ದೇಶ ಭಕ್ತಿ ಸಾರುವ ಯುವ ಕವಿಗಳ ʼಭರತ ಕಾವ್ಯ ಸಂಗಮʼ
Team Udayavani, Aug 17, 2020, 9:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉದಯವಾಣಿ ಫ್ಯೂಷನ್
ವಿಭಾಗ ಸ್ವಾತಂತ್ರ್ಯ
ದಿನಾಚರಣೆಯ ಅಂಗವಾಗಿ
ಯುವ ಸಮುದಾಯದಿಂದ
ದೇಶ, ರಾಷ್ಟ್ರಭಕ್ತಿ ಮತ್ತು ಸ್ವಾತಂತ್ರ್ಯದ ಕುರಿತಾಗಿ
ಕವನಗಳನ್ನು ಆಹ್ವಾನಿಸಿತ್ತು.
ಅವುಗಳಲ್ಲಿ ಆಯ್ದ ಅತ್ಯುತ್ತಮವಾದ
ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ನನ್ನ ಭಾರತವಿದು
ನನ್ನ ಭಾರತವಿದು
ಸುಂದರ ಭಾರತ
ವೀರ -ಶೂರರ ನಾಡಿದು
ತೆಂಗು-ಗಂಧದ ಬೀಡಿದು
ಮನಮೋಹಕ ನಾಡಿದು
ಕವಿಗಳ ಕಲ್ಪನೆ ಲೋಕವಿದು
ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು
ಪಾವನ, ಪವಿತ್ರ ಈ ದೇಶದಲ್ಲಿ
ತಿರಂಗಕ್ಕೆ ಹೋರಾಡಿದ
ಸ್ವಾತಂತ್ರ್ಯದ ನಾಡು
ಹೃದಯದಲ್ಲಿ ಕ್ರಾಂತಿ ಎಬ್ಬಿಸಿದ
ಹೆಮ್ಮೆಯ ಭಾರತವಿದು
ಸಂಸ್ಕೃತಿಯ ಬೀಡಿದು
ಅಕ್ಷತಾ ಮಿರಜಕರ, ಕೆ.ಎಸ್. ಎಸ್. ಕಾಲೇಜು, ವಿದ್ಯಾನಗರ ಹುಬ್ಬಳ್ಳಿ
ಭಾರತ ನಮನ
ಜಗದಿ ಮತ್ತೆ ಬೆಳಗುತಿಹುದು ಪುಣ್ಯ ಭೂಮಿ ಭಾರತ
ಸಾಧು, ಸಂತ, ಮಹಾತ್ಮರ ತಪೋಭೂಮಿ ಭಾರತ
ಸಾಧಕರಿಗೆ ದಾರಿ ತೋರೋ ಪ್ರೇರಣೆಯ ಭಾರತ
ಅನುದಿನವೂ ನಮಿಸುವೆನು ನನ್ನ ತಾಯಿ ಭಾರತ
ಈ ನೆಲದ ಮಣ್ಣಿನಲ್ಲಿ ಪರಿಶ್ರಮಿಗಳ ನೆಲೆಯಿದೆ
ಇತಿಹಾಸದ ಪುಟಗಳಲ್ಲಿ ವೀರರಸದ ಛಲವಿದೆ
ಗುಡಿ-ಗೋಪುರ ಶಿಲೆಗಳಲ್ಲಿ ಅತ್ಯದ್ಭುತ ಕಲೆಯಿದೆ
ಸಾಹಿತ್ಯದ ಘಮಲಿನಲ್ಲಿ ಬದುಕ ಕಲಿಸೋ ಬಲವಿದೆ.
ಕೋಟಿ-ಕೋಟಿ ಜನರು ಇಲ್ಲಿ ಬಾಳುತಿಹರು ಜತೆಯಲಿ
ಸತ್ಯ,ಶಾಂತಿ ಧರ್ಮವೆತ್ತ ಭಾರತದ ಭುವಿಯಲಿ,
ಸ್ವಾತಂತ್ರ್ಯದ ಕತೆಯ ಹೇಳಿ ಮಕ್ಕಳೆಲ್ಲ ತಿಳಿಯಲಿ
ಉಸಿರ ಕಾಯ್ವ ಸೈನಿಕರಿಗೆ ಗೌರವದಿ ನಮಿಸಲಿ.
