ದೇವಸ್ಥಾನದ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥ!
Team Udayavani, Jan 2, 2022, 5:38 PM IST
1. ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ ಸಚಿವ ಆರ್.ಅಶೋಕ್
ಸಚಿವ ಆರ್. ಅಶೋಕ್ ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದರು. ಸಚಿವ ಸಿಎಂ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜನ ನಿರ್ಲಕ್ಷ್ಯ ವಹಿಸಿದರೆ ಮುಂಬೈ, ದೆಹಲಿ, ಪಶ್ಚಿಮ ಬಂಗಾಳದ ರೀತಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
2. ಬ್ಯಾಂಕ್ ಲಾಕರ್ನಲ್ಲಿ ಇತ್ತು 500 ಕೋ. ರೂ. ಶಿವಲಿಂಗ!
ತಮಿಳುನಾಡಿನ ತಂಜಾವೂರ್ನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್ನಲ್ಲಿ ಇದ್ದ 500 ಕೋಟಿ ರೂ. ಮೌಲ್ಯದ ಶಿವಲಿಂಗ ಪತ್ತೆಯಾಗಿದೆ. ಪಚ್ಚೆ ಮತ್ತು ಹರಳುಯುಕ್ತ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇಗುಲಗಳಲ್ಲಿನ ಹಳೆಯ ವಿಗ್ರಹಗಳ ಮಾರಾಟದ ಜಾಲ ನಡೆಯುತ್ತಿದೆ ಎಂಬ ಬಗ್ಗೆ ಸುಳಿವು ಪೊಲೀಸರಿಗೆ ಲಭಿಸಿತ್ತು.
3. 1500 ಗಡಿ ದಾಟಿದ ಒಮಿಕ್ರಾನ್ ಸೋಂಕು ಪ್ರಕರಣಗಳು
ದೇಶದಲ್ಲಿ ಕಳೆದ 24 ಗಂಟೆ ಅವಧೀಯಲ್ಲಿ 27,553 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದು ಶನಿವಾರ ವರದಿಯಾದ ಪ್ರಕರಣಗಳಿಗಿಂತ ಶೇ.21 ರಷ್ಟು ಹೆಚ್ಚಿದೆ. ಈ ಸಮಯದಲ್ಲಿ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಒಂದೂವರೆ ಸಾವಿರ ದಾಟಿದೆ.
4. ದೇವಸ್ಥಾನದ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥ!
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀರಗಾನಹಳ್ಳಿಯಲ್ಲಿ ಶನಿವಾರ ರಾತ್ರಿ ಭಾರಿ ಅವಘಡವೊಂದು ಜರುಗಿದೆ. ದೇಗುಲದ ಪ್ರಸಾದ ಸೇವಿಸಿ ಸುಮಾರು ಐವತ್ತು ಮಂದಿ ವಾಂತಿಯಿಂದ ಅಸ್ವಸ್ಥರಾದ ಘಟನೆ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ನಡೆದಿದೆ.
5. ವಿಕ್ಕಿ ಕೌಶಲ್- ಸಾರಾ ವಿರುದ್ಧ ದೂರು..!
ಬೈಕ್ ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಸಿದ್ದಾರೆಂದು ಬಾಲಿವುಡ್ ನ ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್ ವಿರುದ್ಧ ದೂರು ದಾಖಲಾಗಿದೆ. ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಈ ದೂರು ನೀಡಿದ್ದಾರೆ. ಮುಂಬರುವ ಚಲನಚಿತ್ರದ ದೃಶ್ಯಕ್ಕಾಗಿ, ವಿಕ್ಕಿ ಕೌಶಲ್ ಅವರು ಸಾರಾ ಅವರನ್ನು ತನ್ನ ಹಿಂದೆ ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ಓಡಿಸಿದ್ದಾರೆ.
6. ಡ್ರಗ್ ಸ್ಮಗ್ಲರ್ ನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಪಿನಿಂದ ದಾಳಿ
ವಾಂಟೆಡ್ ಡ್ರಗ್ ಸ್ಮಗ್ಲರ್ ಒಬ್ಬನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಈ ಘಟನೆ ಹೊಸದಿಲ್ಲಿಯ ಇಂದ್ರಪುರಿ ಪ್ರದೇಶದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗುಂಡು ತಾಗಿದ್ದು, ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
7. ಪುನೀತ್ ಸುತ್ತ ‘ಯಾರೋ ನೀನು’ ಹಾಡು
ಪುನೀತ್ ರಾಜ್ಕುಮಾರ್ ಕುರಿತು “ಯಾರೋ ನೀನು’ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಟ ರಾಘವೇಂದ್ರ ರಾಜ್ಕುಮಾರ್ ಈ ಆಲ್ಬಂ ಅನ್ನು ಬಿಡುಗಡೆ ಮಾಡಿದರು. ರಾಜ್ ಕಿಶೋರ್ ಈ ಹಾಡನ್ನು ಬರೆದು ಸಂಗೀತ ನಿರ್ದೇಶಿಸಿದ್ದಾರೆ.
8. ಬುಮ್ರಾಗೆ ಯಾಕೆ ಉಪನಾಯಕನ ಪಟ್ಟ?
ಬುಮ್ರಾಗೆ ಉಪನಾಯಕನ ಸ್ಥಾನ ನೀಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮಾಜಿ ವಿಕೆಟ್ ಕೀಪರ್ ಮತ್ತು ಆಯ್ಕೆ ಸಮಿತಿಯ ಮಾಜಿ ಸದಸ್ಯ ಸಬಾ ಕರೀಮ್ ಕೂಡಾ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಬುಮ್ರಾಗಿಂತ ಮುಂಚಿತವಾಗಿ ಉಪನಾಯಕನ ಪಾತ್ರಕ್ಕೆ ರಿಷಬ್ ಪಂತ್ ಆಯ್ಕೆಯಾಗುತ್ತಾರೆ ಎಂದು ತಾನು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.