ಗೆಳತಿ ನನ್ನ ಬದುಕಿಗೆ ಬಲಗಾಲಿಟ್ಟು ಬಂದು ಬಿಡು…
Team Udayavani, Feb 13, 2020, 5:47 PM IST
ಅಂದಿನ ಕಾರ್ಯಕ್ರಮದಲ್ಲಿ ನೀ ನನಗಾಗಿ ಕಾಯುತ್ತಿರುವಾಗ ನನಗೆ ಆದ ಅನುಭವ ಈಗಲೂ ನನ್ನ ಮನಸ್ಸಿನಲ್ಲಿ ಕಚಗುಳಿ ಇಡುತ್ತಿದೆ. ನನ್ನ ಜೊತೆ ಮಾತನಾಡಲು ನೀ ಪರಿತಪಿಸಿದ ಪರಿ, ಕೈಯಲ್ಲಿರುವ ಶಾಲನ್ನು ತಿರುವಿ ಮನದ ಭಾವವನ್ನು ಹೊರಹಾಕಲು ಹಂಬಲಿಸಿದ ನಿನ್ನ ಮೊಗವನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು. ನಾನು ಕೂಡಾ ಅಷ್ಟೆ ! ನಿನ್ನ ಜೊತೆ ಮಾತನಾಡಲು, ಮನದಲ್ಲಿ ಮಾತುಗಳ ಸರಮಾಲೆ ಹೊತ್ತು ಅತ್ತಿಂದಿತ್ತ, ಇತ್ತಿಂದತ್ತ ತಿರುಗುತ್ತಿದ್ದೆ. ಮನದಲ್ಲಿ ಚಿಗುರೊಡೆದಿರುವ ನಿನ್ನ ಮೇಲಿನ ಪ್ರೇಮದ ಆಸೆ, ಭಾವನೆಗಳು ನಿನ್ನ ಮುಂದೆ ಬಿಚ್ಚಿಡಲು ಅಂದು ಹರಸಾಹಪಟ್ಟಿದ್ದೆ.
ನಿನ್ನ ನೋಡಿದ ಕ್ಷಣವೇ, ನನಗಾಗಿಯೇ ನಿನ್ನನ್ನು ಬ್ರಹ್ಮ ಸೃಷ್ಠಿ ಮಾಡಿದ್ದಾನೆ ಎಂಬ ಭಾವನೆ ನನ್ನ ಮನ ಪಿಸುಗುಡುತ್ತಿತ್ತು. ನಿನಗೂ ನನ್ನತ್ತ ಪ್ರೀತಿಯ ಸೆಳೆತವಿತ್ತೆಂಬುದು ನಿನ್ನ ಆ ಕಣ್ಣಿನ ಸೆಳೆತದಿಂದಲೇ ನನ್ನ ಮನ ಅರಿತಿತ್ತು. ಆದರೆ ನೀ ಹೆಣ್ಣು ಮಗಳಲ್ಲವೇ..! ಏನನ್ನೂ ಹೇಳದೆ ಮನದ ಚಿಪ್ಪಿನಲ್ಲಿ ಬಚ್ಚಿಟ್ಟಿದ್ದೆ ಅಷ್ಟೆ ಅಲ್ಲವೇ…!
ಅಂದು ನಾನು ನಿನ್ನನ್ನು ಮಾತನಾಡಿಸಲು ಪಟ್ಟ ಪಡಿಪಾಟಲು ಮಹಾ ಯುದ್ಧವನ್ನೇ ಹೋರಾಡಿ ಗೆದ್ದ ಅನುಭವವಾಗಿತ್ತು. ಅಂದು ನೀನು ಮಾತನಾಡಿದ ಆ ಪದಗಳು ಇಂದಿಗೂ ನನ್ನ ಹೃದಯದಲ್ಲಿ ಟೇಪ್ ರೆಕಾರ್ಡ್ ರೀತಿ ಮತ್ತೆ ಮತ್ತೆ ರಿಂಗಣಿಸುತ್ತಿವೆ. ಪದೇ ಪದೇ ರಿಂಗಣಿಸುವ ಆ ಪದಗಳಲ್ಲೂ ಕೂಡ ಇಂದಿಗೂ ನಿನ್ನ ಮುಖವೇ ನನಗೆ ಕಾಣುವುದು.