ನರೇಂದ್ರ ಎಸ್. ಉಪನ್ಯಾಸಕರು, ಗಂಗೊಳ್ಳಿ
ಸ್ವಾತಂತ್ರ್ಯ ಭಾರತದ ಆಶಯ
ಬದುಕಿನುದ್ದಕ್ಕೂ ಜತೆಯಾಗಿ ಬರುವುದು ನಮ್ಮ ಸ್ವಾತಂತ್ರ್ಯ,
ಎಷ್ಟು ಮರೆತರೂ ಬೇಜಾರೆಂಬುದಿಲ್ಲ ಜೀವಕೆ,
ರಾಷ್ಟ್ರ ನಾಯಕರು ತಂದುಕೊಟ್ಟ ಸ್ವಾತಂತ್ರ್ಯವನ್ನು
ನೆನಪಿಸಿಕೊಳ್ಳುವುದೇ ಈ ದಿನ.
ಮಕ್ಕಳಲ್ಲಿ ಬೀರುತ್ತಿದೆ ಮಂದಹಾಸದ ನಗೆ
ಆ ನಗೆಯಲ್ಲಿದೆ ಸ್ವಾತಂತ್ರ್ಯದ ದಿನ.
ಸೂರ್ಯನ ಹೊಂಗಿರಣದಂತೆ ಹೊಳೆಯುತ್ತಿದೆ
ನಮ್ಮ ತ್ರಿವರ್ಣ ಧ್ವಜ,
ಸದಾ ಮುಗುಳು ನಗೆಯ ಮಂದಾಕಿನಿಯಂತೆ,
ಮಂದಹಾಸದಲ್ಲಿ ಮನಸೆಳೆಯುವ ಒಲವಿನ ಹೂವಿನಂತೆ ನಮ್ಮ ಬಾವುಟ
ಎಲ್ಲರೂ ಖುಷಿ ಖುಷಿಯಾಗಿರುವ ಸಡಗರ ಸಂಭ್ರಮದ ದಿನ.
ಕಣ್ಣನು ಕೆರಳಿಸುವ ಜರಿಗಳ ಆಗಮ್ಯ,
ಸುಂದರ ಚರಿತ್ರೆಗಳ ಸ್ವತಂತ್ರ ಭಾರತ ನಮ್ಮದು.
ಸಕಲ ಜನರಿಗೆ ಆಶ್ರಯ ನೀಡಿದ ಭಾರತ ನಮ್ಮದು
ಬೇಧ-ಭಾವವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವದಿಂದ ಆಚರಿಸುವ ದಿನ.
ರೇಣುಕಾ ಸಾಗರ, ರಾಯಚೂರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
ನಮ್ಮ ನಾಡಿದು- ನಮ್ಮ ಹೆಮ್ಮೆ
ಋಷಿ-ಮುನಿ, ಮಹಾನ್ ವ್ಯಕ್ತಿಗಳ ಜನ್ಮಸ್ಥಳ
ಅಪಾರ ನೈಸರ್ಗಿಕ ಸಂಪತ್ತು
ಎತ್ತ ನೋಡಿದರತ್ತ ಸುಂದರ ಕಲಾ ಕುಸುಮಗಳು
ಚಿಗುರೆಲೆಯಲಿ ರೈತನ ಮೊಗದ ಮಂದಹಾಸ
ರಾಜ-ಮನೆತನಗಳ ವೈಭವ ಹಿಂದಿನದು
ತುಂಬು ಕುಟುಂಬದ ರಾಜಕೀಯ ಇಂದಿನದು
ಜನತೆಯೇ ಸಾರ್ವಭೌಮರು ಎಂದಿಗೂ
ಸಮಾನತೆಯೇ ಗುರಿ ನಮ್ಮೆಲ್ಲರದು
ಕರದಲ್ಲಿ ಅರಳಿಹ ಕೌಶಲ
ಶಕ್ತಿಯೊಂದು ಹಿಂದಿರುವುದು ಸ್ವ-ಸಹಾಯ
ಭೇದವಿಲ್ಲ ಅಭಿವೃದ್ಧಿಗೆ
ನಮ್ಮ ನಾಡಿದು ನಮ್ಮ ಹೆಮ್ಮೆ.
