಯ ಮೂಲವಾಗಿದೆ. ನಾಟಕಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅಲ್ಲಿಂದ ಇಲ್ಲಿಯ ವರೆಗೂ ಅದರ ಅಸ್ತಿತ್ವಕ್ಕೆ ಸಾಹಿತಿ ಮತ್ತು ಕಲಾವಿದರು, ಕಲಾ ಪೋಷಕರು ಸಮಾನ ಕಾರಣಿಕರ್ತರಾಗಿದ್ದಾರೆ. ಒಂದು ಕಾಲದಲ್ಲಿ ರಂಗಭೂಮಿ, ನಾಟಕಗಳು ಎನ್ನುವಂತದ್ದು ಭಾರತದ ಧಾರ್ಮಿಕತೆ, ಸಂಸ್ಕೃತಿ, ಇತಿಹಾಸಗಳ ಪ್ರತಿಬಿಂಬವಾಗುವ ಜತೆ ಮನೋರಂಜನೆಯ ವೇದಿಕೆ ಆಗಿದ್ದವು.
ಆದರೆ ಇಂದು ರಂಗಭೂಮಿಯ ಅಸ್ತಿತ್ವ ಮೂಲದಂತೆ ಉಳಿದಿಲ್ಲ. ಕಲಾವಿದರ ಜೀವನವು ಚಿಂತಾ ಜನಕ ಸ್ಥಿತಿಯತ್ತ ಸಾಗುತ್ತಿದೆ. ಇದಕ್ಕೆ ಕಾರಣ ಮಲ್ಟಿ ಮೀಡಿಯಾಗಳ ಮನೋರಂಜನೆ. ಇತ್ತೀಚಿಗೆ ಜನರು ರಂಗಭೂಮಿಯತ್ತ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಯುವಕರಿಗಂತು ರಂಗಭೂಮಿ, ನಾಟಕಗಳ ಪ್ರದರ್ಶನದ ನಿಜವಾದ ಅರ್ಥದ ಅರಿವೇ ಇಲ್ಲ. ಪ್ರಸ್ತುತ ಸಾಮಾಜಿಕ ಜಾಲನ ತಾಣಗಳು ಎಲ್ಲರ ಮನೋರಂಜನೆಯ ಮೂಲವಾಗಿವೆ.
ಇದರಿಂದಾಗಿ ಕಲಾವಿದರು ರಂಗಭೂಮಿಯ ಹೊರತಾಗಿ ತಮ್ಮ ಜೀವನದ ಪಾತ್ರದಲ್ಲಿ ಬಡ ಪ್ರದರ್ಶಕರಾಗುತ್ತಿದ್ದಾರೆ. ಬೆಳ್ಳಿ ಪರದೆಗೆ ನಟರನ್ನು ನೀಡಿ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ರಂಗವೇದಿಕೆಯೇ ಇಂದು ಬರಿದಾಗುತ್ತಿದೆ. ನಾಟಕ ಪ್ರೀಯರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಕಲಾವಿದರು ನೀಡುವ ರಂಗ ಪ್ರದರ್ಶನಕ್ಕೆ ತಕ್ಕ ಮನ್ನಣೆ, ಗೌರವ ದೊರೆಯುವುದಂತೂ ದೂರದ ಮಾತಾಗಿದೆ.
ರಂಗಭೂಮಿಯನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿರುವ ಸಾವಿರಾರು ಕಲಾವಿದರು ಬದುಕನ್ನು ಸಾಗಿಸಲು ತಮ್ಮ ಪಾರಂಪರಿಕ ವೇಷ ಧಾರಣೆ ಪ್ರವೃತ್ತಿಯನ್ನು ಬಿಟ್ಟು, ಬೇರೊಂದು ವೃತ್ತಿ ಜೀವನದತ್ತ ಸಾಗಬೇಕಾಗಿದೆ. ಇಷ್ಟಪಟ್ಟು ಕಟ್ಟಿಕೊಂಡ ರಂಗ ವೇದಿಕೆ ಉಳಿಸಿಕೊಳ್ಳಲು ಅದರ ಮಾಲಕರು ಕಷ್ಟಪಡುವಂತಾಗಿದೆ.
ಆದರೆ ರಂಗಭೂಮಿಯನ್ನು ಪೋಷಿಸುವುದು ಸಮಾಜದ ಒಂದು ಕರ್ತವ್ಯ. ಏಕೆಂದರೆ ರಂಗವೇದಿಕೆಯ ಪ್ರತೀ ಪಾತ್ರಗಳು ನಮ್ಮ ಜೀವನವನ್ನು ಪ್ರಸ್ತುತ ಪಡಿಸುವ ಜತೆ ನಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯದ ಪ್ರತಿಬಿಂಬವಾಗಿವೆ. ನಾಟಕ ಕಲೆಯ ಅಳಿಯದಂತೆ ಉಳಿಸಿಕೊಂಡು ಹೋಗುವ ಮಾರ್ಗವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಕಲಾ ಪೋಷಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
-ಪೂಜಾ ಹಂದ್ರಾಳ
ಶಿರಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.