Padubidri Beach: ಮನಸ್ಸಿಗೆ ಮುದ ನೀಡುವ ಪಡುಬಿದ್ರಿ ಬೀಚ್
Team Udayavani, Jun 5, 2024, 4:31 PM IST
ಸಮುದ್ರದ ಮುಂದೆ ಆ ಅಲೆಗಳ ಸದ್ದು ಕೇಳ್ಳೋದು ಏನೋ ಒಂದೂ ಮನಸ್ಸಿಗೆ ಹಿತವನ್ನು ನೀಡುತ್ತದೆ. ದೂರದಲ್ಲಿರುವ ಅಲೆ ದಡಕ್ಕೆ ಬಂದು ಅಪ್ಪಳಿಸುವಾಗೆಲ್ಲ ನಾವು ಅದರೊಂದಿಗೆ ಏಳು ಬೀಳು ನೋಡುತ್ತೇವೆ ಎಂದು ಭಾಸವಾಗುತ್ತದೆ. ಕರ್ನಾಟಕದಲ್ಲಿ ಅನೇಕ ಕಡಲ ಕಿನಾರೆ ಭಾಗ ಇದ್ದು ನಾವು ಪಡುಬಿದ್ರಿಯಲ್ಲಿರುವ ಬ್ಲೂ ಫ್ಲ್ಯಾಗ್ ಸಮುದ್ರ ಕಿನಾರೆ ಕಡೆ ಪ್ರಯಾಣ ಮಾಡಿದೆವು. ಸಾಮಾನ್ಯವಾಗಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ಪ್ರವಾಸಿಗರು ಬಂದರೆ ಕಡಲ ತೀರಗಳಿಗೆ ಭೇಟಿ ಕೊಟ್ಟೇ ಕೊಡುತ್ತಾರೆ. ಅಂತಹ ಪ್ರಸಿದ್ಧವಾದ ಬೀಚ್‌ಗಳಲ್ಲಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಕೂಡ ಒಂದು.
ಏನಿದು ಬ್ಲೂಫ್ಲ್ಯಾಗ್?
ಬ್ಲೂ ಫ್ಲ್ಯಾಗ್ ಎಂಬುದು ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್‌ನಿಂದ ಪ್ರಮಾಣೀಕರಣವಾಗಿದ್ದು ನೀಲಿ ಧ್ವಜದ ಮಾನದಂಡಗಳು ಗುಣಮಟ್ಟ, ಸುರಕ್ಷತೆ, ಪರಿಸರ ಹೀಗೆ ಹಲವು ಮಾನದಂಡಗಳನ್ನು ಒಳಗೊಂಡಿದೆ. ಅಂತಹ ಬೀಚ್‌ಗಳಿಗೆ ಮಾನ್ಯತೆಯನ್ನು ಕಲ್ಪಿಸಲಾಗುತ್ತದೆ. ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ (ಡೆನ್ಮಾರ್ಕ್) ಸಂಸ್ಥೆಯ ಬ್ಲೂಫ್ಲ್ಯಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್‌ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್‌ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂಫ್ಲ್ಯಾಗ್ ಮಾನ್ಯತೆಯೊಂದಿಗೆ ಮನ್ನಣೆ ಲಭಿಸಿರುವುದು ಕಾಣಬಹುದು.
ಉಡುಪಿಗೆ ಬಂದವರು ಇಲ್ಲಿನ ಬೀಚ್‌ಗಳಿಗೆ ಹೋಗದೆ ಇರೋಕೆ ಚಾನ್ಸ್ ಇಲ್ಲ. ಅಷ್ಟು ಸುಂದರವಾಗಿದೆ ಉಡುಪಿಯ ಬೀಚ್‌ಗಳು. ಈ ಭಾಗದ ಪರಿಸರ ಸ್ನೇಹಿಯಾಗಿ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಜತೆಗೆ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದ ದೇಶದ ಎಂಟು ಬೀಚ್‌ಗಳಲ್ಲಿ ನಮ್ಮ ಕರಾವಳಿಯ ಪಡುಬಿದ್ರಿ ಬೀಚ್ ಕೂಡ ಒಂದು. ಸತತ ಮೂರನೇ ಬಾರಿಗೆ ಈ ವಿಶ್ವ ಮಾನ್ಯತೆ ಪಡುಬಿದ್ರಿ ಬೀಚ್‌ಗೆ ದೊರಕಿದೆ.
