ಉತ್ತರ ಕರ್ನಾಟಕದ ವಿಶೇಷ ಸಿಹಿ ಪದಾರ್ಥ ಬನಹಟ್ಟಿಯ ಕಡ್ಲಿ ಸಂಗಪ್ಪನವರ ಮುಂಬೈ ಮಾದ್ಲಿ
Team Udayavani, Mar 26, 2022, 7:57 PM IST
ರಬಕವಿ-ಬನಹಟ್ಟಿ: ಮಾದ್ಲಿ ಹಬ್ಬಗಳ ಸಂದರ್ಭದಲ್ಲಿ ಮತ್ತು ಇನ್ನಷ್ಟು ವಿಶೇಷವಾದ ದಿನಗಳಲ್ಲಿ ಮಾಡಬಹುದಾದ ವಿಶೇಷ ಸಿಹಿ ಪದಾರ್ಥವಾಗಿದೆ. ಅದರಲ್ಲೂ ರಬಕವಿ ಬನಹಟ್ಟಿಯಲ್ಲಿ ತಯಾರಾಗುವ ಮಾದ್ಲಿ ಬೇರೆ ಯಾವುದೆ ಕಡೆಗಳಲ್ಲಿ ದೊರೆಯಲಾರದು. ಅದರಲ್ಲೂ ಮುಂಬೈ ಮಾದ್ಲಿ ಅಂತೂ ಮತ್ತಷ್ಟು ವಿಶೇಷವಾದುದು.
ಗೋಕಾಕ ವರದಿ ಚಳುವಳಿಯ ಸಂದರ್ಭದಲ್ಲಿ ಡಾ.ರಾಜಕುಮಾರ ಬನಹಟ್ಟಿಗೆ ಬಂದ ಸಂದರ್ಭದಲ್ಲಿ ಅವರೂ ಕೂಡಾ ಮಾದ್ಲಿ ಹಾಗೂ ತುಪ್ಪದ ಸವಿಯನ್ನು ಉಂಡು ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಎರಡೆರಡು ಸಲ ಹಾಕಿಸಿಕೊಂಡು ಊಟ ಮಾಡಿದ್ದರು.
ಮೊದಲು ಮಾದ್ಲಿಯನ್ನು ಮನೆಯಲ್ಲಿ ಮಾತ್ರ ಮಾಡುತ್ತಿದ್ದರು. ಮಾದ್ಲಿಯನ್ನು ತಿನ್ನುವುದಕ್ಕೆ ಎಷ್ಟು ರುಚಿಯಾಗಿರುತ್ತದೆ. ಅದನ್ನು ಮಾಡುವುದು ಕೂಡಾ ಕಷ್ಟವಾಗಿದೆ. ಈಗ ಮಾದ್ಲಿಯನ್ನು ಮನೆಯಲ್ಲಿ ಮಾಡಿ ಮಾರಾಟ ಮಾಡುವಂತಯ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಮಾದ್ಲಿಯನ್ನು ಸಂಕ್ರಮಣ, ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಸಂದರ್ಭ ಮತ್ತು ವೀರಭದ್ರೇಶ್ವರ ಕಾರ್ತಿಕೋತ್ಸವದ ಸಂದರ್ಭದಲ್ಲಿ ಮಾದ್ಲಿಯ ಸವಿಯನ್ನು ಸವಿಯಬಹುದಾಗಿತ್ತು. ಆದರೆ ಈಗ ಮಾದ್ಲಿ ಬನಹಟ್ಟಿಯಲ್ಲಿ ಹನ್ನೆರಡು ತಿಂಗಳುಗಳ ಕಾಲ ದೊರೆಯುತ್ತದೆ.
ಅದರಲ್ಲೂ ಕಡ್ಲಿ ಸಂಗಪ್ಪನವರ ಮಾದ್ಲಿಗೆ ಭಾರಿ ಬೇಡಿಕೆ. ಸಂಗಪ್ಪನವರು ತಯಾರಿಸಿದ ಮಾದ್ಲಿ ದುಬೈ, ಅಮೆರಿಕಾ, ಬೆಂಗಳೂರು, ಮುಂಬೈ, ಬೆಳಗಾವಿ, ಕೊಲ್ಲಾಪುರ, ಧಾರವಾಡ ಬಾಗಲಕೋಟೆ ಸೇರಿದಂತೆ ದೇಶದ ಮೂಲೆ ಮೂಲೆಗೆ ತಲುಪಿದೆ. ಈ ಭಾಗದಲ್ಲಿ ಯಾವುದೆ ವಿಶೇಷವಾದ ಊಟವಿದ್ದರೆ ಅಲ್ಲಿ ಮಾದ್ಲಿ ಇರಲೇಬೇಕು. ಸಂಕ್ರಮಣದ ಸಂದರ್ಭದಲ್ಲಿ ಅಂದಾಜು ಮೂರುವರೆ ಕ್ವಿಂಟಲ್ ಮಾದ್ಲಿಯನ್ನು ಮಾಡಿದರೆ ಗುಳ್ಳವ್ವನ ಸಂದರ್ಭದಲ್ಲಿ ಒಂದುವರೆ ಕ್ವಿಂಟಲ್ ಮಾದ್ಲಿಯನ್ನು ಮಾಡಿ ಮಾರುತ್ತಾರೆ.
