ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೆ OTT ಯಿಂದ ಭರ್ಜರಿ ಆಫರ್
Team Udayavani, Jan 7, 2022, 5:34 PM IST
1. ‘ಸಂಪೂರ್ಣ ಲಾಕ್ ಡೌನ್’ ಕಳೆದು ಹೋಗಿರುವ ನೀತಿ: ಡಾ.ಸುಧಾಕರ್ ಸ್ಪಷ್ಟನೆ‘
ಖಂಡಿತವಾಗಿಯೂ ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರವನ್ನು ಸರಕಾರ ಮಾಡಿಲ್ಲ. ಪ್ರಾರಂಭದಿಂದ ಹೇಳುತ್ತಿದ್ದೇನೆ. ವಿಶ್ವವ್ಯಾಪಿಯಾಗಿ ಹರಡುತ್ತಿರುವ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ,ಅಂತರ್ ರಾಷ್ಟ್ರೀಯ ವಿಮಾನ ಬಂದ್ ಮಾಡಿಲ್ಲ, ಆದರೆ ನಿಯಂತ್ರಣ ಮಾಡಲು, ಕಡಿಮೆ ಮಾಡಲು ಸಾಧ್ಯವಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಶುಕ್ರವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ.
2. ಇಂದು ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ಬಂದ್
ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
3. ಕಾಂಗ್ರೆಸ್ ನಲ್ಲಿ ನಾಯಕತ್ವ ಮೇಲಾಟಕ್ಕೆ ಪಾದಯಾತ್ರೆ, ನೀರು ಕೊಡಲಲ್ಲ: ನಳಿನ್ ಕಟೀಲ್ ಟೀಕೆ
ಬೆಂಗಳೂರಿಗೆ ನೀರು ಕೊಡಲು ಮೇಕೆದಾಟು ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ನಾಯಕತ್ವ ಮೇಲಾಟದಿಂದ ಪಾದಯಾತ್ರೆಯಾಗುತ್ತಿದೆ. ಕೋವಿಡ್ ಜಾಸ್ತಿಯಾದರೆ ಅದು ಪಾದಯಾತ್ರೆಯಿಂದಲೇ ಎಂಬ ಎಚ್ಚರಿಕೆ ಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
4. ಭಾರತ; ಜನವರಿ ಅಂತ್ಯದಲ್ಲಿ ದಿನಂಪ್ರತಿ 4-8 ಲಕ್ಷ ಕೋವಿಡ್ ಪ್ರಕರಣ ಪತ್ತೆ ಸಾಧ್ಯತೆ: ಅಗರ್ವಾಲ್
ಭಾರತದಲ್ಲಿ ಜನವರಿ ಅಂತ್ಯದ ವೇಳೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ದಿನಂಪ್ರತಿ 4ರಿಂದ 8 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇರುವುದಾಗಿ ಐಐಟಿ ಕಾನ್ಪುರ್ ಪ್ರೊ. ಮಣೀಂದ್ರ ಅಗರ್ವಾಲ್ ಎಚ್ಚರಿಸಿದ್ದಾರೆ.
5. ಭೀಮಾ ಕೋರೆಗಾಂವ್ ಪ್ರಕರಣ: ವರವರ ರಾವ್ ಜಾಮೀನು ಅವಧಿ ವಿಸ್ತರಣೆ
2018 ರಲ್ಲಿ ನಡೆದ ಭೀಮಾ ಕೋರೆಗಾವ್ ಪ್ರಕರಣದಲ್ಲಿ ಪ್ರಮುಖ ಆರೋಪಿ ತೆಲುಗು ಕವಿ ವರವರರಾವ್ ಅವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಸುದೀರ್ಘ ಅವಧಿಗೆ ವಿಚಾರಣಾಧೀನ ಕೈದಿಯಾಗಿದ್ದ ರಾವ್ ಕಳೆದ ಕೋವಿಡ್ ಸಂದರ್ಭದಲ್ಲಿ ವೈದಕೀಯ ಬೇಲ್ ಮೇಲೆ ಜೈಲಿನಿಂದ ಹೊರಕ್ಕೆ ಬಂದಿದ್ದರು. ಇದೀಗ ಅವರ ಜಾಮೀನು ಅವಧಿಯನ್ನು ಮುಂಬಯಿ ಹೈಕೋರ್ಟ್ ಶುಕ್ರವಾರ ವಿಸ್ತರಿಸಿದೆ.
6. ಭಾರತದಲ್ಲಿ 24ಗಂಟೆಯಲ್ಲಿ 1 ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ,ಒಮಿಕ್ರಾನ್ 3,007ಕ್ಕೆ ಏರಿಕೆ
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 1,17,100 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 302 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 4,83,178ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
7. ವಿಕ್ರಾಂತ್ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫರ್: OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ
ಸುದೀಪ್ ಅವರ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆ.24ಕ್ಕೆ ತೆರೆಕಾಣಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆ ದಿನಾಂಕಕ್ಕೆ ಸಿನಿಮಾ ಬಿಡುಗಡೆ ಮಾಡೋದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆಯೇ ಓಟಿಟಿಗಳಿಂದ “ವಿಕ್ರಾಂತ್ ರೋಣ’ನಿಗೆ ಭರ್ಜರಿ ಆಫರ್ಗಳು ಬರುತ್ತಿವೆ ಎಂಬ ಸುದ್ದಿ ಹಬ್ಬಿದೆ. ನೇರವಾಗಿ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವ ಆಫರ್ ಬಂದಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.
8. ಟಿ20 ಕ್ರಿಕೆಟ್ ಗೆ ಹೊಸ ನಿಯಮಗಳನ್ನು ರೂಪಿಸಿದ ಐಸಿಸಿ: ಬೌಲರ್ ಗಳಿಗೆ ಮತ್ತಷ್ಟು ಸಂಕಷ್ಟ!
ಐಸಿಸಿಯು ಟಿ20 ಮಾದರಿ ಕ್ರಿಕೆಟ್ ಪಂದ್ಯಗಳಿಗೆ ಹೊಸ ನಿಯಮಗಳನ್ನು ರೂಪಿಸಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಸ್ಲೋ ಓವರ್ ರೇಟ್ ತಪ್ಪಿಸಲು ಐಸಿಸಿ ಹೊಸ ನಿಯಮವನ್ನು ತಂದಿದ್ದು, ಸ್ಲೋ ಓವರ್ ಹೊಂದಿದ ಇನ್ನಿಂಗ್ಸ್ ನ ಉಳಿದ ಓವರ್ ನಲ್ಲಿ ಕಡಿಮೆ ಫೀಲ್ಡರ್ ಗೆ ಅವಕಾಶ ಮತ್ತು ಡ್ರಿಂಕ್ಸ್ ಬ್ರೇಕ್ ಕುರಿತಾಗಿ ಹೊಸ ನಿಯಮಗಳನ್ನು ಐಸಿಸಿ ಪ್ರಕಟ ಮಾಡಿದೆ.