UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…
Team Udayavani, Jul 5, 2024, 2:58 PM IST
ಆತ್ಮವಿಶ್ವಾಸ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಜೀವನದ ಬಹುಮುಖ್ಯ ಭಾಗವಾಗಿರುತ್ತದೆ. ಯಾವುದೇ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಆತ್ಮವಿಶ್ವಾಸ ಅತ್ಯವಶ್ಯಕ. ವ್ಯಕ್ತಿಯೋರ್ವ ಎಷ್ಟೇ ಬುದ್ಧಿವಂತನಾದರೂ ಆತ್ಮವಿಶ್ವಾಸದ ಕೊರತೆಯುಂಟಾದರೆ ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲಾರ. ಈ ಆತ್ಮವಿಶ್ವಾಸ ಹೊಂದುವುದರ ಬಗೆಗೆ ಶಾಲಾ ಹಂತದಲ್ಲಿಯೇ ಕಲಿಸಲಾಗುತ್ತದೆ.
ಹೀಗೆ ಇದನ್ನು ಹೆಚ್ಚಿಸುವಲ್ಲಿ ಅಥವಾ ಕಡಿಮೆಗೊಳಿಸುವಲ್ಲಿ ನಮ್ಮ ಸುತ್ತಮುತ್ತಲಿನ ಸಮಾಜದ ಪ್ರಭಾವ ಬಹಳಷ್ಟಿರುತ್ತದೆ. ಪ್ರತಿಯೊಂದು ಕೆಲಸಕ್ಕೂ ತೆಗಳುವವರು ಹಾಗೂ ಹೊಗಳುವವರು ಇದ್ದೇ ಇರುತ್ತಾರೆ. ನಮಗೇನು ಬೇಕು, ಎಷ್ಟು ಬೇಕು ಎನ್ನುವುದನ್ನು ನಾವೇ ಸ್ವೀಕರಿಸಬೇಕಾಗುತ್ತದೆ.
ಎದುರಿಗಿರುವವರನ್ನು ಕುಗ್ಗಿಸಲೆಂದೇ ಹವಣಿಸುವವರು ಹಲವರು ನಮ್ಮ ನಡುವೆಯೇ ಸಿಗುತ್ತಾರೆ. ನಾವು ಬಹಳಷ್ಟು ವಿಚಾರಗಳಲ್ಲಿ ಅವರಿಗಿಂತ ಮುಂದಿದ್ದೇವೆ ಎನ್ನುವುದೇ ಅವರ ನಿರಂತರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ. ಅದಕ್ಕಾಗಿಯೇ ಆತ್ಮವಿಶ್ವಾಸವ ಕೊಲ್ಲುವ ನುಡಿಗಳು ಅವರ ಬತ್ತಳಿಕೆಯಲ್ಲಿ ಸದಾ ಸಿದ್ಧವಾಗಿರುತ್ತವೆ.
ಉದಾಹರಣೆಗೆ ಯಾವುದೋ ಸಮಾರಂಭಕ್ಕೆ ಚೆಂದದ ಅಲಂಕಾರ ಮಾಡಿಕೊಂಡಿರುತ್ತೀರಿ ಅಂದುಕೊಳ್ಳಿ, ನೀವು ಚೆಂದಗೆ ಕಾಣುತ್ತಿದ್ದರೂ ನಿಮ್ಮೆದುರಿಗಿದ್ದವರಿಗೆ ನಿಮ್ಮ ಕುಗ್ಗಿಸಲೊಂದು ಅಸ್ತ್ರ ಬೇಕಿರುತ್ತದೆ. ನೀವು ಕೇಳದೆಯೇ ಅವರ ಮಾತಿನ ಬಾಣ ಆರಂಭವಾಗುತ್ತದೆ. ಕೇಶಾಲಂಕಾರ ಚೆನ್ನಾಗಿಲ್ಲವೆಂದೋ ಅಥವಾ ಇನ್ನೇನೋ ಕಾರಣ ಕೊಟ್ಟೋ ಹಿಮ್ಮೆಟ್ಟಿಸುವ ಯತ್ನ ಅಲ್ಲಿ ನಡೆಯಬಹುದು. ಇದೆಲ್ಲ ಬಹಳ ಕ್ಷುಲ್ಲಕ ಕಾರಣವೆನಿಸಿದರೂ ಹೀಗಾಗುವುದು ಸುಳ್ಳಲ್ಲ.