ಶುಭಾ ಹತ್ತಳ್ಳಿ, ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ
ಸ್ವಾತಂತ್ರ್ಯ ಆಶಯ
ಭಾರತಕ್ಕೆ ಬಂದೊದಗಿತ್ತು ಅದೊಂದು ಕಾಲ
ಅದುವೇ ಬ್ರಿಟಿಷರೆಂಬ ರಾಕ್ಷಸರು ಭಾರತವನ್ನಾಳಿದ ಕಾಲ
ಬೇಡುತ್ತಾ ಬಂದ ಬ್ರಿಟಿಷರಿಗೆ ಭಾರತ ನೀಡಿತ್ತು ಆಶ್ರಯವನು
ಅದಕ್ಕೆ ಪ್ರತಿಫಲವಾಗಿ ಬ್ರಿಟಿಷರು ನೀಡಿದರು ನಿರಾಶೆಯನು
ರೊಚ್ಚಿ ಗೆದ್ದಿತು ಒಂದು ದಿನ ಅವೆಷ್ಟೊ ಭಾರತೀಯರ ನೋವುಗಳು
ಭಾರತದ ಸ್ವಾತಂತ್ರ್ಯಕ್ಕೆ ಮಡಿಯಿತು ಅದೆಷ್ಟೊ ಜೀವಗಳು…
ಎದ್ದಿತು ಯುದ್ಧಗಳು ಮುಂಗಾರಿನ ಸಿಡಿಲಿನಂತೆ
ಹೆದರಿದರು ಬ್ರಿಟಿಷರು ಯುದ್ಧದಲ್ಲಿ ಸೋತ ರಾಜರಂತೆ
ಕೊನೆಗೆ ಜಯಶಾಲಿಯಾಯಿತು ಭಾರತೀಯರ ದೇಶಪ್ರೇಮ
ಎಲ್ಲೆಲ್ಲೂ ಮೊಳಗಿತು ಎಲ್ಲರೂ ಒಂದೇ ಎಂಬ ಅಮರ ಪ್ರೇಮ
ಇಂದಿಗೂ ನೆನೆಯುತ್ತೇವೆ ಸ್ವಾತಂತ್ರ್ಯದ ಆ ದಿನಗಳನ್ನು
ಎಲ್ಲರೂ ಬೆಳಸಿಕೊಳ್ಳಬೇಕು ಸ್ವಾತಂತ್ರ್ಯದ ಆದರ್ಶಗಳನ್ನು…
ರಂಜಿತ್, ಶ್ರೀ ಶಾರದಾ ಕಾಲೇಜು ಬಸ್ರೂರು
ಭಾರತೀಯರು ನೆನೆವ ಪುಣ್ಯದಿನ
ಈ ದಿನ ಸುದಿನ, ಸ್ವಾತಂತ್ರ್ಯ ಸಿಕ್ಕ ಚೆಲುವ ದಿನ
ಭಾರತೀಯರೆಲ್ಲರೂ ಸಂಭ್ರಮಿಸುವ ಪುಣ್ಯದಿನ
ಛಲ ಬಿಡದ ಹೋರಾಟಕ್ಕೆ ಸಿಕ್ಕ ಗೆಲುವೇ ಸ್ವಾತಂತ್ರÂ
ತ್ಯಾಗ, ಬಲಿದಾನಕ್ಕೆ ಸಿಕ್ಕ ಫಲವೇ ಸ್ವಾತಂತ್ರÂ
ಭಾರತಾಂಬೆಯ ಮಕ್ಕಳ ದೇಶಪ್ರೇಮದ ಕಿಚ್ಚು
ಬಿಡಿಸಿತು, ಬ್ರಿಟಿಷರ ದೇಶ ಆಳುವ ಹುಚ್ಚು
ಭಾರತ ಎಂಬ ಭಾವನೆಯ ಮನಸ್ಸುಗಳ ಉಗಮ
