UV Fusion: ಒಂದಾನೊಂದು ಕಾಲದ ರಾಜ ರಾಣಿ ಕಥೆ
Team Udayavani, May 29, 2024, 4:04 PM IST
ಪ್ಲಾಸ್ಟಿಕ್ ಹೂವಿಗಿಂತ ಗಿಡದಲ್ಲಿ ಅರಳಿದ ಹೂವೇ ಚೆಂದ ಎಂದು ಅವನಿಗೆ ಹೇಳುತ್ತೇನೆ. ಇಲ್ಲ ಅವನಿಗೆ ಪ್ಲಾಸ್ಟಿಕ್ ಹೂವೇ ಹೆಚ್ಚು ಅಪ್ಯಾಯಮಾನವಂತೆ. ಗಾಢ ಬಣ್ಣ, ಮೋಹಕ ರೂಪ, ತಿದ್ದಿದ ಆಕೃತಿಯೇನೋ ಇದೆ. ಆದರೆ ಅದಕ್ಕೆ ಜೀವವೇ ಇರುವುದಿಲ್ಲವಲ್ಲ ಎನ್ನುವುದು ನನ್ನ ಕಳವಳ.
ಆದರೆ ಅವನು ಜೀವವಿರುವ ಹೂವಿಗೆ ಮುತುವರ್ಜಿ ಬೇಕು, ಬಾಡಿಹೋಗದಂತೆ ನೋಡಿಕೊಳ್ಳಬೇಕು, ಆದರೆ ಪ್ಲಾಸ್ಟಿಕ್ ಹೂ ನೋಡು ಸದಾ ನಗುತ್ತಿರುತ್ತದೆ, ಪ್ರತಿಷ್ಠೆ ಹೆಚ್ಚಿಸುತ್ತದೆ ಎಂದು ವಿವರಿಸುತ್ತಾನೆ.
ಅವನ ತಲೆಗೆ ಮೊಟಕಿ ಕೇಳಬೇಕೆನಿಸುತ್ತದೆ ಹುಡುಗ ಯಾಕಿಷ್ಟು ಗಾಬರಿ, ನನಗೇನೂ ಬೇಕಿಲ್ಲ ನಿನ್ನ ಪ್ರೀತಿಯ ಹೊರತು. ಕುಣಿಸೋಕೆ ನಾನು ದೊಂಬರದವಳಲ್ಲ, ಕೂಗಿ ಕರೆಯುತ್ತೇನೆ ಬಾ ನಾವಿಬ್ಬರು ಕೂಡಿ ಸ್ನೇಹ ಸೃಷ್ಟಿ ಮಾಡಿಕೊಳ್ಳೋಣ. ಕೈ ಕೈ ಹಿಡಿದು ಮಕ್ಕಳಂತೆ ಬೀದಿ ಸುತ್ತುತ್ತಾ ಹಾದಿಗುಂಟ ನಡೆದುಹೋಗೋಣ, ಟೂ ಬಿಟ್ಟು ಕಚ್ಚಾಡೋಣ.
ಮರೆತು ಮತ್ತೆ ಒಂದಾಗೋಣಾ. ನಿನ್ನೆ ಮೊನ್ನೆಯ ಕತೆಯನ್ನೆಲ್ಲ ಹೇಳಿಬಿಡುತ್ತೇನೆ. ನಾಳೆಯ ಕನಸನ್ನೆಲ್ಲ ಹರವಿ ತೋರಿಸುತ್ತೇನೆ. ಗುಬ್ಬಿ ಗೂಡ ಕಟ್ಟೋಣ, ಮನೆ ಆಟ ಆಡೋಣ. ಉಹೂಂ ಬೇಕಿಲ್ಲ ಅವನಿಗೆ ಅವೆಲ್ಲ. ಸೋಲೋ ಗೆಲುವೋ, ಸರಿಯೋ ತಪ್ಪೋ ಖುದ್ದು ಮಾಡಿ ಅನುಭವಿಸುವಾಸೆ ನನಗೆ.
