UV Fusion: ಮಾನವ ನಾಗುವೆಯಾ, ಇಲ್ಲಾ.. ದಾನವನಾಗುವೆಯಾ?
Team Udayavani, Feb 9, 2024, 3:10 PM IST
ಇತ್ತೀಚೆಗಷ್ಟೇ ಗೆಳೆಯರೊಬ್ಬರ ಮೊಬೈಲ್ ಫೋನ್ ನಿಂದ ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ ಹಾಡು ರಿಂಗಣಿಸುತ್ತಿತ್ತು. ಎಷ್ಟೊಳ್ಳೆ ಪದ್ಯ ಎಂದು ಅಂದುಕೊಳ್ಳುತ್ತಲೇ ಅದರ ಒಳಾರ್ಥ ತಿಳಿಸಿದ್ದ ರೀತಿ ನನಗರಿವಿಲ್ಲದಂತೆ ಆ ಹಾಡಿಗೆ ನಾನು ದಾಸನಾಗುತ್ತಾ ಹೋದೆ.
ಇದು ವರನಟ ಡಾ| ರಾಜಕುಮಾರ್ ಅವರ ಚಿತ್ರದ ಪ್ರಸಿದ್ಧ ಹಾಡು. ಇದು ಮಾನವನಲ್ಲಿನ ಅಹಂ ಭಾವನೆಗಳನ್ನು ತೋರ್ಪಡಿಸುವ ನಿಟ್ಟಿನಲ್ಲಿ ಪ್ರಸ್ತುತ ಪಡಿಸಲಾಗಿದೆ. ಮಾನವ ಇತ್ತೀಚಿನ ದಿನಗಳಲ್ಲಿ ತನ್ನ ಆದರ್ಶ ವ್ಯಕ್ತಿತ್ವವನ್ನು ತೊರೆದು ಜೀವಿಸುತ್ತಿದ್ದಾನೆ. ಮನುಷ್ಯತ್ವವನ್ನು ಮರೆತು, ಸ್ವಾರ್ಥಿಯಾಗುತ್ತಿರುವುದು ಮಾನವ ಕುಲಕ್ಕೆ ಕಳಂಕವೆಂಬಂತಾಗಿದೆ.
ಮನುಷ್ಯ ಮೊದಲು ಮಾನವೀಯತೆಯಿಂದ ವರ್ತಿಸುವುದನ್ನು ಕಲಿತುಕೊಳ್ಳಬೇಕು. ದಾನವನಾಗದಿದ್ದರೂ ಮಾನವ ಕುಲಕ್ಕೆ ಮುಳ್ಳಾಗದೆ, ನಾವು, ನಮ್ಮವರು, ನಮ್ಮದು ಎಂಬ ನಿಸ್ವಾರ್ಥ ಭಾವನೆಯಿಂದ ಬದುಕನ್ನು ರೂಪಿಸಿಕೊಳ್ಳುವ ಆವಶ್ಯಕತೆ ಇದೆ.
ಭಾರತೀಯ ಸಂಸ್ಕೃತಿಯು ಹೆಚ್ಚಾಗಿ ಅಧ್ಯಾತ್ಮಕ್ಕೆ ಪ್ರಾಶಸ್ತ್ಯ ನೀಡುತ್ತದೆ. ದೈವಾರಾಧನೆ, ಆಚಾರ-ವಿಚಾರ, ಗುರು-ಹಿರಿಯರಿಗೆ ಗೌರವ ನೀಡುವ ಪದ್ದತಿಯನ್ನು ರೂಢಿಸಿಕೊಂಡು ಬಂದಿದೆ. ಜತೆಗೆ ಅತಿಥಿ ದೇವೋಭವ ಎಂಬ ಪರಿಕಲ್ಪನೆಯು ಭಾರತೀಯ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಅದೇ ರೀತಿಯ ಮನಸ್ಥಿತಿಯನ್ನು ಹೊಂದಿದ್ದರೂ, ಸಕಲ ಜೀವಿಗಳಲ್ಲೂ ದಯೆಯನ್ನು ಇಟ್ಟಿದ್ದರು, ದಾನ – ಧರ್ಮಗಳಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದರು. ಅದರ ಜತೆಗೆ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ಭಾರತಿಯರದ್ದಾಗಿದೆ.