ಪರಕೀಯರ ಆಡಳಿತಕ್ಕೆ ಹಾಡಿತು ವಿರಾಮ
ಭಾರತಾಂಬೆಯ ಬಿಡುಗಡೆಗೊಳಿಸಿದ ನಮ್ಮ ವೀರರ ನೆನೆಯೋಣ
ಅವರ ಶ್ರೇಷ್ಠ ತ್ಯಾಗ-ಬಲಿದಾನದ ಕಥೆಯ ಅರಿಯೋಣ
ನಮ್ಮವರ ಈ ಅಮೂಲ್ಯ ಕೊಡುಗೆಯ ಗೌರವಿಸೋಣ
ನಮ್ಮವರಿಗಾಗಿ ಈದಿನ ನಮಿಸೋಣ ಅವರ ಸ್ಮರಿಸೋಣ
ಗಿರೀಶ್ ಪಿ.ಎಂ., ವಿವಿ ಕಾಲೇಜು, ಮಂಗಳೂರು
ರಾಷ್ಟ್ರದ ಕವಿತೆ
ಹಕ್ಕಿ ಹಾರುತಿದೆ ಕನಸಿನ ಸವಾರಿ
ನಮಗೂ- ನಿಮಗೂ ಒಂದೇ ಏಣಿ
ಆಗಸಕಿಲ್ಲ ಬೇಲಿಯ ಗೂಟ
ಪೃಥ್ವಿಗೇಕಿದು ಕಲಹದ ಕಾಟ…!!
ಜಾತಿ-ಪಂಥಗಳ ಅಬ್ಬರವೇಕೆ
ದೇವನೊಂದೇ “ಮಾನವತೆ’
ಕಟ್ಟುವ ಬನ್ನಿ ಪರಿದಿಯ ಮೀರಿ
ಸ್ನೇಹದ ಸೇತುವೆ ನಮ್ಮೊಳಗೆ…..
ಒಲವಿನ ಮಳೆಗೆ ಭಾತೃತ್ವದ ಮೊಳಕೆ
ವಿಶ್ವದ ನಡುವೆ ಹೆಮ್ಮರ ಭಾರತ..
ಕನಸು ಕಾಣೋಣಾ ಬನ್ನಿ, ಕಟ್ಟುವ ಬನ್ನಿ..
ಪ್ರೇಮಕೆ ಆ ಸಾಮರ್ಥ್ಯವಿದೆ…!
ಕಂದನ ತೊದಲಲೂ ರಾಷ್ಟ್ರದ ಕವಿತೆ
ಹುಟ್ಟಲಿ, ಬೆಳಗಲಿ ಭವಿಷ್ಯವಿದೆ..!!
ಜಯಶ್ರೀ ಇಡ್ಕಿದು, ಬಂಟ್ವಾಳ
ಸ್ವಾತಂತ್ರ್ಯದ ಸುದಿನ
ಬಾನೆತ್ತರದಲ್ಲಿ ಹಾರುತ್ತಿರುವ ತಿರಂಗ ಧ್ವಜವು
ಸಾರುತಿದೆ ಇಂದು ಸ್ವಾತಂತ್ರ್ಯೋತ್ಸವವೆಂದು
ಪ್ರತಿಯೊಬ್ಬ ಭಾರತೀಯನ ಮನೆ-ಮನಗಳಲ್ಲಿ
ಸಂಭ್ರಮಿಸುವ ಮಹೋತ್ಸವವಿಂದು
ಸುಮ್ಮನೇ ದೊರೆತಿಲ್ಲ ನಮಗೆ ಈ ಸ್ವಾತಂತ್ರ್ಯ
ಇದರ ಹಿಂದಿದೆ, ಅದೆಷ್ಟೋ ಮಹಾನ್ ವ್ಯಕ್ತಿಗಳ
ತ್ಯಾಗ, ಬಲಿದಾನ
ಅಂತಹ ಹುತಾತ್ಮರಿಗೆ ಗೌರವ ಸಲ್ಲಿಸುವ ಪುಣ್ಯ ದಿನ
ಅದುವೇ ನಮ್ಮ ಸ್ವಾತಂತ್ರ್ಯೋತ್ಸವ ದಿನ