ಸಲಿಗೆ, ಸಂಭ್ರಮ ನಿಷಿದ್ಧ ಸಾಂಸಾರಿಕ ಸಂಬಂಧಗಳಲ್ಲಿ ಸದರ ಕೊಟ್ಟರೆ ವ್ಯವಹಾರ ಕುದುರೊಲ್ಲ, ಹಿಂದೆಯಿಂದ ಯಾರೋ ಲೆಕ್ಕಹಾಕಿ ತಲೆಗೆ ಧಾಟಿಸಿಯಾಗಿದೆ. ಬುದ್ಧಿವಂತರು, ಉದ್ಧಾರಕರು ಎನಿಸಿಕೊಂಡವರ ಗೈಡೆನ್ಸು, ಪ್ರೋತ್ಸಾಹಗಳ ಮೇರೆಗೆ ಮೆರೆಯುತ್ತ, ಘರ್ಜಿಸುತ್ತ, ಆಳುತ್ತ ತಾನು ಸಿಂಹ ಎಂದು ತೋರಿಸಿಕೊಳ್ಳುವಾಸೆ ಅವನಿಗೆ.
ಕೋತಿಯೂ ಅಲ್ಲ. ನಿನ್ನ ಆಸ್ತಿ ಪಾಸ್ತಿ ನೀನೆ ಮಜಾ ಮಾಡಿಕೊ, ಬೇಕಿದ್ದರೆ ವಜ್ರದ ಕಿರೀಟ ತೊಟ್ಟುಕೊಂಡೆ ತಿರುಗಾಡು, ಕುದುರೆ ಮೇಲೆ ಮೆರೆದಾಡು, ಬಾಯಿಮಾತಲ್ಲಾದರೂ ನಿನ್ನದೇ ರಾಣಿ ಮಾಡಿಬಿಡು. ಸುಳ್ಳೋ ನಿಜವೋ, ಅಷ್ಟು ಖುಷಿಯಲ್ಲೇ ಕಾಲ ತಳ್ಳಿಬಿಡುತ್ತೇನೆ.
ನನ್ನ ಓದು ನನ್ನ ತಿದ್ದಿದೆ ನಿಜ, ಹುದ್ದೆಗೆ ನಾನು ನಿಂತಿದ್ದೇನೆ ಹೊರತು, ಹುದ್ದೆಯೇ ನಾನಲ್ಲ. ಪ್ರೀತಿಯ ಅಭಿವ್ಯಕ್ತಿಗೆ ನಿರ್ದಿಷ್ಟ ಮಾನದಂಡಗಳಿಲ್ಲ. ಎದೆ ಬಗೆದು ತೋರಲು ಸಾಧ್ಯವಿಲ್ಲ. ಸಾವಿರ ಬಾರಿ ಹೇಳಲು ಪ್ರಯತ್ನಪಟ್ಟೆ ವ್ಯವಹಾರ ಸಂಸಾರದಲ್ಲಲ್ಲ! ನಿಜ ಸಂಸಾರ ನಡೆಸಲು ವ್ಯವಹಾರ ಇರಬೇಕು ಆದರೆ ವ್ಯಾವಹಾರಿಕವಾಗಬಾರದು ಸಂಸಾರ, ಸಂಬಂಧ!
ಯಾಕಷ್ಟು ಗೊಂದಲ, ಬೆಳಗೆದ್ದು ಬಾಚಿತಬ್ಬಿ ಹೂ ಮುತ್ತ ನೀಡಿಬಿಡು, ಕಣ್ಣಲ್ಲೇ ಒಂದೆರಡು ಬಾರಿ ನಕ್ಕುಬಿಡು. ನೀ ಏನೇ ಮಾಡಿದರು ನಿನ್ನದೇ ಧ್ಯಾನ ನನಗೆ ಕೊರಗು – ಜಿಗುಪ್ಸೆಗಳಿಗೆ ನರಳಾಟವಾಗದೆ ಸಂಭ್ರಮ – ವಿರಹಕ್ಕಿರಲಿ ನಿನ್ನ ಹೆಸರು. ಬೆಳಗೆದ್ದ ಕೂಡಲೇ ಉರಿಗಣ್ಣು, ಗಂಟು ಮುಖ, ಬೆತ್ತದಕೋಲು ಹಿಂದಿನಿಂದ ಅಟ್ಟಾಡಿಸಿ ಬಂದು ಕೀಳಾಗಿ ಕೆಲಸ ತೆಗೆಸುತ್ತೀಯಲ್ಲ ಭಯಬಿಟ್ಟು ಮತ್ತೇನು ಹುಟ್ಟಬಹುದು.