ಆ ದಿನದ ಕತ್ತಲೆ ರಾತ್ರಿಯಲ್ಲಿ ಮರೆಯಾದ ನಿನ್ನನ್ನು ಮತ್ತೆ ನೋಡಲು ನನಗೆ ನಾಲ್ಕು ತಿಂಗಳುಗಳೇ ಬೇಕಾದವು. ಬಹುದಿನಗಳ ನಂತರ ನಿನ್ನ ನೋಡಿದ ಖುಷಿ ಒಂದಾದರೆ, ಅಂದು ನೀನಾಡಿದ ಮಾತುಗಳು, ನನ್ನ ಮನಕ್ಕೆ ಆಕಾಶದ ನೀಲಿ ಬಣ್ಣವ ಬಳಿಯಲು ಆರಂಭಿಸಿತು. ನಿನ್ನ ಧ್ವನಿಯಲ್ಲಿ ನನ್ನ ಪ್ರೀತಿಯ ಗೂಡಿನ ಆಸರೆ ಕೇಳತೊಡಗಿತ್ತು. ಆದರೆ ನಿನ್ನ ಪ್ರತಿ ಮಾತಿಗೂ ಹಗ್ಗ ಕಟ್ಟಿ ನಿಲ್ಲಿಸಿದ್ದಿ ನೀನು. ನನ್ನ ಪ್ರೀತಿಗೆ ನೇರವಾಗಿ ಗ್ರೀನ್ ಸಿಗ್ನಲ್ಲ್ ನೀಡದಿದ್ದರೂ, ನಿನ್ನ ಮನದ ಪಿಸು ಮಾತುಗಳು ಮಾತಿನಲ್ಲೆ ಹೇಳತೊಡಗಿದ್ದವು.
ಭೇಟಿಗಾಗಿ ಕಾಯುತ್ತಿರುವೆ:
ಒಂದು ದಿನ ಭೇಟಿಯಾಗುವೆಯಾ ಎಂದು ಕೇಳಿದಾಗ, ನೀನು ಹೂಂ ಎಂದು ಒಪ್ಪಿಕೊಂಡಿದ್ದೆ. ಆದರೆ ನನಗೆ ಭೇಟಿಯಾಗಲು ಸಾಧ್ಯವಾಗದೆ ನಿನ್ನ ಮನದ ಕನಸುಗಳಿಗೆ ಕಾಲಲ್ಲಿ ತುಳಿದ ಅನಿವಾರ್ಯತೆಯ ಪ್ರಸಂಗ ನನ್ನ ಪಾಲಾಗಿತ್ತು. ಆದರೆ ಮತ್ತೆ ನಿನಗೆ ಭೇಟಿಯಾಗು ಎಂದು ಎಷ್ಟು ಬಾರಿ ಕೇಳಿದರೂ, ನೀನು ಕೇರ್ ಮಾಡದೇ, ನನ್ನ ಕನಸುಗಳಿಗೆ ಮಣ್ಣು ಎರಚುತ್ತಿದ್ದೀಯಾ. ಹೀಗೇಕೆ ಮಾಡುತಿರುವೆ ನೀನೇ ಹೇಳು ? ಇದು ನಿನಗೆ ಸರಿ ಅನ್ನಿಸುತ್ತಿದೆಯಾ ? ಒಮ್ಮೆ ಒಂದಾದ ನಮ್ಮ ಮನಸ್ಸುಗಳ ದೂರ ಮಾಡೋದು ಸರಿಯಾ ? ನೀನು ನನ್ನನ್ನು ಪ್ರೀತಿಸದಿದ್ದರೂ ಸರಿ. ಕೊನೆಪಕ್ಷ ನಿನ್ನನ್ನು ನೋಡುವ ಅವಕಾಶವಾದರೂ ಮಾಡಿಕೊಡು. ಜೊತೆಗೆ ಒಂದು ಕಪ್ ಹಬೆಯಾಡುವ ಕಾಫಿ ಅಷ್ಟೆ !
