UV Fusion: ನಿಜಕ್ಕೂ ಪ್ರಾಮಾಣಿಕ ಯಾರು… ?
Team Udayavani, Aug 7, 2024, 10:05 AM IST
ಅವರು ತುಂಬಾ ಒಳ್ಳೆಯವರು. ಅವರಾಯಿತು ಅವರ ಕೆಲಸವಾಯಿತು. ಯಾರ ತಂಟೆಗೂ ಹೋಗುವವರಲ್ಲ, ಪ್ರಾಮಾಣಿಕರು.
ಅವರು ಭಾರೀ ಒಳ್ಳೆಯ ಮನುಷ್ಯ. ನಿಷ್ಠಾವಂತ, ನಂಬಿಕಸ್ಥ. ನಮ್ಮ ರೀತಿ ನೀತಿಗೆ ಹೊಂದಿಕೆಯಾಗುತ್ತಾರೆ. ಪ್ರಾಮಾಣಿಕರು.
ಈ ಡೈಲಾಗ್‌ಗಳನ್ನು ಯಾರದರೊಬ್ಬರ ಬಗ್ಗೆ ಮಾತನಾಡುವಾಗ ಕೇಳಿಯೇ ಇರುತ್ತೀರಿ. ಇಲ್ಲ ನಿಮ್ಮ ಬಗ್ಗೆಯೇ ಬೇರೆ ಯಾರಾದರೂ ಹೀಗೆ ಅಂದಿರಲೂಬಹುದು. ಇಲ್ಲಿ ಗಮನಿಸಬೇಕಾದ ವಿಷಯ, ನಿಜಕ್ಕೂ ಪ್ರಾಮಾಣಿಕರು ಅಂದರೆ ಯಾರು? ಯಾರ ತಂಟೆಗೂ ಹೋಗದೆ, ಅವರಾಯಿತು ಅವರ ಕೆಲಸವಾಯಿತು ಅನ್ನುವ ಹಾಗೆ ಇರುವವರ? ಅಥವಾ ಒಬ್ಬ ವ್ಯಕ್ತಿಗೆ ಇಲ್ಲ ಅವರ ರೀತಿ ನೀತಿಗೆ ನಿಷ್ಠರಾಗಿ, ಬದ್ಧರಾಗಿ ಕೊನೆಯವರೆಗೂ ಇರುವವರ?
ಮೊತ್ತ ಮೊದಲಿಗೆ ಯಾರ ತಂಟೆಗೂ ಹೋಗದೇ ಇರುವವರನ್ನು ನಿರುಪದ್ರವಿ ಅಥವಾ ಹಾರ್ಮ್ಲೆಸ್ ಪರ್ಸನ್ ಎಂದು ಕರೆಯಬಹುದು. ಅವರು ಸ್ವಭಾವತಃ ಸಾಧು ಜೀವಿಗಳು. ಯಾರ ತಂಟೆಗೂ ಹೋಗುವವರಲ್ಲ, ಯಾರ ತಕರಾರಲ್ಲೂ ಇಣುಕುವವರಲ್ಲ. ತಮ್ಮದೆನಿದೆಯೋ ಅಷ್ಟು ನೋಡಿಕೊಳ್ಳುತ್ತಾರೆ. ತಮ್ಮದೆಷ್ಟಿದೆಯೋ ಅಷ್ಟನ್ನೇ ಮಾಡುತ್ತಾರೆ. ಒಟ್ಟಿನಲ್ಲಿ ಯಾರ ವಿಷಯದಲ್ಲೂ ತಲೆ ಹಾಕಲಾರರು.
ಇನ್ನು ಎರಡನೆಯವರು ಒಬ್ಬ ವ್ಯಕ್ತಿಗೆ ಅಥವಾ ಅವರ ಸಿದ್ಧಾಂತಕ್ಕೆ ನಿಷ್ಠರಾಗಿ, ಬದ್ಧರಾಗಿ ಕೆಲಸ ಮಾಡುತ್ತಾ ಬದುಕುವವರು. ಇವರನ್ನು ನಂಬಿಕಸ್ಥರು, ನಿಷ್ಠಾವಂತರು ಎಂದು ಕರೆಯಲಾಗುತ್ತದೆ. ಇವರು ಜಗತ್ತು ಏನನ್ನುತ್ತದೆ ಎಂದು ತಲೆ ಕೆಡಿಸಿಕೊಳ್ಳಲಾರರು. ಇವರ ನಿಷ್ಠೆ, ನಂಬಿಕೆ, ವಿಧೇಯತೆ ಒಬ್ಬ ವ್ಯಕ್ತಿ ಅಥವಾ ಸಿದ್ಧಾಂತಕ್ಕೆ ಯಾವಾಗಲೂ ಮೀಸಲಾಗಿರುತ್ತದೆ.
