ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
ಪ್ರತಿ ಬಾರಿಯು ಮಕ್ಕಳ ತಪ್ಪನ್ನು ಗುರುತಿಸುವ ಬದಲು ಅವರ ಸರಿಯನ್ನು ಗುರುತಿಸಿ ಅಭಿನಂದಿಸಿ
Team Udayavani, Jan 12, 2025, 6:00 PM IST
ಮನೆಯಲ್ಲೊಂದು ಮಗುವಿದ್ದರೆ ಮನೆ ತುಂಬಿದಂತೆ. ಅದರ ಅಳು, ನಗು, ಪುಟ್ಟ ಪುಟ್ಟ ಹೆಜ್ಜೆ, ತೊದಲು ನುಡಿ ಕೇಳುವುದೇ ಆನಂದ. ಮಗುವನ್ನು ನೋಡಲೆಂದೇ ಮನೆಗೆ ಬರುವ ಅಥಿತಿಗಳು, ಹೀಗೆ ಮನೆ ತುಂಬಾ ಜನ. ಮಗುವು ಬೆಳೆಯುತ್ತಾ ತನ್ನ ಸುತ್ತಮುತ್ತಲಿನ ಜನರ ಮಾತು ನಡವಳಿಕೆಯನ್ನು ಗಮನಿಸಲು ಪ್ರಾರಂಭಿಸುತ್ತದೆ. ಜೊತೆಗೆ ಜನರ ನಡವಳಿಕೆ ಹಾಗೂ ಮಾತುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ. ಕ್ರಮೇಣ ಮಕ್ಕಳ ನಡವಳಿಕೆ ಬದಲಾಗುತ್ತಾ ಹೋಗುತ್ತದೆ. ಜೊತೆಗೆ ಮಕ್ಕಳಾದ ಮೇಲೆ ಹೆತ್ತವರ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕೆಲವೊಮ್ಮೆ ಮಕ್ಕಳು ತಪ್ಪಾಗಿ ವರ್ತಿಸಿದರೆ ಅವರನ್ನು ಯಾವ ರೀತಿ ಸರಿ ದಾರಿಗೆ ತರುವುದು ಎನ್ನುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಕ್ಕಳ ಮೇಲೆ ಕೂಗಾಡಿ, ಹೊಡೆದು ಬಡಿಯುವುದರಿಂದ ಮಕ್ಕಳ ಮನಸಿನ ಮೇಲೆ ಋಣಾತ್ಮಕ ಪ್ರಭಾವ ಬೀರಬಹುದು. ಹಾಗಿದ್ದಾಗ ಮಕ್ಕಳಿಗೆ ಹೊಡೆಯದೆ, ಬೈಯದೇ ಯಾವ ರೀತಿಯಲ್ಲೆಲ್ಲಾ ಬುದ್ದಿಯನ್ನು ಹೇಳಬಹುದು ಎಂದೆಲ್ಲಾ ಯೋಚಿಸಲಾರಂಭಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳನ್ನು ನಿಯಂತ್ರಿಸಲು, ಉತ್ತಮ ಅಭ್ಯಾಸಗಳನ್ನು ಹುಟ್ಟಿಸಲು, ಶಿಸ್ತನ್ನು ಬೆಳೆಸಲು ಈ ಸಲಹೆಗಳು ಉಪಯುಕ್ತವಾಗಬಹುದು.