ಮನೆಯೆಂದರೆ ಕೆಲಸಗಳ ಕಾರ್ಖಾನೆಯಲ್ಲ, ಶ್ರೀಮಂತಿಕೆ ಎಂದರೆ ಕಂತೆ ಕಂತೆ ದುಡ್ಡಲ್ಲ. ದೇಹದಂತೆ ಮನಸಿಗೂ ಆರೋಗ್ಯವಿರುತ್ತದೆ, ಹದಗೆಡದಂತೆ ವರ್ತಿಸುವುದು ಮಾನವೀಯತೆ. ಯಾರಿಗೋ ನೀ ಸಾಬೀತು ಮಾಡುವುದೇನು, ಯಜಮಾನ ಎಂದು ಮನಸ್ಸಿಗೆ ಭಾವನೆಗೆ ಸಂಬಂಧಿಸಿದ ವಿಷಯಗಳವು. ಅಧಿಕಾರ, ಹಕ್ಕು ವ್ಯವಸ್ಥೆಯಲ್ಲಿ ಇಣುಕುವಂತವುಗಳೇ ಹೊರತು ಸಂಬಂಧಗಳಲ್ಲಿ ನುಸುಳುವಂತದಲ್ಲ. ಮನೆಯೆಂದರೆ ಕೋರ್ಟು ಕಚೇರಿಯಲ್ಲ.
ಎಂದಾದರೂ ಆತ್ಮಸಾಕ್ಷಿಯ ಕಟಕಟೆಯಲ್ಲಿ ನಿಂತು ತರ್ಕಿಸಿನೋಡು ಹೆಣ್ತನದ ಸಾರ್ಥಕ ರೂಪ ನೋಡಬಯಸುವ ನೀನು, ಹೆಣ್ತನದ ಮೃದುತ್ವಕ್ಕೆ, ಸೂಕ್ಷ¾ತೆಗೆ, ಮಾನ ಗೌರವಗಳಿಗೆ ಕೊಟ್ಟ ಕೊಡಲಿಪೆಟ್ಟು ಎಂತದ್ದು. ನೊಂದ ನಾಯಿಗೂ ಸಹ ಸಿಟ್ಟು, ಸೆಡವು, ಆತ್ಮಗೌರವ ಉಳಿದಿರುತ್ತದೆ. ಸರಿತಪ್ಪುಗಳಲ್ಲಿ ತೂಗುವಂತದ್ದಲ್ಲ ಜೀವನ, ಕಷ್ಟ ಸುಖಗಳಲ್ಲಿ ತೆವಳುವಂತದ್ದು.
ಗೌರವದಿಂದ ನಡೆಸಿಕೊಳ್ಳುವುದೆಂದರೆ ಕೈ ವಶವಾದಂತೆ, ಅಧೀರನಾದಂತೆ ಅಲ್ಲ, ಅಂಕೆಯಲ್ಲಿಡಲು ಮಾನ ಅಡ ಇಟ್ಟುಕೊಳ್ಳಬೇಕಿಲ್ಲ. ಮೇಲರಿಮೆ ಸಾಧಿಸಲು ಕೀಳರಿಮೆ ತುಂಬುವುದಲ್ಲ. ಒಲವಿನ ಪೂಜೆಗೆ ಒಲವೆ ಮಂದಾರ, ತೂತು ಕೊರೆದು ಪೂರಾ ಸುರುವಿಕೊಂಡಮೇಲೆ, ತುಂಬದೆ ಪಡೆಯಲು ಸಾಧ್ಯವಿಲ್ಲ.
ಬುದ್ಧಿವಂತಿಕೆ ಮೆಚ್ಚುವಂತಿರಬೇಕೇ ವಿನಃ ಚುಚ್ಚುವಂತಲ್ಲ. ರೆಕಾರ್ಡ್ ಮಾಡೋದು ಕೋಣೆಯ ಪರಿಶೀಲನೆ ಸಾಕ್ಷಿ ಸೃಷ್ಟಿಸಬಹುದೇ ವಿನಃ ಸತ್ಯವನಲ್ಲ. ಹೆಣ್ಣಿನ ಮಾನದ ತೂಕ ಬೀದಿಯಲ್ಲಿ ಹಾಕುವ ಗಂಡಸನ್ನು ತಾಯಿ ಹೊಟ್ಟೆಯಲ್ಲಿ ಹುಟ್ಟಿದವ ಎನ್ನುವುದಿಲ್ಲ. ನಿನ್ನನ್ನು ಪ್ರೀತಿಸುವುದಕ್ಕೆ ಮನಸಿನದೇ ಸಾಕ್ಷಿ, ಧರ್ಮದ ರುಜುವಾತು. ಆದರ್ಯಾಕೆ ಪ್ರೀತಿಯೊಂದನ್ನು ಬಿಟ್ಟು ಬೇಡವಾದವೆಲ್ಲವೂ ನಿನಗೆ ದೊಡ್ಡದಾಗಿ ಕಾಣಿಸಿಬಿಡುತ್ತದೆ. ಗುರಿ ಪ್ರೀತಿಯಾದರೆ ದಾರಿಯೂ ಪ್ರೀತಿಯದ್ದಾಗಿರಬೇಕಷ್ಟೇ.
