ದೈವ ನರ್ತಕನಿಗೆ ಒಲಿದ ರಾಜ್ಯೋತ್ಸವ ಪುರಸ್ಕಾರ
Daiva Nartaka Gudda Panara
Team Udayavani, Oct 31, 2022, 6:19 PM IST
ಕಾಪು ಪಿಲಿಕೋಲದ ದೈವ ನರ್ತಕ ಗುಡ್ಡ ಪಾಣಾರರಿಗೆ ರಾಜ್ಯೋತ್ಸವ ಗೌರವ ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾದ ಕಾಪುವಿನ ದ್ವೈ ವಾರ್ಷಿಕ ಪಿಲಿಕೋಲ ದೈವದ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಮೂಳೂರಿನ ಗುಡ್ಡ ಪಾಣಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಗುಡ್ಡ ಪಾಣಾರ ಅವರು ಅವಿದ್ಯಾವಂತರಾಗಿದ್ದರೂ ಹಿರಿಯರಿಂದ ಬಳುವಳಿಯಾಗಿ ಬಂದಿರುವ ದೈವಾರಾಧನೆ ಮತ್ತು ಜಾನಪದ ಕಲೆಗಳನ್ನು ಪೋಷಿಸಿ, ಮುಂದಿನ ತಲೆಮಾರಿನವರೆಗೂ ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. 48 ವರ್ಷಗಳಿಂದ ದೈವಾರಾಧನೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 38 ವರ್ಷಗಳಿಂದ ಪಿಲಿಕೋಲ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಪು ಸಾವಿರ ಸೀಮೆಯ ವಿವಿಧೆಡೆ ಪಂಜುರ್ಲಿ, ವರ್ತೆ, ಗುಳಿಗ, ಬಬ್ಬರ್ಯ, ತನ್ನಿಮಾನಿಗ ಸಹಿತ ಇತರ ದೈವಗಳ ನರ್ತನ ಸೇವೆ ನಡೆಸುತ್ತಿದ್ದು ಅವರು ಪಿಲಿ ಕೋಲ ನರ್ತನ ಸೇವೆ ಆರಂಭಿಸಿದ ಬಳಿಕ ಇತರ ದೈವಗಳ ನರ್ತನ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ ಮಾತನಾಡಿದ ಗುಡ್ಡ ಪಾಣಾರ ಅವರು, 20ನೇ ವರ್ಷದಿಂದಲೇ ದೈವಗಳ ನರ್ತಕನಾಗಿ ತಂದೆಯಿಂದ ಬಳುವಳಿಯಾಗಿ ಬಂದ ಸೇವೆಯನ್ನು ನಡೆಸಿಕೊಂಡು ಬಂದಿದ್ದೇನೆ. ಪ್ರಾಮಾಣಿಕ ಸೇವೆಗೆ ದೈವ ಕೃಪೆ ರೂಪದಲ್ಲಿ ಪ್ರಶಸ್ತಿ ಲಭಿಸಿದೆ ಎನ್ನುತ್ತಾರೆ.