UV Fusion: Cinema- ದಿ ಲಾಸ್ಟ್ ಬರ್ತ್‌ಡೇ
Team Udayavani, Jul 22, 2024, 10:30 AM IST
ಈ ಸಿನಿಮಾವೂ ಆಫ್ಘಾನಿಸ್ಥಾನಕ್ಕೆ ಸಂಬಂಧಿಸಿದ್ದು. ಅದಕ್ಕಿಂತಲೂ ಹೆಚ್ಚಾಗಿ ತಾಲಿಬಾನರ ಮರುಪ್ರವೇಶದ ಕಥೆಯ ಕುರಿತಾದದ್ದು. ಮೂರು ವರ್ಷಗಳ ಹಿಂದೆ ಅಮೆರಿಕ ತನ್ನ ಸೇನೆಯನ್ನು ವಾಪಸು ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ತಾಲಿಬಾನರ ಮರು ಪ್ರವೇಶ ಆರಂಭವಾಗಿತ್ತು. ತಾಲಿಬಾನರು ಕಾಬೂಲ್‌ಗೆ ಪ್ರವೇಶಿಸಿದ ಸಂದರ್ಭದ ಕೆಲವು ಕ್ಷಣಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಈ ಸಿನಿಮಾದಲ್ಲಿ.
ಇದು ಗೋವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿತ್ತು. ಇದರ ನಿರ್ದೇಶಕ ನವೀದ್ ಮಹೊ¾ದಿ. ಆಫ್ಘಾನಿ ಸ್ಥಾನದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು.
ಒಬ್ಬಳು ಪತ್ರಕರ್ತೆಯ ಜನ್ಮದಿನ ಆಕೆಯ ಕೊನೆಯ ಜನ್ಮದಿನವೂ ಆಗುತ್ತದೆ. ತನ್ನ ಪ್ರಿಯಕರನೊಂದಿಗೆ ಬದುಕಿ ಬಾಳುವ ಕನಸು ಕಂಡಿದ್ದ, ಸ್ವಾತಂತ್ರ್ಯದ ಪರಿಮಳವನ್ನು ಸಂಪೂರ್ಣವಾಗಿ ಆಸ್ವಾದಿಸ ಬೇಕೆಂದು ಕನಸು ಕಂಡಿದ್ದ ಸೊರಯ್ನಾ ತಾಲಿ ಬಾನರ ಆಗಮನದಿಂದ ಭರವಸೆಯನ್ನೇ ಕಳೆದುಕೊಳ್ಳುತ್ತಾಳೆ. ಅವರ ಗುಂಡುಗಳು ಸೊರಯ್ನಾಳನ್ನೂ, ಅವಳ ಕನಸನ್ನೂ ಬಲಿ ತೆಗೆದುಕೊಳ್ಳುತ್ತವೆ.
ಸೊರಯ್ನಾಳ ಮನೆ ಬರೀ ಪತ್ರಕರ್ತೆಯ ಮನೆ ಯಾಗಿರುವುದಿಲ್ಲ. ಕಾಬೂಲ್‌ನ ಕಲಾವಿದರು, ಸಿನಿಮಾ ನಟರು-ಹೀಗೆ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಆಗಾಧವಾಗಿ ಪ್ರೀತಿಸುವವರೆಲ್ಲ ತಾಣವಾಗಿರುತ್ತದೆ. ಅದರಂತೆಯೇ ಅವಳ ಜನ್ಮದಿನಾಚರಣೆಗೆ ತಯಾರಿ ನಡೆಯುತ್ತದೆ. ಸ್ನೇಹಿತೆಯರು, ಕಲಾವಿದರೆಲ್ಲ ಸೇರಿಕೊಳ್ಳುತ್ತಾರೆ. ಪ್ರಿಯಕರನೂ ಬರುತ್ತಾನೆ. ಅಷ್ಟರಲ್ಲಿ ತಾಲಿಬಾನರು ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಲಭ್ಯವಾಗುತ್ತದೆ. ಎಲ್ಲರ ಕನಸುಗಳೂ ಛಿದ್ರಗೊಳ್ಳುತ್ತವೆ.
ಅದರಲ್ಲೂ ತನ್ನ ಕಲಾ ಸ್ನೇಹಿತರನ್ನೆಲ್ಲ ಬೇರೆ ದೇಶಕ್ಕೆ ಪಲಾಯನಗೈಯಲು ತನ್ನ ಪ್ರಿಯಕರನಿಂದ ವ್ಯವಸ್ಥೆ ಮಾಡಿಸಿ ಕಳುಹಿಸುವ ಸೊರಯ್ನಾ ತಾನೂ ತನ್ನ ಕೊನೆಯ ಭಾವಚಿತ್ರವನ್ನು ತೆಗೆದುಕೊಂಡು ಹೊರಡಲು ಅನುವಾಗುತ್ತಾಳೆ. ಅಷ್ಟರಲ್ಲಿ ತಾಲಿಬಾನರು ಬಂದು ಮುತ್ತಿಕೊಳ್ಳುತ್ತಾರೆ. ಅಲ್ಲಿಗೆ ಸ್ವಾತಂತ್ರ್ಯವೆಂಬ ಬಾಗಿಲಿಗೆ ಸರ್ವಾಧಿಕಾರತನದ ತೆರೆ ಬೀಳುತ್ತದೆ.
ಒಂದು ರೀತಿಯಲ್ಲಿ ಡಾಕ್ಯುಫೀಚರ್ ಎನ್ನು ವಂತೆಯೂ ರೂಪಿಸಿರುವ ಚಿತ್ರವಿದು. ತಾಲಿಬಾನರ ಮರು ಪ್ರವೇಶದ ಸಂದರ್ಭ ಜನರು ಎದುರಿಸಿದ ಸಂಕಷ್ಟ, ಮಾನಸಿಕ ನೋವು, ಭಯ ಹಾಗೂ ತಾಲಿಬಾನ ರೌರವತೆ ಎಲ್ಲವನ್ನೂ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾನೆ ನಿರ್ದೇಶಕ. ಹಾಗೆಂದು ಇದು ರಾಜಕೀಯ ಹೇಳಿಕೆ ಯಂತಾಗದಂತೆ ಎಚ್ಚರ ವಹಿಸಿದ್ದಾರೆ. ಹಾಗಾಗಿ ಇದು ಕೊನೆಗೂ ಒಂದು ಚಲನಚಿತ್ರವಾಗಿಯೇ ಉಳಿಯುತ್ತದೆ. ಅದೇ ಆದರ ವಿಶೇಷ. ಎಲಾಹೆ ಶಕರ್ ದೂಸ್ತ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಹಲವಾರು ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಸುದ್ದಿಯಾದ ಚಿತ್ರವಿದು. ಪರ್ಷಿಯನ್ ಭಾಷೆಯಲ್ಲಿರುವ ಈ ಚಿತ್ರ ಒಂದೂವರೆ ಗಂಟೆಯದ್ದು.
-ಅಪ್ರಮೇಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.