UV Fusion: ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುದು
Team Udayavani, Feb 26, 2024, 7:30 AM IST
ನಮ್ಮ ಮೂಗಿನ ನೇರಕ್ಕೆ ಸರಿಯಾಗಿ ಯೋಚಿಸುವ ಬದಲು ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಬೇಕು. ಧನಂಜಯನು ತನ್ನ ಮೂರು ವರ್ಷ ವಯಸ್ಸಿನ ಮಗಳು ಮಿಥಾಲಿ ಮತ್ತು ಒಂದು ವರ್ಷ ವಯಸ್ಸಿನ ಮಗ ಧನ್ಯತ್‌ರನ್ನು ಕರೆದುಕೊಂಡು ಲೋಕಲ್ ರೈಲಿನಲ್ಲಿ ಬೆಂಗಳೂರಿನಿಂದ ಮಂಡ್ಯದ ಕಡೆಗೆ ಪ್ರಯಾಣಿಸುತ್ತಿದ್ದನು.
ರೈಲು ಕಿಕ್ಕಿರಿದು ತುಂಬಿದ್ದು, ಒಂದಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಹರಟುತ್ತಿದ್ದರೆ, ಇನ್ನೊಂದಷ್ಟು ಮಂದಿ ತಮ್ಮ ಸಹ ಪ್ರಯಾಣಿಕರ ಜೊತೆಗೆ ಕಷ್ಟ ಸುಖ ಮಾತನಾಡುತ್ತಿದ್ದರು. ಧನಂಜಯನ ಇಬ್ಬರು ಮಕ್ಕಳಾದ ಮಿಥಾಲಿ ಮತ್ತು ಧನ್ಯತ್ ಒಂದೇ ಸಮನೆ ಜೋರಾಗಿ ಅಳುತ್ತಾ ತನ್ನ ಮಡಿಲಲ್ಲಿ ಕುಳಿತಿದ್ದರು. ಆದರೆ ಇದ್ಯಾವುದರ ಪರಿವೆಯೂ ಇಲ್ಲದೇ ಧನಂಜಯನು ಸೀಟಿನ ಪಕ್ಕದ ಕಿಟಕಿಗೆ ತನ್ನ ತಲೆಯನ್ನು ಇಟ್ಟು ಏನನ್ನೋ ಗಾಢವಾಗಿ ಚಿಂತಿಸುತ್ತಾ ಕುಳಿತಿದ್ದನು. ತನ್ನ ಮಕ್ಕಳು ತುಂಬಾ ಹೊತ್ತು ಅಳುತ್ತಿದ್ದರೂ ಧನಂಜಯನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ.
ಮಕ್ಕಳ ಜೋರಾದ ಕಿರುಚಾಟದ ಅಳುವಿನಿಂದಾಗಿ ಕಿರಿಕಿರಿ ಆಗಲಾರಂಭಿಸಿತು. ಅಕ್ಕಪಕ್ಕದಲ್ಲಿ ಕುಳಿತಿದ್ದವರು, ಈ ಮಕ್ಕಳು ಇಷ್ಟು ಜೋರಾಗಿ ಅಳುತ್ತಿರುವುದರಿಂದ ಇತರ ಪಯಾಣಿಕರಿಗೆ ಸಮಸ್ಯೆ ಆಗುತ್ತದೆ ಎನ್ನುವ ಪರಿವೆಯೇ ಇಲ್ಲದಂತೆ ಕಿಟಕಿಗೆ ತಲೆಯಿಟ್ಟು ಆತನು ಕುಳಿತಿದ್ದಾನಲ್ಲ ಎಂದು ಪರಸ್ಪರ ಮಾತನಾಡಿಕೊಳ್ಳಲು ಪ್ರಾರಂಭಿಸಿದರು.
ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸೂಟು ಬೂಟು ಹಾಕಿದ್ದ ಮಹಾಶಯನೊಬ್ಬ ಧನಂಜಯನನ್ನು ತಟ್ಟಿ ಎಬ್ಬಿಸಿ, ಮಕ್ಕಳು ಅಳುತ್ತಾ ಗದ್ದಲ ಮಾಡುತ್ತಿದ್ದಾರೆ, ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತದೆ ಎನ್ನುವ ಪ್ರಜ್ಞೆ ನಿನಗೆ ಬೇಡವೇ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾನೆ.