ನಾನು ನನ್ನದೆನ್ನುವ ಸ್ವಾರ್ಥವನು ತೊರೆದು
ನಾವು ನಮ್ಮವರೆನ್ನುವ ಭಾವೈಕ್ಯವ ಮೆರೆದು
ಒಂದೇ ಜಾತಿ, ಒಂದೇ ಮತ ನಾವೆಲ್ಲರೂ ಭಾರತೀಯರೆಂದು
ಎಲ್ಲ ಧರ್ಮದವರೂ ಒಂದಾಗಿ ಸೇರಿ ಭಾರತ ಮಾತೆಗೆ ನಮಿಸುವ ದಿನ
ಅದುವೇ ನಮ್ಮ ಸ್ವಾತಂತ್ರ್ಯೋತ್ಸವ ದಿನ
ಸೌಜನ್ಯಾ, ಶ್ರೀ ಶಾರದಾ ಕಾಲೇಜು, ಬಸ್ರೂರು
ಸ್ವತಂತ್ರ ಭಾರತ
ಪುಣ್ಯ ಭೂಮಿ ನನ್ನ ಭಾರತ
ತ್ಯಾಗದಾನದ ಅರ್ಥವೇ ನನ್ನ ಭಾರತ
ಸ್ವಾತಂತ್ರ್ಯದ ಕಿಚ್ಚಿನಲ್ಲಿ
ಏಕತೆ ಜೀವದ ಕಣಕಣದಲ್ಲಿ
ಹೋರಾಡುತ ಎಲ್ಲರೂ ರಕ್ತದ ಪನ್ನೀರ ಹರಿಸಿ
ಬಂದಿತು ಸ್ವಾತಂತ್ರ್ಯೋವೂ
ವೀರರ ದೇಹ ತ್ಯಾಗದಲ್ಲಿ
ಧೈರ್ಯ ನಿಷ್ಠೆ ಶಕ್ತಿಯಲ್ಲಿ
ಭಾರತೀಯರ ಶೌರ್ಯದ ಹೋರಾಟಕೆ
ಶತ್ರುಗಳ ಕೋಟೆ ದಹಿಸಿ ಬಂದಿತು ಸ್ವಾತಂತ್ರ್ಯವು
ಸುಶ್ಮಿತಾ ಎಂ. ಸಾಮಾನಿ ಮಲಾರಬೀಡು
ಇದು ನನ್ನ ದೇಶ ಭಾರತ
ಇದು ನನ್ನ ದೇಶ ಭಾರತ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ತನ್ನ ಮಹಿಮೆಯ ಸಾರುತ
ಸತ್ಯಮೇವ ಜಯತೆ ಎಂಬ
ಧ್ಯೇಯ ವಾಕ್ಯ ಸಾರುತ
ಕೊರೊನಾ ಎಂಬ ದೈತ್ಯ ರಾಕ್ಷಸನನ್ನು ಎದುರಿಸುತ್ತಾ
ಎಂದಿಗೂ ಬೇರೆ ರಾಷ್ಟ್ರಗಳೊಡನೆ
ಉತ್ತಮ ಬಾಂಧವ್ಯವನ್ನಿರಿಸುತ್ತಾ
ಆಯೋಧ್ಯೆ ಎಂಬ ರಾಮನ
ಪುಣ್ಯಕ್ಷೇತ್ರವನ್ನು ತನ್ನ ಪವಿತ್ರ
ನೆಲದಲ್ಲಿ ಸ್ಥಾಪಿಸುತ್ತ
ನವ ಯುಗದದತ್ತ ತನ್ನ ದಾಪುಗಾಲಿರಿಸುತ್ತಾ
ಬೆಳೆಯುತ್ತಿದೆ ನೋಡು,
ನನ್ನ ದೇಶ ಭಾರತ
ನಾನು ಈ ಭಾಗ್ಯವಿಧಾತ..!