ಭಾರತದಲ್ಲಿ ಒಟ್ಟುr 8 ಬೀಚ್‌ಗಳಿಗೆ ಮಾನ್ಯತೆ ಸಿಕ್ಕಿದೆ. ಅದರಲ್ಲಿ ಕಾಸರಗೋಡು ಮತ್ತು ಪಡುಬಿದ್ರಿ ಬೀಚ್‌ಗಳು ಸೇರಿರುವುದು ಸಂತಸದ ವಿಚಾರ. ಪಡುಬಿದ್ರಿ ಕರ್ನಾಟಕದ ಅತ್ಯಂತ ಮೋಡಿಮಾಡುವ, ಸ್ವತ್ಛ ಮತ್ತು ಸುಸ್ಥಿತಿಯಲ್ಲಿರುವ ಕಡಲತೀರ. ಅನುಭವವು ಇತರ ಕಡಲತೀರಗಳಿಗಿಂತ ಭಿನ್ನವಾಗಿದೆ, ಪರಿಸರವು ಹೆಚ್ಚು ಶಾಂತಿಯುತ ಮತ್ತು ಪ್ರಶಾಂತವಾಗಿದೆ, ನಿಜವಾಗಿಯೂ ನೀಲಿ ಧ್ವಜ ಲೇಬಲ್ ಅರ್ಹವಾಗಿದೆ.
ಹೇಗೆ ಭಿನ್ನವಾಗಿದೆ?
ಇಲ್ಲಿನ ವ್ಯವಸ್ಥೆಗಳು ತುಂಬಾ ಅಚ್ಚುಕಟ್ಟಾಗಿದೆ. ಘನ ತ್ಯಾಜ್ಯ ನಿರ್ವಹಣ ಘಟಕಗಳು, ಗ್ರೇವಾಟರ್ ಸಂಸ್ಕರಣ ಘಟಕಗಳು, ಆಸನ ವ್ಯವಸ್ಥೆಗಳು, ಶುದ್ಧ ಕುಡಿಯುವ ನೀರು, ಬಟ್ಟೆ ಬದಲಾಯಿಸುವ ಕೊಠಡಿ, ಸ್ನಾನದ ಸೌಲಭ್ಯ, ಅಂಗವಿಕಲರ ಸ್ನೇಹಿ ಮತ್ತು ಸಾಮಾನ್ಯ ಶೌಚಾಲಯಗಳು, ಪಾರ್ಕಿಂಗ್ ಸೌಲಭ್ಯಗಳು, ಸೌರ ವಿದ್ಯುತ್ ಸ್ಥಾವರಗಳು ಮತ್ತು ಸೌರ ದೀಪಗಳನ್ನು ಹೊಂದಿರುವುದು ವಿಶೇಷ. ಅದರ ಜತೆಗೆ ಇಲ್ಲಿ ಬೀಚ್‌ನ ಪಕ್ಕದಲ್ಲಿ ಒಂದು ನದಿ ಇದ್ದು ಇಲ್ಲಿ ಕಯಾಕಿಂಗ್, ಬೋಟಿಂಗ್ ಮಾಡಲು ಅವಕಾಶವಿದೆ ಇದಕ್ಕೆ ಪ್ರತ್ಯೇಕ ಶುಲ್ಕಗಳು ಇದೆ. ವಿಶೇಷವಾಗಿ ಈ ಬೀಚ್‌ನಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಕಾಣುವುದಿಲ್ಲ. ಅಷ್ಟು ಸ್ವಚ್ಛವಾಗಿ ನಿರ್ವಹಿಸಿದ್ದಾರೆ ಇಲ್ಲಿನ ಸಿಬಂದಿ.
ಭೇಟಿ ಮಾಡುವ ಸಮಯ
ಪಡುಬಿದ್ರಿ ಕಡಲತೀರವು ಸಾರ್ವಜನಿಕರಿಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ತಣ್ಣನೆ ಬೀಸುವ ಗಾಳಿಯ ಮಧ್ಯೆ ಪ್ರವಾಸಿಗರಿಗೆ ಮನಸ್ಸಿಗೆ ಹಿತ ನೀಡುತ್ತದೆ ಪಡುಬಿದ್ರಿ ಬೀಚ್. ಈ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಪರಿಸರವನ್ನು ಉಳಿಸಲು ಸಾಧ್ಯ.
-ಕಲಾನ್ವಿತ ಜೈನ್
ಕೆರ್ವಾಶೆ, ಕಾರ್ಕಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.