ಸಿನೆಮಾ ವಿಮರ್ಷೆ: ʼWaterʼ ಜೀವನದ ಕ್ರೂರ ವಾಸ್ತವತೆಗೆ ಹಿಡಿದಿದ ಕನ್ನಡಿ
ಸಮಾಜ ನೀಡುವ ಪುಡಿಗಾಸಿನ ಭಿಕ್ಷೆಯಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಕಲ್ಯಾಣಿಯನ್ನು ವೇಶ್ಯಾ ವೃತ್ತಿಗೆ ಇಳಿಸಲಾಗುತ್ತದೆ. ವಿಧವೆಯರನ್ನು ಎಲ್ಲಾ ಐಹಿಕ ಸುಖಗಳಿಂದ ನಿಷಿದ್ಧಗೊಳಿಸಿರುವ ಪುರುಷ ಪ್ರಧಾನ ನಾಗರಿಕ ಸಮಾಜ ಕೊನೆಗೆ ಅದೇ ವಿಧವೆಯನ್ನು ದೈಹಿಕ ಸುಖಕ್ಕಾಗಿ ಬಳಸಿಕೊಳ್ಳುವ ಹೇಯ ಹಂತ ಶಾಸ್ತ್ರ- ಮಡಿವಂತಿಕೆಗಳ ದುರಂತಕ್ಕೆ ಸಮೀಕರಣವಾಗುತ್ತದೆ. ಏನಿದು ಕಥೆ? ಇಲ್ಲಿದೆ ಓದಿ.
Team Udayavani, Sep 8, 2020, 7:23 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಅದು ಸ್ವಾತಂತ್ರ್ಯಪೂರ್ವ ಉತ್ತರ ಭಾರತದ ಸಣ್ಣ ಹಳ್ಳಿ. ಬದುಕಿನ ಪಾಪವನ್ನು ತೊಡೆದು ಹಾಕುವ, ಶುದ್ಧತೆ- ಪವಿತ್ರತೆಯ ಪ್ರತೀಕವೆಂದು ನಂಬಲಾದ ಗಂಗಾ ನದಿಯ ತಟದಲ್ಲಿ ಹರಡಿದ ಹಳ್ಳಿಯದು.
ಗಂಗೆಯ ಪವಿತ್ರತೆಗೆ ಸಾಮ್ಯವಾಗಿ ಸ್ವಲ್ಪ ಜಾಸ್ತಿಯೇ ಎನ್ನಬಹುದಾದ ಮಡಿವಂತಿಕೆ, ಕಂದಾಚಾರಗಳನ್ನು ರೂಢಿಸಿಕೊಂಡು ಬರುತ್ತಿರುತ್ತಾರೆ ಆ ಗ್ರಾಮಸ್ಥರು.
ಅದು ಎಲ್ಲಿಯವರೆಗಿನ ಮಡಿವಂತಿಕೆಯೆಂದರೆ ಸಂಪ್ರದಾಯಗಳನ್ನು ಅತ್ಯುಚ್ಛ ಸ್ಥಾನದಲ್ಲಿರಿಸಿ, ಜೀವಂತ ಮನುಷ್ಯರನ್ನು ಪರಿಗಣನೆಗೇ ತೆಗೆದುಕೊಳ್ಳದಷ್ಟು. ಇದಕ್ಕೆ ಸಾಕ್ಷಿ ಆ ಊರಿನ ವಿಧವಾಶ್ರಮ!
ಆ ವಿಧವಾಶ್ರಮಕ್ಕೆ ವಯಸ್ಸಿನ ಭೇದವಿಲ್ಲ. ಐದಾರ ವರ್ಷದ ಅತಿ ಮುಗ್ಧ ಬಾಲಕಿಯಾದರೂ ಸರಿ, ಎಂಬತ್ತೈದು ವರ್ಷ ವಯಸ್ಸಿನ ಮುದುಕಿಯಾದರೂ ಸರಿ. ‘ಗಂಡ’ನಿಲ್ಲದ ಯಾವುದೇ ಹೆಣ್ಣು ಆ ವಿಧವಾಶ್ರಮದ ಅತಿಥಿಯಾಗುತ್ತಾಳೆ, ಮುಂದೇ ಅದರ ಕಾಯಂ ಸದಸ್ಯೆಯಾಗುತ್ತಾಳೆ. ಗಂಡನಿರುವಷ್ಟೂ ದಿನ ನಾಗರಿಕ ಸಮಾಜದ ಹೆಮ್ಮೆಯ ಸದಸ್ಯೆಯಾಗಿರುವ ಅವಳು, ಅವನ ಮರಣಾನಂತರ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತಾಳೆ. ‘ಪತಿಯಿರದ ಸತಿ ಜೀವಚ್ಛವದಂತೆ. ಗಂಡ ಮರಣಿಸಿದರೆ ಅವನ ಹೆಂಡತಿ ಅರ್ಧ ಸತ್ತಂತೆ’ ಎಂಬ ಭಾವನೆಗೆ ಅವರೆಲ್ಲರೂ ಬದ್ಧರು.