ಈಗ ಹೇಳಿ ಇವರು ಪ್ರಾಮಾಣಿಕರು ಹೇಗಾಗುತ್ತಾರೆ? ಮೊತ್ತಮೊದಲಿಗೆ ಹಾರ್ಮ್ ಲೆಸ್ ಅನ್ನೊದು ಪ್ರಾಮಾಣಿಕತೆಯ ಮಾನದಂಡ ಅಲ್ಲ. ಅಂದರೆ ಅವರ ಪಾಡಿಗೆ ಅವರಿರುವವರು. ಯಾರ ತಂಟೆಗೂ ಹೋಗದವರು ಪ್ರಾಮಾಣಿಕರು ಅಂತೆನಿಸಿಕೊಳ್ಳಲಾರರು. ವಿಚಿತ್ರ ಎಂದರೆ ಇಂದಿನ ದಿನಮಾನದಲ್ಲಿ ಇಂತವರೇ ಪ್ರಾಮಾಣಿಕರು ಎಂದು ಕರೆಸಿಕೊಳ್ಳುವುದು.
ಯಾರನ್ನೂ, ಯಾವುದನ್ನೂ ಪ್ರಶ್ನಿಸದೇ ತಮ್ಮ ಪಾಡಿಗೆ ತಾವಿರುತ್ತಾರೆ. ಇವರೇ ಪ್ರಾಮಾಣಿಕರು ತರಾ ಕಾಣುವುದು. ಏಕೆಂದರೆ ಇವರು ಹೇಳಿದ್ದನ್ನಷ್ಟೇ ಮಾಡುತ್ತಾರೆ. ಎಲ್ಲಿಯೂ ಅಧಿಕ ಪ್ರಸಂಗ, ಮೂಗು ತೂರಿಸುವ ಕೆಲಸವನ್ನು ಮಾಡಲಾರರು. ಅನಾವಶ್ಯಕ ವಿಷಯಗಳಿಗೆ ತಲೆ ಹಾಕಲಾರರು. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಜತೆಗಿದ್ದರೆ ತಮ್ಮದೆಲ್ಲಿ ಬಣ್ಣ ಬಯಲಾಗುತ್ತೂ ಎನ್ನುವ ಆತಂಕವಿರಲಾರದು. ತಮ್ಮ ವ್ಯವಹಾರದ ಗುಟ್ಟೆಲ್ಲಿ ಹೊರಬರುತ್ತದೋ ಎಂಬ ಭಯವಿರಲಾರದು.
ಏನೇ ಅವ್ಯವಹಾರ, ಅನ್ಯಾಯ ಅಂತ ಕಂಡರೂ ಯಾವುದನ್ನೂ ಕಂಡೇ ಇಲ್ಲ, ತನಗದು ಸಂಬಂಧವೇ ಇಲ್ಲ ಎಂದು ಇರುತ್ತಾರೆ. ಬಹಳಷ್ಟು ಮಂದಿಗೆ ಇದೇ ಬೇಕಾಗಿರುವುದು. ತಾವು ಹೇಳಿದ್ದಷ್ಟನ್ನೇ ಮಾಡುತ್ತಾ ತಮ್ಮ ಪಾಡಿಗೆ ತಾವು ಇರುವವರು. ಇಂತವರಿಗೆ ಪ್ರಾಮಾಣಿಕ ವ್ಯಕ್ತಿ ಅನ್ನುವ ಸರ್ಟಿಫಿಕೇಟ್ ಬೇಗನೆ ಸಿಗುತ್ತದೆ.
