ಗರ್ಭಗುಡಿಯೊಳಗೆ ಬಂಧಿಯಾದ ಮಾರುತಿಗೆ ಹನುಮಜಯಂತಿಯಂದು ಬಾಗಿಲಲ್ಲೇ ನಿಂತು ಕೈಮುಗಿದ ಭಕ್ತರು
Team Udayavani, Apr 8, 2020, 3:15 PM IST
ಇಂದು ಪವಿತ್ರ ಹನುಮಜಯಂತಿ. ಪ್ರತಿ ವರ್ಷ ಈ ದಿನ ಸಾಲಿಗ್ರಾಮ ಆಂಜನೇಯ ದೇವಸ್ಥಾನಕ್ಕೆ ಸಾವಿರಾರು ಭಕ್ತಾಧಿಗಳು ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದರು ಹಾಗೂ ಬೆಳಗ್ಗೆಯಿಂದಲೇ ವಿಶೇಷ ಪುನಸ್ಕಾರ, ಸಾವಿರಾರು ಮಂದಿಗೆ ಆಂಜನೇಯ ಸೇವಾ ಟ್ರಸ್ಟ್ ನಿಂದ ಪನಿವಾರ ಪ್ರಸಾಧ ವಿತರಣೆ ನಡೆಯುತಿತ್ತು. ಆದರೆ ಈ ಬಾರಿ ಲಾಕ್ ಡೌನ್ ನಿಂದಾಗಿ ಎಲ್ಲವೂ ಬದಲಾಗಿತ್ತು. ಭಕ್ತಾಧಿಗಳಿಂದ ಗಿಜುಗುಡುತ್ತಿದ್ದ ರಥ ಬೀದಿ ಖಾಲಿ ಖಾಲಿಯಾಗಿತ್ತು. ದೇಗುಲದ ಅರ್ಚಕರು ಬೆಳಗ್ಗೆ 5.30ಕ್ಕೆ ಆಗಮಿಸಿ ಶಾಸ್ತ್ರೋಕ್ತದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಗರ್ಭಗುಡಿಗೆ ಬೀಗ ಹಾಕಿ ತೆರಳಿದ್ದರು. ಪೂಜೆ, ತೀರ್ಥ, ಪ್ರಸಾಧ ವಿತರಣೆ ಇಲ್ಲದಿದ್ದರೂ ಮುಖ್ಯ ದ್ವಾರ ತೆರದಿದ್ದ ಕಾರಣಕ್ಕೆ ಬೆರಳೆಣಿಕೆಯ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಗರ್ಭಗುಡಿಯ ಎದುರು ನಿಂತು ಭಾರವಾದ ಮನಸಲ್ಲಿ ಆಂಜನೇಯನಿಗೆ ನಮಿಸಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.