ಗುರು-ಹಿರಿಯರನ್ನು ಕಂಡರೆ ಅತ್ಯಂತ ಗೌರವದಿಂದ ಕಾಣುವ ಹಾಗೂ ಅವರ ಮಾತಿಗೆ ಎದುರಾಗದೆ, ಅದನ್ನು ತಮ್ಮ ಜವಾಬ್ದಾರಿಯೆಂದು ಭಾವಿಸುತ್ತಿದ್ದರು. ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿದ್ದ ಭಾರತೀಯರು, ಆಧುನಿಕ ಜೀವನ ಶೈಲಿಯಲ್ಲಿ ಇಂತಹ ಪರಂಪರೆಯನ್ನು ತೊರೆದು ನಾನು, ನನ್ನದು, ನನಗೋಸ್ಕರ ಎಂಬ ಸ್ವಾರ್ಥದ ಜೀವನವನ್ನು ಪಾಲಿಸುತ್ತಿದ್ದಾರೆ.
ಬೆರಳೆಣಿಕೆಯಷ್ಟು ಜನರು ತಮ್ಮ ಜೀವನವನ್ನು ಸಮಾಜಕ್ಕೆ, ಸಮಾಜಸೇವೆಗೆ ಮುಡಿಪಾಗಿಸಿ,ನಿಸ್ವಾರ್ಥಿಗಳಾಗಿ ಬದುಕುತ್ತಿದ್ದಾರೆ. ಹೆಚ್ಚಿನ ಜನರು ತಮ್ಮ ಆವಶ್ಯಕತೆಗಾಗಿ ಬಡವರನ್ನು ತುಳಿದು ಜೀವಿಸುತ್ತಿದ್ದಾರೆ, ಆದರೆ ಅದು ಬಡವರಿಗೆ ಅರ್ಥವಾಗುತ್ತಿಲ್ಲ. ಸಮಾಜದಲ್ಲಿ ಮುಖವಾಡದ ಜನರೇ ತುಂಬಿದ್ದಾರೆ.
ಆಧುನಿಕ ಯುಗದಲ್ಲಿ ಮಾನವ ಒತ್ತಡದ ಜೀವನವನ್ನು ನಡೆಸುತ್ತಿದ್ದಾನೆ. ತನಗೋಸ್ಕರ, ತನ್ನ ಕುಟುಂಬದ ಉದ್ಧಾರದ ಬಗ್ಗೆ ಚಿಂತಿಸುತ್ತಾನೆ, ಪರರ ಬಗ್ಗೆ ಯೋಚಿಸದೆ, ಅವರ ಮೇಲೆ ದ್ವೇಷದ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡಿ ಜೀವಿಸುವ ಪರಿಕಲ್ಪನೆಯೇ ದೂರವಾಗಿದೆ. ಒಬ್ಬರನ್ನೊಬ್ಬರು ತುಳಿದು ಬದುಕುವ ಪ್ರವೃತ್ತಿ ಹೆಚ್ಚಾಗಿದೆ. ಇನ್ನೂ ದಾನ-ಧರ್ಮ, ಮನುಷ್ಯತ್ವ- ಮಾನವೀಯತೆಯು ದೂರದ ಮಾತು.
ರಸ್ತೆಯಲ್ಲಿ ಅಪಘಾತವಾಗಿದ್ದರೆ, ಅದನ್ನು ಪಕ್ಕದಲ್ಲೇ ನಿಂತು ನೋಡುತ್ತಾರೆ, ವಿನಹಃ ಆ ಜೀವಿ ಉಳಿಸಬೇಕು ಎಂಬ ಕನಿಷ್ಠ ಮಾನವೀಯತೆ ಜನರಲ್ಲಿ ಇಲ್ಲ. ತಟ್ಟೆಯಲ್ಲಿಯೇ ಅನ್ನವನ್ನು ಬಿಟ್ಟು ಹೋಗುತ್ತಾರೆ ಹೊರತು ಹಸಿವಿನಿಂದ ನರಳುವ ಜನರಿಗೆ ಒಂದು ತುತ್ತು ಅನ್ನವನ್ನು ನೀಡಲು ಹಿಂದೇಟ್ಟು ಹಾಕುತ್ತಾರೆ.