ಇನ್ನು ಎರಡನೆಯ ಗುಂಪಿನವರು ಯಾರೋ ಒಬ್ಬ ವ್ಯಕ್ತಿಗೆ ಅಥವಾ ಆ ವ್ಯಕ್ತಿಯ ಸಿದ್ಧಾಂತಕ್ಕೆ ನಿಷ್ಠರಾಗಿ, ಬದ್ಧರಾಗಿ ಬದುಕುವವರು. ಇವರು ಕೂಡ ಪ್ರಾಮಾಣಿಕರು ಅಂತ ಕರೆಸಿಕೊಳ್ಳಲಾರರು. ಏಕೆಂದರೆ ಆ ವ್ಯಕ್ತಿಯಿಂದ ಅಥವಾ ಆ ಸಿದ್ಧಾಂತದಿಂದ ಅವರೆನನ್ನೊ ಪಡೆದಿರುತ್ತಾರೆ. ಅದನ್ನು ತೀರಿಸುವ ಸಲುವಾಗಿಯೇ ಅವರು ಬದುಕಿನುದ್ದಕ್ಕೂ ನಿಷ್ಠೆ ನಂಬಿಕೆಯನ್ನು ತೋರಿಸಿರುತ್ತಾರೆ. ಇದು ಕೂಡ ಪ್ರಾಮಾಣಿಕತೆ ಎಂದೆನಿಸಿಕೊಳ್ಳುವುದಿಲ್ಲ.
ಬದಲಾಗಿ ಋಣಸಂದಾಯಕ್ಕಾಗಿ ತೋರುವ ನಿಷ್ಠೆ ಅಂತಾಗುತ್ತದೆ. ಆ ವ್ಯಕ್ತಿ ಒಳ್ಳೆಯವನಿರಲಿ, ಕೆಟ್ಟವನಿರಲಿ ಇವರ ನಿಷ್ಠೆ, ನಂಬಿಕೆ, ವಿಧೇಯತೆ ಕೊನೆಯವರೆಗೂ ಹಾಗೆಯೇ ಇರುತ್ತದೆ. ಅಂದರೆ ಒಬ್ಬ ವ್ಯಕ್ತಿ ನಿಮಗೆ ತುಂಬಾ ನಿಷ್ಠನಾಗಿದ್ದ ಮಾತ್ರಕ್ಕೆ ಅವನು ಪ್ರಾಮಾಣಿಕ ಅಂತಾಗಲಾರ. ಅವನು ವೈಯಕ್ತಿಕವಾಗಿ ನಿಮಗೆ ವಿಧೇಯನಾಗಿರಬಹುದು. ಅವನು ನಿಮಗೆ ನಂಬಿಕಸ್ಥನೆನಿಸಿರಬಹುದು.
ಆದರೆ ಅವನು ನಿಮ್ಮಿಂದ ಪಡೆದ ಯಾವುದೋ ಸಹಾಯಕ್ಕಾಗಿ ನೀವು ಮಾಡುವ ಕೆಲಸಗಳಿಗೆಲ್ಲಾ ಎಸ್ ಎಸ್ ಅನ್ನುತ್ತಿರುತ್ತಾನೆ. ನಿಮ್ಮಿಂದ ಪಡೆದ ಯಾವುದೋ ಉಪಕಾರಕ್ಕಾಗಿ ನಿಮಗೆ ಬೇಕೆಂದಾಗಲೆಲ್ಲ ಜೈಕಾರ ಹಾಕುತ್ತಾನೆ. ಅದನ್ನೇ ನೀವು ನಿಮ್ಮ ನೇರಕ್ಕೆ ನೋಡಿಕೊಂಡು ನಿಷ್ಠಾವಂತ, ನಂಬಿಕಸ್ಥ ಅಂತ ಕರೆಯಬಹುದೆನೋ. ಆದರೆ ಅದನ್ನು ಪ್ರಾಮಾಣಿಕತನ ಅಂತಾ ಕರೆಯಲಾಗದು.
ಹಾಗಾದರೆ ಪ್ರಾಮಾಣಿಕತೆ ಅಂದರೇನು?