ಮಾದ್ಲಿ ಮಾಡಿಸಿದವರು ಅದರಲ್ಲಿ ತುಪ್ಪ ನೀಡಲಿಕ್ಕೆ ಹೆದರಬಾರದು. ಮಾದ್ಲಿಗೆ ತುಪ್ಪ ಹಾಕಿದಷ್ಟು ಅದರ ರುಚಿ ಹೆಚ್ಚಾಗುತ್ತದೆ. ಆದ್ದರಿಂದ ಸಮಾರಂಭಗಳ ಊಟದ ಸಂದರ್ಭದಲ್ಲಿ ಊಟಕ್ಕೆ ನೀಡುವವರಿಗೆ ತುಪ್ಪ ಹಾಕಾಕ ನಾಚಬ್ಯಾಡ್ರಿ ಎನ್ನುತ್ತಾರೆ ಈ ಭಾಗದ ಜನರು.
ಗೋಧಿ, ಕಡ್ಲಿ ಬೇಳೆ, ಅಕ್ಕಿಯ ಮಿಶ್ರಣವನ್ನು ಬೀಸಿದ ನಂತರ ಬೆಲ್ಲ, ಹಾಗೂ ಸಕ್ಕರೆಯನ್ನು ಹಾಕಿ ಹಿಟ್ಟು ಮತ್ತು ಬೆಲ್ಲ ಹಾಗೂ ಸಕ್ಕರೆ ಒಂದಾಗುವವರೆಗೆ ಅದನ್ನು ಕೈಯಿಂದ ತಿಕ್ಕುತ್ತಾರೆ. ನಂತರ ಅದಕ್ಕೆ ಒಣ ಕೊಬ್ಬರಿಯನ್ನು ಹೆರೆದು ಹಾಕುತ್ತಾರೆ. ನಂತರ ಕಸಕಸಿಯನ್ನು ಹುರಿದು ಹಾಕುತ್ತಾರೆ. ಜೊತೆಗೆ ಜಾಜಿಕಾಯಿ ಅದರ ಕಂಪನ್ನು ಹೆಚ್ಚಿಸುತ್ತದೆ. ಇನ್ನೂ ಗೋಡಂಬೆ, ಒಣ ದ್ರಾಕ್ಷಿ, ಕ್ಯಾರಬೀಜ ಇವೆಲ್ಲವುಗಳನ್ನು ಹಾಕುತ್ತಾರೆ. ಊಟದ ಸಂದರ್ಭದಲ್ಲಿ ತುಪ್ಪ ಇಲ್ಲವೆ ಬಿಸಿ ಹಾಲನ್ನು ಹಾಕಿಕೊಂಡು ಮಾದ್ಲಿಯನ್ನು ತಿನ್ನುತ್ತಾರೆ.
ಕಡ್ಲಿ ಸಂಗಪ್ಪನವರು ಈಗ ವರ್ಷದ ಹನ್ನೆರಡು ತಿಂಗಳು ತಮ್ಮ ಮನೆಯಲ್ಲಿ ಮಾದ್ಲಿಯನ್ನು ತಯಾರಿಸುತ್ತಾರೆ. ಅವರು ಬೆಂಗಳೂರು, ದಾವಣಗೇರಿ, ಹುಬ್ಬಳ್ಳಿ ಸೇರಿದಂತೆ ನಾಡಿನ ವಿವಿದೇಡೆ ನಡೆಯವ ಕಾರ್ಯಕ್ರಮಕ್ಕೆ ಕಳುಹಿಸುವುದರ ಸಲುವಾಗಿ ಹಲವಾರು ಕೆ. ಜಿ., ಕ್ವಿಂಟಾಲ್ ಮಾದ್ಲಿಯನ್ನು ತಯಾರಿಸುತ್ತಾರೆ. ನಂತರ ಅಲ್ಲಿಂದ ಅವರು ದುಬೈ, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶ ಹಾಗೂ ರಾಜ್ಯಗಳಲ್ಲಿರುವ ಸಂಬಂಧಿಕರಿಗೆ ಕಳುಹಿಸುತ್ತಾರೆ ಎನ್ನುತ್ತಾರೆ.
