500 Family ಗಳಿಗೆ Ration ಸಾಮಗ್ರಿಗಳ ವಿತರಣೆಗೆ ಉದ್ಯಮಿ ಸುರೇಶ್ ಶೆಟ್ಟಿಯವರಿಂದ ಚಾಲನೆ
Team Udayavani, Apr 1, 2020, 3:07 PM IST
ಕಾಪು : ಎಂ.ಆರ್.ಜಿ ಗ್ರೂಫ್ಸ್ ನ ಆಡಳಿತ ನಿರ್ದೇಶಕ ಬಂಜಾರ ಪ್ರಕಾಶ್ ಶೆಟ್ಟಿ ಇವರ ವತಿಯಿಂದ ಕಾಪು ತಾಲೂಕಿನ 500 ಕುಟುಂಬಗಳಿಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಪಡಿತರ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರು ಎ.1ರಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕರ್ನಾಟಕದಾದ್ಯಂತ ಸುಮಾರು 10 ಸಾವಿರ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳುಳ್ಳ ಪಡಿತರ ಸಾಮಾಗ್ರಿಗಳನ್ನು ನೀಡಲು ಪ್ರಕಾಶ್ ಶೆಟ್ಟಿಯವರು ಮುಂದೆ ಬಂದಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮಾತ್ರವಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ಸಹಾಯ ಹಸ್ತ ವಿತರಣೆಯನ್ನು ನೀಡಲಾಗುತ್ತಿದೆ ಎಂದರು.
ಪ್ರಾಥಮಿಕ ಹಂತದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಕಲ್ಯ ಮತ್ತು ಮಲ್ಲಾರು ಪರಿಸರದ 150 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಇದರಲ್ಲಿ 10 ಕೆ.ಜಿ ಅಕ್ಕಿ, 2 ಕೆಜಿ ಸಕ್ಕರೆ, 1 ಕೆಜಿ ತೊಗರಿ ಬೇಳೆ, ಅರ್ಧ ಕೆ.ಜಿ ಚಾಹುಡಿ ಮತ್ತು ಸಾಂಬಾರು ಪದಾರ್ಥಗಳು ಒಳಗೊಂಡಿವೆ ಎಂದರು.
ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾತನಾಡಿ, ಕಾಪು ತಾಲೂಕಿನಲ್ಲಿ1300 ಮಂದಿ ರೇಷನ್ ಕಾರ್ಡ್ ರಹಿತ ಕುಟುಂಬಗಳಿದ್ದು ಅವರಿಗೆ ದಾನಿಗಳ ನೆರವಿನೊಂದಿಗೆ ವಿವಿಧ ಸವಲತ್ತುಗಳನ್ನು ಒದಗಿಸಲಾಗುವುದು. ಈ ಯೋಜನೆಗೆ ಸಹಕಾರ ನೀಡಲು ಹಲವಾರು ದಾನಿಗಳು ಮುಂದೆ ಬಂದಿದ್ದು, ದಾನಿಗಳ ಸಹಕಾರದಿಂದ ಸಂಗ್ರಹಿತ ಸಾಮಾಗ್ರಿಗಳನ್ನು ಜನರ ಅವಶ್ಯಕತೆಗೆ ಅನುಗುಣವಾಗಿ ವಿತರಿಸಲಾಗುವುದು ಎಂದರು.
ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಗುಲಾಬಿ ಪಾಲನ್, ಸಮಾಜ ಸೇವಕ ಲೀಲಾಧರ ಶೆಟ್ಟಿ, ಸಂಘ ಚಾಲಕ ತಾರನಾಥ್ ಕೋಟ್ಯಾನ್, ಜಗದೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.