ಗೆಲ್ಲಬೇಕೆನ್ನುವ ಶೋಕಿಗೆ ನೀಚತನ, ನಿಷ್ಟುರತೆ, ನಿಷ್ಕರುಣೆಗಳಂತ, ನಿಕೃಷ್ಟ ಹಾದಿ ತುಳಿದು, ಸೋಲಿಸಬೇಕೆನ್ನುವ ಹಟಕ್ಕೆ ಓಡಿಹೋದರೆ ಅದಕ್ಕಿಂತ ದೊಡ್ಡಪಲಾಯನ ಮತ್ತೂಂದಿಲ್ಲ. ಅಸಹಾಯಕತೆ, ವ್ಯವಸ್ಥೆಗಳನ್ನು ಅವಮಾನ ಮಾಡಲು, ಅದರ ಮೂಲಕ ಸ್ವಾರ್ಥಸಾಧಿಸಿಕೊಳ್ಳಲು ಬಳಸುವಂತದ್ದಲ್ಲ. ಚಾಡಿ, ಅವಹೇಳನ, ರುಜುವಾತು ಗೆದ್ದು ಏನು ಮಾಡುತ್ತಿ? ಮಡದಿ ಮಕ್ಕಳಿಲ್ಲದ ಒಂಟಿ ರಾಜ?
ಗಳಿಸುವುದಕ್ಕೂ, ಕಿತ್ತುಕೊಳ್ಳುವುದಕ್ಕೂ ವ್ಯತ್ಯಾಸಗಳಿವೆ. ಮನಸಾರೆ, ಮನತುಂಬಿ ನೀಡಿಕೊಳ್ಳಬೇಕು. ಬಲವಂತಕ್ಕೆ, ಹೆದರಿಕೆಗೆ ಅರ್ಪಿಸಿಕೊಂಡು ಬಿಡುವುದಲ್ಲ. ಕಡೇಪಕ್ಷ ಒಳಗಿನ ಮಾತು ಹೊರಗೆ ಬರಲು ಸಣ್ಣ ಕಿಂಡಿಯನ್ನಾದರೂ ಉಳಿಸಿಕೊಳ್ಳಬಹುದಿತ್ತು. ವಿರುದ್ಧದ ದನಿ ಕೇಳಿಬರಬಾರದೆಂದರೆ ಹೆದರಿಸಿ ಹೆದರಿಸಿ ಉಸಿರುಕಟ್ಟಿಸುವಂತದ್ದಲ್ಲ. ಸಲಿಗೆ ಎಷ್ಟೇ ನೀಡಿದರೂ ಮೈಮರೆತಾದರೂ ಗೌರವದ ರೇಖೆ ದಾಟದಿರುವಂತದ್ದು. ವಿದ್ಯೆ ಕಲಿಯುವುದಕ್ಕೂ ಭಯಬೀಳಿಸಿ, ತಯಾರಿ ಮಾಡುವುದಕ್ಕೂ ಇರುವ ವ್ಯತ್ಯಾಸವೇ ಅಗಾಧ.
