Yana Caves: ಸೊಕ್ಕಿದ್ದರೆ ಯಾಣ
Team Udayavani, Feb 15, 2024, 3:45 PM IST
ಕರ್ನಾಟಕದ ಸೊಂಪಾದ ಕಾಡುಗಳ ಹಂದರದಲ್ಲಿ ಪಶ್ಚಿಮ ಘಟ್ಟಗಳ ವೈಭವವೇ ಬೇರೆಯದು. ಪಶ್ಚಿಮ ಘಟ್ಟಗಳು ಪುರಾಣವು ಭವ್ಯತೆಯನ್ನು ಸೇರುವ ಸ್ಥಳ. ಬೆಟ್ಟಗಳು ಭೌಗೋಳಿಕ ಅದ್ಭುತಗಳಿಗೆ ಮಾತ್ರ ಹೆಸರಾಗದೇ ಆಧ್ಯಾತ್ಮಿಕ ಆಕರ್ಷಣೆಯ ತಾಣಗಳೂ ಹೌದು. ಅದರಲ್ಲೂ ಉತ್ತರಕನ್ನಡವು ಹೊದ್ದು ನಳನಳಿಸುತ್ತಿರುವ ಜಿಲ್ಲೆ. ರೊಕ್ಕ/ ದುಡ್ಡಿದ್ದರೆ ಗೋಕರ್ಣ, ಸೊಕ್ಕಿದ್ದರೆ ಯಾಣ ಎನ್ನುವುದು ಎರಡು ಪ್ರವಾಸಿಸ್ಥಳಗಳ ಬಗೆಗೆ ಜನಪದರು ನೆಟ್ಟ ನುಡಿ. ಯಾಣ ಉತ್ತರಕನ್ನಡದ ಸಹ್ಯಾದ್ರಿಯ ಕಾನುಗಳಲ್ಲಿರುವ ಧುತ್ತನೆ ನಿಂತ ಕರಿಯ ಕಲ್ಲಿನ ಸ್ವಯಂಭು-ಭೈರವೇಶ್ವರನ ನೆಲ.
ಸ್ಕಂದ ಪುರಾಣದಲ್ಲಿ ಭಸ್ಮಾಸುರ ಶಿವನಿಂದ ವರ ಪಡೆದು ಶಿವನ ತಲೆಯ ಮೇಲೆಯೇ ವರವನ್ನು ಪ್ರಯೋಗಿಸಲು, ಅಸುರನನ್ನು ತಡೆಯಲು, ವಿಷ್ಣು ಮೋಹಿನಿ ರೂಪವನ್ನು ಧರಿಸಿ ತನ್ನ ತಲೆ ಯ ಮೇಲೆ ಕೈ ಇಟ್ಟು ಅಸುರನ ನಾಶಕ್ಕೆ ಕಾರಣವಾದನು. ಆಗ ಉತ್ಪತ್ತಿಯಾದ ಅಗ್ನಿಯ ಜ್ವಾಲೆಗೆ ನೆಲವು ಕಪ್ಪಿಟ್ಟು, ಎಲ್ಲೆಡೆ ಬೂದಿಯಾದ ಸ್ಥಳವೇ ಈ ಭೈರವೇಶ್ವರನ ಯಾಣ ಕ್ಷೇತ್ರ. ಹೀಗೆ ಮೋಹಿನಿಯು ನೆಲೆಸಿದ ಬಂಡೆ ಮೋಹಿನಿ ಶಿಖರ. ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಈ ಪ್ರತೀತಿಗೆ ಸಾಕ್ಷಿಯಾಗಿ ಆಕಾಶವನ್ನು ದಿಟ್ಟಿಸುತ್ತಿವೆ.
ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂದು ಹೆಸರಿಸಲಾದ ಎರಡು ಏಕಶಿಲಾ ರಚನೆಗಳು ದಟ್ಟ ಹಸಿರಿನ ಮಧ್ಯೆ ಇರುವ ಸುಣ್ಣದ ಕಲ್ಲಿನ ಕಂಬದ ರಚನೆಗಳು. 120 ಮೀಟರ್ ಎತ್ತರದ ಭೈರವೇಶ್ವರ ಮತ್ತು ಮೋಹಿನಿ 90 ಮೀ.ನ ಶಿಖರಗಳು. ಭೂವಿಜ್ಞಾನದ ಪ್ರಕಾರ ಸುಣ್ಣದ ಕಲ್ಲು ಕರಗಿ ಹೋಗುವುದರಿಂದ ಆದ ಕಾಲುವೆ, ಪೊಟರೆಯಿಂದಾದ ಮಹತ್ತಾದ ಪ್ರದೇಶ. ಯಾಣದ ಭೈರವ, ಚಂಡಿಕಾ ದುರ್ಗೆಯರು ಭೈರವ ಶಿಖರದ ಬುಡದ ಗುಡಿಯಲ್ಲಿ ವಿರಾಜ ಮಾನರು. ಅಬೇಧ್ಯವಾದ ಕರಿಕಲ್ಲಿನ ಕೆಳಗೆ ನೆಲಕ್ಕೊಪ್ಪುವ ಆರಾಧನೆ.
ಗುಹೆಯ ಗುಡಿಯಲ್ಲಿ ಸ್ವಯಂಭು ಗಂಗಾ ಚಂಡಿಕಾ ಭೈರವೇಶ್ವರ. ಕಲ್ಲಿನಿಂದ ಸದಾ ಜಿನುಗುವ ಗಂಗೆಯ ಅಭಿಷೇಕ ಭೈರವನಿಗೆ. ಮೇಲೆ ಕಲ್ಲಿನಲ್ಲೇ ಹಾವಿನ ಹೆಡೆಯಾಕೃತಿ. ದೇಗುಲದ ಚೌಕಟ್ಟನ್ನು ಕದಂಬರು ವ್ಯವಸ್ಥಿತಗೊಳಿಸಿದ ಇತಿಹಾಸ ವಾಸ್ತುಶಿಲ್ಪದಿಂದ ಊಹಿಸಲು ಸಾಧ್ಯ. ಗರ್ಭಗುಡಿಯನ್ನೂ ಒಳಗೊಂಡ ಸ್ವತಂತ್ರ ಪ್ರದಕ್ಷಿಣಾಪಥವಿರದ ಕಾರಣ, ದೇವಳದ ಹಿಂದಿನ ಭೈರವ ಶಿಖರವನ್ನೊಮ್ಮೆ ಸುತ್ತಿದರೆ, ಆ ಭೈರವನಿಗೇ ಪ್ರದಕ್ಷಿಣೆ ಬಂದಂತೆ.
ಚರಿತ್ರೆ ಬರೆದ ವಸಾಹತುಶಾಹಿಗಳು ಕಾಡಿಗೆ ಜನರು ತಂಡ ತಂಡಗಳಾಗಿ ಹೋಗಿ ಬರುತ್ತಿದ್ದದ್ದನ್ನು ನೋಡಿ, ಕೇಳಿದಾಗ ಯಾತ್ರೆಗೆ-ಯಾನಕ್ಕೆ ಹೋದದ್ದು ಕೊನೆಗೆ ಯಾಣವಾಗಿ ಬದಲಾಗಿರಬಹುದಂತೆ. ಶಿವರಾತ್ರಿಯಲ್ಲಿ ಯಾಣದ ದಂಡಿತೀರ್ಥದಲ್ಲಿ ಮಿಂದು ಭೈರವನನ್ನು ಭಜಿಸಿ ಅನಂತರ ದಂಡಿತೀರ್ಥದ ಜಲವನ್ನು ಗೋಕರ್ಣದ ಮಹಾಬಲೇಶ್ವರನಿಗೆ ಅಭಿಷೇಕವಾಗಿ ಅರ್ಪಿಸುವುದು ವಾಡಿಕೆಯಂತೆ.
