Tokyo Story: ಯಸುಜಿರೋ ಓಜು ನಿರ್ದೇಶಿಸಿದ ಸಿನಿಮಾ ಈ “ಟೋಕಿಯೋ ಸ್ಟೋರಿ”
Team Udayavani, Sep 5, 2024, 4:07 PM IST
ಇವತ್ತು ವೃದ್ಧಾಶ್ರಮಗಳ ಬಗ್ಗೆ ಮಾತನಾಡುತ್ತೇವೆ. ಅವುಗಳು ಏಕೆ ಬಂದಿವೆ ಎಂದು ಗಮನಿಸಿದರೆ ಅವುಗಳಲ್ಲಿ ಪ್ರಮುಖವಾದ ಕಾರಣ ಮಕ್ಕಳ ಅಸಡ್ಡೆ, ಮಕ್ಕಳ ಬ್ಯುಸಿ ಧೋರಣೆ. ಹೊಂದಾಣಿಕೆಯ ಕೊರತೆ ಎಂಬುದು ಇತ್ತೀಚಿನದ್ದು. ತಲೆಮಾರುಗಳ ಅಂತರ ಎನ್ನುವುದೂ ಸಹ. ಇವೆಲ್ಲದರ ಮಧ್ಯೆ ಸಂಬಂಧ ಎನ್ನುವುದು ಎಲ್ಲಿಗೆ ಹೋಗಬೇಕು?
ಈ ಪ್ರಶ್ನೆಯನ್ನು ಮೂಲಾಧಾರವಾಗಿಟ್ಟುಕೊಂಡ ಚಿತ್ರ ಟೋಕಿಯೋ ಸ್ಟೋರಿ. ಜಪಾನ್ ಬಹಳ ಅಭಿವೃದ್ಧಿ ಹೊಂದಿದ ದೇಶವೆಂದು ಈ ಹಿಂದೆಯೇ ಪಠ್ಯದಲ್ಲಿ ಓದಿದ್ದೇವೆ. ತಾಂತ್ರಿಕ ಪ್ರಗತಿಯಿಂದ ಹಿಡಿದು ಎಲ್ಲ ರೀತಿಯಲ್ಲೂ ಪ್ರಗತಿಯ ಪಥ ತುಳಿದಿರುವ ಜಪಾನಿನಲ್ಲಿ ಬದುಕೂ ಸಹ “ಓಡುತ್ತಿತ್ತು’. ಇಷ್ಟಕ್ಕೂ ಇದು 70 ವರ್ಷಗಳ ಹಿಂದಿನ ಮಾತು.
1953ರಲ್ಲಿ ಯಸುಜಿರೋ ಓಜು ನಿರ್ದೇಶಿಸಿದ ಸಿನಿಮಾ ಈ ಟೋಕಿಯೋ ಸ್ಟೋರಿ. ಓಜು ಜಪಾನಿನ ಸಿನಿಮಾ ರಂಗದಲ್ಲಿ ಮತ್ತೂಬ್ಬ ಮಹತ್ವದ ನಿರ್ದೇಶಕ. ಬದುಕಿನ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುತ್ತಾ, ಅದರೊಳಗಿನ ಗಂಟನ್ನು ಬಿಡಿಸಲು ಪ್ರಯತ್ನಿಸುತ್ತಾ ಎಲ್ಲೂ ಸಂಕೀರ್ಣತೆಯಲ್ಲೂ ಇರಬಹುದಾದ ಸೊಬಗನ್ನು ಕಳೆದುಕೊಳ್ಳದ ಎಚ್ಚರ ವಹಿಸಿದ ನಿರ್ದೇಶಕ. ಈ ಕಥಾವಸ್ತು ಸಹ ಅಂಥದ್ದೇ ಕುಸುರಿ ಕಲೆಯನ್ನು ಹೊಂದಿದೆ.
