Question: ಎಲ್ಲರಲ್ಲೂ ಬೆಳೆಯಲಿ ಪ್ರಶ್ನಿಸುವ ಮನೋಭಾವ…
Team Udayavani, Jun 24, 2024, 1:30 PM IST
ಪ್ರಶ್ನೆ ಎಂದರೆ ನಮಗೆ ನೆನಪಿಗೆ ಬರುವುದು ಶಾಲಾ-ಕಾಲೇಜು ದಿನಗಳು. ಆ ದಿನಗಳಲ್ಲಿ ಅದೆಷ್ಟು ಪ್ರಶ್ನೆಗಳಿಗೆ ಉತ್ತರ ಪತ್ರಿಕೆಗಳಲ್ಲಿ ಉತ್ತರಿಸಿದ್ದೆವೋ…! ಆಗಷ್ಟೇ ಶಾಲೆಯ ಮೆಟ್ಟಿಲನ್ನು ಏರಿದ ಮಗು ಡಿಗ್ರಿ ಮುಗಿಸುವವರೆಗೆ ಅಥವಾ ಉನ್ನತ ಶಿಕ್ಷಣ ಮುಗಿಸುವವರೆಗೆ ಅದೆಷ್ಟೋ ಪ್ರಶ್ನೆಗಳಿಗೆ ಪರೀಕ್ಷೆಗಳಲ್ಲಿ ಉತ್ತರಿಸುತ್ತದೆ. ಆ ಮಟ್ಟಿಗೆ ಪ್ರಶ್ನೆ ಎಂಬ ಪದವು ಎಲ್ಲರ ಜೀವನದಲ್ಲೂ ಹಾಸು ಹೊಕ್ಕಾಗಿದೆ.
ಆಗಷ್ಟೇ ತೊದಲು ನುಡಿಗಳಿಂದ ಮಾತನಾಡಲು ಪ್ರಾರಂಭಿಸುವ ಮಗುವು ತನ್ನ ಅಪ್ಪ ಅಮ್ಮನಿಗೆ ಎಷ್ಟು ಪ್ರಶ್ನೆಗಳನ್ನು ಕೇಳಬಹುದೆಂದು ಪ್ರಶ್ನಿಸಿಕೊಂಡರೆ, ಉತ್ತರವೂ ಸಹ ಪ್ರಶ್ನೆಯಾಗಿಯೇ ಉಳಿಯಬಹುದು. ಏಕೆಂದರೆ ಬೆಳೆಯುವ ಮಕ್ಕಳಲ್ಲಿ ವಿಪರೀತ ಕುತೂಹಲ ಇರುತ್ತದೆ. ಸಹಜವಾಗಿ ಪ್ರಶ್ನೆಗಳು ಸಹ ಸರಮಾಲೆಯಂತೆಯೇ ಇರುತ್ತದೆ.
ಇಂತಹ ಸಮಯದಲ್ಲಿ ಮಗುವಿಗೆ ಆ ವಯಸ್ಸಿಗೆ ತಕ್ಕಂತೆ ಸಮರ್ಪಕವಾಗಿ ಚಿಕ್ಕದಾಗಿ ಚೊಕ್ಕದಾಗಿ ಉತ್ತರಿಸುವುದು ಪೋಷಕರ ಕರ್ತವ್ಯವಾಗಿದೆ. ಬಹಳಷ್ಟು ಸಲ ಕೆಲಸದ ಜಂಜಾಟದಿಂದ ಅಥವಾ ತಾಳ್ಮೆಗೆಟ್ಟು ಇದೇಕೆ ಮಗು ಇಂತಹ ಬೇಡದ ಪ್ರಶ್ನೆಯನ್ನು ಕೇಳುತ್ತಿದೆ? ಕೇಳಿದ ಪ್ರಶ್ನೆಯನ್ನೇ ಮತ್ತೆ ಮತ್ತೆ ಏಕೆ ಕೇಳುತ್ತಿದೆ? ಎಂದು ತಂದೆ ತಾಯಿಯರು ಮಕ್ಕಳಿಗೆ ಗದರುವುದುಂಟು.
ವಿಪರ್ಯಾಸವೆಂದರೆ ತಾವೂ ಕೂಡ ಚಿಕ್ಕವರಿದ್ದಾಗ ಇಂತಹ ಚಿಕ್ಕ ಚಿಕ್ಕ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳಿ ದೊಡ್ಡವರಾದೆವು ಎಂಬುದನ್ನು ಸಂಪೂರ್ಣವಾಗಿ ಪೋಷಕರು ಮರೆತು ಹೋದಂತಿದೆ. ಪೋಷಕರು ಮಗುವಿಗೆ ಹೊಸದರ ಬಗ್ಗೆ ಹೆಚ್ಚೆಚ್ಚು ಪರಿಚಯ ಮಾಡಿಕೊಟ್ಟಷ್ಟೂ ಮಗುವಿನ ಭವಿಷ್ಯಕ್ಕೇ ಉತ್ತಮ.
ಚಿಕ್ಕಂದಿನಿಂದಲೇ ಪ್ರಶ್ನಿಸಲು ಕಲಿತರೆ ಮಾತ್ರ ಮಕ್ಕಳು ದೊಡ್ಡವರಾದಾಗಲೂ ಸಹ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಆಗ ಮಾತ್ರ ತಮ್ಮ ಸುತ್ತಮುತ್ತ ನಡೆಯುವ ತಪ್ಪುಗಳನ್ನು ಅವರು ಪ್ರಶ್ನಿಸಲು ಸಾಧ್ಯ. ಇಲ್ಲದಿದ್ದರೆ ತಾವೂ ಆ ತಪ್ಪುಗಳ ಭಾಗವಾಗಿ ಮತ್ತೂಂದು ತಪ್ಪಿಗೆ ನಾಂದಿ ಆಗುತ್ತಾರೆ.