ಪ್ರಾಮಾಣಿಕತೆ ಸದಾ ಸತ್ಯ, ನ್ಯಾಯದ ಕಡೆಗೆ ಪಾರದರ್ಶಕವಾಗಿರುವುದು. ಯಾವ ಹಿಂಜರಿಕೆ, ಸಂಕೋಚಕ್ಕೆ ಒಳಪಡದೆ, ಯಾರ ಹಂಗಿಗೂ ಕಾಯದೆ, ಯಾರ ಮುಲಾಜಿಗೂ ಬಗ್ಗದೆ, ವಸ್ತುನಿಷ್ಠವಾಗಿ, ವಿಷಯನಿಷ್ಠವಾಗಿ ನೋಡುವುದು. ಪ್ರಾಮಾಣಿಕತೆ ಯಾವತ್ತಿಗೂ ಸ್ವಯಂ ಸ್ವತಂತ್ರವಾಗಿರುತ್ತದೆ. ಈಗ ಹೇಳಿ, ಒಬ್ಬ ವ್ಯಕ್ತಿ ಅವರ ಪಾಡಿಗೆ ಅವರು ಕೆಲಸ ಮಾಡುತ್ತಾರೆ, ಯಾರ ತಂಟೆಗೂ ಹೋಗುವುದಿಲ್ಲ ಅಂದಾಕ್ಷಣ ಅವರು ಹೇಗೆ ಪ್ರಾಮಾಣಿಕ ಅನಿಸಿಕೊಳ್ಳುತ್ತಾನೆ? ಅಥವಾ ಒಬ್ಬ ವ್ಯಕ್ತಿಗೆ, ಅವರ ಸಿದ್ಧಾಂತಕ್ಕೆ ನಿಷ್ಠರಾಗಿ ಬದ್ಧರಾಗಿದ್ದಾರೆ ಎಂದ ಮಾತ್ರಕ್ಕೆ ಅವರು ಹೇಗೆ ಪ್ರಾಮಾಣಿಕರೆನಿಸಿಕೊಳ್ಳುತ್ತಾರೆ? ಆದರೆ ಅನಾದಿ ಕಾಲದಿಂದ ನಮ್ಮ ಪ್ರಾಮಾಣಿಕತೆಯ ಅರ್ಥಯಿಸುವಿಕೆ ಹೇಗಿದೆಯೆಂದರೆ ನಮಗೆ ಯಾರು ವಿಧೇಯರಾಗಿರುತ್ತಾರೋ, ನಂಬಿಕಸ್ಥರೆನಿಸುತ್ತಾರೋ, ನಿಷ್ಠರಿರುತ್ತಾರೋ ಅವರನ್ನು ಪ್ರಾಮಾಣಿಕರು ಅಂತ ಕರೆದುಬಿಡುವುದು.
ಮಹಾಭಾರತದಲ್ಲಿ ಬರುವ ಸಂಜಯ ಪಾತ್ರಧಾರಿಯನ್ನೇ ತೆಗೆದುಕೊಳ್ಳಿ. ಅವನೊಬ್ಬ ಹಾರ್ಮ್ಲೆಸ್ ಪರ್ಸನ್. ಕುರುಡು ದೊರೆ ಧೃತರಾಷ್ಟ್ರನ ಸಾರಥಿ. ಮಹಾರಾಜನ ಆಜ್ಞೆಯನ್ನು ಚಾಚು ತಪ್ಪದೇ ಪಾಲಿಸುತ್ತಾ ಅವನು ಹೇಳಿದಂತೆ ಕೇಳುವವನು. ಈ ಕಾರಣದಿಂದಲೇ ಮಹಾರಾಜನ ನೆಚ್ಚಿನ ಸಾರಥಿ ಆತ. ಹಾಗಂತ ಅನಿಸಿದರೂ ಕುರುಡು ಮಹಾರಾಜನ ಬದುಕಿಗೆ ಸರಿದಾರಿ ತೋರಿಸುವ ಸಾರಥಿ ಅವನಾಗಲಿಲ್ಲ. ಏಕೆಂದರೆ ದಿವ್ಯದೃಷ್ಟಿಯ ವರದಾನವನ್ನು ಸಂಪಾದಿಸಿದರೂ ಯುದ್ಧಭೂಮಿಯಲ್ಲಿ ಏನೇನಾಯಿತು ಎಂದು ಮಾಹಿತಿ ಕೊಡುವುದಷ್ಟೇ ಅವನ ಕೆಲಸವಾಯಿತು.