ವೃತ್ತಿಯಿಂದ ನಿವೃತ್ತರಾದ ಪತಿ ತನ್ನ ಪತ್ನಿಯೊಂದಿಗೆ ಟೋಕಿಯೊದಲ್ಲಿರುವ ತಮ್ಮ ಮಕ್ಕಳ ಮನೆಗೆ ಬರುತ್ತಾರೆ. ಅವರಿಬ್ಬರಿಗೂ ನಗರದ ಜೀವನದ ಸೊಬಗಿಗಿಂತ ತಮ್ಮ ಮಕ್ಕಳು ಹೇಗೆ ಬದುಕನ್ನು ಆನುಭವಿಸುತ್ತಿದ್ದಾರೆ ಎಂದು ತಿಳಿಯುವ ಕೌತುಕ. ಎಲ್ಲ ಮಕ್ಕಳ ಮನೆಗೆ ಹೋದಾಗ ಆಗುವ ಅನುಭವ, ನಗರದ ಜೀವನದ ಅಸಡ್ಡೆಯೊಳಗೆ ಕಳೆದುಹೋದ ಮಕ್ಕಳು ಹಾಗೂ ಆವರ ಜೀವನ ಎಲ್ಲವೂ ಈ ದಂಪತಿಯ ಕಣ್ಣಿಗೆ ಕಟ್ಟುತ್ತದೆ. ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುವ ಈ ಸಿನಿಮಾದಲ್ಲಿ ರಕ್ತ ಸಂಬಂಧಕ್ಕಿಂತ ಮಾನವೀಯ ಸಂಬಂಧ ದೊಡ್ಡದೆನ್ನಲು ಪ್ರಯತ್ನಿಸಿದೆ. ಇಡೀ ಸಿನಿಮಾದ ಕೊನೆಯ ತುದಿ ಹೋಗಿ ನಿಲ್ಲುವುದು ಇಲ್ಲಿಗೇ.
ನಗರದ ಬದುಕಿನ ಒತ್ತಡದ ಮಧ್ಯೆ ಹೇಗೆ ಮಕ್ಕಳು ಸ್ವಾರ್ಥಿಗಳಾಗಿದ್ದಾರೆ ಎಂಬುದನ್ನು ಕಂಡ ದಂಪತಿಗೆ ದುಃಖ ಮರುಕಳಿಸುತ್ತದೆ. ಮನದೊಳಗೆ ವಿಷಾದ ಹೆಪ್ಪುಗಟ್ಟುತ್ತದೆ. ವಿವಿಧ ಸಂದರ್ಭಗಳನ್ನು ವಿವರಿಸುತ್ತಾ, ಪಾತ್ರಗಳಂತೆ ಹುಟ್ಟಿ ಹಾಕಿ ಪ್ರತಿಯೊಬ್ಬರ ವರ್ತನೆಯನ್ನು ಪಟ್ಟಿ ಮಾಡಲು ಪ್ರಯತ್ನಿಸಿರುವ ನಿರ್ದೇಶಕ, ಎಲ್ಲಿಯೂ ಅತಿ ಎನ್ನಿಸುವಂತೆ ಹೇಳುವ ಹಠ ಮಾಡುವುದಿಲ್ಲ. ಬದುಕಿನ ಎಲ್ಲ ಒತ್ತಡದ ನಡುವೆಯೂ ಸಂಬಂಧವೊಂದೇ ಒಂದಿಷ್ಟು ನಿರಾಳತೆ ಒದಗಿಸಬಲ್ಲದು ಎಂಬ ಸತ್ಯವನ್ನೂ ಹೇಳುತ್ತಾನೆ. ದಂಪತಿಯಷ್ಟೇ ಆಲ್ಲದೇ ಮಕ್ಕಳ ನಟನೆಯೂ ಕಥೆಗೆ ತೊಡಕಾಗದಂತಿದೆ.
ಜಪಾನಿನ ಅತ್ಯುತ್ತಮ ಚಲನಚಿತ್ರಗಳಲ್ಲಿ ಸ್ಥಾನ ಗಿಟ್ಟಿಸಿರುವ ಸಿನಿಮಾ. ಕೆಲವು ಹೊಸ ನಿರ್ದೇಶಕರಿಗೆ ಪ್ರೇರಣೆ ನೀಡಿರುವ ಸಿನಿಮಾವೂ ಹೌದು. ಹಲವಾರು ಪುರಸ್ಕಾರಗಳನ್ನು ಗಳಿಸಿರುವ ನೋಡಲೇಬೇಕಾದ ವಿಶ್ವ ಸಿನಿಮಾಗಳಲ್ಲಿ ಇದೂ ಒಂದು.
–ಅಪ್ರಮೇಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.