ಪ್ಲಾಸ್ಟಿಕ್ ನಗು , ಪ್ಲಾಸ್ಟಿಕ್ ಗೌರವ , ಪ್ಲಾಸ್ಟಿಕ್ ದಾಸ್ಯ , ಪ್ಲಾಸ್ಟಿಕ್ ಪ್ರೀತಿಯನ್ನು ತಯಾರಿಸುವುದಲ್ಲ ಜೀವನ ..ಜೀವದ ಹೂವನ್ನೊಮ್ಮೆ ಮೃದುವಾಗಿ ಮುಟ್ಟಿನೋಡು, ಕಂಪನಗಳೇಳುತ್ತವೆ ನಿನ್ನೊಳಗೂ, ಹೂವೊಳಗು. ಆಘ್ರಾಣಿಸಿ ನೋಡು ನೈಸರ್ಗಿಕ ಸುಗಂಧಕ್ಕೆ ಉದಾಹರಣೆಗಳಿಲ್ಲ , ನಿಜ ಪ್ರೀತಿಗೂ, ತೋರ್ಪಡಿಕೆಗೂ ವ್ಯತ್ಯಾಸ ನಿನಗೆ ತಿಳಿಯುತ್ತದೆ.
ನೇರ ದಾರಿಗಳೆಂದರೆ ಯಾವುದೇ ಹೆದರಿಕೆಯಿರುವುದಿಲ್ಲ. ವಾಮಮಾರ್ಗಗಳಲ್ಲಿ ಅಡಿಗಡಿಗೂ ಅನುಮಾನ, ಅಡಚಣೆಗಳೇ. ಸದಾ ಎಚ್ಚರಿಕೆಯಿಂದಿರಬೇಕಾದ ಅನಿವಾರ್ಯತೆ ಬೇರೆ. ನೇರಾ ನೇರಾ ಅರ್ಥೈಸಿಕೊಂಡು ಐಕ್ಯವಾಗಿ ಜತೆ ನಡೆಯೋಣ ಎಂದೆಲ್ಲಾ ಹೇಳಿದೆ, ಸಹಬಾಳ್ವೆ, ಕೂಡಿ ಬಾಳ್ಳೋ ಸ್ವರ್ಗ ಸುಖ ನಿರಾಕರಿಸಿದ ಅವನು, ಜೀವಹಿಂಡುವ ಆಳ್ವಿಕೆ, ಅಂಕೆ, ಶಂಕೆಗಳೆಲ್ಲ ಬೇಕಿತ್ತಾ?
ಗಂಡಸಾದವನು ತನ್ನ ಪೌರುಷವನ್ನು ಇನ್ನೊಬ್ಬ ಗಂಡಸಿನೊಂದಿಗೆ ಸೆಣಸಾಡಿ, ಗೆದ್ದು ತೋರಿಸಬೇಕೇ ಹೊರತು, ಹೆಣ್ಮಕ್ಕಳ ಅದರಲ್ಲೂ ತಮ್ಮದೇ ಮನೆಯ ಹೆಣ್ಮಕ್ಕಳ ಮೇಲೆ ಹಕೀಕತ್ತು ಸಾಧಿಸಿ ಹೆದರಿಸಿ, ಹೊಡೆದು, ಬಡಿದು ಸ್ಥಾಪಿಸುವಂತದ್ದಲ್ಲ. ಹೆಣ್ಣಿನ ಹತ್ತಿರ ಕಾದಾಡಿ ಗೆಲ್ಲುವುದನ್ನು ಉತ್ತರನ ಪೌರುಷವೆನ್ನುತ್ತಾರೆ ನಮ್ಮ ಕಡೆ.
ಆದರಿಲ್ಲಿ ಎಲ್ಲ ತದ್ವಿರುದ್ಧ. ಹೊರಗಡೆಯ ಗಂಡಸರು ಕಾಲಿಗೆ ಬೀಳಿಸಿಕೊಳ್ಳುವ ಅಣ್ಣಂದಿರಾಗಿಬಿಡುತ್ತಾರೆ. ಮನೆ ಹೆಂಗಸರ ಮೇಲೆ ಗಧಾಪ್ರಹಾರವಾಗುತ್ತದೆ. ಹೆಂಡತಿಯನ್ನು ಸುಖಾಸುಮ್ಮನೆ ಬಡಿಯುವ ಗಂಡಸರು ಒಂದೋ ಸೋಲನ್ನು ಸಹಿಸದವರಾಗಿರುತ್ತಾರೆ. ಇಲ್ಲಾ ಕೀಳರಿಮೆಯವರಾಗಿರುತ್ತಾರೆ. ಇನ್ನು ಸರಿಯಾಗಿ ಹೇಳಬೇಕೆಂದರೆ ಕೈಲಾಗದ ದುರಹಂಕಾರಿಗಳಾಗಿರುತ್ತಾರೆ. ನಮ್ಮ ಜ್ಞಾನಕ್ಕೆ ನಿಲುಕಿದ ಅರಿವಿದು. ಆದರೆ ಆ ನಾಲ್ಕು ಮನೆಗಳಲ್ಲಿ ಮಾತ್ರ ಬೇರೆಯೇ ಸೂತ್ರ ತಂತ್ರವಂತೆ .