ಅಷ್ಟು ಬಿಟ್ಟರೆ, ನಿಜಕ್ಕೂ ಏನೇನು ಆಗಬಾರದಿತ್ತು, ಅದನ್ನು ಮಹಾರಾಜನಿಗೆ ಹೇಳಿ ಸರಿಪಡಿಸುವ ಕೆಲಸ ಅವನಿಂದಾಗಲಿಲ್ಲ. ಕಾರಣ ಅವನು ತನ್ನ ಕೆಲಸ ಎಷ್ಟು ಇದೆಯೋ ಅಷ್ಟನ್ನೇ ಮಾಡುವವನು. ವಿಪರ್ಯಾಸವೆಂದರೆ ಧೃತರಾಷ್ಟ್ರನ ಪಾಲಿಗೆ ಸಂಜಯ ಕೊನೆಯವರೆಗೂ ಪ್ರಾಮಾಣಿಕ ಸಾರಥಿಯಾಗೇ ಉಳಿಯುತ್ತಾನೆ. ವಾಸ್ತವದಲ್ಲಿ ಅವನು ಧೃತರಾಷ್ಟ್ರನ ನಿಷ್ಠಾವಂತ ಸಾರಥಿ ಅಷ್ಟೇ.
ಇನ್ನು ಕರ್ಣನ ಪಾತ್ರವನ್ನೇ ತೆಗೆದುಕೊಳ್ಳಿ. ಸತ್ಯ, ನ್ಯಾಯ ನೀತಿ, ಧರ್ಮವನ್ನು ತಿಳಿದಿದ್ದ ಕರ್ಣ ತನ್ನ ಮಿತ್ರ ಕೌರವನನ್ನು ತಿದ್ದುವ ಕೆಲಸವನ್ನು ಒಮ್ಮೆಯೂ ಮಾಡದೆ ನಿಜವಾದ ರೀತಿಯಲ್ಲಿ ಅಪ್ರಾಮಾಣಿಕನೆನಿಸುತ್ತಾನೆ. ಆದರೆ ಅದೇ ಕೌರವನ ಕಣ್ಣಿಗೆ ತಾನು ಮಾಡುವ ಎಲ್ಲ ಕೆಟ್ಟ ಕೆಲಸಗಳಿಗೂ ಸಾಥ್ ಕೊಡುವ ಕರ್ಣ ನಂಬಿಕಸ್ಥ ಪ್ರಾಮಾಣಿಕ ವ್ಯಕ್ತಿ ಏನಿಸುತ್ತಾನೆ.
ಆದರೆ ವಾಸ್ತವದಲ್ಲಿ ಅದು ಕರ್ಣನ ಸ್ವಾಮಿನಿಷ್ಠೆ ಆಗಿರುತ್ತದೆ. ಸೂತಪುತ್ರನನ್ನು ರಾಜನನ್ನಾಗಿ ಮಾಡಿದ ಋಣ ಅವನ ಮೇಲೆ ಇರುತ್ತದೆ. ಹಾಗಾಗಿ ಒಂದು ದಿನವೂ ಆ ಸಿಂಹಾಸನದ ಮೇಲೆ ಕೂರದ ಕರ್ಣ ಬರೀ ಕೌರವನ ಸ್ನೇಹಕ್ಕಾಗಿ, ಅವನ ಉಪ್ಪಿನ ಋಣಕ್ಕಾಗಿ ಅವನ ಎಲ್ಲ ಅಧರ್ಮಗಳಲ್ಲೂ ಪಾಲುದಾರನಾಗುತ್ತಾನೆ. ಆದರೆ ಕರ್ಣ ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದರೆ ಕೌರವ ಮಾಡುವ ಎಲ್ಲ ಅಧರ್ಮಗಳನ್ನು ತಡೆಯಬಹುದಾಗಿತ್ತು. ಆದರೆ ಅವನಿಗೆ ತನ್ನ ಸ್ನೇಹಿತನ ನಂಬಿಕೆ ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಋಣಸಂದಾಯವೇ ಮುಖ್ಯವಾಗಿತ್ತು.
