UV Fusion: ಜೀವನದಲ್ಲಿ ಕ್ಷಮಾಗುಣ ಬೆಳೆಸೋಣ
Team Udayavani, Nov 27, 2024, 2:54 PM IST
ಸುಬ್ಬಣ್ಣ ಮತ್ತು ಚಂದ್ರಪ್ಪ ಇಬ್ಬರೂ ಜೀವದ ಗೆಳೆಯರಾಗಿದ್ದರು. ಇಬ್ಬರ ಮಧ್ಯದಲ್ಲಿ ಅದೆಂತಹ ಅನ್ಯೂನ್ಯತೆ ಇತ್ತೆಂದರೆ ಪ್ರತಿಯೊಬ್ಬರೂ ಅಸೂಹೆಯಿಂದ ಕರುಬುವಷ್ಟು. ಇಬ್ಬರದೂ ಅಕ್ಕಪಕ್ಕದ ಹೊಲ. ಒಮ್ಮೆ ಸುಬ್ಬಣ್ಣ ತುರ್ತಾಗಿ ಬೇರೆ ಊರಿಗೆ ಹೋಗಬೇಕಾಯಿತು. ತನ್ನ ಸ್ನೇಹಿತನಾದ ಚಂದ್ರಪ್ಪನಿಗೆ ತನ್ನ ಹೊಲಕ್ಕೆ ಬೀಡಾಡಿ ಹಸುಗಳು ನುಗ್ಗಿ, ಬೆಳೆಯನ್ನು ತಿನ್ನದಂತೆ ಒಂದು ದಿನದ ಮಟ್ಟಿಗೆ ನೋಡಿಕೊಳ್ಳಲು ತಿಳಿಸಿ ಹೋಗಿದ್ದ. ಅಲ್ಲಿಯವರೆಗೂ ಈ ರೀತಿಯ ಹೊಂದಾಣಿಕೆ ಅವರ ಮಧ್ಯೆ ಸರ್ವೇಸಾಮಾನ್ಯವಾಗಿತ್ತು.
ಆದರೆ ಅಂದು ಸುಬ್ಬಣ್ಣ ಅತ್ತ ಹೋಗುತ್ತಿದ್ದಂತೆ, ಇತ್ತ ಇದ್ದಕ್ಕಿದ್ದಂತೆ ಚಂದ್ರಪ್ಪನ ಹೆಂಡತಿಗೆ ವಿಪರೀತ ಹೊಟ್ಟೆನೋವು ಪ್ರಾರಂಭವಾಯಿತು. ಹಾಗಾಗಿ ಆ ಪರಿಸ್ಥಿತಿಯಲ್ಲಿ ಚಂದ್ರಪ್ಪ ಸುಬ್ಬಣ್ಣನ ಹೊಲದ ನೆನಪು ಮರೆತು, ಹೆಂಡತಿಯನ್ನು ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ತನ್ನ ಅಚಾತುರ್ಯದ ನೆನಪು ಮಾಡಿಕೊಂಡ. ವಾಪಸು ಬಂದು ನೋಡುವುದರೊಳಗೆ ಹಸುಗಳು ಹೊಲ ನುಗ್ಗಿ ಬೆಳೆಯನ್ನೆಲ್ಲಾ ತಿಂದುಹಾಕಿದ್ದವು. ತನ್ನ ಪರಿಸ್ಥಿತಿ ಹಾಗಿದ್ದದ್ದರಿಂದ ಗೆಳೆಯನ ಬೆಳೆ ಕಾಯಲು ಆಗಲಿಲ್ಲವೆಂದು ಪಶ್ಚಾತ್ತಾಪ ಪಟ್ಟ.