ಈ ಜನ್ಮಕ್ಕೆ ಬುದ್ಧಿ ಬರುವ ಹಾಗೆ ಕಾಣಲ್ಲ ಅವನಿಗೆ ಕೆಮ್ಮಿದರೂ ಊರ ತುಂಬಾ ಗುಲ್ಲೆಬ್ಬಿಸಿಕೊಂಡು ಬಂದು ಸಿಂಪತಿಗಿಟ್ಟಿಸುತ್ತಾರೆ. ಹೆಣ್ಣು ಎನ್ನುವ ನಾಚಿಕೆಬಿಟ್ಟು , ಮುಜುಗರಬಿಟ್ಟು ಗುಂಪುಗುಂಪಲ್ಲಿ ನಿಂತು ಆವತ್ತು ರೂಮಲ್ಲಿ, ಪ್ರಸ್ತದ ದಿನ ಅಂತೆಲ್ಲ ಕತೆ ಹೇಳುತ್ತಾರೆ. ಒಬ್ಬನೇ ಮಗ ಒಬ್ಬನೇ ಮಗ ತಿನ್ನಿಸಿ ತಿನ್ನಿಸಿ ಅಜೀರ್ಣವಾಗುವಷ್ಟು ತುರುಕಿಬಿಟ್ಟಿದ್ದಾರೆ. ಕಾಪಾಡುತ್ತೇವೆ ಎಂದು ಬಂದು ಸರಿಪಡಿಸಲಾರದಷ್ಟು ನಷ್ಟಮಾಡಿಟ್ಟಿದ್ದಾರೆ.
ಬೆಳ್ಳಗೆ ಒಗೆಯುತ್ತೇವೆ ಎಂದು ಝಾಡಿಸಿ ಝಾಡಿಸಿ ಹರಿದೇ ಹಾಕಿದ್ದಾರೆ. ತೇಪೆ ಹಾಕುತ್ತೇವೆ ಅಂತ ಖಾಸಗಿತನ ದೋಚಿದ್ದಾರೆ. ನಡೆದರೂ ನಿಂತುಹೋದರೂ ಅವರಿಗೇನೂ ನಷ್ಟ ಇಲ್ಲ. ನಡೆದಾಗ ಹಿಂದಿನಿಂದ ಮುರಿದುಕೊಳ್ಳುವುದು, ನಿಂತು ಹೋದರೆ ಮುಂದಿನಿಂದಲೇ ಪಡೆದುಕೊಳ್ಳುವುದು! ಹಂಗೆಲ್ಲ ಮಾಡಬಾರದು ಹೇಳುವುದ ಬಿಟ್ಟು, ಹಂಗೆ ಮಾಡಲಿ ಎಂದು ಉಳ್ಳುಳ್ಳಗೆ ಸುಮ್ಮನಿದ್ದರು.
ಮೂವರು ಸಿಕ್ಕಿಹಾಕಿಕೊಳ್ಳಬೇಕಾದಾಗ ನಿನ್ನದೇನು ತಪ್ಪಿಲ್ಲ, ನಿನಗೆ ಮೋಸ ಆಯಿತು ನಂಬಿಸಿದರು, ತಿಪ್ಪೆಸಾರಿಸಿದರು. ಕದ್ದು ಮುಚ್ಚಿಟ್ಟರು. ಆತ್ಮಸಾಕ್ಷಿ ಕಾಡಬೇಕಾದಾಗ ಪ್ರಜ್ಞೆಯನ್ನೇ ತಪ್ಪಿಸಿದರು. ಒಂಟಿ ರಾಜ ರಾಣಿ ಇಲ್ಲದೆ ಪಾಳುಬಂಗಲೆಯಲ್ಲಿ ಹೋರಾಡುವಂತೆ ಕತೆ ಮಾಡಿದರು. ಹಗೆ ತೀರಿತು. ರಾಜನಿಗೆ ಬದುಕು ಮುಗಿಯಿತು. ರಾಣಿ ಕತೆಯ ಹೇಳಿದಳು.
- ದೀಪಿಕಾ ಬಾಬು
ಮಾರಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.