ಸಾಮಾನ್ಯ ಜೀವನದ ಯಾವುದೇ ಚಿಕ್ಕ ಪುಟ್ಟ ಖುಷಿಗಳನ್ನು ಅವರು ಅನುಭವಿಸುವಂತಿಲ್ಲ; ನಾಗರಿಕ ಸಮಾಜದೆದುರು ಸ್ವೇಚ್ಛೆಯಾಗಿ ಓಡಾಡುವಂತಿಲ್ಲ; ಬಣ್ಣ ಬಣ್ಣದ ಕನಸುಗಳನ್ನು ಕಾಣುವಂತಿಲ್ಲ! ಆ ವಿಧವೆಯರ ಪಾಲಿಗೆ ಎಲ್ಲವೂ ನಿಷಿದ್ಧ. ಅವರ ಆಸೆಗಳೆಲ್ಲವನ್ನೂ ‘ವೈರಾಗ್ಯ ಜೀವನದ ನಿಯಮ’ ನುಂಗಿ ಹಾಕಿಬಿಡುತ್ತದೆ. ಆಕಾಂಕ್ಷೆಗಳೆಲ್ಲವನ್ನೂ ಬದಿಗಿಟ್ಟು ಏಕಾದಶಿ ವ್ರತವನ್ನಾಚರಿಸುತ್ತ, ಅರೆ ಹೊಟ್ಟೆ ಊಟ ಮಾಡುತ್ತ ಜೀವನ ತಳ್ಳುವುದೇ ಅವರಪಾಲಿನ ಮೋಕ್ಷದ ಹಾದಿ. ಕಟ್ಟರ್ ಸಂಪ್ರದಾಯವಾದಿಗಳ ಘೋರ ತಿರಸ್ಕಾರದ ಜೊತೆಗೆ ಕೇಶ ಮುಂಡನ, ಮಡಿಯುಡುಗೆಯ ಹೀನ ಶಿಕ್ಷೆ ಬೇರೆ! ಇವೆಲ್ಲದರ ಮಧ್ಯೆ ಕೃಷ್ಣ ಧ್ಯಾನ ಮಾಡುತ್ತ, ಎಂದಾದರೊಂದು ದಿನ ಈ ಮನೋಹಿಂಸಾತ್ಮಕ ಜೀವನದಿಂದ ಮುಕ್ತಿ ದೊರೆತೀತೆಂಬ ಭಾವನೆಯೇ ಅವರ ಮುಂದಿರುವ ಸಮಾಧಾನದ ಹಾದಿ.