ಮೊದಲು ಮಕ್ಕಳು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ಆ ಸಮಯದಲ್ಲಿ ಮಕ್ಕಳಲ್ಲಿನ ತಪ್ಪಾದ ವರ್ತನೆಯು ಕಡಿಮೆಯಾಗಬಹುದು. ಜೊತೆಗೆ ಮನೆಯಲ್ಲಿ ಹಾಗೂ ಮನೆಯ ಹೊರಗಡೆ ಪಾಲಿಸಬೇಕಾದ ನಿಯಮಗಳನ್ನು ಸರಳವಾಗಿ ಹೇಳುವುದು ಹಾಗೂ ಮಗುವಿಗೆ ಅರ್ಥವಾಗುವ ಹಾಗೆ ಮರಳಿ ಮರಳಿ ತಿಳಿಸುವುದು. ಉದಾಹರಣೆಗೆ “ನಾವು” ಎಂಬ ಪದವನ್ನು ಉಪಯೋಗಿಸುವುದು. “ನಾವು ಆಟದ ಬಳಿಕ ಆಟಿಕೆಗಳನ್ನು ಎತ್ತಿಡೋಣ” ಎಂದು ಅವರೊಂದಿಗೆ ಕೈಜೋಡಿಸುವುದು. ಹೀಗೆ ಹೇಳುವುದರಿಂದ ಮಕ್ಕಳಿಗೆ ಶಿಸ್ತು ಕಲಿಸಿದಂತೆಯೂ ಆಗುತ್ತದೆ.
ಪ್ರತಿ ಬಾರಿಯು ಮಕ್ಕಳ ತಪ್ಪನ್ನು ಗುರುತಿಸುವ ಬದಲು ಅವರ ಸರಿಯನ್ನು ಗುರುತಿಸಿ ಅಭಿನಂದಿಸಿ. ಮಕ್ಕಳು ಹೆತ್ತವರಿಂದ ಮೆಚ್ಚುಗೆಯನ್ನು ಕೇಳಲು ಬಯಸುತ್ತಿರುತ್ತಾರೆ. ಪ್ರತೀ ಕೆಲಸದಲ್ಲೂ ತನ್ನನ್ನು ಹೆತ್ತವರು ಅಭಿನಂದಿಸಬೇಕು ಎಂದು ಹಾತೋರೆಯುತ್ತಿರುತ್ತಾರೆ. ಆದರೆ ಹೆತ್ತವರಾದವರು ಮಕ್ಕಳು ಮಾಡುವ ಕಾರ್ಯದಲ್ಲಿ ತಪ್ಪನ್ನೇ ಹುಡುಕಿದರೆ ಮಕ್ಕಳಿಗೂ ಕೂಡ ಹತಾಶಭಾವ ಉಂಟಾಗಿ ನಂತರದ ದಿನಗಳಲ್ಲಿ ಎಲ್ಲಾ ವಿಷಯದಲ್ಲಿಯೂ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಹಾಗಾಗಿ ಮಕ್ಕಳು ಯಾವುದಾದರು ಒಳ್ಳೆಯ ಕೆಲಸವನ್ನು ಮಾಡಿದರೆ ಅವರನ್ನು ಪ್ರೋತ್ಸಾಹಿಸಿ. ಉದಾಹರಣೆಗೆ ಮಕ್ಕಳು ತನ್ನ ಆಟಿಕೆಯನ್ನು ಇತರರೊಂದಿಗೆ ಹಂಚಿಕೊಂಡಾಗ ಅವರನ್ನು ಪ್ರೋತ್ಸಾಹಿಸಿ, ಸಣ್ಣ ಅಪ್ಪುಗೆಯನ್ನು ನೀಡಿ ನೀವು ಅವರ ಒಳ್ಳೆಯ ಕಾರ್ಯವನ್ನು ಗಮನಿಸಿರುವುದಾಗಿ ತಿಳಿಸಿ. ನಿಮ್ಮ ಪ್ರೋತ್ಸಾಹದ ಮಾತುಗಳು ಅವರಲ್ಲಿ ಉತ್ತಮ ನಡವಳಿಕೆಗೆ ಕಾರಣವಾಗುತ್ತದೆ.