ಆಗ ತತ್‌ಕ್ಷಣ ಗಾಢ ಯೋಚನೆಯಿಂದ ಹೊರಬಂದ ಧನಂಜಯನು, ದಯವಿಟ್ಟು ಕ್ಷಮಿಸಿರಿ, ಮಕ್ಕಳ ಅಳುವು ನನ್ನ ಅರಿವಿಗೆ ಬರಲಿಲ್ಲ, ನಾನು ಮಕ್ಕಳನ್ನು ಸಮಾಧಾನ ಮಾಡುತ್ತೇನೆ. ಈ ಮಕ್ಕಳ ತಾಯಿ ಅಂದರೆ ನನ್ನ ಮಡದಿ ಈಗಷ್ಟೇ ಕ್ಯಾನ್ಸರ್ ರೋಗದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡಳು. ಸಣ್ಣ ಮಕ್ಕಳಿಗೆ ತಮ್ಮ ತಾಯಿಯ ಅಗಲಿಕೆಯ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಿಳಿಯುತ್ತಿಲ್ಲ, ಆದ್ದರಿಂದ ಅವರು ತೀರಾ ಗದ್ದಲ ಮಾಡುತ್ತಿದ್ದಾರೆ.
ದಯವಿಟ್ಟು ಮಕ್ಕಳನ್ನು ಕ್ಷಮಿಸಿರಿ, ಮಕ್ಕಳು ಅಳದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ. ಆಗ ಮಕ್ಕಳ ಅಳುವಿನಿಂದ ಕಿರಿಕಿರಿ ಎಂದು ಹೇಳುತ್ತಿದ್ದ ಪ್ರಯಾಣಿಕರ ಕಣ್ಣಂಚಲ್ಲಿ ನೀರು ತುಂಬಿತ್ತು. ಕಿರಿಕಿರಿಯ ಭಾವನೆಯು ಹೊರಟು ಹೋಗಿ ಮಕ್ಕಳ ಮತ್ತು ಧನಂಜಯನ ಮೇಲೆ ಅನುಕಂಪದ ಭಾವವು ಮೂಡಿತ್ತು.
ಪ್ರತಿಯೊಂದು ಸನ್ನಿವೇಶವೂ ನಾವು ನೋಡುವ ದೃಷ್ಟಿಕೋನವನ್ನು ಅವಲಂಬಿಸಿಕೊಂಡು ಇರುತ್ತದೆ. ಧನಂಜಯನ ಬದುಕಲ್ಲಿ ನಡೆದಿರುವ ಘಟನೆಯನ್ನು ಪ್ರಯಾಣಿಕರು ಅರಿಯದೇ ಇದ್ದಾಗ ಮಕ್ಕಳ ಅಳುವು ಅವರಿಗೆಲ್ಲಾ ಕಿರಿಕಿರಿ ಮತ್ತು ಸಮಸ್ಯೆಯಾಗಿ ಕಂಡಿತು. ಯಾವಾಗ ಮಕ್ಕಳ ತಾಯಿಯ ಸಾವಿನ ವಿಚಾರ ಅವರಿಗೆ ತಿಳಿಯಿತೋ ಆಗ ಮಕ್ಕಳ ಮೇಲೆ ಎಲ್ಲರಿಗೂ ಅನುಕಂಪ ಮೂಡಿತು. ಅದೇ ರೀತಿ ಯಾವುದೇ ಒಂದು ಸನ್ನಿವೇಶವನ್ನು ನೋಡಿದ ತಕ್ಷಣ ಅದಕ್ಕೆ ಪ್ರತಿಕ್ರಿಯಿಸುವ ಬದಲು ಸನ್ನಿವೇಶವನ್ನು ಅರ್ಥೈಸಿಕೊಳ್ಳುವುದು ಉತ್ತಮ. ನೋಡುವ ದೃಷ್ಟಿಕೋನವು ಬದಲಾದರೆ ದೃಶ್ಯವೂ ಬದಲಾಗುತ್ತದೆ ಎಂಬಂತೆ ನಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡುವ ಬದಲು ಇತರರ ಸ್ಥಾನದಲ್ಲಿ ನಿಂತು ನೋಡುವ ಗುಣ ಬೆಳೆಸಿಕೊಳ್ಳಬೇಕು. ಹಾಗಾಗಿಯೇ ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು ಎಂಬ ಹಾಡು ಬಹಳ ಅರ್ಥ ಬದ್ಧ ಎಂದು ಅನಿಸುತ್ತದೆ.
ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.