ಆದರೆ ವಾಪಸು ಬಂದು ನೋಡಿದ ಸುಬ್ಬಣ್ಣನಿಗೆ ಆಘಾತವಾಯಿತು. ಗೆಳೆಯನ ಮೇಲೆ ಭರವಸೆಯಿಟ್ಟರೆ ಮೋಸ ಮಾಡಿದನೆಂದು ಮನದಲ್ಲೇ ಅಂದುಕೊಂಡು ಒಂದೂ ಮಾತನಾಡದೆ ಮಾತು ಬಿಟ್ಟ. ಚಂದ್ರಪ್ಪನಿಗೂ ಸುಬ್ಬಣ್ಣನನ್ನು ಮಾತನಾಡಿಸುವ ಧೈರ್ಯ ಬರಲಿಲ್ಲ. ಇದು ಹೀಗೆಯೇ ವಾರ ದಾಟಿ, ತಿಂಗಳು ಕಳೆದು ವರ್ಷವಾದರೂ ಇಬ್ಬರ ನಡುವೆ ಮಾತುಕತೆ ಇಲ್ಲದಾಯಿತು.
ಇವರ ಗೆಳೆತನ ತಿಳಿದಿದ್ದ ನೆರೆಹೊರೆಯವರು ಸುಬ್ಬಣ್ಣನಿಗೆ ವಿಚಾರಿಸಿದರೆ “ತಪ್ಪು ಮಾಡಿದವನು ಅವನು ಒಂದು ಕ್ಷಮೆ ಕೇಳುವ ವ್ಯವಧಾನ ಇಲ್ಲ, ನಾನ್ಯಾಕೆ ಮಾತಾಡುಸ್ಬೇಕು. ಅವನು ಬಂದು ತಪ್ಪಾಯ್ತು ಕ್ಷಮಿಸು ಅನ್ನಲಿ, ಆಗ ಮಾತಾಡಿಸ್ತೀನಿ’ ಎಂದ. ಇತ್ತ ಚಂದ್ರಪ್ಪನಿಗೆ ಕೇಳಿದರೆ ಅವತ್ತು ನನ್ನ ಪರಿಸ್ಥಿತಿ ಹೇಗಿತ್ತು ಅನ್ನೋದು ಅವನಿಗೆ ಗೊತ್ತಾಯ್ತಲ್ಲ, ಅದನ್ನು ಅರ್ಥ ಮಾಡ್ಕೊಂಡು ಮಾತಾಡ್ಸಬೇಕಿತ್ತು. ಅವನಿಗೆ ಕೊಬ್ಬು ಜಾಸ್ತಿ, ನಾನ್ಯಾಕೆ ಮಾತಾಡುಸ್ಬೇಕು ಎನ್ನುತ್ತಾನೆ.
ಹೀಗೆ ಗೊತ್ತಿಲ್ಲದೆಯೇ ಆದ ತಪ್ಪಿಗೆ ಕ್ಷಮೆ ಕೇಳಲಿಲ್ಲ ಎಂಬ ಕಾರಣಕ್ಕೆ ಜೀವನಪೂರ್ತಿ ಮಾತು ಬಿಟ್ಟು ಕೂತ ಆತ್ಮೀಯ ಸ್ನೇಹಿತರವರು. “ತಪ್ಪಾಯ್ತು ಕ್ಷಮಿಸಿಬಿಡು’ ಎಂಬ ಒಂದೇ ಒಂದು ಮಾತು ಅದೆಂತಹ ಕಡುಕೋಪಿಷ್ಟನಲ್ಲಿಯೂ ಒಮ್ಮೆ ಮನಕ್ಕೆ ತಾಗಿ ಕೋಪ ಕುಂದಿಸಿ, ಶಾಂತತೆಯನ್ನು ತಂದುಬಿಡಬಹುದು. ಇಲ್ಲಿ ಚಂದ್ರಪ್ಪ ಒಂದು ಮಾತು ಕ್ಷಮಿಸು ಎಂದು ಕೇಳಿದ್ದರೂ ಅವರ ಬಂಧ ಮುರಿಯದೇ ಮುಂದುವರಿಯುತ್ತಿತ್ತು.