ತುಸು ಮೆಟ್ಟಿಲುಗಳನ್ನೇರಿದರೆ ಭೈರವಶಿಖರಕ್ಕೆ ನಿಮ್ಮನ್ನು ನೀವು ಅನುವುಮಾಡಿಕೊಂಡುಬಿಡುತ್ತೀರಿ. ಆ ಕಾರ್ಗಲ್ಲ ಕಲ್ಲಿನ ಮಧ್ಯೆ ಟಿಸಿಲೊಡೆದು ನಿಂತ ಮರಗಳೆರಡೂ ಕಲ್ಲಿನಷ್ಟೇ ಸೋಜಿಗಕ್ಕೆ ಕಾರಣವಾಗುತ್ತವೆ. ಅಗಲವಾದ ಪ್ರವೇಶದ್ವಾರ, ತಲೆಯೆತ್ತಿದರೆ ಕೋರೈಸುವ ಕೃಷ್ಣ ಶಿಲೆಗಳ ಕೋಟೆ. ನೂರಿನ್ನೂರು ಮೀಟರುಗಳ ಈ ನಡೆತಕ್ಕೆ ಸೂರ್ಯನ ಕಿರಣಗಳ ಬೆಳಕ ಇಣುಕು. ಎಲ್ಲೆಲ್ಲಿಂದಲೋ ಎಲ್ಲೆ ಮೀರಿ ಹಾದ ಬೆಳಕದು. ಹಾಗೆಯೇ ಮುಂದುವರೆದು ಮತ್ತೆ ಕೆಳಗಿಳಿದು ನಡೆದರೆ ದೇಗುಲದ ಧ್ವಜಸ್ಥಂಭಕ್ಕೆ, ನಂದಿಯನ್ನು ಸೇರುತ್ತೇವೆ.
ದೇವಿಮನೆಯ ಘಟ್ಟದ ಮೂಲಕ ಅಥವಾ ಅಚವೆಯ ದಾರಿಯಾಗಿಯೂ ಯಾಣವನ್ನು ತಲುಪಬಹುದು. ಎರಡೂ ಕಡೆಗಳಲ್ಲಿ ಮಹದಾವಕಾಶವಿರುವ ಪಾರ್ಕಿಂಗ್ ಸ್ಥಳಗಳು ಲಭ್ಯವಿದೆ. ಅಲ್ಲಿಂದ ಶಿಖರದ ಕಡೆಗಿನ ನಡೆತ ವಿಶಿಷ್ಟದ್ದು. ಮಳೆಕಾಡಿನಲ್ಲಿ ಗಗನಕ್ಕೇ ಚಾವಣೆಯೆರೆಯುವ ಮರಗಳ ನಡುವೆ ಕೆಂಪು ಮಣ್ಣಿನ ದಾರಿಯಲ್ಲಿ ನಡೆದು, ಮೆಟ್ಟಿಲನ್ನೇರಿ ಬರುವಾಗ, ಒಮ್ಮೆಗೇ ಮಣ್ಣು ಕಪ್ಪಾಗಿ ನೆರೆಯುತ್ತದೆ. ಹಸಿರ ರೋಹಿತದ ನಡುವೆ ಕಪ್ಪಾದ ದಪ್ಪನೆಯ ದೈತ್ಯ ಕಲ್ಲುಗಳು ನಿಂತುಬಿ ಟ್ಟಿವೆ. ಕರಿಕಲ್ಲ ನಡುವೆ ಸಿಕ್ಕಿ ನಿಂತ ಮರಗಳು. ಆ ಮರಗಳೇ ನೂರಿನ್ನೂರು ವರುಷದಷ್ಟು ಹಿರಿದೇನೋ.