ಹೀಗೆ ಸ್ವಾತಂತ್ರ್ಯಪೂರ್ವ ಭಾರತದ ವಿಧವೆಯರ ಸ್ಥಿತಿ-ಗತಿಗಳನ್ನು ಹೂರಣವಾಗಿಟ್ಟುಕೊಂಡು ಬಂದ ಚಿತ್ರವೇ ‘ವಾಟರ್’. 2007 ರಲ್ಲಿ ತೆರೆ ಕಂಡ, ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ ಅಂದಿನ ಜೀವನದ ಕ್ರೂರ ವಾಸ್ತವತೆಗೆ ಕನ್ನಡಿ ಹಿಡಿದಿತ್ತು. ಸತಿ ಸಹಗಮನ ಪದ್ಧತಿಯಲ್ಲಿ ಮಹಿಳೆಯರನ್ನು ಕ್ರೂರವಾಗಿ ಕೊಲ್ಲಲಾಗುತ್ತಿದ್ದರೆ, ವಿಧವಾಶ್ರಮಗಳಂತಹ ಸ್ಥಳಗಳಲ್ಲಿ ಅವರು ಜೀವವಿದ್ದೂ ಸತ್ತವರಂತೆ ಬದುಕಲು ಒತ್ತಾಯಿಸಲಾಗುತ್ತಿತ್ತು. ಮನು ಶಾಸ್ತ್ರದ ಒತ್ತಾಯದ ಹೇರಿಕೆ ಸಮಾಜದಲ್ಲಿತ್ತು. ಒಬ್ಬ ಗಂಡಸು ಮದುವೆಯಾಗಬಹುದು; ಬಹುಪತ್ನಿತ್ವವನ್ನಾಚರಿಸಬಹುದು ಜೊತೆಗೆ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳಬಹುದು ಎಂಬ ಕಾಲದಲ್ಲಿ ಹೆಣ್ಣು ಒಬ್ಬನನ್ನು ಮದುವೆಯಾಗಿ ಅವನ ಜೊತೆಗೇ ತನ್ನ ಜೀವನವನ್ನೂ ಅಂತ್ಯಗೊಳಿಸಬೇಕೆಂಬ ಅಂಧಶ್ರದ್ಧೆಯನ್ನು ಮತ್ತಷ್ಟು ಕುರುಡಾಗಿ ಪಾಲಿಸುತ್ತಿದ್ಜ ಪುರುಷ ಪ್ರಧಾನ ಸಮಾಜವನ್ನು ಸೂಕ್ತ ಸಂಕೇತಗಳೊಂದಿಗೆ ದೀಪಾ ಮೆಹ್ತಾ ತೆರೆಯ ಮೇಲೆ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರಪಂಚವನ್ನು ಆಗಷ್ಟೇ ಬೆರಗುಗಣ್ಣಿನಿಂದ ನೋಡಲು ಕಲಿತ ಚೂಞಾ, ಗಂಡನೆಂದರೆ ಏನೆಂದು ಅರಿಯುವ ಮೊದಲೇ ಅವನನ್ನು ಕಳೆದುಕೊಂಡು ಕಲ್ಯಾಣಿ, ಬದುಕಿನ ಜಂಜಡಗಳಿಗೆ ರೋಸಿ ಹೋಗಿ ಕ್ರೂರಿಯಾದ ಕುಂತಿ, ವೈಧವ್ಯದ ವೈರಾಗ್ಯದ ಲ್ಲಿಯೇ ಹಣ್ಣಾಗಿ ಕೊನೆಗಾಲದಲ್ಲಿ ಲಡ್ಡು ತಿನ್ನಲು ಹಂಬಲಿಸುವ ಎಂಬತ್ತೈದು ವರ್ಷ ವಯಸ್ಸಿನ ಬುವಾ, ವಿಧವಾಶ್ರಮದಲ್ಲಿ ಎಲ್ಲರ ಮೇಲೆ ಅಧಿಕಾರ ಚಲಾಯಿಸುತ್ತ ದರ್ಪ ಮೆರೆಯುವ ಮಧುಮತಿ, ಇವರೆಲ್ಲರ ನಡುವೆ ನಾಲ್ಕಕ್ಷರ ಓದಿಕೊಂಡು ತಕ್ಕಮಟ್ಟಿಗೆ ಪ್ರಬುದ್ಧವಾಗಿ ಯೋಚನೆ ಮಾಡಲು ಕಲಿತ ಮುಕ್ತ ಮನಸ್ಸಿನ ಶಕುಂತಲಾ……ಇವರೆಲ್ಲ ವಿಧವಾ ಜಗತ್ತಿನ ಸಂಕೇತಗಳಾಗಿ ನಿಲ್ಲುತ್ತಾರೆ, ಆ ಕರಾಳ ಬದುಕಿನ ವಿವಿಧ ಮುಖಗಳನ್ನು ತೋರ್ಪಡಿಸುತ್ತಾರೆ. ಹೆಣ್ಣಿನ ಬದುಕಿಗೆ ಗಂಡಿನ ಅಸ್ತಿತ್ವ ಬೇಕೇ ಬೇಕು ಎಂಬ ಬಗ್ಗೆಅನಿವಾರ್ಯತೆಯ ಸೃಷ್ಟಿ ಎಂತಹವರನ್ನೂ ದಿಗಿಲುಗೊಳಿಸಿಬಿಡುತ್ತದೆ.
