UV Fusion: ಸ್ವೀಕರಿಸುವ ಮನಸ್ಸಿರಬೇಕು ಅಷ್ಟೇ
Team Udayavani, Jun 5, 2024, 4:36 PM IST
ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ಒಬ್ಬೊಬ್ಬರು ಪರಿಚಯವಾಗುತ್ತಾ ಹೋಗುತ್ತಾರೆ. ಕೆಲವರು ಕಷ್ಟ ಸುಖದಲ್ಲಿ ಭಾಗಿಯಾಗಿ ಬೆಸ್ಟ್ ಫ್ರೆಂಡ್ಸ್ ಎನಿಸಿಕೊಂಡರೆ, ಇನ್ನೂ ಕೆಲವರು ಬಂದು ಹೋಗೋ ಬಂಧುಗಳಷ್ಟೇ. ಕಾರಣವಿಲ್ಲದೆ ಯಾರೂ ನಮ್ಮ ಜೀವನದಲ್ಲಿ ಬರುವುದಿಲ್ಲ ಎನ್ನುವುದು ಸತ್ಯ ಸಂಗತಿ. ಲೈಫ್ ನಲ್ಲಿ ಬರೋ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಕಾರಣವಿರುತ್ತದೆ. ಕೆಲವರು ಜೀವನ ಪೂರ್ತಿ ಜತೆಗಿದ್ದರೆ, “ಹಲವರು’ ಜೀವನ ಪಾಠಗಳನ್ನು ಕಲಿಸಿ ಹೋಗುವ ವರಾಗಿರುತ್ತಾರೆ. ಇನ್ನೂ ಕೆಲವರು ಬೇಗನೆ ಹತ್ತಿರವಾಗಿ ಪ್ರತಿ ಹಂತದಲ್ಲೂ ಜತೆಗಿರುತ್ತಾರೆ.
ಇವೆಲ್ಲದರ ನಡುವೆ ಯಾರು ನಮ್ಮವರು ಹಾಗೂ ಯಾರು ನಮ್ಮವರಲ್ಲ ಎನ್ನುವ ಅರಿವಾಗುವುದು ಕಷ್ಟದ ಸಮಯದಲ್ಲಿ, ದುಃಖದ ದಿನಗಳಲ್ಲಿ. ಖುಷಿಯಲ್ಲಿದ್ದಾಗ ಎಲ್ಲರೂ ಜತೆಯಲ್ಲೇ ಇರುತ್ತಾರೆ. ಜೀವನದಲ್ಲಿ ನೋವುಂಡು ಕುಗ್ಗಿ ಹೋದಾಗ ಯಾರು ನಮ್ಮ ಜತೆಗೆ ಇದ್ದು ಧೈರ್ಯ ಹೇಳಿ ಮುನ್ನಡೆಸುತ್ತಾರೋ ಅವರೇ ನಮ್ಮ ಜೀವನದ ಬೆಸ್ಟ್ ಫ್ರೆಂಡ್ಸ್.
ಇನ್ನು ನಮ್ಮ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ತಿಳಿದಾಗ ಮನಸ್ಸಿಗೆ ಕೊಂಚ ನೋವಾದರೂ ಅದೇ ಕಹಿಸತ್ಯ. ನಾಲ್ಕು ದಿನದ ಬದುಕು, ಸಾವಿರಾರು ಜನರ ಪರಿಚಯ, ಆಣೆ ಪ್ರಮಾಣಗಳು, ಏನೇ ಆದ್ರೂ ನಿನ್ನ ಬಿಟ್ಟೋಗಲ್ಲ ಎನ್ನುವ ಭರವಸೆಯ ಮಾತುಗಳು. ಇವನ್ನೆಲ್ಲಾ ಕೇಳುವಾಗ ನಮಗೆ ಏನೇ ಆದ್ರೂ ಎಲ್ಲರೂ ಇದ್ದಾರೆ ಎಂದೆನಿಸಿದರೂ ಸಮಯ ಕಳೆದಂತೆ ಸತ್ಯದ ಅರಿವಾಗುತ್ತದೆ. ನಮ್ಮ ಕಣ್ಣೀರಿಗೆ ನಾವೇ ಕರ್ಚೀಫ್ ಹುಡುಕಿಕೊಳ್ಳಬೇಕೇ ಹೊರತು ಇನ್ನೊಬ್ಬರನ್ನು ಯಾವತ್ತೂ ಅವಲಂಬಿಸಬಾರದು.
ಕೆಲವೊಮ್ಮೆ ಅಯ್ಯೋ ನಮ್ಮವನು ಅಥವಾ ನಮ್ಮವಳು ಕಷ್ಟದಲ್ಲಿ ಇರುತ್ತಾಳೆ ಎಂದಾಗ ಪಾಪ ಪುಣ್ಯ ನೋಡಿ ಸಹಾಯ ಮಾಡುತ್ತೇವೆ. ಅದೇ ನಮಗೆ ಸಹಾಯ ಬೇಕೆಂದಾಗ ಆ ವ್ಯಕ್ತಿ ಬರುವುದೇ ಇಲ್ಲ. ಇದೇ ಜೀವನ, ಇದೇ ಬದುಕು. ತಿಳಿದವರು ಒಂದು ಮಾತು ಹೇಳುತ್ತಾರೆ, ಮಳೆ ನಿಂತ ಮೇಲೆ ಛತ್ರಿ ಭಾರವಂತೆ. ಊಟ ಮುಗಿದ ಮೇಲೆ ತಟ್ಟೆ ಭಾರವಂತೆ. ಮನುಷ್ಯನಲ್ಲೂ ಹೀಗೇ ಅಲ್ವಾ.