ಒಮ್ಮೆ ಯೋಚಿಸಿ ನೋಡೋಣ, ಮನುಷ್ಯನೆಂದ ಮೇಲೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಒಂದಲ್ಲ ಒಂದು ತಪ್ಪು ಮಾಡಿರುತ್ತಾನೆ ಅಥವಾ ಇನ್ನೊಬ್ಬರ ಮನಸ್ಸಿಗೆ ನೋವು ತಂದಿರುತ್ತಾನೆ. ಅದನ್ನು ಅರ್ಥ ಮಾಡಿಕೊಂಡು, ತನ್ನಿಂದ ತಪ್ಪಾದ ಅಥವಾ ನೋವಾದ ವ್ಯಕ್ತಿಗೆ ಒಮ್ಮೆ ಕ್ಷಮೆ ಕೇಳಿದರೆ, ಅದೆಂತಹ ಕಲ್ಲುಹೃದಯದ ವ್ಯಕ್ತಿಯಾದರೂ ನಮ್ಮನ್ನು ಕ್ಷಮಿಸಲಾಗದಿದ್ದರೂ ಕನಿಷ್ಠ ಹಗೆ ಸಾಧಿಸುವುದನ್ನಾದರೂ ನಿಲ್ಲಿಸುತ್ತಾನೆ. ಹಾಗೆಯೇ ಅವನು ಕ್ಷಮಿಸಿಬಿಟ್ಟರೆ ಪುನಃ ಒಂದೊಳ್ಳೆಯ ಸಂಬಂಧ ಕುದುರಿದಂತೆ. ಹೀಗೆ ಪುನಃ ಸಂಬಂಧವನ್ನು ಬೆಸೆಯಲು ಕಾರಣವಾಗಿದ್ದು ನಾವು ಕೇಳಿದ ಕ್ಷಮೆಯಿಂದ ಜತೆಗೆ ಕ್ಷಮಿಸಿದವನ ದೊಡ್ಡ ಗುಣದಿಂದ.
ಕ್ಷಮೆ ಎಂಬುದೇ ವಿಶಿಷ್ಟವಾದ ಶಕ್ತಿ. ಕ್ಷಮೆ ಕೇಳುವುದು ಅಥವಾ ಕ್ಷಮಿಸಿಬಿಡುವುದು ಎರಡೂ ಅಷ್ಟು ಸುಲಭದ ವಿಚಾರವಲ್ಲ. ಇವೆರಡೂ ಸಮಾಜದಲ್ಲಿ, ಸಂಬಂಧದಲ್ಲಿ ಅದ್ಭುತ ಎನ್ನುವಂತ ಬದಲಾವಣೆಯನ್ನೇ ತಂದುಬಿಡುತ್ತವೆನ್ನುವುದನ್ನು ಯಾರೂ ಮರೆಯಬಾರದು. ಕ್ಷಮೆ ಕೇಳಿಬಿಟ್ಟರೆ ಎಲ್ಲೋ ತಾನೇ ತಪ್ಪನ್ನು ಒಪ್ಪಿಕೊಂಡಂತೆ, ತಾನೇ ಸಣ್ಣವನಾದಂತೆ ಎಂದುಕೊಳ್ಳುವುದೇ ತಪ್ಪು. ಒಬ್ಬ ವ್ಯಕ್ತಿ ಯಾರಲ್ಲಿಯೋ ಕ್ಷಮೆ ಕೇಳುತ್ತಿದ್ದಾನೆಂದರೆ ಅವನೇನೋ ತಪ್ಪನ್ನೇ ಮಾಡಿದ್ದಾನೆಂದು ಭಾವಿಸಬೇಕಿಲ್ಲ. ಅವನಿಗೆ ಅಹಂಗಿಂತ ಸಂಬಂಧ ಮುಖ್ಯವಾಗಿದೆಯೆಂದರ್ಥ. ತಪ್ಪನ್ನೇ ಮಾಡದೆಯೂ ಒಬ್ಬ ವ್ಯಕ್ತಿ ಕ್ಷಮೆ ಯಾಚಿಸಿ, ಸಂಬಂಧ ಗಟ್ಟಿಗೊಳಿಸಿಕೊಳ್ಳುತ್ತಾನೆಂದರೆ, ತಪ್ಪು ಮಾಡಿದವನು ಕ್ಷಮೆ ಕೇಳುವುದರಲ್ಲಿ ತಪ್ಪೇ ಇಲ್ಲವಲ್ಲವೇ?