ಸಮಾಜ ನೀಡುವ ಪುಡಿಗಾಸಿನ ಭಿಕ್ಷೆಯಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಕಲ್ಯಾಣಿಯನ್ನು ವೇಶ್ಯಾ ವೃತ್ತಿಗೆ ಇಳಿಸಲಾಗುತ್ತದೆ. ವಿಧವೆಯರನ್ನು ಎಲ್ಲಾ ಐಹಿಕ ಸುಖಗಳಿಂದ ನಿಷಿದ್ಧಗೊಳಿಸಿರುವ ಪುರುಷ ಪ್ರಧಾನ ನಾಗರಿಕ ಸಮಾಜ ಕೊನೆಗೆ ಅದೇ ವಿಧವೆಯನ್ನು ದೈಹಿಕ ಸುಖಕ್ಕಾಗಿ ಬಳಸಿಕೊಳ್ಳುವ ಹೇಯ ಹಂತ ಶಾಸ್ತ್ರ- ಮಡಿವಂತಿಕೆಗಳ ದುರಂತಕ್ಕೆ ಸಮೀಕರಣವಾಗುತ್ತದೆ.
ಅದೇ ಸಮಯದಲ್ಲಿ ‘Liberate the widows of India’ ಎಂದು ಬರುವ ಗಾಂಧೀವಾದಿ ನಾರಾಯಣನನ್ನು ಕಲ್ಯಾಣಿ ಮದುವೆಯಾಗಬಯಸಿದಾಗ ಶಾಸ್ತ್ರಗಳಿಂದ ಪ್ರಬುದ್ಧವಾದ ಸಮಾಜ ಅವರನ್ನು ತುಚ್ಛವಾಗಿ ಕಾಣುತ್ತದೆ. ವಿಧವಾಶ್ರಮದಿಂದ ಅವಳನ್ನು ಹೊರಗಟ್ಟಲಾಗುತ್ತದೆ. ಕೊನೆಗೆ ಎಲ್ಲಿಯೂ ಸಲ್ಲದೇ ತ್ರಿಶಂಕು ಪರಿಸ್ಥಿತಿ ತಲುಪುವ ಕಲ್ಯಾಣಿ ಅದೇ ಪರಿಶುದ್ಧ ಗಂಗೆಯಲ್ಲಿ ಮುಳುಗಿ ದುರಂತ ಅಂತ್ಯ ಕಾಣುತ್ತಾಳೆ. ಕಲ್ಯಾಣಿಯ ಕಥೆ ಮುಗಿದ ಬಳಿಕವೂ Water ಕಥೆ ಮುಂದುವರೆಯುತ್ತದೆ. ಕಲ್ಯಾಣಿಯನ್ನು ತುಂಬಾ ಹಚ್ಚಿಕೊಂಡಿದ್ದ ಚೂಞಾ ಮುಂದೆ ಏನಾಗುತ್ತಾಳೆ, ಅವಳು ಕಥೆ ಯಾವ ತೀವ್ರತೆಯನ್ನು ಪಡೆದುಕೊಳ್ಳುತ್ತದೆಂಬುದೇ ಮುಂದುವರಿದ ಕಥೆ.
ಇದು ತೆರೆಯ ಮೇಲಿನ ಕಥೆಯಾದರೂ ನಿಜ ಜೀವನದಿಂದ ದೂರವೇನಿಲ್ಲ. ಇಂದಿಗೂ ನಮ್ಮ ದೇಶದಲ್ಲಿ ಇಂಥಾ ಎಷ್ಟೋ ಪದ್ಧತಿಗಳು ಅನೂಚಾನವಾಗಿ ನಡೆದುಕೊಂಡು ಬಂದಿವೆ. ಎಂಥದ್ದೇ ಸುಧಾರಣಾವಾದ, ಮಹಿಳಾವಾದ ಬಂದಿದೆಯೆಂದರೂ ಅಂಧಶ್ರದ್ಧೆಗಳ ಮೇಲಿನ ನಂಬಿಕೆ ಕುಂದಿಲ್ಲದಂತೆ ಉಳಿದಿದೆ. ವಿಧವಾ ಪುನರ್ವಿವಾಹಕ್ಕೆ ಕಾನೂನಿನ ಸಮ್ಮತಿ ದೊರೆತರೂ ನಮ್ಮ ಸಮಾಜ ಸಂಪೂರ್ಣ ಮನಸ್ಸಿನಿಂದ ಅದಕ್ಕೆ ತೆರೆದುಕೊಂಡಿಲ್ಲ. ಯಂತ್ರಗಳ ನಡುವೆ ಸಿಲುಕಿಕೊಂಡು ತಮ್ಮನ್ನೇ ಮರೆತು ಜೀವನ ನಡೆಸುತ್ತಿರುವ ನಗರದವರ ನಡುವೆ ಇದು ಸ್ವೀಕೃತವಾದರೂ, ತುಂಬಾ ಕಡೆ ಈ ಮುಕ್ತ ಮನೋಭಾನ ಬೆಳೆದಿಲ್ಲ. ಗಂಡಿನ ಸಾವಿನ ನಂತರ ಬದುಕು ಕಟ್ಟಿಕೊಳ್ಳಲು