ಅಯ್ಯೋ ದೇವ್ರೆ ಆ್ಯಂಬುಲೆನ್ಸ್ ಡ್ರೈವರ್ ಹೀಗಾದ್ರೆ ಇನ್ನು ರೋಗಿ ಕಥೆ ಏನಾಗಬಹುದು?
Team Udayavani, May 23, 2020, 4:18 PM IST
ಒಂದೆಡೆ ಜನರು ಕೋವಿಡ್ 19 ವೈರಸ್ ಭೀತಿಯಿಂದ ಕಂಗಾಲಾಗಿದ್ದಾರೆ. ಅಲ್ಲದೇ ಇಂತಹ ಸಂದರ್ಭದಲ್ಲಿ ವಿಶ್ವಾಸ, ಸಾಮಾಜಿಕ ಕಳಕಳಿ ಮುಖ್ಯ. ಆದರೆ ನೋಡಿ ಈ ಆ್ಯಂಬುಲೆನ್ಸ್ ಡ್ರೈವರ್ ಸ್ಥಿತಿಯನ್ನು! ಇದು ಉದಯವಾಣಿಗೆ ಉಪ್ಪೂರು ಬಳಿ ಕಂಡುಬಂದ ದೃಶ್ಯ. ಜನರ ಪ್ರಾಣವನ್ನು ಕಾಪಾಡುವ ನಿಟ್ಟಿನಲ್ಲಿ ರೋಗಿಗಳನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಾರೆ. ಅದು ಡ್ರೈವರ್ ಮೇಲಿನ ನಂಬಿಕೆಯ ಮೇಲೆ. ಆದರೆ ರೋಗಿಯನ್ನು ಕರೆದೊಯ್ಯುವ ಆ್ಯಂಬುಲೆನ್ಸ್ ಚಾಲಕನೇ ಈ ರೀತಿ ಕುಡಿದು ತೂರಾಡಿ, ಆ್ಯಂಬುಲೆನ್ಸ್ ಅನ್ನು ಗದ್ದೆಯ ಕೆಳಭಾಗದ ಜಾಗಕ್ಕೆ ಇಳಿಸಿ ಬಿಟ್ಟು ಒದ್ದಾಡುತ್ತಿದ್ದರೆ. ಜನರಿಗೆ ಆ್ಯಂಬುಲೆನ್ಸ್ ಸೇವೆ ಮೇಲಿನ ನಂಬಿಕೆಯೇ ಹೊರಟು ಹೋಗಬಹುದು. ಈ ಚಾಲಕ ರೋಗಿ ಹಾಗೂ ಕುಟುಂಬದವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಬಿಟ್ಟು ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಒಂದು ವೇಳೆ ರೋಗಿ ಮತ್ತು ಕುಟುಂಬದವರು ಇದ್ದ ವೇಳೆ ಈ ಘಟನೆ ಸಂಭವಿಸಿದ್ದರೆ ಆಗುವ ಅನಾಹುತ ಊಹಿಸಿಕೊಳ್ಳಿ. ಆ್ಯಂಬುಲೆನ್ಸ್ ಸೇವೆ ನೀಡುವ ವಾಹನ ಮಾಲಕರು ಕೂಡಾ ಇನ್ಮುಂದೆ ಇಂತಹ ಮದ್ಯ ವ್ಯಸನಿ ಚಾಲಕರನ್ನು ನೇಮಕ ಮಾಡಿಕೊಳ್ಳಬಾರದು. ಅಷ್ಟೇ ಅಲ್ಲ ರೋಗಿಗಳನ್ನು ಕರೆದೊಯ್ಯುವ ಮುನ್ನ ಕುಟುಂಬದ ಸದಸ್ಯರು ಕೂಡಾ ಒಮ್ಮೆ ಡ್ರೈವರ್ ಸ್ಥಿತಿಯನ್ನು ವಿಚಾರಿಸಿಕೊಳ್ಳುವುದು ಎಲ್ಲ ದೃಷ್ಟಿಯಿಂದ ಉತ್ತಮ. ಯಾಕೆಂದರೆ ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಈ ರೀತಿ ಅವಘಡವಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಮುಖ್ಯ. ಆ್ಯಂಬುಲೆನ್ಸ್ ಗಳಿಗೆ ಇಂತಹ ಚಾಲಕರು ಯಮಸ್ವರೂಪಿಯಾದರೆ ಏನ್ ಮಾಡೋದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.