Coronavirus Lockdown : Finally Rice harvesting machine reaches the Field
Team Udayavani, Apr 1, 2020, 3:30 PM IST
ಕುರ್ಕಾಲು ವ್ಯಾಪ್ತಿಯ ಅಂಬಡೆಪಾಡಿ, ಪಾಜೈ ಭಾಗದಲ್ಲಿನ ಫಸಲು ತುಂಬಿದ ಗದ್ದೆಗಳಿಗೆ ಮಾ.31ರಂದು ಕಟಾವು ಯಂತ್ರವು ಇಳಿಯುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮಿನುಗಿದೆ. ಈ ಭಾಗದಲ್ಲಿನ ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರು ಕಟಾವಿಗಾಗಿ ಕಟಾವು ಯಂತ್ರ ಬಾರದೇ ರೈತರು ಕಂಗಾಲಾಗಿದ್ದಾರೆ. ಕೊರೊನಾ ವೈರಸ್ ವ್ಯಾಪಿಸದಂತೆ ಘೋಷಿಸಲಾಗಿದ್ದ ಭಾರತ್ ಲಾಕೌಡೌನ್ ಕರೆಯಿಂದಾಗಿ ಇಲ್ಲಿಗೆ ಬರಲಿದ್ದ ಕಟಾವು ಯಂತ್ರಕ್ಕೆ ತಡೆಯೊಡ್ಡಿದ್ದರಿಂದ ರೈತರು ಕಂಗಾಲಾಗಿದ್ದರು. ಈ ಬಗ್ಗೆ ಉದಯವಾಣಿಯು ರೈತ ಪರ ಕಾಳಜಿಯ ವರದಿಯನ್ನೂ ಪ್ರಕಟಿಸಿತ್ತು. ಈ ಬಗ್ಗೆ ಅ„ಕಾರಿಗಳು ಎಚ್ಚೆತ್ತಿದ್ದು, ಖಾಸಗೀ ಕಟಾವು ಯಂತ್ರವು ರೈತ ಕ್ಷೇತ್ರಕ್ಕೆ ಇಳಿಯಲು ಸಹಕಾರವನ್ನು ನೀಡಿದ್ದಾರೆ ಎಂದು ರೈತ, ಕುರ್ಕಾಲು ಗ್ರಾಮ ಪಂಚಾಯತ್ ಸದಸ್ಯ ಸುದರ್ಶನ್ ರಾವ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಆಪ್ತ ಸಹಾಯಕರುಗಳು ಸಾಕಷ್ಟು ಸಹಕಾರವನ್ನು ನೀಡಿದ್ದು, ಕೊನೆಗೆ ಕಾರ್ಕಳದ ಬಳಿಯ ಮಾಳದಲ್ಲಿ ಮತ್ತೆ ತೊಂದರೆ ಆದಾಗ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು ಸಹಕಾರವನ್ನು ನೀಡಿ ಮಾ.31ರಂದು ಕಟಾವು ಯಂತ್ರವು ಗದ್ದೆಗೆ ಇಳಿಯುವಂತಾಗಿದೆ. ಆ ಮೂಲಕ ನಷ್ಟವಾಗಲಿದ್ದ ಭತ್ತದ ಬೆಳೆಯನ್ನು ಕಟಾವುಗೊಸಿ ಸುರಕ್ಷಿತಗೊಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಹಕರಿಸಿದವರೆಲ್ಲರಿಗೂ ಈ ರೈತರು ಕೃತಜ್ಞರು ಎಂದರು. ಮತ್ತೋರ್ವ ರೈತ ಶ್ರೀಶ ಭಟ್ ಪ್ರತಿಕ್ರಿಯಿಸಿದ್ದು, ಖಾಸಗಿ ಕಟಾವು ಯಂತ್ರದವರು ಕೃಷಿಕರಿಗೆ ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಕೃಷಿ ಇಲಾಖೆಯು ಎಚ್ಚೆತ್ತುಕೊಂಡಿಲ್ಲ. ಕೃಷಿ ಇಲಾಖೆಯಿಂದ 4 ಯಂತ್ರಗಳು ಇದ್ದರೂ ತಟಸ್ಥವಾಗಿರಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕೃಷಿ ಇಲಾಖೆಯಿಂದ ಟ್ರ್ಯಾಕ್ಟರ್, ಟಿಲ್ಲರ್ ಸಹಿತ ಇತರ ಯಂತ್ರಗಳು ಯಾಕೆ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ. ಅದರ ಬಗ್ಗೆ ಚಿಂತನೆ ಮಾಡಲಿ. ಕೃಷಿಕರಿಗೆ ಯಂತ್ರೋಪಕರಣ ಸವಲತ್ತನ್ನು ಒದಗಿಸುವ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಕೊಳಕೆ ಬೆಳೆಯು ಈಗಾಗಲೇ ಸಾಕಷ್ಟು ಬಲಿತಿದ್ದು, ಫಸಲು ತುಂಬಿದ ಪೈರು ಗದ್ದೆಯಲ್ಲಿ ಅಡ್ಡ ಬೀಳಲು ಆರಂಭವಾಗಿತ್ತು. ಕೆಲವೆಡೆ ಭತ್ತವು ಉದುರಲು ಶುರುವಿಟ್ಟಿದ್ದು ಈ ಭಾಗದ ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಸುಮಾರು 100 ಎಕರೆಗೂ ಅ„ಕ ಗದ್ದೆಗಳಲ್ಲಿ ಭತ್ತದ ಪೈರು ತುಂಬಿದ್ದು, ಕಟಾವು ಮಾಡಲು ಕಟಾವು ಯಂತ್ರ ಬಂದಿರುವುದರಿಂದ ಕೊಳಕೆ ಬೆಳೆಯು ಮಣ್ಣು ಪಾಲಾಗುತ್ತದೆ ಎಂದು ಚಿಂತಾಕ್ರಾಂತರಾಗಿದ್ದ ಸ್ಥಳೀಯ ರೈತರಾದ ಥೋಮಸ್ ಮಾರ್ಟಿಸ್, ಸಂಜೀವ ಶೆಟ್ಟಿ, ಕರುಣಾಕರ ಪೂಜಾರಿ, ಶ್ರೀಶ ಭಟ್, ಗಿರಿಧರ ಐತಾಳ್ ಸಹಿತ ಇತರ ರೈತರು ಹರ್ಷ ವ್ಯಕ್ತಪಡಿಸಿರುತ್ತಾರೆ.