ಒಂದು ಹೆಣ್ಣು ಸಮಾಜದ ಮಧ್ಯೆ ಬಂದಾಗ ಸಮಾಜ ಅವಳನ್ನು ನೋಡುವ ರೀತಿಯೇ ಬೇರೆ. ನೂರು ಕಣ್ಣುಗಳು ಅವಳನ್ನು ನೂರು ರೀತಿಯಲ್ಲಿ ನೋಡುತ್ತವೆ, ವಿಶ್ಲೇಷಿಸುತ್ತವೆ. ಇಂತಹ ಹಲವಾರು ಅಭಿಪ್ರಾಯಗಳು, ಟೀಕೆಗಳ ನಡುವೆ ಮುಕ್ತ ಮನಸ್ಸಿನ ಹೆಣ್ಣು ಬದುಕು ಕಟ್ಟಿಕೊಳ್ಳುವುದು ಸಾಹಸವೇ ಸರಿ.
ಸ್ತ್ರೀ ಪಾವಿತ್ರ್ಯತೆಯ ಬಗ್ಗೆ ನಮ್ಮಪುರಾಣಗಳು ಹಾಡಿ ಹೊಗಳಿವೆ. ನಮ್ಮ ಕವಿಗಳು ಅವಳನ್ನು ಕಲಾತ್ಮಕವಾಗಿ ಬಣ್ಣಿಸಿದ್ದಾರೆ. ಚಿಂತಕರು ಅದ್ಭುತವೆನ್ನಬಹುದಾದ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಇವೆಲ್ಲವೂ ಬೇರೆಯವರು ಹೆಣ್ಣಿನ ಬಗ್ಗೆ ಹೇಳಿದ್ದೇ ಹೊರತು ಒಂದು ಹೆಣ್ಣು ಮುಕ್ತವಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳಲು, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಸಿಕ್ಕಿದ್ದು ಕಡಿಮೆ. ಅದರಲ್ಲಿಯೂ ಸಿನಿಮಾದಂತೆ ಕ್ಷೇತ್ರಗಳಲ್ಲಿ ಇಂದಿಗೂ ಕೂಡ ಹಿರೋಯಿನ್ ತೆರೆಯನ್ನು ಚಂದಗಾಣಿಸಲು ಮಾತ್ರ ಸೂಕ್ತ ಎಂಬ ಭಾವನೆಯಿದೆ.
Out of the box ಎಂಬಂತಹ ಕಾನ್ಸೆಪ್ಟ್ ಗಳನ್ನು ಹುಡುಕುವ ಪರಿಸ್ಥಿತಿಯಿದೆ. ಅಂಥಾದ್ದರಲ್ಲಿ Queen, Lipstic Under My Burkha, Pink, ನಾತಿಚರಾಮಿಯಂತಹ ಕೆಲ ಅದ್ಭುತ ಚಿತ್ರಗಳು ಹೆಣ್ಣಿನ ಮನಸ್ಥಿತಿ, ಆಲೋಚನೆಗಳನ್ನು ಕೇಂದ್ರಿತವಾಗಿಸಿ ಬಂದಿವೆ. Water ಕೂಡ ಇದೇ ಸಾಲಿಗೆ ಸೇರುವ ಚಿತ್ರವಾಗಿದ್ದು ಸಾಕಷ್ಟು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿ, ಮನ್ನಣೆಗಳಿಗೆ ಭಾಜನವಾಗಿದೆ. ನಮ್ಮಲ್ಲಿನ ಆಲೋಚನಾ ಶಕ್ತಿಯನ್ನು ಒಮ್ಮೆ ಜಾಗೃತಗೊಳಿಸಲು Waterನಂತಹ ಚಿತ್ರಗಳನ್ನು ನೋಡಬೇಕೆಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ.
ಶ್ರೀಗೌರಿ ಎಸ್. ಜೋಶಿ, ಉಪನ್ಯಾಸಕಿ, ಆಳ್ವಾಸ್ ಕಾಲೇಜು ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.