“ಪರಿಸರದೊಂದಿಗೆ ಬದುಕು ಸಾಗಿಸುವುದು ಕಲಿಯಬೇಕಿದೆ’
Team Udayavani, Jun 5, 2020, 2:10 PM IST
ಸಾಂದರ್ಭಿಕ ಚಿತ್ರ
ಮನುಷ್ಯ ಭೂಮಿ ಮೇಲೆ ಜೀವಿಸಲು ನೀರು, ಗಾಳಿ, ಆಹಾರ ಎಂಬ ಮೂರು ಮೂಲ ಆವಶ್ಯಕತೆಗಳಿವೆ. ಇವು ನಮಗೆ ದೊರೆಯುವುದು ಎಲ್ಲಿಂದ? ಎಂಬುದಾಗಿ ನಮ್ಮಲ್ಲಿಯೇ ಪ್ರಶ್ನೆ ಹಾಕಿಕೊಂಡಾಗ ಉತ್ತರ ನಮ್ಮ ಸುತ್ತಲಿನ ಪರಿಸರ. ಪರಿಸರದೊಂದಿಗೆ ನಮ್ಮ ಬದುಕು ಹೊಂದಿಕೊಂಡು ಸಾಗುತ್ತಿದೆ. ಅದರ ಸಂರಕ್ಷಣೆಗೆ ನಾವು ಪಣತೊಡಬೇಕಿದೆ.
ಮಾನವನಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿಕೊಡುವ ಈ ನಿಸರ್ಗ ಮಾತೆಯನ್ನು ದೇಶಾದ್ಯಂತ ಪ್ರತಿಯೊಬ್ಬರೂ ಪೂಜಿಸಿ ಸ್ಮರಿಸುವ ಮೂಲಕ ಜೂ. 5ರಂದು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ಎಲ್ಲರೂ ಸೇರಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸ್ವತ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡ ಈ ದಿನ ಮಾತ್ರವಲ್ಲದೆ ಪ್ರತಿ ದಿನವೂ ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಪ್ರತಿಜ್ಞೆ ಮಾಡಲಾಗುತ್ತದೆ.
ಮನುಷ್ಯ ತನ್ನ ಸ್ವಾರ್ಥ ಬುದ್ಧಿಯಿಂದ ಪರಿಸರದ ಮೇಲೆ ವಕ್ರದೃಷ್ಟಿಯನ್ನು ತೋರಿದ್ದಾನೆ. ಇದರಿಂದ ಪರಿಸರ ಹಿಂದಿನಿಂದಲೂ ಅನೇಕ ಸಮಸ್ಯೆಗಳಿಗೆ ತುತ್ತಾಗಿವೆ.
ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನೆಲ್ಲಾ ಸಹಿಸದಿರುವಾಗ ಭೂಕಂಪ, ಪ್ರಳಯಗಳೆಂಬ ವಿಪತ್ತುಗಳು ಸಂಭವಿಸಿ ಅಪಾರ ಹಾನಿ ಉಂಟಾಗುತ್ತದೆ. ಇದರಿಂದಾಗಿ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ. ಪ್ರಪಂಚದಲ್ಲಿರುವ ಚಿಕ್ಕ ವಸ್ತುವಿನಿಂದ ಹಿಡಿದು ಬೃಹತ್ ಗಾತ್ರದ ಕಟ್ಟಡ ಎಲ್ಲವನ್ನೂ ಹೊತ್ತು ಸಹಿಸಿ ನಿಂತಿರುವ ಭೂಮಿ ತಾಯಿಗೆ ನಮ್ಮಿಂದ ಹಾನಿ ಉಂಟಾದರೆ ಅದು ಕ್ಷಮಿಸಲು ಸಾಧ್ಯವಾದ ಸಂಗತಿ. ಗಾಯದ ಮೇಲೆ ಬರೆ ಹಾಕಿದಂತೆ ಎಂಬ ಮಾತಿದೆ. ಅದರಂತೆಯೇ ನಮ್ಮೆಲ್ಲರ ಭಾರ ಹೊತ್ತಿರುವ ಭೂಮಿಯ ಮೇಲೆ ಹಾನಿ ಎಂಬ ಬರೆ ಹಾಕಿದರೆ ನಮ್ಮೆಲ್ಲರ ವಿನಾಶಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.
ನಮ್ಮ ಯೋಚನ ವಿಧಾನವನ್ನು ಸರಿಪಡಿಸಿಕೊಂಡು ನಾವು ಪರಿಸರದ ವಿರುದ್ಧ ಏನೆಲ್ಲಾ ಮಾಡುತ್ತಿದ್ದೇವೆ ಎಂದು ನಿಧಾನವಾಗಿ ಯೋಚಿಸಿ, ತಪ್ಪುಗಳನ್ನು ಸರಿಪಡಿಸಿಕೊಂಡು ಪರಿಸರ ಸಂರಕ್ಷಣೆಯಿಂದ ನಮ್ಮ ರಕ್ಷಣೆ ಸಾಧ್ಯ ಎನ್ನುವ ಸತ್ಯಾಂಶವನ್ನು ಮನಗಾಣುವ ಮೂಲಕ ಆರೋಗ್ಯಯುತ, ಸಮತೋಲನವಾದ ಪರಿಸರದೊಂದಿಗೆ ನಮ್ಮೆಲ್ಲರ ಬದುಕನ್ನು ಸಾಗಿಸಲು ಕೈಜೋಡಿಸೋಣ.
– ಸಂಗೀತಾ ಶ್ರೀ ಕೆ., ತುಮಕೂರು ವಿವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.