ಕೆಲವೊಮ್ಮೆ ನೀವು ನೀಡುವ ಸಮಯ ಮಕ್ಕಳಿಗೆ ಸಮಾಧಾನವನ್ನು ನೀಡಬಹುದು. ಮಕ್ಕಳು ತಪ್ಪು ಮಾಡಿದಾಗ ಸಾಮಾಧಾನವಾಗಿ ಅವರೊಂದಿಗೆ ಕುಳಿತು, ಅವರ ವರ್ತನೆಗೆ ಕಾರಣವನ್ನು ಕೇಳುವುದರಿಂದ ಮಕ್ಕಳು ಶಾಂತ ಸ್ಥಿತಿಗೆ ತಲುಪುತ್ತಾರೆ. ಉದಾಹರಣೆಗೆ ಮಗುವೊಂದು ಸಿಟ್ಟುಗೊಂಡು ತನ್ನ ಆಟಿಕೆಯನ್ನು ಎಸೆಯುತ್ತದೆ. ಈ ಸಂದರ್ಭ ಪೋಷಕರು ಮಗುವಿಗೆ ಸುಮ್ಮನೆ ಕುಳಿತುಕೊಳ್ಳುವಂತೆಯೋ ಅಥವಾ ಮೂಲೆಯಲ್ಲಿ ಕುಳಿತುಕೊಳ್ಳುವಂತಹ ಶಿಕ್ಷೆಯನ್ನು ನೀಡುವುದರಿಂದ ಮಕ್ಕಳಲ್ಲಿ ಒಬ್ಬಂಟಿ ಭಾವ ಮೂಡಬಹುದು. ಅದರ ಬದಲು ಪೋಷಕರೂ ಸ್ವಲ್ಪ ಸಮಯ ತಮ್ಮ ಕೆಲಸಕ್ಕೆ ವಿರಾಮವಿಟ್ಟು ಮಗುವಿನೊಂದಿಗೆ ಶಾಂತ ರೀತಿಯಲ್ಲಿ ಸಿಟ್ಟಿಗೆ ಕಾರಣವೇನೆಂದು ಕೇಳಿ, ಸರಿ ಯಾವುದು ತಪ್ಪು ಯಾವುದು ಎಂದು ತಿಳಿಸುವುದು ಉತ್ತಮ.
ಯಾವುದಾದರು ವಿಷಯವನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ, ಪೋಷಕರಾದವರು ಅಧಿಕಾರದಿಂದ ಆದೇಶಿಸಿದರೆ ಮಕ್ಕಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಭಾವ ಅಥವಾ ಆಯ್ಕೆ ಮಾಡುವ ಕೌಶಲ್ಯದ ಕೊರತೆಯುಂಟಾಗಬಹುದು. ಈ ಸಂದರ್ಭದಲ್ಲಿ ಮಕ್ಕಳಿಗೆ ಆಯ್ಕೆ ಮಾಡಲು ಅವಕಾಶವನ್ನು ಒದಗಿಸುವುದರಿಂದ ಮಕ್ಕಳಲ್ಲಿ ಸ್ವಾತಂತ್ರ್ಯ, ಅಧಿಕಾರ, ಹಾಗೂ ತಮ್ಮ ಬೇಕು ಬೇಡಗಳಲ್ಲಿ ಗಮನಹರಿಸಲು ಸಾಧ್ಯವಾಗುತ್ತದೆ.
ಮಕ್ಕಳು ತಮ್ಮ ಸುತ್ತಮುತ್ತಲಿನ ಜನರ, ತಮ್ಮ ಪೋಷಕರ ವರ್ತನೆ, ಮಾತನ್ನು ಗಮನಿಸುತ್ತಿರುತ್ತಾರೆ. ಅವರಂತೆಯೇ ವರ್ತಿಸಲು ಪ್ರಯತ್ನಿಸುತ್ತಾರೆ. ಹಾಗಿದ್ದಾಗ ಮಕ್ಕಳ ಮುಂದೆ ಒಳ್ಳೆಯ ರೀತಿ ಇರುವುದು, ಹಾಗೂ ಮಾತನಾಡುವಾಗ ಯೋಚಿಸಿ ಮಾತನಾಡುವುದು ಒಳಿತು. ಮಕ್ಕಳಿಗೆ ಪೋಷಕರಾದವರು ಯಾವುದೇ ಸಂದರ್ಭ ಬಂದರೂ ತಮ್ಮ ಸಿಟ್ಟನ್ನು, ಅಳುವನ್ನು ನೋವನ್ನು ಸಮಾಧಾನವಾಗಿ ನಿಯಂತ್ರಿಸುವ, ಇನ್ನೊಬ್ಬರೊಂದಿಗೆ ಗೌರವಯುತವಾಗಿ ಮಾತನಾಡುವ ಮೂಲಕ ಮಾದರಿಯಾಗಬೇಕು. ʼಪ್ಲೀಸ್ʼ ʼಥ್ಯಾಂಕ್ಯೂʼ ಇಂತಹ ಶಬ್ಧಗಳನ್ನು ಮಕ್ಕಳೊಂದಿಗೂ ಉಪಯೋಗಿಸುವುದರಿಂದ ಮಕ್ಕಳಲ್ಲಿ ಉತ್ತಮ ನಡವಳಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.