ಮಳೆಕಾಡಿನ ತಂಪಾದ ಅಪ್ಪುಗೆ ನಿಮ್ಮ ನಡಿಗೆಯನ್ನು ಮತ್ತಷ್ಟು ಚೇತೋಹಾರಿಯಾಗಿಸುತ್ತದೆ. ಇಲ್ಲಿ ಆಗಾಗ ಕಾನನದ ಕೆಂಪಳಿಲೋ, ಸಿಂಗಳೀಕನೋ ಮರದೆರೆಯಲ್ಲಿ ಹಾದುಹೋಗುತ್ತಾರೆ. ದಾರಿಯ ಇಕ್ಕೆಲಗಳ ಮರಗಳ ಹೆಸರನ್ನು ನಮೂದಿಸಿದ್ದಾರೆ. ದಾರಿಯ, ಯಾನದ ಆವರಣದ ಎಲ್ಲೆಡೆ ಒಂದಿಷ್ಟೂ ಕಸ ಸುಳಿಯದಷ್ಟು ಚೊಕ್ಕಟವಾಗಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಇಲ್ಲಿ. ದಾರಿಯುದ್ದಕ್ಕೂ ಕಸದಬುಟ್ಟಿಗಳು ಕಂಡಲ್ಲಿ ಎಸೆಯುವವರಿಗೆ ನಾಚಿಕೆಯಾಗುವಷ್ಟು ಆಪ್ತವಾಗಿವೆ.
ವಾರಾಂತ್ಯ ಮತ್ತು ರಜಾದಿನ ಬಂತೆಂದರೆ ದೌಡಾಯಿಸುವ ಜನರು ನೆಲದ ಆಕರ್ಷಣೆ, ದೈವಿಕ ಮಹತ್ವವನ್ನು ಬಿಟ್ಟು ಇನ್ನೇನೋ ಹುಡುಕುತ್ತಾರೆ ಇಲ್ಲಿ. ತಮ್ಮ ಕಣ್ಣಿನ ರೆಸೊಲ್ಯೂಷನ್-ವಿಶ್ಲೇಷಣೆಯ ಸಾಮರ್ಥ್ಯವನ್ನು ಬಿಟ್ಟು, ಎಲ್ಲೆಡೆ ಒರಗಿ ಕೆಮರಾಗಳಿಗೆ ಬಂಧಿಯಾಗಿಬಿಡುತ್ತಾರೆ. ಕಾಡಿನ ಮರಹಣ್ಣುಗಳನ್ನು ನೋಡುವ ಬದಲು ಮತ್ತದೇ ನ್ಯೂಡಲ್ಸ್-ಕ್ರಂಚಿ ಚಿಪ್ಸ್ ಗಳನ್ನು ಪರಿಸರದ ಸೂಕ್ಷ¾ ಕ್ಷೇತ್ರಗಳಲ್ಲಿ ಆಸ್ವಾದಿಸುವ ಬಗೆ ಬೇರೆ!
ಈ ದಟ್ಟ ಮಳೆಕಾಡಿನ ಸೌಂದರ್ಯವಿರುವುದು ಅದರ ಶ್ರೀಮಂತ ಜೀವವೈವಿಧ್ಯತೆಯಲ್ಲಿ, ಮತ್ತದನ್ನು ಪೋಷಿಸುವ ಯಾಣದಂತಹ ಕಾನು ದೇಗುಲಗಳಲ್ಲಿ. ಆ ಕಮರಿಯ ಮೌನದಲ್ಲಿ ಕೆಳಗೆ ಹರಿಯುವ ಚಂಡಿಕೆಯ ಜುಳು ನಾದ, ಬೆವರಿದ ದೇಹಕ್ಕೆ ತಣಿದ ಗಾಳಿಯ ಸೇಚನ ಹಿತವಾಗದೇ ಇರದು. ಇಲ್ಲಿನ ಆ ಕಲ್ಲು ಶಿಖರ, ಹೆಮ್ಮರಗಳು, ಬೆಂದ ಬೂದಿಯ ಹಾಗಿರುವ ಮಣ್ಣು, ಗಂಗೋದ್ಭವದ ಕೆಳಗಿರುವ ಭೈರವ ಈ ತರಹವೇ ಉದಿಸಿದರು ಎಂದು ಅಂದಾಜಿಸಲಾಗದ ಅಪೂರ್ವ ಸೋಜಿಗವೇ. ಆದುದರಿಂದ, ಯಾಣವು ಭೌಗೋಳಿಕ ತೆಯು ಆಧ್ಯಾತ್ಮಿಕ ಭವ್ಯತೆಯನ್ನು ಪಡೆದ ತಾಣ.
-ವಿಶ್ವನಾಥ ಭಟ್
ಧಾರವಾಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.