ಇನ್ನು ಕೆಲವೊಮ್ಮೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಲೋಪದೋಷಗಳನ್ನು ಕೆದಕಿ, ಕಂಡು ಹುಡುಕಿ ನಿಮ್ಮೆದುರು ಆಡಬಹುದು. ಅದೂ ಸಿಗದಿದ್ದಾಗ ತಮಗೆ ಸಂಬಂಧವೇ ಪಡದ ವಿಷಯಗಳನ್ನು ನಿಮಗೆ ಹೆದರಿಸುವಂತೆ ಹೇಳಬಹುದು. ಆಗ ನಿಮ್ಮ ಮುಖದಲ್ಲಾದ ಬದಲಾವಣೆ ಅವರಿಗೊಂದು ವಿಕೃತ ಖುಷಿಯನ್ನೂ ನೀಡಬಹುದು. ಇಂತಹ ಜನರ ನಡುವೆಯೇ ನಾವು ಕೆಲವು ಸಮಯ ಕಳೆಯಬೇಕಾದುದರಿಂದ ಆದಷ್ಟು ನಿರ್ಲಕ್ಷಿéಸುವುದು ಒಳಿತು.
ನಿಂದಕರಿರಬೇಕು ಹಂದಿಯ ಹಾಗೆ ಎಂದು ನಾವು ನಿರ್ಲಕ್ಷಿಸಿದರೂ, ಅವರದನ್ನು, ನಾವು ಹೇಳಿದ್ದನ್ನು ಕೇಳಿಯೂ ಸುಮ್ಮನಿದ್ದಾರೆ ಅಂದರೆ ಒಪ್ಪಿಕೊಂಡಿದ್ದಾರೆ ಎಂದು ಭಾವಿಸಿ ತಮ್ಮ ಹೀಗೆಳೆಯುವ ಕಾರ್ಯವನ್ನು ಇನ್ನೂ ಮುಂದುವರಿಸಬಹುದು. ಅದರಿಂದ ಅವರಿಗೆ ಎಂತಹುದೋ ಆನಂದ ದೊರೆಯಲೂಬಹುದು. ಅಂತಹ ಸಮಯದಲ್ಲಿ ಸರಿಯಾದ ಉತ್ತರ ಕೊಟ್ಟು ಮುಂದುವರಿಯುವುದೊಳಿತು.
ಎಲ್ಲವ ಸಹಿಸಿ ಸುಮ್ಮನುಳಿದವರನ್ನು, ಯಾರಿಗೂ ಹಿಂಸೆ ನೀಡದೆ ತನ್ನ ಪಾಡಿಗೆ ತಾವಿರುವವರನ್ನು ಅಥವಾ ಎಲ್ಲರಿಗಾಗಿಯೂ ಮರುಗುವವರನ್ನು ಕೈಲಾಗದವರು, ಅಸಹಾಯಕರು ಎಂದು ಭಾವಿಸುವ ಕಾಲಘಟ್ಟದಲ್ಲಿ ನಾವಿರುವಾಗ ಅವಶ್ಯವೆನಿಸಿದಲ್ಲಿ ಎದುರಿಗಿದ್ದವರಂತೆಯೇ, ಅವರ ಧಾಟಿಯಲ್ಲಿಯೇ ಉತ್ತರಿಸುವುದೊಳಿತು. ಒಟ್ಟಿನಲ್ಲಿ ನಮ್ಮ ಮಾನಸಿಕ ಸ್ವಾಸ್ಥ್ಯ ನಮ್ಮ ಕೈಯಲ್ಲಿರವೇಕು. ಯಾರದ್ದೋ ಕೆಟ್ಟ ಮಾತುಗಳಿಗೆ ನಾವು ಬಲಿಯಾಬಾರದು.
ವಯಸ್ಸಿಗೆ ತಕ್ಕಂತೆ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನಮ್ಮ ಬುದ್ಧಿಯೂ ಮಾಗಬೇಕು. ಯಾರನ್ನೋ ವಿನಾಕಾರಣ ಕುಗ್ಗಿಸುವ, ಕೆಟ್ಟಮಾತುಗಳನ್ನಾಡುವ, ಆತ್ಮವಿಶ್ವಾಸವನ್ನು ಕಸಿಯುವ ಯತ್ನವನ್ನು ಕೈಗೊಳ್ಳಬಾರದು. ಸಾಧ್ಯವಾದರೆ ಜತೆಗಿರುವವರನ್ನು ಉತ್ತಮ ಕಾರ್ಯಕ್ಕೆ ಉತ್ತೇಜಿಸೋಣ, ಇಲ್ಲವಾದರೆ ಸುಮ್ಮನುಳಿಯೋಣ. ಕೈಹಿಡಿದೆತ್ತಲೂ ಸಾಧ್ಯವಾಗದಿದ್ದರೂ ಕಾಲೆಳೆಯುವ ಕೈಗಳು ನಮ್ಮದಾಗದಿರಲಿ.
- ವಿನಯಾ ಶೆಟ್ಟಿ
ಕೌಂಜೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.