ಶುಭಾ ಶರತ್, ಉರ್ವಸ್ಟೋರ್ ಮಂಗಳೂರು
ರಾಷ್ಟ್ರೀಯತೆಯ ಮಂತ್ರ
ಪುಂಡ, ಪೋಕರಿಗಳಿಗೇನು ಗೊತ್ತು ಹೆತ್ತೂಡಲ ತಾಪ
ಇಂದಲ್ಲ ನಾಳೆ ತಟ್ಟದೆ ನೊಂದ ಜೀವದ ಶಾಪ
ಇದ ನೋಡುವ ನಮಗೂ ಬರುತ್ತೆ ಕೆಂಡ ಕೋಪ
ತಪ್ಪೇ ಮಾಡದ ಆ ಅಮಾಯಕರಿಗೆಂತಹ ಶಿಕ್ಷೆ ಪಾಪ
ಬೆಳಕನೀಡುವ ಸೂರ್ಯ ಚಂದ್ರರಿಗಿಲ್ಲ ತಾರತಮ್ಯ
ಬೀಸುವ ಗಾಳಿ, ಹರಿವ ನೀರಿಗಿಲ್ಲ ಧರ್ಮದ ಅಂಧತ್ವ
ದೇಹದಲ್ಲಿ ಹರಿಯುವ ರಕ್ತಕ್ಕಿಲ್ಲ ಜಾತಿಯ ಭೇದ
ಹೊತ್ತು ನಿಂತು ತುತ್ತ ನೀಡುವ ಭೂತಾಯಿಗಿಲ್ಲ ಭೇದ
ಅಯ್ಯೋ ಮತಾಂಧ !, ನಿನಗ್ಯಾಕೆ ಬೇಕು ಈ ಅಧರ್ಮ
ರಾಷ್ಟ್ರೀಯತೆಯ ಮಂತ್ರ ಬೋಧಿಸುವುದು ನಮ್ಮ ಕಾರ್ಯ
ನಾವೆಲ್ಲ ಒಟ್ಟಾಗಿ ಜಪಿಸೋಣ ಏಕತೆಯ ಮಂತ್ರ
ಇಲ್ಲೇ ಅಡಗಿದೆ ನೋಡು ನಮ್ಮ ಬಾಳು ಬೆಳಗುವ ತಂತ್ರ
ಶೈನಾ ಶ್ರೀನಿವಾಸ್ ಶೆಟ್ಟಿ
ಸೈನಿಕ್
ಜೀವದ ಹಂಗು ತೊರೆದ ಜೀವವೇ
ಮಮತೆಯ ವಂದನೆ ನಿನಗೆ;
ಗಡಿಯಲ್ಲಿಯ ಗಡಿಯಾರದ ಮುಳ್ಳು
ತಿರುಗುತಲಿರುವುದು ತನಗೆ;
ಎದೆಯೊಳಗಿಂದ ಚಿಗುರೊಡೆದ ಪ್ರೇಮವೇ
ದೇಶ ಕಾಯುವ ಕಾಯಕವೇ;
ಎದೆಗೆ ಬೀಳುವ ಗುಂಡಿನ ಸದ್ದಿಗೂ ಅಂಜದೆ ಅಳುಕದೆ
ನಿಲ್ಲುವ ನಾಯಕ ನೀನಲ್ಲವೇ;
ಪ್ರೀತಿ ಪಾತ್ರರನೆಲ್ಲ ತೊರೆದು ತೊಡೆ ತಟ್ಟಿ
ತಾಯಿ ಭಾರತೀಯ ಸೇವಕನಾದೆಯಾ;
ಹಬ್ಬ ಹರಿದಿನಕೂ ಬಾರದ ನೀನು
ನಮಗಾಗಿ ಮಡಿಯುವ ದೇವನಾದೆಯಾ;
ಕಲ್ಲು, ಮುಳ್ಳುಗಳಲ್ಲಿ ನಡೆದು ನೋವುಗಳ
ಸಹಿಸಿಕೊಂಡ ಸಾಧಕ ನೀನಾದೆ;
ಸುತ್ತಮುತ್ತವೆ ಸುಳಿಯುವ ಸಾವನು ಗೆದ್ದ
ನಮ್ಮೆಲ್ಲರ ಸರದಾರ ನೀನಾದೆ;
ಅರಳುವ ಮುನ್ನವೇ ಚಿವುಟಿದ ಹೂವಂತೆ
ಎದುರಿನ ಗುಂಡಿಗೆ ಬಲಿಯಾದೆಯಾ;
ಸಾವಿನ ಕ್ಷಣದಲ್ಲೂ ಸಾರ್ಥಕ್ಯ ಮೆರೆದ
ಪರಮವೀರ ಚಕ್ರ ನೀನಾದೆಯಾ;
ಪ್ರತಿ ಮುಂಜಾವು ಕಣಿºಡುವ ಮುನ್ನ
ನಿನಗೆ ಶರಣೆನ್ನುವೇ
ಓ ಸೈನಿಕನೆ ಶರಣೆನ್ನುವೇ.