ಪತಿ-ಪತ್ನಿಯ ನಡುವೆ, ಸ್ನೇಹಿತರ ನಡುವೆ, ಅಣ್ಣ-ತಮ್ಮಂದಿರ ನಡುವೆ, ಸಹೋದ್ಯೋಗಿಗಳ ನಡುವೆ ಹೀಗೆ ಎಲ್ಲಾ ಕಡೆ ಎಷ್ಟೋ ಸಲ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ. ಹಾಗೆಯೇ ಆ ಭಿನ್ನಾಭಿಪ್ರಾಯಗಳನ್ನು ಮರೆತು, ನಡೆಯುವ ಸಣ್ಣ ತಪ್ಪುಗಳನ್ನು ಕ್ಷಮಿಸುತ್ತಾ, ಆಗುವ ತಪ್ಪುಗಳಿಗೆ ಕ್ಷಮೆ ಕೇಳುತ್ತಾ ಸಾಗಿದರೆ ಪತಿ-ಪತ್ನಿಯ ಮಧ್ಯೆ ಸಂಬಂಧ ಗಟ್ಟಿಯಾಗಿ ಸುಂದರ ಸಂಸಾರಕ್ಕೆ ನಾಂದಿಯಾಗುತ್ತದೆ.
ಅಣ್ಣ-ತಮ್ಮಂದಿರ, ಸ್ನೇಹಿತರ, ಸಹೋದ್ಯೋಗಿಗಳ ಸಂಬಂಧಗಳೂ ಸಲೀಸಾಗಿ ಕುಟುಂಬ, ಸ್ನೇಹವಲಯ, ಕಾರ್ಯಸ್ಥಳ ಎಲ್ಲವೂ ಸುಲಲಿತವಾಗುತ್ತವೆ. ಇಲ್ಲಿ ಎಲ್ಲ ಕಡೆಯೂ ಅಹಂ ತೊರೆದು, ಕ್ಷಮಿಸುತ್ತಾ, ಕ್ಷಮೆ ಯಾಚಿಸುತ್ತಾ ಸಾಗಬೇಕಾದ ಜರೂರತ್ತಿದೆ. ಇಂತಹ ಸುಂದರ ಸಂಬಂಧದ ಬೆಸೆಯುವಿಕೆಗಾಗಿಯೇ ಪ್ರತೀ ವರ್ಷದ ಜುಲೈ ಏಳನೇ ತಾರೀಖನ್ನು ‘ವಿಶ್ವ ಕ್ಷಮಾ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಬುದ್ಧ, ಏಸು ಮುಂತಾದ ಮಹನೀಯರು ಶ್ರೇಷ್ಠರೆನಿಸಿಕೊಳ್ಳಲು ಅವರೊಳಗಿದ್ದ ಕ್ಷಮಾಗುಣವೂ ಅತಿ ಮುಖ್ಯ ಕಾರಣವೆಂಬುದನ್ನು ಮರೆಯಬಾರದು. ಕ್ಷಮಾಗುಣ ಹೊಂದಿರುವವನು ಖಂಡಿತಾ ತುಂಬಾ ಶಕ್ತಿಶಾಲಿಯಾಗಿರುತ್ತಾನೆ, ದುರ್ಬಲನಿಂದ ಕ್ಷಮಿಸುವುದು ಸಾಧ್ಯವಿಲ್ಲ. ಸಂಬಂಧಗಳು ಚಿಗುರುವಂತಿದ್ದರೆ ಯಾರೋ ಮಾಡಿದ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಿ ಸಂಬಂಧಗಳ ಬಂಧವನ್ನು ಬೆಸೆಯಬೇಕು. ಇನ್ಯಾರೋ ಯಾವತ್ತಿಗೂ ಮರೆಯದಂತಹ ನೋವನ್ನು ನೀಡಿದ್ದರೆ, ನಮ್ಮ ವಿಷಯದಲ್ಲಿ ತಮ್ಮ ತಪ್ಪನ್ನು ಪುನಃ ಪುನರಾವರ್ತನೆ ಮಾಡುತ್ತಿದ್ದರೆ, ನಮ್ಮ ಮನಸ್ಸಿನ ನೆಮ್ಮದಿಗಾಗಿಯಾದರೂ ಅವರನ್ನು ಕ್ಷಮಿಸಬೇಕು.