ತಮ್ಮ ಕೆಲಸ ಆದ ಮೇಲೆ ಸಹಾಯ ಮಾಡಿದ ಕೈಗಳೇ ಭಾರವಾಗಿಬಿಡುತ್ತವೆ. ಮನುಷ್ಯನಿಗೆ ಎಲ್ಲವನ್ನೂ ಸ್ವೀಕರಿಸುವ ಮನಸ್ಸಿರಬೇಕು ಅಷ್ಟೇ. ವಿಪರ್ಯಾಸ ಏನಂದ್ರೆ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಯನ್ನೇ ಮಕ್ಕಳು ಮರೆತು ಬೀದಿ ಪಾಲು ಮಾಡುವ ಈಗಿನ ಸಮಾಜದಲ್ಲಿ ನಮ್ಮವರೇ ಅಲ್ಲದ ಜನರಿಂದ ನಾವು ಕಾಳಜಿ ಬಯಸುವುದು ಒಂದು ಲೆಕ್ಕದಲ್ಲಿ ತಪ್ಪೇ ಅಲ್ವಾ?
ಕೆಲ ದಿನಗಳ ಹಿಂದೆ ನಮ್ಮನೆ ನಾಯಿಯೊಂದು ಬೆಕ್ಕಿಗೆ ಕಚ್ಚಿಬಿಟ್ಟಿತ್ತು.. ಪರಿಣಾಮವಾಗಿ ಬೆಕ್ಕಿನ ಮರಿ ಸತ್ತೇ ಹೋಗಿತ್ತು. ನಾಯಿಗೆ ಬುದ್ಧಿ ಇಲ್ಲ. ಹಾಗಾಗಿ ಬೆಕ್ಕನ್ನು ಹಿಡಿದಿದೆ ಎಂದು ಕಟ್ಟಿ ಹಾಕಿ ಚೆನ್ನಾಗಿ ಬಡಿದು ಬಿಟ್ಟೆ. ಒಂದು ದಿನ ತೆಪ್ಪಗೆ ಗೂಡಿನಲ್ಲಿ ಮಲಗಿತ್ತು. ಇನ್ನು ಮುಂದೆ ನಾಯಿ ನನ್ನ ಬಳಿ ಬರುವುದಿಲ್ಲ ಅಂದುಕೊಂಡೆ. ಆದರೆ ಅದು ನನ್ನ ದಡ್ಡತನ. ಮರುದಿನವೇ ಆ ನಾಯಿ ಎಂದಿನಂತೆ ನನ್ನ ಜತೆ ಹಾರಾಡುತ್ತಾ ಆಡಲು ಪ್ರಾರಂಭಿಸಿತು. ಕಾರಣ ನಾಯಿಗೆ ತನ್ನ ತಪ್ಪು ಅರಿವಾಗಿರಬಹುದು ಅಥವಾ ತನ್ನನ್ನು ಪ್ರತಿ ದಿನ ಸಾಕಿ ಬೆಳೆಸುವವರಿಗೆ ಎರಡು ಬಗೆಯಬಾರದೆಂಬ ಮನಸ್ಥಿತಿಯೂ ಇರಬಹುದು.
ಬುದ್ದಿ ಜೀವಿ ಎನಿಸಿಕೊಂಡ ಮನುಷ್ಯನಿಗೆ ಯಾಕೆ ಈ ಪ್ರಾಣಿಯಷ್ಟೂ ಬುದ್ದಿ ಇಲ್ಲ. ಏಟು ತಿಂದ ನಾಯಿ ದ್ವೇಷ ಸಾಧಿಸಲಿಲ್ಲ ಅಂದ ಮೇಲೆ ಈ ಮನುಷ್ಯ ಚಿಕ್ಕ ಪುಟ್ಟ ವಿಚಾರವನ್ನು ಇಟ್ಟುಕೊಂಡು ಜೀವನ ಪೂರ್ತಿ ಚುಯಿಂಗ್‌ಗಮ್ ತರ ಅಗಿಯುತ್ತಾ ಇರುತ್ತಾನಲ್ಲಾ, ಇದರಲ್ಲಿ ಅರ್ಥವಿದೆಯೇ? ಯಾರಿಗೆ ಯಾವಾಗ ಈ ಭೂಮಿಯ ಋಣ ಮುಗಿಯುತ್ತದೆಯೋ ಗೊತ್ತಿಲ್ಲ. ಮೂರು ದಿನದ ಬದುಕಿನಲ್ಲಿ ಯಾಕೀ ದ್ವೇಷ?? ಯಾಕೀ ಮನಸ್ತಾಪ? ಇರುವಷ್ಟು ದಿನ ಎಲ್ಲರನ್ನೂ ಪ್ರೀತಿಸಿ ಸಂತೋಷದಿಂದ ಇದ್ದರೆ ಎಷ್ಟು ಚಂದ.
-ಲಾವಣ್ಯ ಎಸ್.
ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.