ರವಿ ಶಿವರಾಯಗೊಳ, ಮುಂಬಯಿ
ಸ್ವಾತಂತ್ರ್ಯದ ಹರ್ಷದ ದಿನ
ಸ್ವಾತಂತ್ರ್ಯ ದೊರೆತ ವರ್ಷ
ನಾಡಿನ ಜನತೆಗೆ ಸಿಕ್ಕಿತು ಹರ್ಷ
ಭಾರತೀಯರಿಗಿದು
ಸ್ವಾತಂತ್ರ್ಯದ ಸ್ಪರ್ಶ
ಸೂರ್ಯ ಮುಳುಗಿರಲು
ನಾಡೆಲ್ಲ ಮಲಗಿರಲು
ಇತಿಹಾಸ ಸೃಷ್ಟಿಸುವ ಘಳಿಗೆಗೆ
ಹಾತೊರೆಯುತ್ತಿತ್ತು ಭಾರತ
ನಡೆದಿತ್ತು ಸ್ವಾತಂತ್ರ್ಯದ ಹೋರಾಟ
ಬಾಪೂಜಿ ಹಿಡಿದರು ಬಾವುಟ
ಕೂಡಿತು ಕೇಸರಿ, ಬಿಳಿ, ಹಸುರು ಮೂರು ಬಣ್ಣ
ಸತ್ಯ, ಶಾಂತಿ, ತ್ಯಾಗ ಮೂರ್ತಿಗಳ ಮಹತ್ವವು
ಭಾರತಾಂಬೆ ಮಕ್ಕಳಿಗೆ ಸಂತಸದ ಕ್ಷಣಗಳವು
ಸುಶ್ಮಿತಾ ಕೆ., ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ.
ಸ್ವತ್ಛ ಭಾರತ
ಸ್ವತ್ಛತೆಯ ಬೆಳಕು ಹರಿದು
ಮೂಡಿಬರಲಿ ಸ್ವತ್ಛ ಭಾರತ
ಸ್ವತ್ಛ ಮನದಿ ಸ್ವತ್ಛ ನೆಲದಿ
ಭರತ ಮಾತೆ ಎಂದು ಸಂತಸ ||
ಮನೆಮನೆಗಳು, ಭವನಗಳು
ಹಳ್ಳಿ ಕೇರಿ ಭವ್ಯ ನಗರಗಳು
ಕಸದಿಂದಲಿ ಮುಕ್ತಿ ಪಡೆದು
ಆಗಲಿ ಸುಂದರ ತೋಟಗಳು ||
ವ್ಯವಸ್ಥಿತ ವಿಲೇವಾರಿಯಿಂದ
ಕಸಕೆ ಸಿಗಲಿ ಅಂದೇ ಮುಕ್ತಿ
ಕಸದಿ ರಸವು ತೆಗೆಯುವಂಥ
ಜ್ಞಾನದಿಂದ ದೇಶಕಾಯ್ತು ಶಕ್ತಿ ||
ತ್ಯಾಜ್ಯ ಹುಟ್ಟು ಕ್ಷೀಣಗೊಳಲಿ
ಬರಲಿ ಬುದ್ಧಿ ಎಲ್ಲ ಜನರಲಿ
ಅನವಶ್ಯಕ ಉಪಯೋಗಕೆ
ಕಡಿವಾಣವಿಂದೇ ಬೀಳಲಿ ||
ರೋಗರುಜಿನ ಬರದೆ ಇರಲು
ಸ್ವತ್ಛತೆಯ ಮಂತ್ರ ಮೊಳಗಿಸಿ
ದೃಢವಾದ ಸಂಕಲ್ಪ ಮೂಡಲು