ಹೇ ! ನನ್ನೂರಿಗೆ ಬಾ.. ನಿನ್ನನ್ನು ನೋಡಬೇಕು, ನಿನ್ನ ಜೊತೆಗೊಂದು ಕಾಫಿ ಕುಡಿಯಬೇಕು. ಈ ರೀತಿ ನೀ ನನಗೆ ಹೇಳಬೇಕು ಎಂದು ಒಂದುವರೆ ವರ್ಷದಿಂದ ಕಾಯುತ್ತಲೇ ಇದ್ದೇನೆ. ರಾತ್ರಿಯಿಡೀ ನಿನ್ನ ಮೆಸೇಜ್ ಬರಲಿದೆಯಾ ಎಂಬ ಕುತೂಹಲದ ಆಸೆಯಿಂದ ಮತ್ತೆ ಮತ್ತೆ ಮೊಬೈಲ್ ನೋಡುತ್ತಲೇ ಇರುವೆ. ಮೆಸೇಜ್ ಬಾರದಿದ್ದಾಗ ನಿನ್ನ ವಾಟ್ಸಾಪ್ ಡಿಪಿಗಿಟ್ಟ ಫೋಟೋ ನೋಡಿ ಮರುಗುತ್ತೇನೆ. ಒಂದು ಸಾರಿ ಭೇಟಿಯಾಗು. ಜೊತೆಗೊಂದು ಬಿಸಿ ಕಾಫಿ ಹೀರು ಸಾಕು. ಮತ್ತೇನೂ ಬಯಸುತ್ತಿಲ್ಲ ನನ್ನ ಮನ. ಕಾಯುತ್ತಿದೆ ಈ ಪ್ರೀತಿಯ ಬಡಪಾಯಿಯ ಹೃದಯ ನಿನ್ನ ಕರೆಗಾಗಿ.
ಹೇ.. ಹುಡುಗಿ ನಿನಗೆ ನೆನಪಿದೆಯಾ? ನಿನ್ನ ಗೆಳತಿಯ ಜೊತೆ ಅಂದು ನಾನು ಮಾತನಾಡಿಸಿದ್ದಾಗ ತೆಲುಗು ಭಾಷೆ ಬರುತ್ತಾ ಅಣ್ಣಾ ಅಂದು ಕೇಳಿದ್ದರು. ಇಲ್ಲ ಅಂದಿದ್ದೆ. ಆವಾಗ ನೀನು ನಿನ್ನ ಮನದ ಭಾವನೆಗಳು, ನಿನ್ನ ಗೆಳತಿಯ ಜೊತೆ ಹಂಚಿಕೊಂಡ ಮಾತುಗಳು ಒಂದೆ ಪದದಲ್ಲಿ ಹೇಳಿದ್ದಳು. ಸರಿ ಬಿಡಣ್ಣಾ ಬಾಷೆ ಬರದಿದ್ದರೆ ಏನಾಯ್ತು, ಅವಳೆ ಕಲಿಸುತ್ತಾಳೆ ಎಂದು ಹೇಳಿದ್ದಳು ನಿನ್ನ ಗೆಳೆತಿ. ಆ ಕ್ಷಣಕ್ಕೆ ಮೋಡಗಳು ಸರಿದು ಸ್ವರ್ಗವೆ ಸ್ವಾಗತ ಮಾಡಿದಂತಾಗಿತ್ತು. ಆ ಕ್ಷಣಕ್ಕೆ ನನಗೆ ಬಾರದ ಭಾಷೆ ಕಲಿಸಲು, ನನ್ನ ಬದುಕಿನಲ್ಲಿ ಬಲಗಾಲಿಟ್ಟು ಬಂದುಬಿಡು.
–ಸದಾನಂದ ಕಟ್ಟಮನಿ, ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.