ಪ್ರಶ್ನಿಸುವ ಕಲೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕ. ಪ್ರಶ್ನಿಸುವ ಕಲೆಯಿಂದಲೇ ನಮ್ಮಲ್ಲಿ ಎಷ್ಟೋ ಜನರು ಮೇಧಾವಿಗಳಾಗಿ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಏಕೆ, ಏನು, ಹೇಗೆ, ಎಲ್ಲಿ, ಯಾವಾಗ ಎಂಬ ಪ್ರಶ್ನೆಗಳು ಅವರಿಗೆ ಬರದೇ ಇದ್ದಿದ್ದರೆ ಅವರು ಇಂದು ಪ್ರಖ್ಯಾತರಾಗುತ್ತಲೇ ಇರುತ್ತಿರಲಿಲ್ಲ…!
ಸರ್ ಐಸಾಕ್ ನ್ಯೂಟನ್ ಸೇಬಿನ ಮರದ ಕೆಳಗೆ ಕುಳಿತಿರುವಾಗ, ಸೇಬು ಅವರ ತಲೆಯ ಮೇಲೆ ಬಿದ್ದಿತು. ಆ ಸೇಬು ಕೆಳಗೇ ಏಕೆ ಬಿತ್ತು? ಮೇಲೆ ಏಕೆ ಹೋಗಲಿಲ್ಲ? ಎಂಬ ಪ್ರಶ್ನೆ ಅವರಿಗೆ ಅಂದು ಬರದೇ ಇದ್ದಿದ್ದರೆ ಗುರುತ್ವಾಕರ್ಷಣೆಯ ಸಿದ್ಧಾಂತ ರೂಪುಗೊಳ್ಳುತ್ತಲೇ ಇರಲಿಲ್ಲ.
ಸರ್ ಎಂ. ವಿಶ್ವೇಶ್ವರಯ್ಯ ಅವರು ಮೊಟ್ಟ ಮೊದಲ ಬಾರಿ ಜೋಗ ಜಲಪಾತವನ್ನು ವೀಕ್ಷಿಸಿದ ಎಲ್ಲರೂ ಅದರ ಸೌಂದರ್ಯದ ಬಗ್ಗೆ ಹಾಡಿಹೊಗಳುತ್ತಿದ್ದರೆ ವಿಶ್ವೇಶ್ವರಯ್ಯನವರು ಇದೇಕೆ ಇಷ್ಟು ನೀರು ವ್ಯರ್ಥವಾಗಿ ಪೋಲಾಗುತ್ತಿದೆಯಲ್ಲ? ಎಂದು ಪ್ರಶ್ನಿಸಿಕೊಂಡರಂತೆ. ಆ ಪ್ರಶ್ನೆಯಿಂದಲೇ ಮುಂದೆ ಜಲವಿದ್ಯುತ್ ಯೋಜನೆ ಅಲ್ಲಿ ಶುರುವಾಗಲು ಕಾರಣವಾಯಿತು.
ಈ ರೀತಿ ತಮಗೆ ತಾವೇ ಪ್ರಶ್ನಿಸಿಕೊಂಡರೆ ಅದರಿಂದ ಸಿಗುವ ಉತ್ತರ ಜೀವನದ ಗತಿಯನ್ನೇ ಬದಲಿಸಬಹುದು. ಪೋಷಕರಾದ ನಾವು ಮಕ್ಕಳಿಗೆ ಇಂದಿನಿಂದಲೇ ಪ್ರಶ್ನಿಸಲು ಪ್ರೋತ್ಸಾಹಿಸಬೇಕು. ಆಗ ಮಾತ್ರ ಅವರು ಯಾವುದೇ ಶೋಷಣೆ, ದೌರ್ಜನ್ಯಗಳಿಗೆ ಅಕಸ್ಮಾತ್ ಒಳಗಾದರೂ ಅದರ ಬಗ್ಗೆ ಭಯಪಡದೆ ಅಪ್ಪ ಅಮ್ಮನಲ್ಲಿ ಬಂದು ಹೇಳುತ್ತಾರೆ.
ಪೋಷಕರು ಸಹ ಅಂತಹ ಸಮಯದಲ್ಲಿ ಮಗುವನ್ನು ದೂಷಿಸದೆ ಅಥವಾ ವಿಷಯವನ್ನು ಮುಚ್ಚಿಡದೆ, ಧೈರ್ಯವಾಗಿ ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ. ಪ್ರಶ್ನಿಸುವುದನ್ನು ಕಲಿತ ಮಗುವೇ ದೊಡ್ಡವನಾದಾಗ ಯಾವುದೇ ಅನ್ಯಾಯದ ವಿರುದ್ಧ ಮುಲಾಜಿಲ್ಲದೆ ಧ್ವನಿ ಎತ್ತುತ್ತಾರೆ. ಆಗ ಮಾತ್ರ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಕಡಿಮೆಯಾಗಿಸಬಹುದಾಗಿದೆ.
ಇವೆಲ್ಲದಕ್ಕೂ ಒಂದೇ ಉತ್ತರವೆಂದರೆ ಪ್ರಶ್ನಿಸುವ ಮಗುವನ್ನು ಏಕೆ ಪ್ರಶ್ನಿಸುತ್ತೀಯಾ? ಎನ್ನದೇ ತಾಳ್ಮೆಯಿಂದ ಉತ್ತರಿಸುವುದಾಗಿದೆ.
-ಅಚಲ ಬಿ., ಹೆನ್ಲಿ
ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.