ಸಂಗಪ್ಪ ಕಡ್ಲಿಯವರು ಸದ್ಯ ಕಡ್ಲಿ ಸಂಗಪ್ಪನವರು ರೂ.350 ಒಂದು ಕೆ.ಜಿ.ಮಾದ್ಲಿಯನ್ನು ಮಾರಾಟ ಮಾಡುತ್ತಾರೆ. ಮದುವೆ ಮುಂತಾದ ಇನ್ನೀತರ ಸಮಾರಂಭಗಳಲ್ಲಿ ಅಡುಗೆ ಮಾಡುವುದರ ಜೊತೆಗೆ ಅವರು ಉಳಿದ ಸಮಯದಲ್ಲಿ ಮಾದ್ಲಿಯನ್ನು ಮಾಡುತ್ತಾರೆ.
ಬನಹಟ್ಟಿಯಲ್ಲಿ ಮಾದ್ಲಿ ತಯಾರಾದರೂ ಅದಕ್ಕೆ ಮುಂಬೈ ಮಾದ್ಲಿ ಎಂದು ಕರೆಯುತ್ತಾರೆ. ಮೊದಲು ಇದಕ್ಕೆ ಬೇಕಾಗುವ ಗೊಡಂಬಿ, ಒಣದ್ರಾಕ್ಷಿ, ಕ್ಯಾರಬೀಜ್‌ಗಳು ಮುಂಬೈಯಿಂದ ಬರುತ್ತಿದ್ದ ಕಾರಣಕ್ಕಾಗಿ ಮುಂಬೈ ಮಾದ್ಲಿ ಎನ್ನುತ್ತಾರೆ. ಆದರೆ ಮುಂಬೈ ಮಾದ್ಲಿಯನ್ನು ಮಾಡಿಸಿದರೆ ಅಲ್ಲಿ ಊಟ ಭರ್ಜರಿಯಾಗಿರುತ್ತದೆ.
ಮಾದ್ಲಿ ತಯಾರು ಮಾಡುದ ಅಂದ್ರ ಒಬ್ಬರು ಇಬ್ಬರು ಸಾಲುದಿಲ್ರಿ. ಹಿಟ್ಟು, ಸಕ್ಕರೆ ಮತ್ತು ಬೆಲ್ಲವನ್ನು ಒಳ್ಳೆಯ ರೀತಿಯಾಗಿ ಮಿಶ್ರಣ ಮಾಡಬೇಕಾಗುತ್ತದೆ. ಅದನ್ನು ಕೈಯಿಂದಲೇ ತಿಕ್ಕಬೇಕು. ಮಿಕ್ಸಿಗೆ ಹಾಕಿದರೆ ಅಷ್ಟೊಂದು ಸ್ವಾದ ಬರುವುದಿಲ್ಲ. ಅದಕ್ಕಾಗಿ ಬಹಳಷ್ಟು ಶ್ರಮಬೇಕಾಗುತ್ತದೆ. ಅದಕ್ಕಾಗಿ ಬೇರೆಯವರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. –ಸಂಗಪ್ಪ ಕಡ್ಲಿ ಮಾದ್ಲಿ ತಯಾರಕರು
ಮುಂಬೈ ಮಾದ್ಲಿ ಈ ಭಾಗದ ವಿಶೇಷವಾದ ಸಿಹಿ ಪದಾರ್ಥವಾಗಿದ್ದು, ಇದರ ಸ್ವಾದ ಈಗ ಎಲ್ಲಡೆ ಪಸರಿಸುತ್ತಿದ್ದು, ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಿಗೂ ಇವರ ಮಾದ್ಲಿ ತೆಗೆದುಕೊಂಡು ಹೋಗುತ್ತಿದೆ. – ಗಂಗಪ್ಪ ಮಂಟೂರ, ಸ್ಥಳೀಯರು, ಬನಹಟ್ಟಿ
ಸದ್ಯ ಅವರ ಮಗ ರಾಜು ಕೂಡಾ ತಂದೆಯ ಗರಡಿಯಲ್ಲಿ ತಯಾರುಗುತ್ತಿದ್ದಾರೆ. (ಮಾಹಿತಿಗಾಗಿ: 9972826983)
– ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.