ಆದರೆ ಅದೇ ವಿದುರನ ವಿಚಾರಕ್ಕೆ ಬನ್ನಿ. ಅನ್ಯಾಯ, ಅಧರ್ಮ ಕಂಡುಬಂದಾಗಲೆಲ್ಲಾ ಯಾರ ಹಿಂಜರಿಕೆ, ಹಂಗಿಗೂ ಒಳಪಡದೆ ಸ್ವತಂತ್ರವಾಗಿ ಪ್ರತಿಭಟಿಸುವ ವ್ಯಕ್ತಿ ಎಂದರೆ ಅದು ವಿದುರ. ಇಡೀ ಮಹಾಭಾರತದಲ್ಲಿ ಧರ್ಮ ದಾರಿ ತಪ್ಪಿದಾಗ, ರಾಜ್ಯ ಅಪಾಯದಲ್ಲಿ ಸಿಲುಕಿದಾಗ ಅದನ್ನು ಸಕಾಲದಲ್ಲಿ ನೆನಪಿಸಿ ಎಚ್ಚರಿಸುತ್ತಿದ್ದುದು ವಿದುರನೊಬ್ಬನೇ.
ಪ್ರಾಮಾಣಿಕತೆ ಅಂದರೆ ವಸ್ತುನಿಷ್ಠ ಹಾಗೂ ವಿಷಯನಿಷ್ಠವಾಗಿರೋದು ವ್ಯಕ್ತಿನಿಷ್ಠೆ ಅಲ್ಲ ಅಂತ ತೋರಿಸಿದವನೆ ಅವನು. ಯಾವ ಮುಲಾಜಿಗೂ ಬಗ್ಗದೆ, ಯಾರ ಹಿಂಜರಿಕೆ ಹಂಗಿಗೂ ಒಳಪಡದೆ, ತನ್ನ ಜೀವನದುದ್ದಕ್ಕೂ ಹಾಗೆ ಬದುಕಿ ನೈಜ ರೀತಿಯಲ್ಲಿ ಪ್ರಾಮಾಣಿಕತನ ತೋರಿದವನು. ಇದೇ ನಿಲುವು ಭೀಷ್ಮ ದ್ರೋಣ ಕೃಪಾಚಾರ್ಯರ ಮನಸ್ಸಿನಲ್ಲಿ ಇದ್ದರೂ, ಯಾರದೋ ಮುಲಾಜಿಗೆ, ಯಾವುದೋ ನಿಷ್ಠೆಗೆ ಬಿದ್ದು ವರ್ತಿಸುವ ಅವರು ಅಪ್ರಾಮಾಣಿಕರಾಗೆ ಉಳಿದುಬಿಡುತ್ತಾರೆ.
ಧೃತರಾಷ್ಟ್ರನ ಪಾಲಿಗೆ ತಾನು ಹೇಳಿದ್ದನ್ನು ಪಾಲಿಸುವ ಸಂಜಯ ಪ್ರಾಮಾಣಿಕ ವ್ಯಕ್ತಿ. ಕೌರವನ ಪಾಲಿಗೆ ತನ್ನೆಲ್ಲ ಅಧರ್ಮಗಳಲ್ಲೂ ಸಮಾನ ಆಸಕ್ತಿಯಿಂದ ಪಾಲ್ಗೊಳ್ಳುವ ಕರ್ಣ ಪ್ರಾಮಾಣಿಕ ವ್ಯಕ್ತಿ. ಆದರೆ ಅನ್ಯಾಯ ಅಧರ್ಮ ಅಂತ ಕಂಡು ಬಂದಾಗ ತಾನಾಯಿತು, ತನ್ನ ಪಾಡಾಯಿತು ಅಂತ ಕೂರದೆ, ನಿಷ್ಠೆ, ಅನ್ನದ ಋಣ ಅಂತ ಯಾರ ಮುಖವನ್ನೂ ನೋಡದೆ, ತನ್ನ ಸ್ಥಾನದ ಕರ್ತವ್ಯವನ್ನು ನೆನಪಿಸಿಕೊಂಡು ದನಿ ಎತ್ತುವ ವಿದುರ ನಿಜವಾದ ಅರ್ಥದಲ್ಲಿ ಪ್ರಾಮಾಣಿಕ ವ್ಯಕ್ತಿ.
ಮಧುಕರ್
ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.