ಸೋಂಕು ಲಕ್ಷಣ ಇದ್ದರೆ ಕಷಾಯ, ಮಾತ್ರೆಗೆ ಇದು ಸಮಯವಲ್ಲ, ಕೂಡಲೇ ಪರೀಕ್ಷೆ ಮಾಡಿಸಿ: ಉಡುಪಿ ಡಿಸಿ
Team Udayavani, Jul 31, 2020, 1:03 PM IST
ಉಡುಪಿ: ಯಾವುದೇ ರೀತಿಯ ಕೋವಿಡ್-19 ಸೋಂಕು ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಕುಳಿತು, ಕೊನೆಯ ಸಮಯದಲ್ಲಿ ಆಸ್ಪತ್ರೆಗೆ ಬರುವುದಲ್ಲ. ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಮನವಿ ಮಾಡಿದ್ದಾರೆ.
ಅವರು ವಿಡಿಯೋ ಸಂದೇಶದ ಮೂಲಕ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದು, ರೋಗ ಲಕ್ಷಣವಿದ್ದರೂ ಮನೆಯಲ್ಲಿ ಕುಳಿತು ಕೊನೆಯ ಸಮಯದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಕೋವಿಡ್ ನ ಸಣ್ಣ ಲಕ್ಷಣ ಕಂಡು ಬಂದರೂ ಪರೀಕ್ಷೆ ಮಾಡಿಸಿಕೊಳ್ಳಿ. ಜಿಲ್ಲೆಯಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕೆಮ್ಮು, ಶೀತ, ಜ್ವರ ಗಂಟಲು ನೋವು ಕಂಡು ಬಂದರೆ ಪರೀಕ್ಷೆ ಮಾಡಿಸಿಕೊಳ್ಳಿ. ಜ್ವರ ಬಂದರೆ ಕೇವಲ ಕಷಾಯ, ಮಾತ್ರೆಗೆ ಸರಿಯಾದ ಸಮಯ ಅಲ್ಲ. ಸೋಂಕಿತರಾಗಿ ನೀವು ಮನೆಯಲ್ಲಿದ್ದರೆ ಎಲ್ಲರಿಗೂ ಸೋಂಕು ತಾಗುತ್ತದೆ. ಹಾಗಾಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದರು.
ಜಿಲ್ಲೆಯ ಸೋಂಕಿತರ ಸಾವಿನ ಕಾರಣಗಳನ್ನು ಪರಿಶೀಲಿಸಿದಾಗ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವವರು ಮತ್ತು ಹಿರಿಯ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಇರುವವರ ಮತ್ತು ಹಿರಿಯರ ಬಗ್ಗೆ ಕಾಳಜಿ ಇರಲಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.