Facebook Love: ಶ್ರೀಲಂಕಾದಿಂದ ಆಂಧ್ರಕ್ಕೆ ಬಂದು ಫೇಸ್‌ಬುಕ್ ಗೆಳೆಯನನ್ನು ಮದುವೆಯಾದ ಯುವತಿ
Team Udayavani, Jul 31, 2023, 10:06 AM IST
ಆಂಧ್ರ ಪ್ರದೇಶ: ಪಾಕಿಸ್ತಾನದ ಸೀಮಾ ಹೈದರ್, ಭಾರತದ ಅಂಜು.. ಗಡಿದಾಟಿದ ಪ್ರೇಮ ಕಥೆಗಳ ಸುದ್ದಿ ಚರ್ಚೆಯಲ್ಲಿರುವಾಗಲೇ ಅಂಥದ್ದೇ ಮತ್ತೊಂದು ʼಫೇಸ್ ಬುಕ್ʼ ಲವ್ ಸ್ಟೋರಿ ಬೆಳಕಿಗೆ ಬಂದಿದೆ.
ಶ್ರೀಲಂಕಾ ಮೂಲದ 25 ವರ್ಷದ ಯುವತಿ ವಿಕನೇಶ್ವರಿ ಶಿವಕುಮಾರ, ಆಂಧ್ರ ಪ್ರದೇಶದ 28 ವರ್ಷದ ಲಕ್ಷ್ಮಣ್ ಎನ್ನುವ ಯುವಕನ ʼಫೇಸ್ ಬುಕ್ʼ ಪ್ರೇಮ ಕಥೆಯಿದು.
ಲಕ್ಷ್ಮಣ್ ಹಾಗೂ ವಿಕನೇಶ್ವರಿ ಇಬ್ಬರ ಪರಿಚಯವಾದದ್ದು, 2017 ರಲ್ಲಿ ಫೇಸ್ ಬುಕ್ ಮೂಲಕ. ಮೊದಲು ಫೇಸ್ ಬುಕ್ ಮೂಲಕ ಚಾಟಿಂಗ್ ಮಾಡಿ, ಸ್ನೇಹಿತರಾದ ಇವರು, ಆ ಬಳಿಕ ಆತ್ಮೀಯರಾದರು. ಇವರ ಆತ್ಮೀಯತೆ ಪ್ರೀತಿಗೆ ತಿರುಗಿತು. ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕಾರಣದಿಂದ ಶ್ರೀಲಂಕಾದಿಂದ ಆಂಧ್ರಕ್ಕೆ ವಿಕನೇಶ್ವರಿ ಪ್ರವಾಸಿ ವೀಸಾದೊಂದಿಗೆ ಜುಲೈ 8 ರಂದು ಬಂದಿದ್ದಾರೆ. ಇಬ್ಬರ ನಡುವಿನ ಪ್ರೀತಿಯ ವಿಚಾರ ಲಕ್ಷ್ಮಣ್ ಅವರ ಕುಟುಂಬಕ್ಕೆ ಮೊದಲೇ ತಿಳಿದಿತ್ತು. ಲಕ್ಷ್ಮಣ್ ಅವರ ಕುಟುಂಬದವರ ಸಮ್ಮುಖದಲ್ಲಿ ಜುಲೈ 20 ರಂದು ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ.
ಆಗಸ್ಟ್ 6 ರಂದು ವಿಕನೇಶ್ವರಿ ಅವರ ವೀಸಾ ಅವಧಿ ಮುಕ್ತಾಯಗೊಳ್ಳಲಿದ್ದು, ವಲಸೆ ನಿಯಮದ ಅನುಸಾರವಾಗಿ ಚಿತ್ತೂರು ಜಿಲ್ಲಾ ಪೊಲೀಸರು ವಿಕನೇಶ್ವರಿಗೆ ನೋಟಿಸ್ ನೀಡಿದ್ದಾರೆ.
ವಿಕನೇಶ್ವರಿ ಅವರು ಭಾರತೀಯ ಪೌರತ್ವವನ್ನು ಪಡೆಯಲು ಬಯಸಿದ್ದಾರೆ. ಆ ಕಾರಣದಿಂದ ಅವರ ವೀಸಾ ಅವಧಿ ವಿಸ್ತಾರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಭವಿಷ್ಯದಲ್ಲಿ ಕಾನೂನು ವಿಚಾರದಲ್ಲಿ ಯಾವುದೇ ತೊಂದರೆ ಆಗದಂತೆ ಇರಲು, ದಂಪತಿಗೆ ಪೊಲೀಸರು ವಿವಾಹವನ್ನು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ ರಿಶಾಂತ್ ರೆಡ್ಡಿ ಅವರು ಭಾರತೀಯ ಪೌರತ್ವವನ್ನು ಪಡೆಯುವ ವಿಧಾನ ಮತ್ತು ಮಾನದಂಡಗಳ ಬಗ್ಗೆ ವಿಕನೇಶ್ವರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.