Tourism: ಬಂಗಾರದ ಜುಳು ಜುಳು ನಾದ
Team Udayavani, Feb 19, 2024, 8:00 AM IST
“ಬಂಗಾರ ಕುಸುಮ’. ಇದೇನಿದು ಹೆಸರು ಹೊಸ ರೀತಿಯಾಗಿದೆಯಲ್ಲ? ಹೌದು. ಮಳೆಗಾಲದಲ್ಲಿ ಪ್ರವಾಸಿಗರು ಅತೀ ಹೆಚ್ಚಿನ ಪ್ರಮಾಣದಲ್ಲಿ ತೆರಳುವುದೇ ಜಲಪಾತಗಳಿಗೆ. ಬಂಗಾರ ಕುಸುಮವೂ ಸಹ ಒಂದು ಹಿಡನ್ ಜೆಮ್ ಎಂದರೆ ತಪ್ಪಾಗಲಾರದೆನೋ.
ಉತ್ತರಕನ್ನಡ ಜಿಲ್ಲೆಯ ಮಾವಿನಗುಂಡಿಯಿಂದ 18 ಕಿ.ಮೀ. ದೂರದಲ್ಲಿರುವ ಈ ಜಲಪಾತ ತುಂಬಾ ವಿಶಿಷ್ಠವಾಗಿದೆ. ಇದರ ಬಗ್ಗೆ ತಿಳಿದುಕೊಂಡ ನಾನು ಚೊಟುವನ್ನು (ಗಾಡಿ) ತೆಗೆದುಕೊಂಡು ಬಂಗಾರ ಕುಸುಮದತ್ತ ಹೊರಟೆ. ದಾರಿಯುದ್ದಕ್ಕೂ ಕಣ್ಣಿಗೆ ಹಸುರು ಹೊದಿಕೆಯ ಸೌಂದರ್ಯ.
ದಾರಿ ತಿರುವುಗಳನ್ನು ಹೊಂದಿದ್ದರೂ ಬಂಗಾರ ಕುಸುಮ ನೋಡುವ ಕಾತುರತೆಯಲ್ಲಿ ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಹೀಗೆ ಮುಂದೆ ಸಾಗುತ್ತಿರುವಾಗ ದೂರದಲ್ಲೊಂದು ಜಲಪಾತ ಹರಿಯುತ್ತಿರುವುದು ಕಾಣಿಸುತ್ತಿತ್ತು. ಅದರ ಸ್ವಸ್ಥಳ ಎಲ್ಲಿದೆ ಎಂದು ನೋಡಲು ಮುಂದೆ ಸಾಗುತ್ತಿದ್ದೆ. ಆದರೆ ಎಲ್ಲಿಯೂ ಬಂಗಾರ ಕುಸುಮ ಸೇರುವ ದಾರಿಯ ಸುಳಿವೇ ಇಲ್ಲ.
ಮನೆಯಿಂದ ಹೊರಡುವಾಗ ಬಂಗಾರ ಕುಸುಮ ತಲುಪುವುದು ಸುಲಭ. ಫಲಕಗಳಾದರೂ ಇರುತ್ತವೆ ಎಂದುಕೊಡಿದ್ದೆ. ಆದರೆ ಅಲ್ಲಿ ಹೋಗಿ ನೋಡಿದರೆ ಯಾವುದೇ ಸೂಚನೆಗಳಿಲ್ಲ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರ ಬಳಿ ಕೇಳಿದಾಗ ಅವರು ಬಂಗಾರ ಕುಸುಮಕ್ಕೆ ಹೋಗುವ ದಾರಿ ತೋರಿಸಿದರು. ಅದು ವಾಹನ ತೆರಳುವ ದಾರಿ ಆಗಿರಲಿಲ್ಲ, ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು.
ಜಲಪಾತ ನೋಡುವ ತವಕದಲ್ಲಿ ಇದೆಲ್ಲ ಯಾವ ದೊಡ್ಡ ವಿಷಯ ಎಂದು ಅವರು ತೋರಿದ ದಾರಿಯಲ್ಲಿ ನಡೆದೆ. ತುಂಬಾ ದೂರ ಬಂದ ಅನಂತರವೂ ಜಲಪಾತ ಸಿಗಲಿಲ್ಲ ಕೇವಲ ಜಲಪಾತದಿಂದ ಹರಿದು ಬರುವ ಝರಿ ಕಾಣಿಸುತ್ತಿತ್ತು. ಕಲ್ಲು ಮುಳ್ಳಿನ ಕಾಡು ದಾರಿಯದು. ಜಲಪಾತ ನೋಡುವ ಹುಮ್ಮಸ್ಸಿನಲ್ಲಿ ದೇಹ ದನಿದಿರುವುದೂ ತಿಳಿದಿರಲಿಲ್ಲ. ಆದರೆ ಮುಂದೆ ಸಾಗುತ್ತಾ ಹೋದಂತೆ ದಾರಿ ಮುಗಿದಂತೆ ಕಾಣಿಸಿತು. ಅಲ್ಲಿಗೆ ನನ್ನ ತವಕ, ಕಾತುರತೆ, ಹುಮ್ಮಸ್ಸು ಎಲ್ಲವೂ ಕ್ಷಿಣಿಸುತ್ತಾ ಬಂತು.
ಹೀಗೆ ಮುಂದೆ ಸಾಗಿ ತಲೆಯೆತ್ತಿ ನೋಡಿದಾಗ ಅಲ್ಲಿ ಕಂಡ ದೃಶ್ಯ ಇನ್ನೂ ಕಣ್ಣಿಗಟ್ಟಿದಂತಿದೆ. ಹಾಲಿನ ನೊರೆಯಂತೆ ಬಂಡೆಗಳ ಮಧ್ಯದಿಂದ ಹರಿದು ಬರುವ ಜಲಪಾತ, ಜಲಪಾತದಿಂದ ಹರಿದು ಬರುವ ನೀರು ಪರಿಶುದ್ದವಾಗಿ ಮುಂದೆ ಸಾಗುವುದು, ಜಲಪಾತದಿಂದ ಬಿದ್ದ ನೀರು ಅಲ್ಲೇ ನಿಂತು ಅದರಲ್ಲೇ ಹುಟ್ಟಿಕೊಂಡು ಆಟವಾಡುವ ಪುಟ್ಟ ಪುಟ್ಟ ಮೀನುಗಳು, ಜಲಪಾತದ ಬೋರ್ಗರೆತ, ಕಾಡಿನ ಮಧ್ಯದಲ್ಲಿ ಹರಿಯುವ ಆ ಜಲಪಾತ ಸುತ್ತಲಿನ ಪ್ರಕೃತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಅತಿಶಯೋಕ್ತಿ
ಆಗದೆನೋ, ಇದನ್ನೆಲ್ಲ ನೋಡಿ ಇಷ್ಟು ದೂರ ಬಂದಿದ್ದಕ್ಕೂ ಸಾರ್ಥಕವಾಯಿತು ಅನಿಸಿದಂತೂ ನಿಜ.
-ಸಿಂಧು ಶ್ರೀಕರ್
ಎಸ್.ಡಿ.ಎಂ. ಕಾಲೇಜು ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.