ಮಕ್ಕಳಿಗೆ ಬೈಯುವ ಮುನ್ನ ಮಕ್ಕಳೊಂದಿಗೆ ಕುಳಿತು ಮಾತನಾಡಬೇಕು. ಮಕ್ಕಳು ಎನನ್ನಾದರು ಹೇಳುತ್ತಿದ್ದರೆ ಅದನ್ನು ಕೇಳಿಸಿಕೊಳ್ಳಬೇಕು ಜೊತೆಗೆ ಅವರ ಭಾವನೆಗಳಿಗೆ ಗೌರವ ನೀಡಬೇಕು.
ಪೋಷಕರಾದವರು ಮಕ್ಕಳಲ್ಲಿ ಹೀಗೆ ಮಾಡಬೇಡ, ಹಾಗೆ ಮಾಡಬೇಡ ಎಂದು ಹೇಳುವ ಬದಲು, ಮಾಡಿದ ತಪ್ಪಿಗೆ ಅಥವಾ ಏನಾದರು ಸಮಸ್ಯೆಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬಹುದು ಎಂದು ಯೋಚಿಸಲು ಅಥವಾ ಮುಂದಿನ ತಪ್ಪನ್ನು ಸರಿಪಡಿಸುವಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಂಡರೆ ಉತ್ತಮ ಎಂದು ಮಕ್ಕಳಿಗೆ ಸಹಾಯ ಮಾಡುವುದು. ಮಕ್ಕಳಲ್ಲಿ ಸಮಸ್ಯೆ ಬಗೆಹರಿಸುವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ ನೀಡುವುದು. ಪೋಷಕರ ಉತ್ತಮ ಪ್ರೋತ್ಸಾಹ ಲಭಿಸಿದಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರೊಂದಿಗೆ ಮುಂದೆ ಬರುವ ಸಮಸ್ಯೆಗಳನ್ನು ಬಗೆಹರಿಸಲೂ ಕಲಿಯುತ್ತಾರೆ.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಿರಿದು. ಪೋಷಕರಾದವರು ಮಕ್ಕಳಲ್ಲಿ ಬರೀ ತಪ್ಪನ್ನೇ ಗುರುತಿಸಿ ಬೈಯುತ್ತಿದ್ದರೆ ಮಕ್ಕಳಲ್ಲಿ ವಿಷಯಾಸಕ್ತಿ, ಕಲಿಯುವಿಕೆ ಮುಂತಾದ ಕೌಶಲ್ಯಗಳಲ್ಲಿ ಕೊರತೆಯುಂಟಾಗಬಹುದು. ಹಾಗಿದ್ದಾಗ ಮಕ್ಕಳೊಂದಿಗೆ ಮಕ್ಕಳಾಗಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಅವರ ತಪ್ಪುಗಳನ್ನು ಸರಿಯಾದ ರೀತಿಯಲ್ಲಿ ತಿದ್ದಬಹುದು.
-ಪೂರ್ಣಶ್ರೀ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
MUST WATCH
ಹೊಸ ಸೇರ್ಪಡೆ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.