UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Team Udayavani, Jan 5, 2025, 12:18 PM IST
ಸಾಮಾನ್ಯವಾಗಿ ನಾವು ದೇವರಲ್ಲಿ ಪ್ರಾರ್ಥಿಸುವಾಗ ರೂಪ, ವಿದ್ಯೆ, ಬುದ್ಧಿ, ಗುಣ, ಆಯಸ್ಸು, ಆರೋಗ್ಯ, ಐಶ್ವರ್ಯ ಕರುಣಿಸುವಂತೆ ಬೇಡುತ್ತೇವೆ. ವಿದ್ಯೆ, ಗುಣ, ಆರೋಗ್ಯ ಹಾಗೂ ಐಶ್ವರ್ಯವನ್ನು ಒಬ್ಬ ವ್ಯಕ್ತಿಯನ್ನು ನೋಡಿದೊಡನೆ ಅಂದಾಜಿಸಬಹುದು. ಒಬ್ಬ ವ್ಯಕ್ತಿ ಸತತವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರೆ ಅವನ ಆರೋಗ್ಯ ಸದಾ ಸರಿ ಇರುವುದಿಲ್ಲವೆಂದು ಪರಿಗಣಿಸಬಹುದು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ ಅವನಿಗೆ ವಿದ್ಯೆ ಹತ್ತುತ್ತಿಲ್ಲವೆಂದು ಭಾವಿಸಬಹುದು. ಸಮಾಜದಲ್ಲಿ ಆಂತರಿಕ ಸೌಂದರ್ಯಕ್ಕೆ ಮನ್ನಣೆ ಸಿಗುವುದು ಬಹಳ ಕಡಿಮೆ. ಬಾಹ್ಯ ಸೌಂದರ್ಯವನ್ನು ಅವರ ಬಣ್ಣದ ಮೇಲೆ ಅಥವಾ ಆ ವ್ಯಕ್ತಿಯ ಆಕಾರದ ಮೇಲೆ ವರ್ಣಿಸುವುದು ಬಹಳ ಸುಲಭ. ಇನ್ನು ಬುದ್ಧಿಯ ವಿಚಾರಕ್ಕೆ ಬಂದರೆ ಒಬ್ಬ ವ್ಯಕ್ತಿಯ ನಡೆ-ನುಡಿ ಅಥವಾ ಬೇರೆ
ಯವರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಅಳೆಯಬಹುದು. ಆದರೆ ಆಯಸ್ಸು ಎಂಬುದನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ. ಒಂದು ಜೀವ ಹುಟ್ಟಿದೆ ಎಂದಾದರೆ ಸಾವು ಕಟ್ಟಿಟ್ಟ ಬುತ್ತಿ. ಆದರೆ ಆ ಸಾವು ಯಾವಾಗ ಹೇಗೆ ಎಂಬುದು ತಿಳಿಯಲಾಗದು. ಬ್ರಹ್ಮ ಸೃಷ್ಟಿಸುವಾಗ ಆಯಸ್ಸನ್ನು ಬರೆದು ಕಳುಹಿಸಿರುತ್ತಾನಂತೆ. ಪಾಪ ಪುಣ್ಯಗಳ ಲೆಕ್ಕದ ಆಧಾರದ ಮೇಲೆ ಕೊಟ್ಟ ಆಯಸ್ಸನ್ನು ತಿದ್ದುತ್ತಾನೆಂಬ ನಂಬಿಕೆ ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ನಿಜಾಂಶ ಸೃಷ್ಟಿಸಿದವನಿಗೆ ಬಿಟ್ಟು ಇನ್ನಾರಿಗೂ ತಿಳಿದಿಲ್ಲ.
ಹಿಂದೂ ಸಂಸ್ಕೃತಿಯಲ್ಲಿ ಜಾತಕವನ್ನು ಪಾಲಿಸುತ್ತೇವೆ. ಹುಟ್ಟಿದ ಘಳಿಗೆ, ರಾಶಿ, ನಕ್ಷತ್ರದ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಸ್ಥಾನಮಾನ ಹಾಗೂ ಅವನ ಆಯಸ್ಸನ್ನು ಬಹಳ ಹಿಂದೆ ಜಾತಕ ಬರೆಯುವ ಜ್ಯೋತಿಷರು ಹೇಳುತ್ತಿದ್ದರಂತೆ. ಆದರೆ ಒಬ್ಬ ವ್ಯಕ್ತಿಯ ಆಯಸ್ಸನ್ನು ನಿಖರವಾಗಿ ಇಂತಿಷ್ಟೇ ವರ್ಷ ಬದುಕುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ.