ಇದನ್ನು ನೋಡಿದರೆ ಮನುಷ್ಯತ್ವ, ಮಾನವೀಯತೆ ಎಲ್ಲಿದೆ ಎಂಬ ಅಸಹಾಯಕತನ ಗೋಚರಿಸುತ್ತದೆ. ಒಂದು ವೇಳೆ ಸಹಾಯ ಮಾಡಲು ಇಚ್ಛಿಸಿದರೂ ಅದು ಕೇವಲ ತೋರಿಕೆಗಾಗಿ ಇರುತ್ತದೆ ವಿನಹಃ ಆತ್ಮ ತೃಪ್ತಿಗಲ್ಲ. ಇತ್ತೀಚಿನ ದಾನಗಳು ಕೇವಲ ತೋರಿಕೆ ಗಾಗಿಯೇ ಇರುತ್ತವೆ ಜತೆಗೆ, ಅಂತದರಲ್ಲಿಯೂ ಸ್ವಾರ್ಥತೆಯನ್ನು ಹೊಂದಿರುವ ದಾನಿಗಳು ನಮ್ಮ ಮಧ್ಯದಲ್ಲಿ ಜೀವಿಸುತ್ತಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಬಲಗೈಯಲ್ಲಿ ಮಾಡಿದ ದಾನ, ಎಡಗೈಗೆ ತಿಳಿಯದಂತಿರಬೇಕು, ಆದರೆ ಒಂದು ಬಾಳೆಹಣ್ಣನ್ನು ದಾನ ಮಾಡುತ್ತಿದ್ದರೆ, ಅದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ತಾವು ದಾನ ಶೂರ ಕರ್ಣರು ಎಂದು ತೋರಿಸಿಕೊಳ್ಳುವ ಮಹಾನುಭಾವರಿದ್ದಾರೆ.
ದುಡ್ಡಿಗೋಸ್ಕರ ಒಬ್ಬರನ್ನು ಕೊಲ್ಲಲು ಹೇಸದ ಜನರಿದ್ದಾರೆ. ಆಸ್ತಿಗೊಸ್ಕರ ಒಡಹುಟ್ಟಿದ ಅಣ್ಣ-ತಮ್ಮಂದಿರು ಹೊಡೆದಾಡಿ, ಜನ್ಮ ಕೊಟ್ಟ ತಂದೆ-ತಾಯಿಗಳನ್ನು ಬೀದಿಗೆ ಬಿಡುವ ಮಕ್ಕಳಿದ್ದಾರೆ. ಇನ್ನೂ ಪರರ ಹಿತಾಸಕ್ತಿ ಬಗ್ಗೆ ಯೋಚಿಸುವ ಜನರನ್ನು ಹುಡುಕುವುದು ಕಷ್ಟ. ಇದನ್ನು ನೋಡಿದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದೇ ತಿಳಿಯದಾಗಿದೆ.
ಜನರು ಮನುಷ್ಯತ್ವ ಮರೆತು ಮೆರೆಯುತ್ತಿದ್ದಾರೆ, ಇದನ್ನೆಲ್ಲ ನೋಡಿದರೆ ಮಾನವನಿಗಿಂತ ಪ್ರಾಣಿಗಳೇ ಮೇಲು ಅನ್ನ ಹಾಕಿದವರ ಮನೆಗೆ ಋಣಿಯಾಗಿರುತ್ತವೆ, ಒಂದು ವೇಳೆ ಪ್ರಾಣಿಗಳಲ್ಲಿ ಮಾನವೀಯತೆಯನ್ನು ಕಾಣಬಹುದು ಹೊರತು, ಮನುಷ್ಯನಲ್ಲಿ ಮಾನವೀಯತೆ ಮರೀಚಿಕೆಯಾಗಿದೆ. ಮಾನವ ತನ್ನಲ್ಲಿನ ಕೆಟ್ಟ ವಿಚಾರಗಳನ್ನು ಬಿಟ್ಟು ಆದರ್ಶ ವ್ಯಕ್ತಿತ್ವವನ್ನು ಬೆಳಸಿಕೊಂಡು ನಿಸ್ವಾರ್ಥಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು.
- ಶಂಕರ ಸನ್ನಟ್ಟಿ
ಬಾಗಲಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.