ಇಲ್ಲದಿದ್ದರೆ ಅವರು ನಮಗೆ ಮಾಡಿದ ಮೋಸ, ಅವಮಾನಗಳ ನೆನಪುಗಳು ನಮ್ಮ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡಿಬಿಡುತ್ತವೆ. ಆ ಕಹಿ ನೆನಪುಗಳಿಂದ ತಪ್ಪಿಸಿಕೊಳ್ಳಲಿಕ್ಕಾದರೂ, ನಮ್ಮ ಮನಸ್ಸಿನಿಂದ ಅವರನ್ನು ಕಿತ್ತೂಗೆಯಲಿಕ್ಕಾದರೂ ಕ್ಷಮಿಸಿಬಿಡಬೇಕು. ಕ್ಷಮೆಗೆ ಯೋಗ್ಯರಾದವರನ್ನು ಖಂಡಿತಾ ಕ್ಷಮಿಸಿಬಿಡೋಣ. ಆ ಕ್ಷಮೆಗೂ ಅಯೋಗ್ಯರಾದವರನ್ನು ಮರೆತುಬಿಡೋಣ. ಹಾಗಾಗಿಯೇ ತಪ್ಪು ಮಾಡಿದವನು ನಮ್ಮ ಕ್ಷಮೆಗೆ ಅರ್ಹನಲ್ಲದಿದ್ದರೂ ನಮ್ಮ ಮನದ ಶಾಂತಿಗಾಗಿಯಾದರೂ ಬೇರೆಯವರನ್ನು ಕ್ಷಮಿಸಿಬಿಡಬೇಕು ಎನ್ನುತ್ತಾನೆ ಜೊನಾಥನ್ ಹ್ಯೂ.
ಒಂದು ಸಂಬಂಧ ಗಟ್ಟಿಗೊಳ್ಳಲು ನಮ್ಮ ಅಹಂ ಬದಿಗೊತ್ತಿ ಕ್ಷಮಿಸಿದರೆ, ಹಾಗೆಯೇ ಕ್ಷಮೆ ಕೇಳಿದರೆ ಖಂಡಿತಾ ಅದು ದೊಡ್ಡತನವೆನಿಸಿಕೊಳ್ಳುತ್ತದೆ. ಒಳ್ಳೆಯ ಸಂಬಂಧಕ್ಕಾಗಿ ಅಥವಾ ನಮ್ಮ ಮನಸ್ಸಿನ ನೆಮ್ಮದಿಗಾಗಿಯಾದರೂ ತಪ್ಪು ಮಾಡಿದವರನ್ನು ಕ್ಷಮಿಸುವ, ತಪ್ಪಾದರೆ ಕ್ಷಮೆ ಕೇಳುವ ಮನಸ್ಸು ಮಾಡೋಣ.
-ರಾಘವೇಂದ್ರ ಈ ಹೊರಬೈಲು
ಶಿಕ್ಷಕರು, ಸರಕಾರಿ ಪ್ರೌಢಶಾಲೆ,
ಶಿಕಾರಿಪುರ, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.