ಸಾವು ಯಾವ ಕ್ಷಣದಲ್ಲಾದರೂ ಬರಬಹುದು. ಯಾವ ವಯಸ್ಸಿನಲ್ಲಾದರೂ ಬರಬಹುದು. ಆದರೆ ಸಾವು ತಾನಾಗಿಯೇ ಬರುವ ಮುನ್ನ ಅದನ್ನು ಆಹ್ವಾನಿಸುವ ಸಂಖ್ಯೆ ಇಂದು ನಮ್ಮ ಸಮಾಜದಲ್ಲಿ ಜಾಸ್ತಿಯಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಹೆದರಿ ಮಾನಸಿಕ ಖನ್ನತೆಗೆ ಒಳಪಟ್ಟು ಸೋಲನ್ನು ಸ್ವೀಕರಿಸಲಾಗದೆ ಅಥವಾ ಸಂಸಾರದ ಸಾಗರದಲ್ಲಿ ಈಜಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕೆಲವೊಮ್ಮೆ ಅಂದುಕೊಂಡಂತೆ ಬದುಕು ಸಾಗದಿದ್ದಾಗ ಜೀವನದಲ್ಲಿ ತಾಳ್ಮೆಗೆಟ್ಟು ಕೆಲವೊಂದು ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಅಂತಹ ತಪ್ಪು ನಿರ್ಧಾರಗಳಲ್ಲಿ ಈ ಆತ್ಮಹತ್ಯೆ ಪ್ರಮುಖವಾದದ್ದು. ಅಂದುಕೊಂಡಿದ್ದು ನಡೆಯದಿದ್ದಾಗ ಅಥವಾ ಧೈರ್ಯದಿಂದ ಬಂದಂತಹ ಕಷ್ಟವನ್ನು ಎದುರಿಸಲಾಗದಿದ್ದಾಗ ಅಥವಾ ಆಸೆ ಕನಸುಗಳನ್ನು ಬೆನ್ನತ್ತಿ ಹೋಗಲು ಸಾಧ್ಯವಾಗದಿದ್ದಾಗ ಮನಸ್ಸಿಗೆ ಬರುವ ಮೊದಲ ಯೋಚನೆ ಆತ್ಮಹತ್ಯೆ.
ಅನೇಕ ಜೀವಗಳು ಇಂಥ ಚಿಕ್ಕ ಚಿಕ್ಕ ಕಾರಣಗಳಿಂದಾಗಿ ಮನನೊಂದು ಮನೆಯವರಿಂದ ದೂರಾಗುವ ಯೋಚನೆಯನ್ನು ಕೈಗೊಳ್ಳುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೇನೆಂದರೆ ಎಲ್ಲರಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯವಿರುವುದಿಲ್ಲ.
ಅನೇಕ ಬಾರಿ ಮನೆಯಲ್ಲಿ ಮಾತಿಗೆ ಮಾತನಾಡುವಾಗ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಹೇಳುವುದುಂಟು. ಆದರೆ ಸಾಯಲು ಮನಸಾಗುವುದಿಲ್ಲ. ಎಲ್ಲವನ್ನು ಬಿಟ್ಟು ಹೊರಡಬೇಕು ಎಂದು ನಿರ್ಧರಿಸಿದ ಅದೆಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮುಂದಾದರೂ ಸಾವು ಅವರ ಬಳಿ ಬರುವುದಿಲ್ಲ. ಒಂದೋ ಸಾಯುವ ಪ್ರಯತ್ನದಲ್ಲಿ ವಿಫಲವಾಗುತ್ತಾರೆ. ಇಲ್ಲವೇ ಅರ್ಧಂಬರ್ಧ ಜೀವವಾಗಿ ಬದುಕಿರುವಷ್ಟು ದಿನ ನರಳುತ್ತಾರೆ. ಉದಾಹರಣೆಗೆ ಸಾಯಲು ನೇಣಿಗೆ ಶರಣಾಗಲು ಹೊರಟಿರುವ ವ್ಯಕ್ತಿಯ ಹಗ್ಗ ಕಳಚಿ ಬಿದ್ದು ಸೊಂಟ ಮುರಿದುಕೊಳ್ಳುವುದುಂಟು. ಸಾವು ಬರಲಿಲ್ಲ ಆದರೆ ನೋವು ತಪ್ಪಲಿಲ್ಲ.
ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾರೆ ಎಂದಾದರೆ ಅವರ ಆಯಸ್ಸು ಅಥವಾ ಭೂಮಿಯ ಮೇಲೆ ಅವರ ಋಣ ಅಷ್ಟೇ ಇತ್ತು ಎಂದಾಗುತ್ತದೆ. ಆತ್ಮಹತ್ಯೆಗೆ ಪ್ರಯತ್ನ ಪಟ್ಟವರೆಲ್ಲರೂ ಸಾಯುವುದಿಲ್ಲ. ಭಗವಂತ ಕೊಟ್ಟ ಆಯಸ್ಸನ್ನು ಅವನಾಗಿಯೇ ಹಿಂಪಡೆಯಬೇಕು. ಅದು ಪೂರ್ವ ನಿರ್ಧರಿತವಾಗಿರುತ್ತದೆ.
ಒಬ್ಬ ವ್ಯಕ್ತಿಯ ಸಾವು ಹೀಗೆಯೇ ಆಗಬೇಕು ಎಂದು ಮುಂಚೆಯೇ ನಿರ್ಧರಿಸಿರುತ್ತಾನೆ. ಅದು ಆತ್ಮಹತ್ಯೆ ಆಗಿರಬಹುದು, ಕೊಲೆ ಆಗಿರಬಹುದು ಅಥವಾ ಅಪಘಾತವಾಗಿರಬಹುದು, ಇಲ್ಲವೇ ಸ್ವಾಭಾವಿಕ ಸಾವೇ ಆಗಿರಬಹುದು. ಅದು ಭಗವಂತನ ನಿರ್ಣಯ. ಆತ್ಮಹತ್ಯೆಗೆಂದು ವಿಷ ಕುಡಿದು ಬದುಕಿದವರೂ ಇದ್ದಾರೆ. ಆಕಸ್ಮಿಕವಾಗಿ ವಿಷ ತಿಂದು ಸತ್ತವರೂ ಇದ್ದಾರೆ.
ಆತ್ಮಹತ್ಯೆ ಮಹಾ ಪಾಪ ನಿಜ. ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ತಾಳ್ಮೆಯಿಂದ ಯೋಚಿಸಿದಾಗ ಪ್ರತಿಯೊಂದು ಸಮಸ್ಯೆಗೂ ಪರಿಹಾರ ದೊರೆಯುತ್ತದೆ. ಆತ್ಮಹತ್ಯೆಯಲ್ಲಿ ನೆಮ್ಮದಿ ಕಾಣಬಯಸುವ ಜೀವ ತನ್ನ ಮನೆಯವರ ನೆಮ್ಮದಿಯನ್ನು ಅವರ ಬದುಕಿನ ಪರ್ಯಂತ ಕಸಿಯುವಂತಾಗಬಾರದು.
ಆತ್ಮಹತ್ಯೆ ಮಹಾ ಪಾಪ
ಮನೆಯವರಿಗೆ ಇದು ಶಾಪ.
ಸಾಯಲೆಂದು ಕುಡಿದ್ದಿದ್ದರೂ ವಿಷ
ಬದುಕಬಹುದು ಉಳಿದಿದ್ದರೆ ಆಯುಷ್ಯ.
ಆಯಸ್ಸು ಬೇಕು ಭೂಮಿಯಲ್ಲಿ ಬದುಕಲು
ಮುಗಿದಿರಬೇಕು ಆಯಸ್ಸು, ಆತ್ಮಹತ್ಯೆಯಿಂದ ಸಾಯಲು
-ಆಶ್ರಿತ ಕಿರಣ್
(ಆಕೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.