![](https://i.ytimg.com/vi/YrfXARkjo-o/mqdefault.jpg)
![](https://i.ytimg.com/vi/YrfXARkjo-o/mqdefault.jpg)
Team Udayavani, Nov 28, 2020, 7:28 PM IST
ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಮಂಗಳೂರಿನ ಮಹಿಳೆಯೋರ್ವರು ೩೦ ಅಡಿ ಆಳದ ಬಾವಿಗೆ ಇಳಿದು ಬೆಕ್ಕಿಗೆ ಹೊಸ ಬದುಕು ಕಲ್ಪಿಸಿದ್ದಾರೆ. ನಗರದ ಬಳ್ಳಾಲ್ಬಾಗ್ ನಿವಾಸಿ ರಂಜನಿ ಶೆಟ್ಟಿ ಅವರೇ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಹಿಳೆ.
ನಗರದ ದೇರೆಬಲ್ ಕೊಂಚಾಡಿಯಲ್ಲಿ ಇರುವ ೩೦ ಅಡಿ ಆಳದ ಹಳೆಯ ಬಾವಿ ಬಹುತೇಕ ಕುಸಿದು ಗುಹೆಯಂತಾಗಿದೆ. ಈ ಬಾವಿಗೆ ಗುರುವಾರ ಬೆಕ್ಕೊಂದು ಬಿದ್ದು ಬಾವಿಯ ಮಧ್ಯದಲ್ಲಿ ಕುಸಿದು ಉಂಟಾದ ತಡೆಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಒಂದು ದಿನವಿಡೀ ಆಹಾರವಿಲ್ಲದೆ ಬಾವಿಯಲ್ಲೇ ಬಾಕಿಯಾಗಿತ್ತು. ಬೆಕ್ಕಿನ ರಕ್ಷಣೆ ಮಾಡಲು ಯಾರಿಂದಲೂ ಸಾಧ್ಯವಾಗದಿದ್ದಾಗ ರಂಜನಿ ಶೆಟ್ಟಿ ಅವರನ್ನು ಸ್ಥಳೀಯರು ಸಂಪರ್ಕಿಸಿದ್ದರು. ಪ್ರಾಣಿಪ್ರೇಮಿಯಾದ ರಂಜನಿ ಶೆಟ್ಟಿ ಅವರು ಸ್ಥಳೀಯರ ಸಹಕಾರದಿಂದ ಹಗ್ಗದ ಸಹಾಯದೊಂದಿಗೆ ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ಹಳೆಯ ಕಾಲದ ಬಾವಿಯಾದ್ದರಿಂದ ಕೆಳಭಾಗದಲ್ಲಿ ಗುಹೆಯಂತೆಯೇ ಇದೆ. ಬಾವಿಯ ಸುತ್ತಲೂ ಕಳೆ ಬೆಳೆದಿದೆ. ಬಾವಿಯನ್ನು ನೋಡುವಾಗ ಭಯವಾಯಿತು. ಆದರೆ ಪತಿ ಧೈರ್ಯ ತುಂಬಿದ್ದರು. ಹೀಗಾಗಿ ಸ್ಥಳೀಯರ ಸಹಕಾರದೊಂದಿಗೆ ಹಗ್ಗ ಕಟ್ಟಿ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದೆ’ ಎನ್ನುತ್ತಾರೆ ರಂಜನಿ ಶೆಟ್ಟಿ.
ನಾಯಿಯನ್ನೂ ರಕ್ಷಿಸಿದ್ದರು
ಕೆಲ ತಿಂಗಳ ಹಿಂದೆ ನಾಯಿಯೊಂದು ಇದೇ ರೀತಿ ೩೦ಕ್ಕೂ ಹೆಚ್ಚು ಅಡಿ ಆಳವಿದ್ದ ಬಾವಿಗೆ ಬಿದ್ದು ರಕ್ಷಣೆಗಾಗಿ ಮೂಕರೋಧನೆ ಪಟ್ಟಿತ್ತು. ನಾಯಿಯ ಸ್ಥಿತಿಗೆ ಮರುಗಿದ್ದ ರಂಜನಿ ಶೆಟ್ಟಿ ಅವರು ಸ್ವತಃ ಬಾವಿಗಿಳಿದು ನಾಯಿಯನ್ನು ರಕ್ಷಿಸಿದ್ದರು. ರಂಜನಿ ಅವರು ತಮ್ಮ ಮನೆಯಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದು, ೪೦೦ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಅನ್ನದಾತೆಯಾಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.