ಉದಯವಾಯ್ತು ಸ್ವತ್ಛ ಭಾರತ ||
ವೆಂಕಟೇಶ ಚಾಗಿ, ಲಿಂಗಸುಗೂರು, ರಾಯಚೂರು
74ನೇ ಸ್ವಾತಂತ್ರ್ಯ
ಎಪ್ಪತ್ತರ ಮೇಲೆ ಮೂರು ಕಳೆದು
ಮೇಲೊಂದು ತುಂಬಿತೀಗ
ಇನ್ನೂ ಬೆಳೆಯುತ್ತಲಿದೆ ಅಂಗಾಂಗ-
ಧೃಢವಾಗಿ-
ಎದ್ದು ನಿಲ್ಲಲು ವರುಷಗಳು ಹಲವು ಬೇಕಾದದ್ದು ಸುಳ್ಳಲ್ಲ
ನಿಂತ ಮೇಲೆ ತಗ್ಗುವುದೂ ಗೊತ್ತು
ಬಗ್ಗು ಬಡಿಯುವುದೂ ಗೊತ್ತು
ಕಳೆದು ಹೋಗುತ್ತಿದೆ ವರುಷಗಳು ಕೆಲವು
ತೆರೆದುಕೊಳ್ಳುವ ದಾರಿಗಳು ಹಲವು
ಅಲ್ಲಲ್ಲಿ ನುಸುಳುವ ನಾಯಿಗಳು ಬೆಕ್ಕುಗಳು
ಬೇಲಿ ಹಾರುವ ಪುಂಡು ಪೋಕರಿಗಳು
ಕಟ್ಟುತ್ತಲೇ ಇರಬೇಕಿದೆ ಭದ್ರವಾದ ಬೇಲಿ
ಕಲ್ಲುಗಳ ಕೋಟೆ
ಬಿದ್ದ ಬಾವುಟಗಳೆಲ್ಲ ಜಗದಗಲ ಹಬ್ಬಿ ನಿಂತಿವೆ
ಬೀಳಿಸಿದವರ ಗೋರಿಯ ಮೇಲೆ ಅರಮನೆಗಳೂ ಅರಳಿವೆ
ಅಲ್ಲೊಬ್ಬ ಇಲ್ಲೊಬ್ಬ ಬಸ್ ನಿಲ್ದಾಣದ ಬಳಿಯಲೊಬ್ಬ
ಸ್ವಾತಂತ್ರ್ಯವ ಬಯಸಿ ಕಾಯುತ್ತಾನೆ ಈಗಲೂ
ದೇಹದಿಂದ ಬದುಕಿನಿಂದ ನಿತ್ಯ ಜಂಜಾಟಗಳಿಂದ
ನಿತ್ಯ ಕೊರೆಯುವ ಚಳಿಯಿಂದ ಹುತ್ತಕಟ್ಟಿ ನಿಂತ ಮೌಡ್ಯಗಳಿಂದ
ಬಿಡುಗಡೆಯ ಕೇಳುತ್ತಾನೆ ಪ್ರತಿನಿತ್ಯ
ಸ್ವಾತಂತ್ರ್ಯ ಗೀತೆ ಮೊಳಗುತ್ತದೆ ವರುಷಕೊಮ್ಮೆ
ಹಳ್ಳಿ ಹಳ್ಳಿಗಳಲ್ಲಿ
ಸರಕಾರಿ ಕಛೇರಿಗಳಲ್ಲಿ
ವರುಷದಲೊಮ್ಮೆ ಶುಚಿಗೊಂಡ ಗಾಂಧಿ
ಫೋಟ ನಿಶ್ಚಲ ಅಂದೂ ಇಂದೂ ಗೋಡೆಗಳಲ್ಲಿ
ಸೌಮ್ಯಾ ಪಿ., ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.